ಅಂತರರಾಷ್ಟ್ರೀಯ ಪುರುಷರ ದಿನ 
ಸಂಚಯ

ಹ್ಯಾಪಿ ಮೆನ್ಸ್ ಡೇ: ಪುರುಷರಿಗೊಂದು ನೈಜ ಗೌರವ

"ಹ್ಯಾಪಿ ಮೆನ್ಸ್ ಡೇ" ಎಂದು ಶುಭಾಶಯ ಕೋರದೆ ಇದ್ದರೂ ಪರವಾಗಿಲ್ಲ, ಸಾಧ್ಯವಾದಷ್ಟು ಅವರ ನೋವಿಗೆ ಕಾರಣವಾಗದೆ ಇರೋಣ.

ಬರಹ: ಅದಿತಿಮಾನಸ ಟಿ.ಎಸ್

ಲೋಕದಲ್ಲಿ ಹೆಣ್ಣಿನ ಮೇಲೆ ನಡೆಯುತ್ತಿರುವ ಹಿಂಸಾತ್ಮಕ ಘಟನೆಗಳನ್ನು ನೋಡಿದರೆ, ಹೆಣ್ಣು ಹೆತ್ತ ಪೋಷಕರಲ್ಲಿ ಒಂದು ಸಣ್ಣ ದುಗುಡ ಇದ್ದೇ ಇರುತ್ತದೆ. ಹಾಗೆಂದು ಗಂಡಸರ ಬಳಿ ಮಾತನಾಡಬೇಡ ಎನ್ನುವ ಹಾಗಿಲ್ಲ. ಏಕೆಂದರೆ ಹಾಗೆ ಹೇಳುವ ತಂದೆಯೂ ಪುರುಷನಲ್ಲವೇ? ಎಲ್ಲಾ ಗಂಡಸರೂ ಕೆಟ್ಟವರು ಎಂದೂ ತಾಯಿ ಹೇಳುವಂತಿಲ್ಲ. ಏಕೆಂದರೆ ಒಡಹುಟ್ಟಿದ ಸಹೋದರರೂ ಪುರುಷರೇ ಅಲ್ಲವೇ? ಅಜ್ಜ, ಮಾವ, ದೊಡ್ಡಪ್ಪ, ಚಿಕ್ಕಪ್ಪ, ಭಾವ—ಹೀಗೆ ತನ್ನ ಕುಟುಂಬದಲ್ಲಿರುವ ಗಂಡಸರಷ್ಟೇ ಒಳ್ಳೆಯವರು, ಮಿಕ್ಕವರು ಕೆಟ್ಟವರು ಎಂದು ಮಗಳಿಗೆ ಹೇಳಲು ಸಾಧ್ಯವೇ? ಇದು ತರ್ಕಕ್ಕೆ ವಿರುದ್ಧ! ಹೀಗೆ ಬೆಳೆಯುವ ಹೆಣ್ಣುಮಗು ಮುಂದೆ ಮೂರ್ಖಳಾಗುತ್ತಾಳೆ, ಇಲ್ಲವೇ ಪುರುಷ ದ್ವೇಷಿಯಾಗುತ್ತಾಳೆ!

