ವಿಪಕ್ಷ ನಾಯಕ ಆರ್ ಅಶೋಕ್ 
ರಾಜಕೀಯ

ದಲಿತರ ಹೆಸರಿನಲ್ಲಿ ರಾಜಕೀಯ ಬೇಳೆ ಬೇಯಿಸಲು ಯತ್ನಿಸುವ ಕಾಂಗ್ರೆಸ್‌ಗೆ ದಲಿತ ಪತ್ರಕರ್ತನ ಅಭಿವ್ಯಕ್ತಿ ಸ್ವಾತಂತ್ರ್ಯ ಕಾಣುವುದಿಲ್ಲವೇ? ಆರ್. ಅಶೋಕ್

ವಿಡಿಯೋದಲ್ಲಿನ ಪೊಲೀಸ್ ಅಧಿಕಾರಿಯ ಹೇಳಿಕೆ ಸರಿಯಾಗಿತ್ತು, ಕಾನೂನುಬದ್ಧವಾಗಿತ್ತು ಎಂದು ಇಡೀ ರಾಜ್ಯ ಕಾಂಗ್ರೆಸ್ ಸರ್ಕಾರವೇ ಸಮರ್ಥಿಸಿಕೊಳ್ಳುತ್ತಿದ್ದರೆ, ಆ ಹೇಳಿಕೆಯನ್ನು ವರದಿ ಮಾಡಿದ ಪತ್ರಕರ್ತನ ವಿರುದ್ಧ FIR ದಾಖಲಿಸಿರುವುದರ ಆಧಾರವೇನು?

ಬೆಂಗಳೂರು: ಟಿ. ನರಸೀಪುರದ ಪ್ರಕರಣ ಕಾಂಗ್ರೆಸ್ ಸರ್ಕಾರದ ಸಂವಿಧಾನ ವಿರೋಧಿ ಮತ್ತು ಹಿಂದೂ ವಿರೋಧಿ ಆಡಳಿತ ಮನಸ್ಥಿತಿಯನ್ನು ಮತ್ತೊಮ್ಮೆ ಜಗಜ್ಜಾಹೀರು ಮಾಡಿದೆ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಆರೋಪಿಸಿದ್ದಾರೆ.

ಈಸಂಬಂಧ ತಮ್ಮ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿರುವ ಅವರು, ಶಾಂತಿ ಸಭೆಯನ್ನು ವರದಿ ಮಾಡಲು ಸ್ಥಳೀಯ ಮಾಧ್ಯಮದ ಪ್ರತಿನಿಧಿಯನ್ನು ಠಾಣೆಯಿಂದಲೇ ಕರೆಯಲಾಗಿತ್ತು. ಅದೇ ಸಭೆಯ ವಿಡಿಯೋ ಪ್ರಸಾರವಾದ ಬಳಿಕ, ಇದೀಗ ಆ ವಿಡಿಯೋ ಮಾಡಿದ್ದ ಪತ್ರಕರ್ತನ ಮೇಲೆಯೇ FIR ದಾಖಲಿಸಲಾಗಿದೆ. ಇದು ಯಾವ ನ್ಯಾಯ? ಮಾನ್ಯ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರೇ ಉತ್ತರಿಸಿ ಎಂದಿದ್ದಾರೆ.

ವಿಡಿಯೋದಲ್ಲಿನ ಪೊಲೀಸ್ ಅಧಿಕಾರಿಯ ಹೇಳಿಕೆ ಸರಿಯಾಗಿತ್ತು, ಕಾನೂನುಬದ್ಧವಾಗಿತ್ತು ಎಂದು ಇಡೀ ರಾಜ್ಯ ಕಾಂಗ್ರೆಸ್ ಸರ್ಕಾರವೇ ಸಮರ್ಥಿಸಿಕೊಳ್ಳುತ್ತಿದ್ದರೆ, ಆ ಹೇಳಿಕೆಯನ್ನು ವರದಿ ಮಾಡಿದ ಪತ್ರಕರ್ತನ ವಿರುದ್ಧ FIR ದಾಖಲಿಸಿರುವುದರ ಆಧಾರವೇನು? ಸಭೆಯಲ್ಲಿ ಆಡಿದ ಮಾತನ್ನೇ ದಾಖಲಿಸಿ ಪ್ರಸಾರ ಮಾಡಲಾಗಿದೆ. ಮಾಧ್ಯಮದ ಬಾಯಿ ಮುಚ್ಚಿಸಲು FIR ಎಂಬ ಅಸ್ತ್ರ ಪ್ರಯೋಗಿಸುವುದು ಯಾವ ಪಾಳೇಗಾರಿಕೆ ಮನಸ್ಥಿತಿ? ಎಂದು ಪ್ರಶ್ನಿಸಿದ್ದಾರೆ,

ಇದು ಕೇವಲ ಒಬ್ಬ ಪತ್ರಕರ್ತನ ವಿಷಯವಲ್ಲ. ಇದು ಸಂವಿಧಾನದ ಅಭಿವ್ಯಕ್ತಿ ಸ್ವಾತಂತ್ರ್ಯದ ಪ್ರಶ್ನೆ. ಮಾಧ್ಯಮ ಸ್ವಾತಂತ್ರ್ಯ ಎಲ್ಲಿದೆ ಪ್ರಶ್ನಿಸುವ ಹಕ್ಕು ಎಲ್ಲಿದೆ? ಸರ್ಕಾರದ ಕ್ರಮಗಳನ್ನು ವರದಿ ಮಾಡುವ ಸ್ವಾತಂತ್ರ್ಯ ಎಲ್ಲಿದೆ?

