ಸುರ್ಜೇವಾಲಾ  
ರಾಜಕೀಯ

ಸ್ಥಳೀಯ ಚುನಾವಣೆಗಳಿಗೆ ಕಾಂಗ್ರೆಸ್‌ ರಣತಂತ್ರ: ಜಿಲ್ಲಾಧ್ಯಕ್ಷರ ಕಾರ್ಯಕ್ಷಮತೆ ಮೇಲೆ ಹೈಕಮಾಂಡ್‌ ಕಣ್ಣು, ಬೂತ್‌ನಿಂದ ಜಿಲ್ಲಾ ಮಟ್ಟದವರೆಗೆ ಸಂಘಟನೆಗೆ ಸೂಚನೆ..!

35 ನೂತನ ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷರೊಂದಿಗೆ ನಡೆದ ಚಿಂತನ-ಮಂಥನ ಸಭೆಯಲ್ಲಿ ವೇಣುಗೋಪಾಲ್‌ ಮತ್ತು ಸುರ್ಜೇವಾಲಾ ಅವರು ‘ಕಾರ್ಯನಿರ್ವಹಿಸಿ ಇಲ್ಲವೇ ಹಿಂದೆ ಸರಿಯಿರಿ’ ಎಂಬ ಸ್ಪಷ್ಟ ಸಂದೇಶ ನೀಡಿದ್ದಾರೆ ಎನ್ನಲಾಗಿದೆ.

ಬೆಂಗಳೂರು: 2028ರ ವಿಧಾನಸಭಾ ಚುನಾವಣೆಗೂ ಮುನ್ನ ಮಹಾನಗರ ಪಾಲಿಕೆ ಸೇರಿದಂತೆ ಸ್ಥಳೀಯ ಸಂಸ್ಥೆಗಳ ಸರಣಿ ಚುನಾವಣೆಗಳು ನಡೆಯುವ ನಿರೀಕ್ಷೆಯ ಹಿನ್ನೆಲೆಯಲ್ಲಿ ಕಾಂಗ್ರೆಸ್‌ ಹೈಕಮಾಂಡ್‌ ರಾಜ್ಯದಲ್ಲಿ ಪಕ್ಷದ ಸಂಘಟನಾ ಸಿದ್ಧತೆಗಳನ್ನು ಚುರುಕುಗೊಳಿಸಿದೆ.

ಎಐಸಿಸಿ ಪ್ರಧಾನ ಕಾರ್ಯದರ್ಶಿಗಳಾದ ಕೆ.ಸಿ. ವೇಣುಗೋಪಾಲ್‌ (ಸಂಘಟನೆ) ಮತ್ತು ಕರ್ನಾಟಕ ಉಸ್ತುವಾರಿ ರಣದೀಪ್‌ ಸಿಂಗ್‌ ಸುರ್ಜೇವಾಲಾ ಬುಧವಾರ ರಾಜ್ಯಕ್ಕೆ ಆಗಮಿಸಿ ಪಕ್ಷದ ರಾಜ್ಯ ನಾಯಕರೊಂದಿಗೆ ಸರಣಿ ಸಭೆ ನಡೆಸಿದರು.

ಪಕ್ಷದ ಸಂಘಟನೆ ಬಲಪಡಿಸುವುದು, ಆಂತರಿಕ ಸಮಸ್ಯೆಗಳನ್ನು ಬಗೆಹರಿಸುವುದು ಹಾಗೂ ಮುಂಬರುವ ಚುನಾವಣಾ ಸವಾಲುಗಳಿಗೆ ಕಾರ್ಯಕರ್ತರನ್ನು ಸಜ್ಜುಗೊಳಿಸುವ ಕುರಿತು ಸಭೆಗಳಲ್ಲಿ ಚರ್ಚಿಸಲಾಯಿತು. ಎಐಸಿಸಿ ಕಾರ್ಯದರ್ಶಿ ಗೋಪಿನಾಥ್ ಪಳನಿಯಪ್ಪನ್ ಕೂಡ ಅವರೊಂದಿಗೆ ಆಗಮಿಸಿದ್ದರು.