ಬಾಲ್ಯದಲ್ಲಿ ನನಗೆ ಇಂತಹ ಯಾವುದೇ ವಿಷಯಗಳನ್ನು ಹಿರಿಯರು ತಲೆಗೆ ತುರುಕಲಿಲ್ಲ. ಹಾಗಾಗಿ ನಾನು ಅದರ ಬಗ್ಗೆ ತಲೆಯೇ ಕೆಡಿಸಿಕೊಳ್ಳಲಿಲ್ಲ. ಯಾವಾಗ ನನಗೆ ತಿಂಗಳ ಹೊಟ್ಟೆ ನೋವು ಕಾಣಿಸಿಕೊಳ್ಳುತ್ತಿತ್ತೋ, ಆಗ ಮಾತ್ರ ಹುಡುಗರು ಆರಾಮವಾಗಿ ಆಡುವುದು, ಓಡುವುದನ್ನು ನೋಡಿ ಅಸೂಯೆಪಡುತ್ತಿದ್ದೆ. ಹೊಟ್ಟೆಕಿಚ್ಚಿನಿಂದ ಮನದಲ್ಲೇ ಬೈದುಕೊಳ್ಳುತ್ತಿದ್ದೆ! ನಾವಿಲ್ಲಿ ನೋವಿನಿಂದ ನರಳುತ್ತಿದ್ದರೆ, ಹುಡುಗರು ನಮ್ಮ ಕಣ್ಣ ಮುಂದೆಯೇ ಖುಷಿಯಿಂದ ಓಡಾಡುತ್ತಿದ್ದರು. ಅದನ್ನು ನೋಡಿ, "ಇದೆಂಥ ಅನ್ಯಾಯ!" ಎಂದು ಬೇಸರಪಡುತ್ತಿದ್ದೆ. ಅಷ್ಟೇ ಬಿಟ್ಟರೆ ಗಂಡಸರೆಲ್ಲ ಕಟುಕರು ಎಂಬ ಭಾವ ನನ್ನಲ್ಲಿ ಎಂದೂ ಹುಟ್ಟಲಿಲ್ಲ. ಏಕೆಂದರೆ ಹೆಂಗಸರಲ್ಲೂ ಕೆಟ್ಟವರಿದ್ದಾರೆ. ಒಳ್ಳೆಯತನ ಮತ್ತು ಕೆಡುಕಿಗೆ ಲಿಂಗಭೇದವಿಲ್ಲ.

ಅಷ್ಟಕ್ಕೂ ಗಂಡಸರಿಗೆ ಯಾವುದೇ ಸಂಕಟ, ನೋವು, ಸಮಸ್ಯೆ ಇಲ್ಲವೇ ಇಲ್ಲ ಎಂಬುದೂ ಸತ್ಯವಲ್ಲವಲ್ಲ! ಅವರು ದುಃಖ ತೋರಿಸಿಕೊಳ್ಳುವುದಿಲ್ಲವಷ್ಟೇ. ಅವರ ಜವಾಬ್ದಾರಿಗಳು, ಹೊರೆ, ತಲೆನೋವು ಅವರಿಗೇ ಗೊತ್ತಷ್ಟೇ. ಎಷ್ಟೇ ಬೇಸರವಾದರೂ ಅಳಬಾರದು ಎಂದೇ ಅವರನ್ನು ಬೆಳೆಸಿರುತ್ತಾರೆ. ಹಾಗಾಗಿ ತಮ್ಮನ್ನು ನಂಬಿ ಬದುಕುತ್ತಿರುವವರ ಮುಂದೆ ಅವರು ಎಂದೂ ಕಂಬನಿ ಸುರಿಸಲಾರರು. ಒಂದು ವೇಳೆ ಕಣ್ಣೀರು ಹಾಕಿದ್ದೇ ಆದರೆ, ಮನದಲ್ಲಿ ಅದೆಷ್ಟು ನೋವಿದ್ದಿರಬೇಕು? ಕಟ್ಟೆ ಒಡೆದು ಹೊರಬರುವಷ್ಟು! ಇದರ ಬಗ್ಗೆ ನಾವೇಕೆ ಯೋಚಿಸುವುದಿಲ್ಲ?

