ಬೆಂಗಳೂರು: ಸಚಿವ ಕೆ.ಎಂ. ಶಿವಲಿಂಗೇಗೌಡ ಅವರು "ಕೆಲಸ ಮಾಡಿಕೊಟ್ಟ ಅಧಿಕಾರಿಗಳಿಗೆ ಗೌರವಯುತವಾಗಿ ಕೊಡುವುದು ಧರ್ಮ" ಎಂದು ನೀಡಿದ ವಿವಾದಾತ್ಮಕ ಹೇಳಿಕೆ ರಾಜ್ಯ ರಾಜಕೀಯದಲ್ಲಿ ಭಾರೀ ಚರ್ಚೆ ಹಾಗೂ ಆಕ್ರೋಶಕ್ಕೆ ಕಾರಣವಾಗಿದೆ
ತಮ್ಮ ವೈರಲ್ ಆಗಿರುವ ವೀಡಿಯೊ ಕುರಿತು ಪ್ರತಿಕ್ರಿಯಿಸಿರುವ ಶಿವಲಿಂಗೇಗೌಡರು ಹೀಗೆ ಹೇಳಿದ್ದಾರೆ. ಶನಿವಾರ ಸಕಲೇಶಪುರ ತಾಲೂಕಿನಲ್ಲಿ ನಡೆದ 'ಪ್ರಜಾ ಸೇವಾ ಆಂದೋಲನ' ಸಭೆಯಲ್ಲಿ ಸಾರ್ವಜನಿಕರ ಅಹವಾಲುಗಳನ್ನು ಆಲಿಸಿ ಪರಿಹರಿಸುವಾಗ ನಾನು ಆಡಿದ ಮಾತಿನ ಒಂದು ಸಣ್ಣ ತುಣುಕನ್ನು ಬಳಸಿಕೊಂಡು ವಿರೋಧ ಪಕ್ಷದವರು ನಮ್ಮ ಸರ್ಕಾರಕ್ಕೆ ಅಪಖ್ಯಾತಿ ತರಲು ಪ್ರಯತ್ನಿಸುತ್ತಿರುವುದು ವಿಷಾದನೀಯ.
ದುರುದ್ದೇಶಪೂರ್ವಕವಾಗಿ ವೀಡಿಯೊಗಳನ್ನು ಎಡಿಟ್ ಮಾಡಿ ಹರಿಬಿಡುವುದು ಮತ್ತು ವರ್ಚಸ್ಸಿಗೆ ಧಕ್ಕೆ ತರಲು ಯತ್ನಿಸುವುದು ಬಿಜೆಪಿಯ ನೀಚ ತಂತ್ರವಾಗಿದೆ. ನಾನು ಹೇಳಿದ್ದು 'ಕೆಲಸ ಮಾಡಿಕೊಟ್ಟ ಅಧಿಕಾರಿಗಳಿಗೆ ಗೌರವ ನೀಡಿ' ಎಂದು. ವೈರಲ್ ಆಗಿರುವ ವೀಡಿಯೊದಲ್ಲಿ, ಆ ಮಾತುಗಳನ್ನು ಹೇಳುವ ಮುನ್ನವೇ, ಯಾವುದೇ ಕಾರಣಕ್ಕೂ ಅಧಿಕಾರಿಗಳಿಗೆ ಲಂಚ ನೀಡಬಾರದು ಎಂದು ನಾನು ಸ್ಪಷ್ಟವಾಗಿ ಹೇಳಿದ್ದೆ. ಆ ನಂತರ, ಕೆಲಸ ಮಾಡಿಕೊಟ್ಟ ಅಧಿಕಾರಿಗಳಿಗೆ ಗೌರವ ನೀಡಿ ಎಂದು ಹೇಳುವ ಬದಲು, ಮಾತಿನ ಭರದಲ್ಲಿ ತಪ್ಪಾಗಿ 'ಗೌರವಯುತವಾಗಿ ನೀಡಿ' ಎಂದು ಹೇಳಿದೆ.
ವಿರೋಧ ಪಕ್ಷದವರು ಆ ನಿರ್ದಿಷ್ಟ ತುಣುಕನ್ನು ಮಾತ್ರ ತೆಗೆದುಕೊಂಡು, ಸಚಿವರು ಅಧಿಕಾರಿಗಳಿಗೆ ಲಂಚ ನೀಡಲು ಹೇಳಿದ್ದಾರೆ ಎಂದು ಬಿಂಬಿಸಿ ವೀಡಿಯೊವನ್ನು ವೈರಲ್ ಮಾಡಿದ್ದಾರೆ. ಆದರೆ ಕಾರ್ಯಕ್ರಮದಲ್ಲಿ ಭಾಗವಹಿಸಿದವರಿಗೆ ಮತ್ತು ನನ್ನ ಸಂಪೂರ್ಣ ಭಾಷಣವನ್ನು ಆಲಿಸಿದವರಿಗೆ ನಾನು ಏನು ಹೇಳಿದೆ ಎಂಬುದು ಸ್ಪಷ್ಟವಾಗಿ ತಿಳಿದಿದೆ. ಆರೋಪ ಮಾಡುವವರು ಮೊದಲು ಸಂಪೂರ್ಣವಾಗಿ ಆಲಿಸುವ ಅಭ್ಯಾಸವನ್ನು ಬೆಳೆಸಿಕೊಳ್ಳಬೇಕು.