2023ರ ವಿಧಾನಸಭಾ ಚುನಾವಣೆಯಲ್ಲಿ ಗಳಿಸಿದ ಯಶಸ್ಸನ್ನು ಮತ್ತಷ್ಟು ಬಲಪಡಿಸುವುದರ ಜೊತೆಗೆ, ರಾಜ್ಯ ಕಾಂಗ್ರೆಸ್‌ನ ವಿವಿಧ ಬಣಗಳನ್ನು ಒಗ್ಗೂಡಿಸಿಕೊಂಡು ಮುಂದಿನ ಸರಣಿ ಚುನಾವಣೆಗಳಿಗೆ ಸಜ್ಜಾಗುವ ಪ್ರಯತ್ನದಲ್ಲಿ ಪಕ್ಷ ತೊಡಗಿರುವ ಹಿನ್ನೆಲೆಯಲ್ಲಿ ನಾಯಕರ ಈ ಭೇಟಿ ಮಹತ್ವ ಪಡೆದುಕೊಂಡಿದೆ.

ವಿಶೇಷವಾಗಿ ನೂತನವಾಗಿ ನೇಮಕಗೊಂಡಿರುವ ಜಿಲ್ಲಾಧ್ಯಕ್ಷರ ನೇತೃತ್ವದಲ್ಲಿ ತಳಮಟ್ಟದಲ್ಲಿ ಪಕ್ಷದ ಸಂಘಟನಾ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸುವ ಗುರಿಯನ್ನು ಕಾಂಗ್ರೆಸ್‌ ಹೊಂದಿದೆ.

35 ನೂತನ ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷರೊಂದಿಗೆ ನಡೆದ ಚಿಂತನ-ಮಂಥನ ಸಭೆಯಲ್ಲಿ ವೇಣುಗೋಪಾಲ್‌ ಮತ್ತು ಸುರ್ಜೇವಾಲಾ ಅವರು ‘ಕಾರ್ಯನಿರ್ವಹಿಸಿ ಇಲ್ಲವೇ ಹಿಂದೆ ಸರಿಯಿರಿ’ ಎಂಬ ಸ್ಪಷ್ಟ ಸಂದೇಶ ನೀಡಿದ್ದಾರೆ ಎನ್ನಲಾಗಿದೆ.

ಮುಂಬರುವ ಸ್ಥಳೀಯ ಸಂಸ್ಥೆಗಳ ಚುನಾವಣೆಗಳಿಗೆ ಸಜ್ಜಾಗುವಂತೆ ಹಾಗೂ ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್‌ ಅವರ ನೇತೃತ್ವದಲ್ಲಿ ಪಕ್ಷದ ಸಂಘಟನೆಯನ್ನು ಬಲಪಡಿಸುವಂತೆ ಸೂಚಿಸಿದ್ದಾರೆ ಎಂದು ತಿಳಿದುಬಂದಿದೆ. 6 ತಿಂಗಳ ಬಳಿಕ ಜಿಲ್ಲಾಧ್ಯಕ್ಷರ ಕಾರ್ಯನಿರ್ವಹಣೆಯನ್ನು ಪರಿಶೀಲಿಸಲಾಗುವುದು ಎಂದು ಅವರು ತಿಳಿಸಿದ್ದಾರೆ ಎನ್ನಲಾಗಿದೆ.

ಅಲ್ಲದೆ, ‘ಒಬ್ಬರಿಗೆ ಒಂದು ಹುದ್ದೆ’ ತತ್ವವನ್ನು ಪಾಲಿಸುವಂತೆ ಜಿಲ್ಲಾಧ್ಯಕ್ಷರಿಗೆ ಸೂಚಿಸಲಾಗಿದ್ದು, 2028ರ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವ ಆಸಕ್ತಿ ಹೊಂದಿರುವವರು ಚುನಾವಣೆಗೆ 6 ತಿಂಗಳ ಮುನ್ನ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ತಿಳಿಸಲಾಗಿದೆ ಎನ್ನಲಾಗಿದೆ.

ವೇಣುಗೋಪಾಲ್‌ ಮತ್ತು ಸುರ್ಜೇವಾಲಾ ಅವರು ಪ್ರತ್ಯೇಕವಾಗಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್‌ ಅವರನ್ನು ಖಾಸಗಿ ಹೋಟೆಲ್‌ನಲ್ಲಿ ಭೇಟಿಯಾಗಿ ಮಾತುಕತೆ ನಡೆಸಿದರು.