ನನ್ನ ಸ್ನೇಹಿತರ ಬಳಗದಲ್ಲಿ ಹೆಣ್ಣುಮಕ್ಕಳಿಗಿಂತ ಗಂಡಸರ ಸಂಖ್ಯೆಯೇ ಹೆಚ್ಚು. ಕಾಲು ಎಳೆಯುತ್ತಾರೆ, ಜಗಳ ಮಾಡುತ್ತಾರೆ, ಸಿಟ್ಟೂ ಬರಿಸುತ್ತಾರೆ. ಆದರೆ ಅದಕ್ಕಿಂತ ಹೆಚ್ಚಾಗಿ ನಗಿಸುತ್ತಾರೆ, ಕಾಳಜಿ ತೋರುತ್ತಾರೆ. ರಕ್ತಸಂಬಂಧಿಗಳಲ್ಲದಿದ್ದರೂ ಸ್ನೇಹ ಕಾಪಾಡಿಕೊಳ್ಳುತ್ತಾರೆ. ಹಾಗಿದ್ದಾಗ ಸಮಾಜದ ದೃಷ್ಟಿಯಲ್ಲಿ ‘ಕೂಲ್, ವೋಕ್, ಪ್ರೋಗ್ರೆಸಿವ್, ರೆಬೆಲ್, (ಫೇಕ್) ಫೆಮಿನಿಸ್ಟ್’ ಆಗಿ ಕಾಣಿಸಿಕೊಳ್ಳಲು ಪುರುಷರೆಲ್ಲ ಕೆಟ್ಟವರು, ಕೀಳು ಎಂಬ ಧೋರಣೆ ಇಟ್ಟುಕೊಳ್ಳುವುದು ಸರಿಯಲ್ಲ. ಅಷ್ಟೇ ಅಲ್ಲದೆ, ಇತರ ಹೆಣ್ಣುಮಕ್ಕಳನ್ನೂ ಈ ರೀತಿ ಆಲೋಚಿಸುವಂತೆ ಪ್ರೇರೇಪಿಸುವುದು ಮೂರ್ಖತನ. ಹೆಣ್ಣಿನ ಮೇಲಿನ ದೌರ್ಜನ್ಯ ಗಂಡಸಿನಿಂದ ಆಗುತ್ತಿದೆ, ನಿಜ. ಆದರೆ ಅದಕ್ಕೆ ಇಡೀ ಪುರುಷ ಸಮುದಾಯವನ್ನೇ ದೂಷಿಸುವುದು ಸಮಂಜಸವಲ್ಲ.

ಹೆಣ್ಣುಮಕ್ಕಳ ಮೇಲೆ ನಡೆಯುವ ಅನಾಚಾರ, ಅತ್ಯಾಚಾರ ಮತ್ತು ಅನ್ಯಾಯವನ್ನು ತಡೆಯಲು ಭಾರತೀಯ ಕಾನೂನು ವ್ಯವಸ್ಥೆಯಲ್ಲಿ ಹಲವು ಕ್ರಮಗಳಿವೆ. ಆದರೆ ಅವುಗಳ ಸದ್ಬಳಕೆಯ ಬದಲಿಗೆ ದುರ್ಬಳಕೆಯೇ ಹೆಚ್ಚಾಗಿದೆ. ಇದರಿಂದ ನಿಜವಾದ ಸಂತ್ರಸ್ತೆಯರಿಗೆ ಅನ್ಯಾಯವಾಗುತ್ತಿದೆ; ನೊಂದವರಿಗೆ ಮತ್ತಷ್ಟು ಅನ್ಯಾಯವಾಗುತ್ತಿದೆ. ಮದುವೆಯಾಗುವುದಾಗಿ ಭರವಸೆ ನೀಡಿ “ಹಲವು ಬಾರಿ ಅತ್ಯಾಚಾರವೆಸಗಿದ್ದಾರೆ” ಎಂಬ ಆರೋಪದಡಿ ಅದೆಷ್ಟೋ ಪುರುಷರಿಗೆ ಶಿಕ್ಷೆಯಾಗಿರುವ ವಿಷಯ ಬಹುತೇಕ ನಮ್ಮೆಲ್ಲರಿಗೂ ತಿಳಿದೇ ಇದೆ. ಸಮ್ಮತಿಯುಳ್ಳ ಸಂಬಂಧ ಅಂದಮೇಲೆ ಅದು ಅತ್ಯಾಚಾರ ಅಥವಾ ಬಲಾತ್ಕಾರ ಹೇಗಾಗುತ್ತದೆ? ಇಂತಹ ಪ್ರಕರಣಗಳು ಮೋಸವೇ ಹೊರತು ಅತ್ಯಾಚಾರ ಅಲ್ಲವೇ ಅಲ್ಲ. ಇಷ್ಟು ಸಾಮಾನ್ಯ ಜ್ಞಾನ ಎಲ್ಲರಿಗೂ ಇರುತ್ತದೆ. ಒಂದು ವೇಳೆ ಸಂತ್ರಸ್ತೆ ಅಪ್ರಾಪ್ತೆಯಾಗಿದ್ದರೆ ವಿಷಯವೇ ಬೇರೆ. ಆದರೆ, ಎಲ್ಲವನ್ನೂ ತಿಳಿದಿರುವ ಪ್ರಬುದ್ಧ ಮಹಿಳೆಯರು ಗೊತ್ತಿದ್ದೂ ಹಳ್ಳಕ್ಕೆ ಜಿಗಿಯುತ್ತಾರೆ. ಆಮೇಲೆ “ಅವನು ತಳ್ಳಿದ್ದು” ಎಂದು ಸುಳ್ಳು ಹೇಳುವುದು ಎಷ್ಟು ಸರಿ?

