ಪದ್ಯ ಪರಿಷೆ

ಕವನ: ಮೀರಾ ತುಷಾರ್; ಕವನದ ಶೀರ್ಷಿಕೆ: ನಮ್ಮ ಜನನಿ ಭಾರತಿ

Prasad SN

1. ನಮ್ಮ ಜನನಿ ಭಾರತಿ

ನಾವು ಭಾರತೀಯರು ॥

    ಇದು ಚಂದದ ದೇಶ

    ನಮ್ಮ ಭಾರತ ದೇಶ

    ಧರೆಯಲ್ಲೇ ಸೊಬಗಿನಾ ದೇಶವಿದು

    ಭಾರತೀಯರೆಂಬ ಹೆಮ್ಮೆ ನಮ್ಮದು॥

    ನಮ್ಮ ಜನನಿ ಭಾರತಿ  

    ನಾವು ಭಾರತೀಯರು॥

    ಆ ಜಾತಿ ಈ ಜಾತಿ ಭೇದ ನಮಗಿಲ್ಲ

    ಆ ಭಾಷೆ ಈ ಭಾಷೆ ಮೇಲು ಕೀಳಲ್ಲ

    ಆ ಜನ ಈ ಜನ ನಮ್ಮವರೆಲ್ಲ    

    ನಮ್ಮ ಜನನಿ. . .

ರಾಷ್ಟ್ರಪಿತ ಗಾಂಧಿ ಮಹಾತ್ಮನನ್ನು

ಚೆನ್ನಮ್ಮ ನೇತಾಜಿ ಲಜಪತರನ್ನು

ದೇಶಕೆ ದುಡಿದ ಎಲ್ಲ ಸ್ವತಂತ್ರ ವೀರರನು

ನೆನೆಸಿಕೊಳುತ ಅರ್ಪಿಸುವ ವೀರ ನಮನವನು    

ನಮ್ಮ ಜನನಿ।

   ನಾವೆಲ್ಲ ಒಂದೇ ನಮ್ಮ ತಾಯ್ನಾಡು ಒಂದೇ

   ನಾವೆಲ್ಲ ಸೋದರ ಸೋದರಿಯರಂತೇ

   ದೇಶದ ಉಳಿವೇ ನಮ್ಮೆಲ್ಲರ  ಉಳಿವು

   ಶಾಂತಿ ಸಮರಸದಿಂದ ನಾವೆಲ್ಲ ಬಾಳುವೆವು ।

   ನಮ್ಮ ಜನನಿ ।

-----

 2.   ಭರತ ದೇಶ ವರದ ಖಂಡ

      ಸುರಗಂಗೆ ಕಾವೇರಿ ಸಿಂಧು

      ಪರ್ವತ ಹಿಮಾಲಯವು ಸ್ವ

      ತಂತ್ರ ಹೊಂದಿರುವುವು   ಉಘೇ  ಉಘೇ  ಉಘೇ॥

 
ಏಳು ದಶಕಗಳಲಿ ನಾವು ಗೈದ ಸಾಧನೆ ಅಮೋಘ

ಭಾರತೀ ದೇವಿ ಇಂದು ನಿಂದಿಹಳದೊ ಹರುಷದಿ ಹಾರಿಸು ರಾಷ್ಟ್ರದ ಧ್ವಜವನು ಬಾರಿಸು ಜೊತೆ  ಡಿಂಢಿಮವನ್ ಕೋರು ಭಾರತಿಗೆ ಶುಭವನು ಧೀರ ಭಾರತೀಯನಂತೆ  ಆ  ಆ  ಆ॥

      ನೆನೆ ಮನದಲಿ ಬಲಿದಾನದಿ ಕೊನೆಯುಸಿರೆಳೆದಾ ಧೀರರ

      ಕೊನೆವರೆಗೂ  ರಾಷ್ಟ್ರ ಹಿತಕೆ  ಶ್ರಮಿಸುತ ನಿರಂತರಾ

      ರಾಷ್ಟ್ರ ಪಿತನ ಮಾರ್ಗದಲ್ಲಿ ನಡೆವೆವೆಂದು ಪಣತೊಡು

      ಜಾತ್ಯತೀತ ಪಂಚಶೀಲ ತತ್ವದಲ್ಲಿ ಮನವಿಡು

ರಾಷ್ಟ್ರ ಧ್ವಜಾ... ಓ    ರಾಷ್ಟ್ರ ಗೀತೆ. . .  ರಾಷ್ಟ್ರ ಸಂವಿಧಾನವನ್ನು

ಗೌರವಿಸು ನನ್ನದೆಂಬ ಅಭಿಮಾನವ ತಳೆದಿರು ॥ಃ

------

3.  ಬೆಳಗಾಯಿತೂ ಊ ಊ  ಆಹ! ಅಹ! ಆಹ್! ಆಹ!