ನಿಗಮ ಮತ್ತು ಮಂಡಳಿಗಳಿಗೆ ಬಾಕಿ ಇರುವ ನೇಮಕಾತಿಗಳು ಹಾಗೂ ಎರಡು ಖಾಲಿ ಸಚಿವ ಸ್ಥಾನಗಳನ್ನು ಭರ್ತಿ ಮಾಡುವ ಕುರಿತು ಸಭೆಗಳಲ್ಲಿ ಚರ್ಚೆ ನಡೆಯಿತು.

ಇತ್ತೀಚಿನ ಸಚಿವ ಸಂಪುಟ ವಿಸ್ತರಣೆಯಲ್ಲಿ ಅವಕಾಶ ವಂಚಿತರಾದ ಕಾಂಗ್ರೆಸ್‌ ಶಾಸಕರ ಅಸಮಾಧಾನವನ್ನು ಶಮನಗೊಳಿಸುವ ಮಾರ್ಗಗಳ ಬಗ್ಗೆಯೂ ನಾಯಕತ್ವ ಚರ್ಚಿಸಿದೆ ಎಂದು ಮೂಲಗಳು ತಿಳಿಸಿವೆ.

ಈ ಪೈಕಿ ಕೆಲವರಿಗೆ ಅವಕಾಶ ಕಲ್ಪಿಸುವ ಕುರಿತು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್‌ ಗಾಂಧಿ ಅವರೊಂದಿಗೆ ಸಮಾಲೋಚನೆ ನಡೆಸಿದ ಬಳಿಕ ನಿರ್ಧಾರ ಕೈಗೊಳ್ಳುವ ಸಾಧ್ಯತೆಯಿದೆ ಎಂದು ಮೂಲಗಳು ಹೇಳಿವೆ.

ಇದೇ ವೇಳೆ ಎಐಸಿಸಿ ನಾಯಕರು ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್‌ ಹಾಗೂ ಸಚಿವರಾದ ರಾಮಲಿಂಗಾರೆಡ್ಡಿ, ಬೈರತಿ ಸುರೇಶ್‌, ಎಂ.ಬಿ. ಪಾಟೀಲ್‌ ಸೇರಿದಂತೆ ಹಲವು ನಾಯಕರನ್ನೂ ಭೇಟಿಯಾದರು.

ವಿಶೇಷ ತೀವ್ರ ಪರಿಷ್ಕರಣೆ ಪ್ರಕ್ರಿಯೆಯಲ್ಲಿ ಒಂದು ಕೋಟಿಗೂ ಅಧಿಕ ಮತದಾರರ ಹೆಸರುಗಳನ್ನು ತೆಗೆದುಹಾಕಿರುವ ಬಗ್ಗೆ ಅವರು ಅಸಮಾಧಾನ ವ್ಯಕ್ತಪಡಿಸಿದ್ದು, ಪಕ್ಷದ ಪ್ರಮುಖ ಮತದಾರರ ಹಿತಾಸಕ್ತಿಗಳನ್ನು ರಕ್ಷಿಸಲು ಸಚಿವರು ಹೆಚ್ಚು ಎಚ್ಚರಿಕೆಯಿಂದ ಕಾರ್ಯನಿರ್ವಹಿಸಬೇಕು ಎಂದು ಸೂಚಿಸಿದ್ದಾರೆ ಎನ್ನಲಾಗಿದೆ.

ಇತ್ತೀಚೆಗೆ ಸಿದ್ದರಾಮಯ್ಯ ಅವರು ನವದೆಹಲಿಯಲ್ಲಿ ರಾಹುಲ್‌ ಗಾಂಧಿ ಅವರನ್ನು ಭೇಟಿಯಾಗಿ ಸಾಮಾಜಿಕ-ಶೈಕ್ಷಣಿಕ ಸಮೀಕ್ಷೆಯ ಅನುಷ್ಠಾನ ಸೇರಿದಂತೆ ಹಲವು ವಿಚಾರಗಳ ಕುರಿತು ಚರ್ಚಿಸಿದ್ದ ಬೆನ್ನಲ್ಲೇ ಎಐಸಿಸಿ ನಾಯಕರ ಕರ್ನಾಟಕ ಭೇಟಿ ನಡೆದಿದೆ.