ಇದೇನು ತುರ್ತು ಪರಿಸ್ಥಿತಿ ಕಾಲವೇ? ಹಿಂದೂಗಳು ತಮ್ಮ ಹಬ್ಬಗಳನ್ನು ಆಚರಿಸಲು ಸರ್ಕಾರದ ಅನುಮತಿ, ಅಧಿಕಾರಿಗಳ ಅನುಮತಿ, ಪೊಲೀಸರ ಅನುಮತಿ ಬೇಕಾದ ಪರಿಸ್ಥಿತಿ ನಿರ್ಮಾಣವಾಗುತ್ತಿದೆ. ಅಧಿಕಾರಿಗಳು ಆಡಿದ ಮಾತುಗಳನ್ನು ಮಾಧ್ಯಮದಲ್ಲಿ ಪ್ರಸಾರ ಮಾಡಿದರೆ ಪತ್ರಕರ್ತರ ಮೇಲೆ FIr ಎಂದು ಕಿಡಿ ಕಾರಿದ್ದಾರೆ.

ಹಿಂದೂಗಳ ಹಕ್ಕುಗಳ ಮೇಲೆ ನಿರ್ಬಂಧ, ಪ್ರಶ್ನಿಸುವ ಮಾಧ್ಯಮದ ಮೇಲೆ ಪ್ರಕರಣ — ಇದೇನಾ ಕಾಂಗ್ರೆಸ್ ಸರ್ಕಾರದ ‘ಜಾತ್ಯತೀತ’ ಆಡಳಿತ, ಇತ್ತೀಚೆಗೆ ನಾಗೇಂದ್ರ ಅವರ ರಾಜೀನಾಮೆಗೆ ಒತ್ತಾಯಿಸಿದಾಗ, ನನ್ನ ವಿರುದ್ಧ ಜಾತಿಯ ವಿಚಾರವನ್ನು ಮುಂದಿಟ್ಟಿದ್ದ ಇದೇ ಕಾಂಗ್ರೆಸ್ ಸರ್ಕಾರ ಇಂದು ಒಬ್ಬ ದಲಿತ ಪತ್ರಕರ್ತನ ವಿರುದ್ಧ ಪ್ರಕರಣ ದಾಖಲಿಸಿರುವುದು ಎಷ್ಟು ಸರಿ? ದಲಿತರ ಹೆಸರಿನಲ್ಲಿ ರಾಜಕೀಯ ಬೆಳೆ ಬೇಯಿಸಲು ಯತ್ನಿಸುವ ಕಾಂಗ್ರೆಸ್‌ಗೆ ದಲಿತ ಪತ್ರಕರ್ತನ ಅಭಿವ್ಯಕ್ತಿ ಸ್ವಾತಂತ್ರ್ಯ ಮಾತ್ರ ಕಾಣುವುದಿಲ್ಲವೇ ಅಥವಾ ಕುರುಡನಂತೆ ನಾಟಕ ಮಾಡುತ್ತಿದೆಯೇ..??

ನಾನು ವಿರೋಧ ಪಕ್ಷದ ನಾಯಕನಾಗಿ ಸ್ಪಷ್ಟವಾಗಿ ಹೇಳುತ್ತೇನೆ. ಮಾಧ್ಯಮ ಸ್ವಾತಂತ್ರ್ಯಕ್ಕೆ ಧಕ್ಕೆ ತಂದರೆ, ಪತ್ರಕರ್ತರನ್ನು ಬೆದರಿಸಿದರೆ, ಪ್ರಶ್ನಿಸುವ ಧ್ವನಿಯನ್ನು FIR ಮೂಲಕ ಹತ್ತಿಕ್ಕಲು ಪ್ರಯತ್ನಿಸಿದರೆ, ನಾನು ಮಾಧ್ಯಮದವರೊಂದಿಗೆ ಸದಾ ನಿಲ್ಲುತ್ತೇನೆ. ಮಾನ್ಯ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರೇ ಕಾನೂನು ಎಲ್ಲರಿಗೂ ಒಂದೇ ಆಗಿರಬೇಕು. ಪತ್ರಕರ್ತ ತಪ್ಪು ಮಾಡಿದ್ದರೆ ಕಾನೂನು ಪ್ರಕಾರ ತನಿಖೆ ನಡೆಯಲಿ. ಆದರೆ ಅಧಿಕಾರಿಗಳ ಹೇಳಿಕೆಯನ್ನು ದಾಖಲಿಸಿ ವರದಿ ಮಾಡಿದ ಕಾರಣಕ್ಕೆ ಪತ್ರಕರ್ತನನ್ನೇ ಆರೋಪಿ ಮಾಡುವ ಕ್ರಮ ಪ್ರಜಾಪ್ರಭುತ್ವದ ಆರೋಗ್ಯಕ್ಕೆ ಅತ್ಯಂತ ಅಪಾಯಕಾರಿ ಎಂದಿದ್ದಾರೆ.