    ಸ್ವಾತಂತ್ರದ ದಿನವಿದೋ ಬಂದಿತು!

    ಸುಖ ಸಂಭ್ರಮ ಸಂತಸ ಸವಿ

    ದಿನವಾ. . ಗಿ ಮೂಡಿತು।

     ಅಂದು ಆ ವೀರರೂ, ಶೂರರೂ, ಮಹಾತ್ಮರೂ

     ತಂದಾ ಸ್ವಾತಂತ್ರ  ಹೋರಾಡುತಾ ನಿರಂತರಾ

     ಇಂದೂ ಮುಂದೆಂದೂ ಇದ ಕಳೆಯದಂತೆ ನಾ. .ವು

     ಉಳಿಸಿಕೊಳುವ ಮುಂದಿನಾ ಜನಾಂಗಕೂ ಹರಿಸುವ॥

               ( ಹಿಂಸೆ ಅಹಿಂಸೆಗಳ ನಡುವೆ

                ಸಮರ ಶಾಂತಿಗಳ ನಡುವೆ

ಛಲವಿಡಿದು ತಮ್ಮ ಹಕ್ಕಿಗಾಗಿ ನಿ

ಶ್ಚಲ ಮನದಿಂ ಕ್ರಾಂತಿಮಾಡಿ ಪಡೆದ ಈ

ನೆಲವ ವೈರಿ ಹಿಡಿತದಿಂದ ಬಿಡಿಸಿದಾ

ಬಲ ವೀರರಿಗೇ ನಮನ ಸಲ್ಲಿಸುವಾ। ಸ್ವಾತಂತ್ರದ ।)

 ನಮ್ಮ ದೇಶ ನಮ್ಮ ಮಣ್ಣು ನಮ್ಮ ಜನರು ಎನ್ನುವಾ

 ಭಾವ ಭಾವಾತ್ಮದ ತಂತುಗಳ ಬೆಸೆಯುವಾ

    ಕೆಣಕುವಾ ಕೆರಳಿಸುವಾ ವೈರಿಗಳ ಮಣಿಸುತ

    ಪಣತೊಡುವ ಉಳಿಪೆವೆಂದು ಸ್ವಾತಂತ್ರವ ಸತತ। ಬೆಳ।

ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೂ

ಆ ಸೇತು ಹಿಮಾಲಯ ಪ್ರಾಂತವೆಲ್ಲ ನಮ್ಮದು

ಗಡಿವೀರರು ಕಾಯುತಿಹ ಈ ವರಭೂಮಿ ನಮ್ಮದು

ಎಡೆಬಿಡದೆ ದೇಶೋನ್ನತಿಗಾಗಿ ಕೂಡಿ ಶ್ರಮಿಸುವ। ಸ್ವಾತಂ।

 
-----
 

 4.  ರಾಗ : ಕಲಾವತಿ

 
( ಸ್ನೇಹ ಸಂಸ್ಕೃತಿ ಭಾರತ-ಸೋವಿಯಟ್ ಸಾಂಸ್ಕೃತಿಕ ಸಂಘ ಸಂಚಿಕೆಯಲ್ಲಿ ೧೯೯೦ ಪ್ರಕಟವಾಗಿದೆ)