2027ರಲ್ಲಿ ಉತ್ತರ ಪ್ರದೇಶ, ಪಂಜಾಬ್‌, ಉತ್ತರಾಖಂಡ, ಗೋವಾ, ಮಣಿಪುರ, ಗುಜರಾತ್‌ ಮತ್ತು ಹಿಮಾಚಲ ಪ್ರದೇಶ ಸೇರಿದಂತೆ ಹಲವು ರಾಜ್ಯಗಳಲ್ಲಿ ವಿಧಾನಸಭಾ ಚುನಾವಣೆಗಳು ನಡೆಯಲಿವೆ. ಈ ರಾಜ್ಯಗಳ ಪೈಕಿ ಕೆಲವು ಕಡೆ ಕರ್ನಾಟಕದ ನಾಯಕರಿಗೆ ಸಂಘಟನಾ ಜವಾಬ್ದಾರಿಗಳನ್ನು ವಹಿಸುವ ಸಾಧ್ಯತೆಯಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

ಎಐಸಿಸಿ ನಾಯಕರಿಂದ ಪಕ್ಷವನ್ನು ಬೂತ್‌ ಮಟ್ಟದಿಂದ ಜಿಲ್ಲಾಮಟ್ಟದವರೆಗೆ ಬಲಪಡಿಸುವುದು, ಕಾರ್ಯಕರ್ತರೊಂದಿಗೆ ನಿರಂತರ ಸಂಪರ್ಕದಲ್ಲಿರುವುದು, ಜನರ ಸಮಸ್ಯೆಗಳನ್ನು ಕೈಗೆತ್ತಿಕೊಳ್ಳುವುದು ಹಾಗೂ ಕಾಂಗ್ರೆಸ್‌ ಕಾರ್ಯಕ್ರಮಗಳು ಮತ್ತು ತತ್ವಗಳನ್ನು ಪ್ರತಿ ಮನೆಗೂ ತಲುಪಿಸುವಂತೆ ಸೂಚನೆ ನೀಡಲಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ಬಿ.ಕೆ.ಹರಿಪ್ರಸಾದ್‌ ಅವರು ಹೇಳಿದ್ದಾರೆ.

ಮುಂಬರುವ ಸ್ಥಳೀಯ ಸಂಸ್ಥೆಗಳ ಚುನಾವಣೆಗಳಿಗೆ ಸಿದ್ಧತೆ ನಡೆಸುವಂತೆ ಎಲ್ಲ ಜಿಲ್ಲಾಧ್ಯಕ್ಷರಿಗೂ ಸೂಚನೆ ನೀಡಲಾಗಿದೆ ಎಂದು ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

India vs Afghanistan: ಅಭಿಷೇಕ್ ಅಬ್ಬರಕ್ಕೆ ಅಫ್ಘಾನ್ ಧೂಳೀಪಟ; 127 ರನ್‌ಗಳ ಭರ್ಜರಿ ಜಯ, T20 ಸರಣಿ ಕ್ಲೀನ್ ಸ್ವೀಪ್

'ಮೇಡಂ, ನಿಮ್ಮಂತ ಸುಂದರಿ ಯಾರೂ ಇಲ್ಲ'; ನಮ್ಮ ಪಕ್ಷ ಅಧಿಕಾರಕ್ಕೆ ಬಂದರೆ, CM ಕೋಟಾದಡಿ IAS ಹುದ್ದೆ ಕೊಡಿಸ್ತೇನೆ!

Tata sons ಅಧ್ಯಕ್ಷರಾಗಿ ಚಂದ್ರಶೇಖರನ್ ಮರು ಆಯ್ಕೆ, IPO ಗೆ ಮತದಾನ ಕಾನೂನುಬಾಹಿರ- ಟಾಟಾ ಟ್ರಸ್ಟ್ಸ್ ತಗಾದೆ

ರಾಮ ಮಂದಿರ ತೀರ್ಪು ಬಂದಾಗ ಶಾರುಖ್, ಸಲ್ಮಾನ್, ಆಮಿರ್ ಖಾನ್ ಬಳಿ ಕ್ಷಮೆ ಕೇಳಿದ್ದೆ; ಹಿಂದೂವಾಗಿ ನನಗೆ ಅಸಹ್ಯವಾಗಿತ್ತು: ನಟಿ ಸ್ವರಾ ಭಾಸ್ಕರ್

India vs Afghanistan: ರೋಹಿತ್ ಶರ್ಮಾ ದಾಖಲೆ ಮುರಿದ ಅಭಿಷೇಕ್ ಶರ್ಮಾ; T20 ಕ್ರಿಕೆಟ್‌ನಲ್ಲಿ ಹೊಸ ಇತಿಹಾಸ!