ಬರಹ:- ಮಂಜುಳಾ ಅಜಯ್ ಭಾರಧ್ವಜ್
ಮೊನ್ನೆ ಹೀಗೆ ರಿಲ್ಸ್ ನೋಡ್ತಾ ಇದ್ದಾಗ ಒಂದು ರೀಲ್ ಕಣ್ಣಿಗೆ ಬಿತ್ತು ಒಬ್ಬರು ಪ್ರಶ್ನೆ ಕೇಳ್ತಾರೆ ಮದ್ವೆಯಾಗಿ ಮೂರು ನಾಲ್ಕು ವರ್ಷವಾಯ್ತು ಇನ್ನೂ ಮಕ್ಕಳಿಲ್ವ? ಅಂತ ತಮ್ಮ ಎದುರಿಗೆ ಇದ್ದ ದಂಪತಿಗಳಿಗೆ ಕೇಳುತ್ತಾರೆ. ಅದಕ್ಕೆ ದಂಪತಿಗಳು ನಾವು DINK ಫಾಲೋ ಮಾಡ್ತಾ ಇದ್ದೀವಿ ಅಂತ DINK ಆ? ಹಾಗಂದ್ರೆ ಏನು ಎಂದು ತಿಳಿಯದೆ ಮರು ಪ್ರಶ್ನಿಸಿದಾಗ "Double income no Kids"' ಎಂದು ಮರುತ್ತರ ಕೊಡುತ್ತಾರೆ.
ಅದನ್ನು ಕೇಳಿ ಪ್ರಶ್ನೆ ಕೇಳಿದವರು ಹೇಗೆ ಪ್ರತಿಕ್ರಿಯಿಸಬೇಕು ಅನ್ನೋದು ತಿಳಿಯದೆ ಬಾಯಿ ಬಿಟ್ಟುಕೊಂಡು ನೋಡುತ್ತಾ ಕೂರುತ್ತಾರೆ....ಅ ರೀಲ್ಸ್ ತಮಾಷೆಗಾಗಿ ಮಾಡಿರಬಹುದು ಆದ್ರೆ ಅದನ್ನೇ ಈಗಿನ ಕಾಲದ ಎಷ್ಟೋ ಯುವದಂಪತಿಗಳು ಅದನ್ನು ಗಂಭೀರವಾಗಿ ಪಾಲಿಸುತ್ತಿದ್ದಾರೆ...
ಮಕ್ಕಳಿರುವ ಮನೆಯಲ್ಲಿ ಮೌನಕ್ಕೆ ಜಾಗವಿರೊಲ್ಲವಂತೆ. ಮಾತನಾಡುತ್ತಾ , ಮಾತನಾಡಿಸುತ್ತಾ, ಅಳುತ್ತಲೋ ಇಲ್ಲ ನಗಿಸುತ್ತಲೋ ಅಮ್ಮನನ್ನು ಗೋಳು ಹೊಯ್ದುಕೊಳುತ್ತಲೆ ಅವಳಿಂದ ಬೈಗುಳ ತಿನ್ನುತಲೋ ಏನೋ ಒಂದು ಮಾಡಿ ಮನೆ ನಿಶ್ಶಬ್ದವಾಗದಂತೆ ನೋಡಿಕೊಳ್ಳುವ ಮಕ್ಕಳು ಮನೆಯಲೊಂದು ಧನಾತ್ಮಕ ಶಕ್ತಿಯನ್ನು ತುಂಬುತ್ತಾರೆ.ಇದೇ ಕಾರಣಕ್ಕೆ ಅನ್ನಿಸುತ್ತದೆ ನಮ್ಮ ಮುತ್ತಜ್ಜನ ಕಾಲಕ್ಕೆ ಮಕ್ಕಳಿರಲವ್ವ ಮನೆ ತುಂಬಾ ಎನ್ನುವ ನಾಣ್ಣುಡಿ ಹುಟ್ಟಿಕೊಂಡಿದ್ದು.