  ನಾವು ವಿಶ್ವದ ಪ್ರಜೆಗಳೂ

  ಪ್ರಗತಿ ಪಥದಲಿ ನಡೆವೆವೂ

  ಸರ್ವೋದಯವೆ ನಮ್ಮ ಧ್ಯೇಯವೂ

  ಸರ್ವೋದಯವೆ ನಮ್ಮ ಧ್ಯೇಯವೂ ಆ ಆ ಆ।

  ಸಹನೆ ಸಹಬಾಳ್ವೆಯಾ ಪ್ರೇಮದ

  ಸತ್ಯ ಧರ್ಮ ಜ್ಞಾನ ಜ್ಯೋತಿಯ

  ವಿಶ್ವದೆಲ್ಲೆಡೆ ಬೆಳಗಲೂ

  ವಿಶ್ವಶಾಂತಿಯ ಬಯಸುತಾ (೨)

  ವಿಶ್ವಮಾನವರಾಗುವಾ,  ವಿಶ್ವಮಾನವರಾಗುವಾಆ ಆ ಆ ಆ।ನಾವು।

 
  ತೊಡೆದು ಭೇದ ಭಾವವಾ

  ಹಿಡಿದು ಬನ್ನೀ ಶಾಂತಿ ಧ್ವಜವಾ

  ಕೂಡಿ ದುಡಿಯುವ ಲೋಕ ಹಿತಕೆ

  ನೀಡಿ ನಿಮ್ಮ ಸ್ನೇಹ ಹಸ್ತವ

  ವಿಶ್ವ ಶಾಂತಿಯ ಬಯಸುತಾ

  ವಿಶ್ವ ಮಾನವರಾಗುವಾ,  

ವಿಶ್ವ ಮಾನವರಾಗುವಾ ಆ ಆ ಆ ಆ। ನಾವು।

 
  ರಕ್ತಪಾತ ಹಿಂಸೆ ಕ್ರೌರ್ಯದ

  ಯುದ್ಧವನು ನಾವ್ ತೊಡೆಯುವಾ ನಿ

  ಶ್ಶಸ್ತ್ರೀಕರಣವ ಎತ್ತಿ ಹಿಡಿದು

  ಶಾಂತಿ ಮಂತ್ರವ ಪಠಿಸುತಾ

  ಸರ್ವರಿಗೆ ಶುಭ ಕೋರುವಾ ಆ ಆ ಆ ಆ ।ನಾವು।

   
  ನಾವು ವಿಶ್ವದ ಪ್ರಜೆಗಳೂ

  ಪ್ರಗತಿ ಪಥದಲಿ ನಡೆವೆವೂ ಸ

  ಸರ್ವೋದಯವೆ ನಮ್ಮ ಧ್ಯೇಯವೂ (೨) ।ನಾವು।

-----

 5. ಜ್ಯೋತಿಯೊಂದು ಬೆಳಗಲೀ ನಿರಂತರಾ . . .(೨)

 
ಪ್ರೇಮ ಜ್ಯೋತಿಯೂ . . .ಸತ್ಯ ಜ್ಯೋತಿಯೂ . . .

ದಾರಿದೀಪವಾಗಿ ಸದಾ ಬೆಳಗಲಿ ಆ ಆ ಆ ಆ ಆ ಆ।ಜ್ಯೋ।

   ಉಡುಗಣದ ಆಚೆಗೆ

   ಅದ್ಭುತದ ಲೋಕಕೇ

   ಆನಂದ ತಾಣಕೆ ದಾರಿ ತೋರುತಾ . .