ರಾಜ್ಯ ಕಾಂಗ್ರೆಸ್ ಸರ್ಕಾರ ಮೊದಲು ಹಿಂದೂಗಳ ಹಕ್ಕುಗಳ ಬಗ್ಗೆ ಉತ್ತರಿಸಲಿ. ನಂತರ ಮಾಧ್ಯಮ ಸ್ವಾತಂತ್ರ್ಯದ ಬಗ್ಗೆ ಉತ್ತರಿಸಲಿ. ಕೊನೆಗೆ ಸಂವಿಧಾನವನ್ನು ಗೌರವಿಸುತ್ತೀರೋ, ಅಥವಾ ಅಧಿಕಾರದ ಅಹಂಕಾರವನ್ನೇ ಸಂವಿಧಾನಕ್ಕಿಂತ ಮೇಲಿಡುತ್ತೀರೋ ಎಂಬುದನ್ನು ರಾಜ್ಯದ ಜನತೆಗೆ ಸ್ಪಷ್ಟಪಡಿಸಲಿ. ಸರ್ಕಾರ ಕೂಡಲೇ ಈ ಪ್ರಕರಣದ ಬಗ್ಗೆ ಪಾರದರ್ಶಕ ತನಿಖೆ ನಡೆಸಿ, FIR ದಾಖಲಿಸಿರುವ ಆಧಾರವನ್ನು ಸಾರ್ವಜನಿಕರಿಗೆ ಸ್ಪಷ್ಟಪಡಿಸಬೇಕು.ಮಾಧ್ಯಮದ ಧ್ವನಿಯನ್ನು ಹತ್ತಿಕ್ಕುವ ಮೂಲಕ ಪ್ರಜಾಪ್ರಭುತ್ವವನ್ನು ಸದ್ದಡಗಿಸಲು ಸಾಧ್ಯವಿಲ್ಲ ಎಂದಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

TMC ಹೆಸರು, ಚಿಹ್ನೆ ಮುಟ್ಟುಗೋಲು: ಚುನಾವಣಾ ಆಯೋಗ ಆದೇಶಕ್ಕೆ ತೀವ್ರ ಆಕ್ರೋಶ; 'ಪ್ರತಿಭಟನೆಯೊಂದಿಗೆ' ಹೊಸ ಹೆಸರು, ಚಿಹ್ನೆ ಸಲ್ಲಿಸಿದ ಮಮತಾ ಬ್ಯಾನರ್ಜಿ!

TMC ಹೆಸರು, ಚಿಹ್ನೆ ಮುಟ್ಟುಗೋಲು: 'Vote chori, govt chori ಆಯ್ತು, ಈಗ ಪಾರ್ಟಿ ಚೋರಿ': ಚುನಾವಣಾ ಆಯೋಗದ ವಿರುದ್ಧ ರಾಹುಲ್ ಗಾಂಧಿ ಕಿಡಿ

ದಿಗ್ಬಂಧನ ಉಲ್ಲಂಘಿಸಿದ ಟ್ಯಾಂಕರ್‌ ಮೇಲೆ Iran ಭೀಕರ ದಾಳಿ: ಸಮುದ್ರ ಮಧ್ಯದಲ್ಲೇ ಹೊತ್ತಿ ಉರಿದ ಹಡಗು, Hormuz ಜಲಸಂಧಿಯಲ್ಲಿ ಹೆಚ್ಚಿದ ಉದ್ವಿಗ್ನತೆ..!

TMC ಪಕ್ಷದ ಹೆಸರು, ಚಿಹ್ನೆ ಫ್ರೀಜ್ ಮಾಡಿದ ಚುನಾವಣಾ ಆಯೋಗ: ಉಪಚುನಾವಣೆ ಹೊತ್ತಲ್ಲೇ ದೀದಿಗೆ ಶಾಕ್‌, ಪಶ್ಚಿಮ ಬಂಗಾಳ ರಾಜಕೀಯದಲ್ಲಿ ಭಾರಿ ಸಂಚಲನ..!

ಸ್ಥಳೀಯ ಚುನಾವಣೆಗಳಿಗೆ ಕಾಂಗ್ರೆಸ್‌ ರಣತಂತ್ರ: ಜಿಲ್ಲಾಧ್ಯಕ್ಷರ ಕಾರ್ಯಕ್ಷಮತೆ ಮೇಲೆ ಹೈಕಮಾಂಡ್‌ ಕಣ್ಣು, ಬೂತ್‌ನಿಂದ ಜಿಲ್ಲಾ ಮಟ್ಟದವರೆಗೆ ಸಂಘಟನೆಗೆ ಸೂಚನೆ..!