ಬರುಬರುತ್ತಾ ಮನೆತುಂಬಾ ಮಕ್ಕಳು ಹೋಗಿ 3-4 ಮಕ್ಕಳಿಗೆ ಸೀಮಿತವಾದವು ಕುಟುಂಬಗಳು! ಆವಾಗಲೇ ಜನಸಂಖ್ಯಾ ನಿಯಂತ್ರಣದ ಬಗ್ಗೆ ಕೊಂಚ ಕೊಂಚ ಅರಿವು ಮೂಡಿದ ಕಾರಣವೂ ಸೇರಿ ಮನೆ ತುಂಬಾ ಮಕ್ಕಳ ಬದಲಾಗಿ ಮೂರು ಮಕ್ಕಳು ಸಾಕೆಂದು ತೀರ್ಮಾನಿಸಿದರು ಅನಿಸುತ್ತದೆ...
ದಿನ ಕಳೆದಂತೆ ಜನಸಂಖ್ಯೆ ಜಾಸ್ತಿಯಾಗಿ ಆಹಾರ ,ಆರೋಗ್ಯ ನೈರ್ಮಲ್ಯ ,ಮೂಲಭೂತ ಸೌಕರ್ಯಗಳು ಕಡಿಮೆಯಾದಾಗ ನಮ್ಮ ಪೋಷಕರ ಕಾಲಘಟ್ಟಕ್ಕೆ ಆರತಿಗೊಬ್ಬಳು ಮಗಳು ಕೀರುತಿಗೊಬ್ಬ ಮಗ ಎಂದು ಸರ್ಕಾರವೇ ಹೇಳುತ ಬಂದಿತು.. ಅದರ ಪರಿಣಾಮ ನಮ್ಮೊಂದಿಗೆ ಅಣ್ಣ ತಮ್ಮ ಅಥವಾ ಅಕ್ಕ ತಂಗಿಯರು ಮಾತ್ರ ರಕ್ತಸಂಬಂಧಗಳು ಎಂದು ಉಳಿದವು.
ಮನೆಯ ಯಾವುದಾದ್ರೂ ಸಮಾರಂಭಗಳಿಗೆ ಒಟ್ಟಾಗಿ ಸೇರಿದಾಗ ಕಿರಿಯರನ್ನು ಕಂಡ ಹಿರಿಯರು ನಾವು ಯಾರು ಹೇಳು ನೋಡೋಣ ಅನ್ನೋ ಪ್ರಶ್ನೆಗಳು ಸಾಮಾನ್ಯವಾಗಿಯೇ ಇರುತ್ತಿದ್ದವು, ಅವರ ಪ್ರಶ್ನೆಗೆ ಮಕ್ಕಳು ಕೂಡ ಮಾವ, ದೊಡ್ಡಪ್ಪ, ಚಿಕ್ಕಪ್ಪ, ಅಣ್ಣ, ಅಜ್ಜ, ಭಾವ,ಅತ್ತಿಗೆ ,ಅಕ್ಕ ಅನ್ನೋ ಬಂಧಗಳನ್ನು ಹೇಳಿದಾಗ ಕೇಳಿದವರಿಗೆ ಒಂದು ರೀತಿಯ ಹೆಮ್ಮೆಯಾದರೆ ಮಕ್ಕಳಿಗೆ ಸಂತೋಷವಾಗುತ್ತಿತ್ತು ಎಷ್ಟೋ ಸಂದರ್ಭದಲ್ಲಿ ಹೊಸದಾಗಿ ಬಂದ ಅತ್ತಿಗೆಯನ್ನೋ, ಭಾವನನ್ನೋ ಮಕ್ಕಳು ತುಂಬಾ ಹಚ್ಚಿಕೊಂಡು ಓಡಾಡುವ ಪರಿಪಾಠವೂ ರೂಢಿಯಲ್ಲತ್ತು. ಬರುಬರುತ್ತಾ ಮಕ್ಕಳೂ ಕಮ್ಮಿಯಾದರು ಎಲ್ಲ ಸಂಬಂಧಗಳು ಅಂಕಲ್ - ಆಂಟಿಯಾಗಿ ಬದಲಾದವು. ಅಣ್ಣ ತಮ್ಮ ಅಕ್ಕ ತಂಗಿಯರ ಭೇಟಿಯೂ ಅಪರೂಪವಾಗುತ್ತ ಬಂತು. ಹಬ್ಬ ಹರಿದಿನಗಳು ಬಂದರೆ ಮೊದಲು ಹೇಗೆ ಮಾಡಬೇಕು ಯಾರನೆಲ್ಲ ಕರೆಯಬೇಕು ಅಂತ ಯೋಚಿಸುತ್ತಿದವು ಈಗ ಹಬ್ಬ ಎಂದರೆ ಎಲ್ಲಿಗೆ ಪ್ರವಾಸ ಹೋಗೋಣ ಅನ್ನೋವಲ್ಲಿಗೆ ಬಂದು ನಿಂತಿದೀವಿ.
