ವಿಜ್ಞಾನ-ತಂತ್ರಜ್ಞಾನ

ಚೆನ್ನೈ ಮರೀನಾ ಬೀಚ್ ನಲ್ಲಿ ಉಚಿತ ವೈಫೈ..!

Srinivasamurthy VN
ಚೆನ್ನೈ: ಚೆನ್ನೈ ಖ್ಯಾತ ಮರೀನಾ ಬೀಚ್ ನಲ್ಲಿ ಶೀಘ್ರದಲ್ಲಿಯೇ ಉಚಿತ ವೈಫೈ ಸೇವೆ ದೊರೆಯಲಿದೆ.
ಚೆನ್ನೈನ ಮರೀನಾ ಬೀಚ್ ಗೆ ತೆರಳುವ ಪ್ರವಾಸಿಗರಿಗಾಗಿ ರಿಲಯನ್ಸ್ ಜಿಯೋ ಟೆಲಿಕಾಮ್ ಸಂಸ್ಥೆ ಉಚಿತ ವೈಫೈ ಸೇವೆ ನೀಡಲು ಮುಂದಾಗಿದೆ. ರಿಲಯನ್ಸ್ ಸಂಸ್ಥೆ ತನ್ನ ನೂತನ 4ಜಿ  ಸೇವೆಗಳನ್ನು ಪ್ರಚಾರ ಮಾಡುವ ಸಲುವಾಗಿ ಈ ಯೋಜನೆ ಹಾಕಿಕೊಂಡಿದೆ ಎಂದು ಹೇಳಲಾಗುತ್ತಿದೆ. ಇದಕ್ಕಾಗಿ ಚೆನ್ನೈ ಮರೀನಾ ಬೀಚ್ ಬಳಿ 4ಜಿ ಸೇವೆ ನೀಡಬಲ್ಲ ಟವರ್ ಮತ್ತು ತಾಂತ್ರಿಕ  ಸಲಕರಣೆಗಳನ್ನು ಅಳವಡಿಸಲು ಮುಂದಾಗಿದೆ. ಮರೀನಾ ಬೀಚ್ ನಲ್ಲಿರುವ ಉತ್ತರ ಲೈಟ್ ಹೌಸ್ ಭಾಗದ ಸುಮಾರು 3 ಕಿಮೀ ವ್ಯಾಪ್ತಿಯಲ್ಲಿ ವೈಫೈ ಸೇವೆ ನೀಡಲು ಮುಖೇಶ್ ಅಂಬಾನಿ  ಮಾಲೀಕತ್ವದ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ನಿರ್ಧರಿಸಿದೆ.
ಡಿಸೆಂಬರ್ 27ರಂದು ರಿಲಯನ್ಸ್ ಸಂಸ್ಥೆಯ ಸಂಸ್ಥಾಪಕರಾದ ಧೀರುಭಾಯ್ ಅಂಬಾನಿ ಅವರ 83ನೇ ಜನ್ಮ ದಿನಾಚರಣೆ ನಡೆದಿದ್ದು, ಇದೇ ವೇಳೆ ಈ ನೂತನ ಯೋಜನೆಯನ್ನು ರಿಲಯನ್ಸ್  ಸಂಸ್ಥೆ ಘೋಷಣೆ ಮಾಡಿದೆ. 
ಮೂಲಗಳ ಪ್ರಕಾರ, ಪ್ರಸ್ತುತ ಮರೀನಾ ಬೀಚ್ ನಲ್ಲಿ ವೈಫೈ ತಂತ್ರಜ್ಞಾನಕ್ಕೆ ಬೇಕಾದ ಮೂಲಭೂತ ಸೌಕರ್ಯಗಳನ್ನು ಅಳವಡಿಸಲಾಗುತ್ತಿದೆ. ಇನ್ನು ಕೆಲವೇ ದಿನಗಳಲ್ಲಿ ಟವರ್ ಸೇರಿದಂತೆ  ಇದಕ್ಕೆ ಬೇಕಾದ ಸಲಕರಣೆಗಳನ್ನು ಕೂಡ ಅಳವಡಿಸಲಾಗುವುದು ಎಂದು ಹೇಳಲಾಗುತ್ತಿದೆ. ಎಲ್ಲವೂ ಅಂದುಕೊಂಡಂತೆ ನಡೆದರೆ ಇದೇ ಮಾರ್ಚ್ 2016ರ ವೇಳೆಗೆ ಮರೀನಾ ಬೀಚ್ ನಲ್ಲಿ 24  ಗಂಟೆಗಳ ನಿರಂತರ ವೈಫೈ ಸೇವೆ ಲಭ್ಯವಾಗಲಿದೆ.
SCROLL FOR NEXT