ಸ್ತ್ರೀವಾದದ ಬಗ್ಗೆ ತಪ್ಪು ತಿಳುವಳಿಕೆ ಹೊಂದಿಕೊಂಡು, "ಸ್ತ್ರೀ ಪುರುಷನಿಗಿಂತ ಶ್ರೇಷ್ಠ" ಎಂಬ ಭ್ರಮೆಯಲ್ಲಿ ಬದುಕುವ ಮಹಿಳೆಯರೇ ಹೆಚ್ಚಾಗಿ ಇಂತಹ ಹಳ್ಳಕ್ಕೆ ಜಿಗಿಯುವುದು. ಗಂಡು ಹೆಣ್ಣು ಸಮಾನರಲ್ಲ; ಒಬ್ಬರು ಶ್ರೇಷ್ಠ, ಇನ್ನೊಬ್ಬರು ಕೀಳೂ ಅಲ್ಲ. ಆಯಾ ಕ್ಷೇತ್ರದಲ್ಲಿ ಅವರವರ ಶಕ್ತಿ, ಸಾಮರ್ಥ್ಯ ಮತ್ತು ಬುದ್ಧಿಮತ್ತೆಗೆ ತಕ್ಕಂತೆ ಅವರು ಮುಂದೆ ಬರುತ್ತಾರೆ ಅಥವಾ ಹಿಂದೆ ಉಳಿಯುತ್ತಾರೆ. ಇದಕ್ಕೆ ವ್ಯಕ್ತಿಯ ಲಿಂಗ ಕಾರಣವೂ ಅಲ್ಲ, ದೋಷಿಯೂ ಅಲ್ಲ. ಅತ್ಯಾಚಾರ, ವರದಕ್ಷಿಣೆ ಕಿರುಕುಳ, ಕೌಟುಂಬಿಕ ದೌರ್ಜನ್ಯ ನಡೆಯುತ್ತಿವೆ; ಅದು ಸುಳ್ಳಲ್ಲ. ಆದರೆ ಬೇರಾವುದೋ ಕಾರಣಕ್ಕೆ ಅವುಗಳನ್ನು ಗುರಾಣಿಯಾಗಿ ಬಳಸಿಕೊಳ್ಳುವುದು ಸರಿಯಲ್ಲ. ಹಣ ಪೀಕುವ, ಮಾನನಷ್ಟ ಮಾಡುವ ಅಥವಾ ಬಯಸಿದ್ದನ್ನು ಪಡೆದೇ ತೀರುತ್ತೇನೆ ಎಂಬ ದುರಾಸೆಗಾಗಿ ಕಾನೂನನ್ನು ಬಳಸಿಕೊಂಡಾಗ ದೊಡ್ಡ ಅನ್ಯಾಯವಾಗುತ್ತದೆ. ಆಗ ನಿಜವಾಗಿ ಸಂಕಷ್ಟದಲ್ಲಿ ಸಿಕ್ಕಿಹಾಕಿಕೊಂಡ ಹುಡುಗಿಯರು, ಮಹಿಳೆಯರು ಮತ್ತವರ ಕುಟುಂಬಕ್ಕೆ ನ್ಯಾಯ ಎಂಬುದು ಕೈಗೆಟುಕದ ನಕ್ಷತ್ರವಾಗುತ್ತದೆ. ಇದು ಕ್ಷಮಿಸಲಾಗದ ಅಪರಾಧ, ಅಲ್ಲವೇ?