ದಿನಕಳೆದಂತೆ ಹೆಚ್ಚಿದ ಆದಾಯ, ವೆಚ್ಚ ಮಾಡುವ ಸಾಮರ್ಥ್ಯವನ್ನು ಹೆಚ್ಚಿಸಿ, ಜೀವನಮಟ್ಟದಲ್ಲಿಯೂ ಸುಧಾರಣೆ ಬಂದು ಮಕ್ಕಳನ್ನು ದೊಡ್ಡ ನಗರದ ಪ್ರತಿಷ್ಠಿತ ಶಾಲಾ ಕಾಲೇಜುಗಳ ಶುಲ್ಕ ಭರಿಸಬೇಕಾಗುವುದನ್ನು ನೆನೆದು ಹೆಚ್ಚಿನ ಜನರು ಒಂದಕ್ಕಿಂತ ಹೆಚ್ಚಿನ ಮಕ್ಕಳು ಬೇಡವೆಂದು ನಿರ್ಧಾರ ತಳೆದರು.
ನಮ್ಮ ಮುಂದಿನ ಪೀಳಿಗೆ ಈಗಾಗಲೇ ಸಂಬಂಧಗಳ, ಹಬ್ಬಹರಿದಿನಗಳ ಜೊತೆಗೆ ಮಕ್ಕಳನ್ನು ಹೆತ್ತು ಪಾಲಿಸುವ ಪೋಷಿಸುವ ಜವಾಬ್ದಾರಿಯಿಂದಲೂ ಮುಕ್ತರಾಗಲು ಬಯಸಿ ಮಕ್ಕಳೇ ಬೇಡ ಅನ್ನುವ ಕಟು ನಿರ್ಧಾರಕ್ಕೆ ಬಂದಿರುವುದು ವಿಷಾದವೇ ಸರಿ!
ಮಕ್ಕಳನ್ನು ಹೆರುವುದೆಂದರೆ ತಮ್ಮದಲ್ಲವೆಂದು ಹೆಚ್ಚು ಕಡಿಮೆ 2-3 ವರ್ಷಗಳನ್ನು ಅವರಿಗಾಗಿ, ಅವರ ಪಾಲನೆ ಪೋಷಣೆಗಾಗಿಯೇ ಮೀಸಲಿಡಬೇಕು, ಗಂಡಿನ ಸಮಾನಕ್ಕೆ ಹೆಣ್ಣು ದುಡಿಯುತ್ತಿರುವ ಈ ಕಾಲದಲ್ಲಿ ಅವಳಿಗೂ ಅವನಷ್ಟೇ ಜವಾಬ್ದಾರಿಯುತ ಕೆಲಸಗಳು ಆಫೀಸಿನಲ್ಲಿರುತ್ತವೆ. ದಿನಬೆಳಗಾದರೆ ಆಫೀಸಿಗೆ ಎದ್ದು ಓಡು, ಇಳಿಸಂಜೆ ಹೊತ್ತಿಗೆ ಬಾ, ಮಧ್ಯೆ ಗಂಡ ಹೆಂಡತಿ ನೆಮ್ಮದಿಯಾಗಿ ಕುಳಿತು ಮಾತನಾಡಲು ಕೂಡ ವೀಕೆಂಡ್ಗಾಗಿ ಕಾಯಬೇಕಾದ ಈ ಸಮಯದಲ್ಲಿ ಇನ್ನು ಮಗು ಎನ್ನುವ ಜವಾಬ್ದಾರಿಯನ್ನು ಹೊರಲು ಹೆರಲು ಇಬ್ಬರಿಗೂ ಸಮಯವೂ ಇಲ್ಲ ಸಂಯಮವು ಇಲ್ಲವಾಗಿದೆ.