   ಸತ್ಯ ಮಾರ್ಗದಿ ದೀಪ ನಿತ್ಯ ನಿಚ್ಚಳವಾಗಿ

  ಉರಿಯಲೀ ನಿರಂತರ ಆ ಆ ಆ ಆ।ಜ್ಯೋ।

  ಬಾನ ನಗಿಸುವುದೂ  ನಕ್ಷತ್ರ ಜ್ಯೋತಿ

  ಬುವಿಯ ನಗಿಸುವುದೂ ಪುಷ್ಪ ಜ್ಯೋತಿ

  ಆಲಯವ ನಗಿಸುವುದೂ ದೇವಮೂರ್ತಿ

  ಹಣತೆಯನೂ ನಗಿಸುವುದೂ ದಿವ್ಯ ಜ್ಯೋತಿ  ಆ ಆ ಆ ಆ।ಜ್ಯೋ।

ರಾಷ್ಟ್ರಕಾಗಿ ದುಡಿವೆವು  ಧರ್ಮ ದೀಪ ಬೆಳಗುವೆವು

ಪ್ರೇಮವನೇ ಹರಿಸುವೆವು ಪರಮವನೆ ಬಯಸುವೆವು

ಜ್ಯೋತಿ ಹಿಡಿದು ಸಾಗುವೆವು ಐಕ್ಯತೆಯ ಸಾರುವೆವು

ಬೆಳಕ ನಾವು ಪಡೆಯುತ  ಬೆಳಕ ಕೊಡುತ ಸಾಗುವೆವು ಆ ಆ ಆ ಆ।ಜ್ಯೋ।

 
-----

6. ಓ ದೇಶವೇ  ಓ ದೇಶವೇ

 ಓ ರಾಷ್ತ್ರವೇ  ಮಾತೃಭೂಮಿಯೇ

ನಿನಗೆ ನಮ್ಮ ನಮನಗಳು .

ಯಾವ ದೇಶದ ಮಣ್ಣಲಿ  ಮಹಾ ಚೇತನಗಳಿದ್ದರೋ

ಯಾವ  ದೇಶದ ನೆಲದಲಿ ಧರ್ಮ ಬೀಜ ಬಿತ್ತಿ ಬೆಳೆದವೋ

ಯಾವ ದೇಶದ ಹಿರಿಮೆ ಜಗದ ತುಂಬ ಹರಡಿಹುದೋ

ಆ ದೇಶವೇ ನಮದು  ಹೇಳಿಕೊಳಲು  ಹೆಮ್ಮೆಯದು.

ಉತ್ತರದ ಹಿಮಾಲಯದ ಔನ್ನತ್ಯದಿಂದ

ದಕ್ಷಿಣದ ಹಿಂದೂಮಹಾ ಸಿಂಧು ಪರ್ಯಂತ

ಪಸರಿಸಿಹ ಈ ಪಾವನ ನೆಲವು ನಮಗೆಲ್ಲ

ಜನ್ಮಭೂಮಿ ಇಂಥ ಜಾಗ ಕಾಣದು ಮತ್ತೆಲ್ಲೂ

ನೂರಾರು ಭಾಷೆಗಳು ವಿಧ ವಿಧದಾಚರಣೆಗಳು

ಸಂಗೀತ ಸಾಹಿತ್ಯ ನೃತ್ಯ ಚಿತ್ರ ಕಲೆಗಳು

ದೇಶದುದ್ದಕೂ ಬೆಳೆವ ವೈವಿದ್ಯಮಯ ಫಸಲು

ಸಮೃದ್ಧಿ ಸಂತೃಪ್ತಿ ಸಂಕೇತವಾಗಿಹುದಿಲ್ಲಿ ಬಾಳು

ಬನ್ನಿ ಎಲ್ಲ ಒಟ್ಟಾಗಿ ತರುವ ನಗುವ ಮೊಗ ಮೊಗಗಳಲ್ಲಿ

ಸಹಿಷ್ಣುತೆ ನಮ್ಮ ಭಾವವಾಗಿ ಐಕ್ಯತೆಯೆ ಗುರಿಯಾಗಲಿ

ದೇಶದ ಪ್ರಗತಿಯೆ ನಮ್ಮ ಆಶಯವಾಗಲಿ

ವಿಶ್ವಕೆಲ್ಲ ನಮ್ಮ ದೇಶ ಮಾದರಿಯಾಗಲಿ

ಮೀರಾ ತುಷಾರ್ ಅವರು ನಿವೃತ್ತ ಅಧ್ಯಾಪಕಿಯಾಗಿದ್ದು ಹಲವಾರು ದೇಶಭಕ್ತಿ ಗೀತೆಗಳನ್ನು ಬರೆದಿದ್ದಾರೆ. ಅವರ ಎಲ್ಲ ಹಾಡುಗಳೂ ಬಿಷಪ್ ಕಾಟನ್ ಗರ್ಲ್ಸ್ ಸ್ಕೂಲ್ ಮ್ಯಾಗಜಿನ್ ನಲ್ಲಿ ಪ್ರಕಟವಾಗಿವೆ ಮತ್ತು ಅವುಗಳಿಗೆ ರಾಗ ಸಂಯೋಜನೆ ಮಾಡಲಾಗಿದೆ. 

SCROLL FOR NEXT