ಪುರುಷರ ವಿರುದ್ಧ ಆಗುತ್ತಿರುವ ಅನ್ಯಾಯಕ್ಕೆ ಕಡಿವಾಣ ಹಾಕಲು ಆಗದಿದ್ದರೂ, ಅದನ್ನು ತಡೆಯುವ ಪ್ರಯತ್ನವಾದರೂ ಮಾಡಬಹುದು. ಇಲ್ಲವೇ ಆ ಅನ್ಯಾಯದಲ್ಲಿ ಭಾಗಿಯಾಗದೆ ಇರಬಹುದು. ಉಪಕಾರವಲ್ಲದಿದ್ದರೂ ಉಪದ್ರವ ಮಾಡದೇ ಇದ್ದರೆ ಅಷ್ಟೇ ಸಾಕು. "ನಾ ಮೇಲು, ತಾ ಮೇಲು" ಎಂಬ ಪೈಪೋಟಿಗೆ ಇಳಿಯುವ ಬದಲು, ಬದುಕಿದ್ದಷ್ಟು ಕಾಲ ಒಬ್ಬರನ್ನೊಬ್ಬರು ನೆಮ್ಮದಿಯಿಂದ ಬಾಳಲು ಬಿಡೋಣ. ವರ್ಷಕ್ಕೊಮ್ಮೆ ಬರುವ ಪುರುಷರ ದಿನದ ಬಗ್ಗೆ ಹೆಚ್ಚಿನ ಪುರುಷರಿಗೆ ಅರಿವೇ ಇಲ್ಲ. ಅದರ ಹೆಸರಿನಲ್ಲಿ ಯಾವುದಾದರೂ ಮಾರಾಟ, ರಿಯಾಯಿತಿ ಕೊಡುಗೆಗಳು ಮತ್ತು ಕಾರ್ಯಕ್ರಮಗಳಿದ್ದರೆ "ಓಹ್! ಹೀಗೊಂದು ದಿನವೂ ಇದೆಯೇ?" ಎಂದು ಹೇಳುತ್ತಾರಷ್ಟೇ. "ಹ್ಯಾಪಿ ಮೆನ್ಸ್ ಡೇ" ಎಂದು ಶುಭಾಶಯ ಕೋರದೆ ಇದ್ದರೂ ಪರವಾಗಿಲ್ಲ, ಸಾಧ್ಯವಾದಷ್ಟು ಅವರ ನೋವಿಗೆ ಕಾರಣವಾಗದೆ ಇರೋಣ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Arnab ಚಂಡಮಾರುತ ಸಂಕಷ್ಟದಲ್ಲಿ ನೆರವು; ಕರ್ನಾಟಕಕ್ಕೆ ಆಂಧ್ರ ಸಿಎಂ ಚಂದ್ರಬಾಬು ನಾಯ್ಡು ಧನ್ಯವಾದ; ಡಿಕೆಶಿ ಹೇಳಿದ್ದೇನು?

ಮನರೇಗಾ ಯೋಜನೆಯ ₹13.57 ಲಕ್ಷ ಗುಳುಂ; ಕೆಲಸ ಮಾಡದೆ ಸರ್ಕಾರಿ ಹಣ ಲೂಟಿ, ಇಬ್ಬರು ಆರೋಪಿಗಳಿಗೆ ಜೈಲು ಶಿಕ್ಷೆ!

ಊಟಿಯಲ್ಲಿ ಮೈಕೊರೆಯುವ ಚಳಿ; 5.9 ಡಿಗ್ರಿಗೆ ಕುಸಿದ ಕನಿಷ್ಠ ತಾಪಮಾನ, ಹಿಮದ ಹೊದಿಕೆಯಲ್ಲಿ ಗಿರಿಧಾಮ

Gold rate: ಭಾರಿ ಕುಸಿತದ ಬಳಿಕ ಚಿನ್ನದ ದರ ಮತ್ತೆ ಏರಿಕೆ; ಬೆಂಗಳೂರಿನಲ್ಲಿ 10 ಗ್ರಾಂ ಚಿನ್ನದ ದರ ಎಷ್ಟಿದೆ? ಬೆಳ್ಳಿ ಬೆಲೆಯಲ್ಲೂ ಬದಲಾವಣೆ, ಇಲ್ಲಿದೆ ಸಂಪೂರ್ಣ ಪಟ್ಟಿ!

ಮತದಾರರ ಹೆಸರು ಅಳಿಸಲು ಫಾರ್ಮ್-7 ದುರ್ಬಳಕೆ ಆರೋಪ; ಬಿಜೆಪಿ ಬೂತ್ ಏಜೆಂಟರಿಗೆ ಹೈಕೋರ್ಟ್ ರಿಲೀಫ್, FIRಗೆ ತಡೆ