ನಾವೆಲ್ಲರೂ ಚಿಕ್ಕವರಾಗಿದ್ದಾಗ ವರ್ಷಕ್ಕೊ ಎರಡು ಮೂರು ವರ್ಷಕ್ಕೊ ಒಮ್ಮೆ ಕುಕ್ಕೆ ಧರ್ಮಸ್ಥಳ ಇಲ್ಲ ಮನೆ ದೇವರ ದೇವಸ್ಥಾನಕ್ಕೆ ಒಂದೆರಡು ದಿನ ಹೋಗಿ ಬಂದರೆ ಅದೇ ನಮ್ಮ ಪಾಲಿನ ದೊಡ್ಡ ಪ್ರವಾಸ, ಅದಕ್ಕೂ ಎಷ್ಟು ಲೆಕ್ಕಾಚಾರಗಳನ್ನು ನಡೆಸುತ್ತ ಇದ್ದರು ನಮ್ಮ ಪೋಷಕರು, ಆದರೆ ಈಗ ಹಾಗಿಲ್ಲ ಕೈತುಂಬಾ ಸಂಬಳ ಬರುವ ಕೆಲಸವಿದೆ, ಬೇಕಲ್ಲಿಗೆ ಹೋಗಲು ವಾಹನ ವ್ಯವಸ್ಥೆ, ಕುಳಿತಲ್ಲೇ ಸಿಗುವ ಬಸ್ಸು, ಟ್ರೈನು, ಏರ್ ಟಿಕೆಟ್ಗಳಿವೆ, ಎಲ್ಲಕ್ಕಿಂತ ಮುಖ್ಯವಾಗಿ ಎಲ್ಲರ ಬಳಿಯೂ ಅವರದ್ದೇ ಅದ ಸ್ವಂತ ವಾಹನಗಳಿವೆ ವಾರಾಂತ್ಯವೊ ಇಲ್ಲ ಸಾಲು ಸಾಲು ರಜೆಗಳು ಬಂದರೆ ಎಲ್ಲಾದ್ರೂ ಹೊರಡೋಣ ಅನ್ನೋರೆ ಹೆಚ್ಚು ಇದರ ನಡುವೆ ಕುಶಲಕಾಳಜಿಯಿಂದ ತಮ್ಮನ್ನು ತಾವು ಹೆತ್ತ ಅಥವಾ ಹೆರಲಿರುವ ಮಗುವನ್ನು ನೋಡಿಕೊಳ್ಳುವ ಸಹನೆಯಂತೂ ಹುಡುಕಿದರೂ ಸಿಕ್ಕೊಲ್ಲ ಹಾಗಾಗಿ ಇರುವಷ್ಟು ದಿನ ಜೀವನವನ್ನು ಎಂಜಾಯ್ ಮಾಡಿಕೊಂಡು ಇರೋಣ ಮಕ್ಕಳೆಂಬ ತಲೆನೋವು ಬೇಡ ಅನ್ನೋದು ಅವರ ಕಾರಣ.