ಯಾವ ಸಂದರ್ಭದಲ್ಲಿ ಆ ಮಾತುಗಳನ್ನು ಆಡಲಾಗಿದೆ ಎಂಬುದು ಅವರಿಗೆ ತಿಳಿದಿರಬೇಕು. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ನೇತೃತ್ವದಲ್ಲಿ ನಮ್ಮ ಸರ್ಕಾರವು ಜನರ ಬಳಿಗೆ ಹೋಗಿ, ಅವರ ಅಹವಾಲುಗಳನ್ನು ಆಲಿಸಿ ಪರಿಹರಿಸುವ ಕಾನೂನು ಜಾರಿಗೆ ತಂದಿದೆ ಮತ್ತು ಇದಕ್ಕಾಗಿ ಪ್ರತ್ಯೇಕ ಇಲಾಖೆಯನ್ನೂ ತೆರೆದಿದೆ. ಇದಕ್ಕೆ ರಾಜ್ಯದ ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಇದನ್ನು ಸಹಿಸಲಾಗದ ಬಿಜೆಪಿ ಮತ್ತು ಜೆಡಿಎಸ್‌ನ ಕೆಲವು ನಾಯಕರು ತಪ್ಪು ಹುಡುಕಲು ಪ್ರಯತ್ನಿಸುತ್ತಿದ್ದಾರೆ.
ಸಕಲೇಶಪುರ ತಾಲೂಕಿನಲ್ಲಿ ನಾನು ಬೆಳಿಗ್ಗೆ 10 ರಿಂದ ಸಂಜೆ 6 ರವರೆಗೆ ನಿರಂತರವಾಗಿ ಸ್ಥಳೀಯರ ಅಹವಾಲುಗಳನ್ನು ಆಲಿಸಿದೆ. ಸಮಸ್ಯೆ ಎದುರಿಸುತ್ತಿರುವವರನ್ನು ನೇರವಾಗಿ ಅಧಿಕಾರಿಗಳ ಎದುರು ನಿಲ್ಲಿಸಿ ಪರಿಹಾರ ಕಂಡುಕೊಳ್ಳಲು ಪ್ರಯತ್ನಿಸಿದೆ.
ಆದರೆ ಕೆಲವು ಮಾಧ್ಯಮಗಳು ವಿರೋಧ ಪಕ್ಷದವರ ತಾಳಕ್ಕೆ ತಕ್ಕಂತೆ ಕುಣಿಯುತ್ತಿವೆ. ತಪ್ಪು ತಿಳುವಳಿಕೆ ಮೂಡುವ ರೀತಿಯಲ್ಲಿ ಅವು ಸುದ್ದಿ ಪ್ರಸಾರ ಮಾಡುತ್ತಿವೆ. 500ಕ್ಕೂ ಹೆಚ್ಚು ಅರ್ಜಿಗಳನ್ನು ಸ್ವೀಕರಿಸಿ ಅವುಗಳಿಗೆ ಪರಿಹಾರ ಕಂಡುಕೊಳ್ಳಲು ಪ್ರಯತ್ನಿಸುತ್ತಿರುವ ಬಗ್ಗೆ ಈ ಮಾಧ್ಯಮಗಳು ಕನಿಷ್ಠ ಒಂದು ಸಣ್ಣ ಪ್ಯಾರಾಗ್ರಾಫ್ ಸುದ್ದಿಯನ್ನಾದರೂ ಪ್ರಕಟಿಸಿವೆಯೇ? ಸುಳ್ಳು ಪ್ರಚಾರದ ಮೂಲಕ ಇಂತಹ ಜನಪರ ಕಾರ್ಯಗಳನ್ನು ಹಾಳುಮಾಡುವವರಿಗೆ ರಾಜಕೀಯವೇ ಮುಖ್ಯವಾಗಿದೆ. ಅವರಿಗೆ ಜನರ ಹಿತಾಸಕ್ತಿಯ ಬಗ್ಗೆ ಕಾಳಜಿಯಿಲ್ಲ ಎಂದು ಹರಿಹಾಯ್ದಿದ್ದಾರೆ.