ಮಗು ಹೇಗೋ ಮಾಡಿಕೊಳ್ಳಬಹುದು ನಂತರ ಇಬ್ಬರು ಹೊರಗೆ ಕೆಲಸಕ್ಕೆ ಹೋಗುವಾಗ ನೋಡಿಕೊಳ್ಳೋರು ಯಾರು? ಈಗಾಗಲೇ ಮನೆ, ಕಾರು ಅಂತ ಸಾಲ ಮಾಡಾಗಿದೆ, ಇನ್ನು ಮಗುವಿನ ಶಾಲೆ-ಕಾಲೇಜಿನ ಫೀಸು, ಭರಿಸುವುದು ಹೇಗೆ ಅದಕ್ಕಾಗಿ ಮತ್ತೆ ಸಾಲ ಮಾಡಬೇಕೆ? ಜೀವನ ಪೂರ್ತಿ ಒಂದು ಸಾಲ ತೀರಿದ ನಂತರ ಮತ್ತೊಂದು ಸಾಲ ತೀರಿಸುತ್ತ ಇರೋದೆ ಕಾಯಕವೇ? ಇದರಲ್ಲೇ ಜೀವನ ಕಳೆದರೆ ನಮಗಾಗಿ ನಾವು ಏನು ಮಾಡಿಕೊಳ್ಳುತ್ತೇವೆ? ನಾವು ದುಡಿದಿದ್ದು ನಮಗೆ ಬೇಡವೇ ಅನ್ನೋದು ಮತ್ತೊಂದು ಕಾರಣವನ್ನು ಕೊಡುವವರೂ ಇದ್ದಾರೆ. ಮಕ್ಕಳು ಯಾಕೆ ಬೇಕು ಅನ್ನೋ ಪ್ರಶ್ನೆಗೆ ಕಡೆಗಾಲದಲ್ಲಿ ನಮ್ಮನ್ನು ನೋಡಿಕೊಳ್ಳೋರು ಯಾರಾದ್ರೂ ಬೇಕಲ್ಲವೇ ಅಂದರೆ, ಈಗ ಎಷ್ಟು ಜನ ಮಕ್ಕಳು ತಮ್ಮ ಹೆತ್ತವರ ಜೊತೆಗೆ ಇದ್ದಾರೆ? ಅವರೊಂದು ಕಡೆ ಇವರೊಂದು ಕಡೆ, ಹೀಗಿರುವಾಗ ನಮ್ಮ ದುಡಿಮೆಯ ಅರ್ಧಕ್ಕೂ ಹೆಚ್ಚು ಭಾಗ ಅವ್ರಿಗಾಗಿ ವ್ಯಯಿಸುವ ಬದಲು, ಈಗ ಅಂಗೈಯಲ್ಲಿ ತುದಿಯಲ್ಲೇ ಎಲ್ಲ ಸಿಗುವ ಈ ಕಾಲದಲ್ಲಿಯೂ ಇನ್ನೊಬ್ಬರ ಮೇಲೆ ಅವಲಂಬಿತರಾಗುವ ಬದಲು ನಮ್ಮಿಷ್ಟದಂತೆ ನಾವು ಬದುಕಬಹುದಲ್ಲ ಅನ್ನೋ ಸಿದ್ಧ ಉತ್ತರವನ್ನು ಕೊಡುವ ದಂಪತಿಗಳಿಗೇನು ಕಮ್ಮಿಯಿಲ್ಲ.
ಮೊನ್ನೆ ಅದೇ ಫೇಸ್ಬುಕ್ ನಲ್ಲಿ ಯಾರೋ ಪರಿಸರವಾದಿಯ ಪೋಸ್ಟ್ ಕಣ್ಣಿಗೆ ಬಿತ್ತು, ದಿನೇ ದಿನೇ ಏರುತ್ತಿರುವ ಜಾಗತಿಕ ತಾಪಮಾನದಿಂದ ಕಡಲಾಮೆಗಳಲ್ಲಿ ಹೆಚ್ಚಿನ ಮೊಟ್ಟೆಗಳು ಹೆಣ್ಣುಮರಿಗಳೇ ಜನಿಸುತ್ತಿವೆಯಂತೆ, ಹೀಗೆ ತಾಪಮಾನ ಏರಿದರೆ ಮುಂದೊಂದು ದಿನ ಕಡಲಾಮೆ ಎನ್ನುವ ಜೀವಿಯೊಂದಿತ್ತು ಅಂತ ಬರೀ ಪುಸ್ತಕಗಳಲ್ಲಿ ದಾಖಲೆಗಳಲ್ಲಿ ಮಾತ್ರ ಓದಬೇಕು ಎಂದು ಬರೆದಿದ್ದರು..
ಅದನ್ನು ಓದಿದನಂತರ ಇಂದಿನ ಯುವದಂಪತಿಗಳ DINK ನಿಂದ, ಹಲವಾರು ವರ್ಷಗಳ ಬಳಿಕ ಮನುಷ್ಯ ಎಂಬ ಒಂದು ಜೀವಿ ಇತ್ತು ಅಂತ ದಾಖಲೆ ಮಾಡಲು ಕೂಡ ಯಾರಾದರೂ ಇರುತ್ತಾರೋ ಇಲ್ಲವೋ.?