ಹೌದು ಸಾಮಾಜಿಕ ಜಾಲತಾಣ ಫೇಸ್‌ಬುಕ್‌ನಿಂದಾಗಿ ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಹೆಚ್ಚೆಚ್ಚು ಅಂಕ ಗಳಿಸಬಹುದು ಎಂದು ಸಂಶೋಧನಾ ವರದಿಯೊಂದು ಹೇಳಿದೆ.
ನ್ಯೂಯಾರ್ಕ್‌ನಲ್ಲಿನ ಸುಮಾರು 1600 ವಿದ್ಯಾರ್ಥಿಗಳ ಮೇಲೆ ಈ ಸಂಶೋಧನೆ ನಡೆಸಲಾಗಿದ್ದು, ವಿದ್ಯಾರ್ಥಿಗಳ ನಡವಳಿಕೆಯ ಆಧಾರದ ಮೇಲೆ ಈ ನಿರ್ಧಾರಕ್ಕೆ ಬರಲಾಗಿದೆಯಂತೆ. ಸಾಮಾಜಿಕ ಜಾಲತಾಣ ಫೇಸ್‌ಬುಕ್‌ನಲ್ಲಿರುವಷ್ಟೂ ಸಮಯದಲ್ಲಿ ವಿದ್ಯಾರ್ಥಿಗಳು ಹೆಚ್ಚು ಸಕ್ರಿಯರಾಗಿದ್ದು, ಹೆಚ್ಚು ಸ್ನೇಹಿತರನ್ನು ಮತ್ತು ತಮ್ಮದೇ ಆದ ಸ್ನೇಹಿತರ ಗುಂಪನ್ನು ಸೃಷ್ಟಿಸಿಕೊಳ್ಳುತ್ತಾರೆ ಎಂದು ವರದಿ ಹೇಳಿದೆ.
ಲೋವಾ ವಿಶ್ವವಿದ್ಯಾಲಯದ ಶಿಕ್ಷಣ ವಿಭಾಗದ ಸಹಾಯಕ ಪ್ರೋಫೆಸರ್ ರೇನಲ್ ಜಂಕೋ ಅವರ ಪ್ರಕಾರ, ವಿದ್ಯಾರ್ಥಿಗಳು ಸಾಮಾಜಿಕ ಜಾಲತಾಣದಲ್ಲಿನ ಸಾಮಾಜಿಕ ವಲಯದಲ್ಲಿ ಹೆಚ್ಚೆಚ್ಚು ಬೆರೆತಂತೆಯೇ ಶೈಕ್ಷಣಿಕ ಸಂಸ್ಥೆಗಳಿಗೂ ಹೆಚ್ಚಾಗಿ ಬದ್ಧರಾಗಿರುತ್ತಾರೆ. ಇದರಿಂದ ಅವರ ಶೈಕ್ಷಣಿಕ ಪ್ರಗತಿ ಸಾಧ್ಯ ಎಂದು ಅಭಿಪ್ರಾಯ ಪಟ್ಟಿದ್ದಾರೆ.
ಸಾಮಾಜಿಕ ಜಾಲತಾಣಗಳನ್ನು ಹೆಚ್ಚಾಗಿ ಬಳಕೆ ಮಾಡುವುದರಿಂದ ವಿದ್ಯಾರ್ಥಿಗಳ ಕ್ಷಮತೆ ಕಡಿಮೆಯಾಗುತ್ತದೆ ಎನ್ನುವ ಅಭಿಪ್ರಾಯವನ್ನು ಅಲ್ಲಗೆಳೆದಿರುವ ಜಂಕೋ ಅವರು, ಸಾಮಾಜಿಕ ಜಾಲತಾಣವನ್ನು ವಿದ್ಯಾರ್ಥಿಗಳು ಹೇಗೆ ಮತ್ತು ಏತಕ್ಕಾಗಿ ಬಳಕೆ ಮಾಡುತ್ತಾರೆ ಎಂಬುದರ ಆಧಾರದ ಮೇಲೆ ಇದು ನಿರ್ಧರಿತವಾಗುತ್ತದೆ. ಇದರಲ್ಲಿ ಪಾಲಕರ ಮತ್ತು ಪೋಷಕರು ಪ್ರಮುಖ ಪಾತ್ರ ನಿರ್ವಹಿಸಲಿದ್ದು, ವಿದ್ಯಾರ್ಥಿಗಳಿಗೆ ಅಥವಾ ತಮ್ಮ ಮಕ್ಕಳಿಗೆ ಉತ್ತಮ ರೀತಿಯಲ್ಲಿ ನೆರವಾಗುವ ಮೂಲಕ ವ್ಯತಿರಿಕ್ತ ಸಾಮಾಜಿಕ ಜಾಲತಾಣ ಬಳಕೆ ಮೇಲೆ ಸ್ವಯಂ ನಿಯಂತ್ರಣ ಸಾಧಿಸುವಂತೆ ಮಾಡಬಹುದಾಗಿದೆ ಎಂದು ಜಂಕೋ ಹೇಳಿದ್ದಾರೆ.
'ವಿದ್ಯಾರ್ಥಿಗಳು ಕಡ್ಡಾಯವಾಗಿ ಸಾಮಾಜಿಕ ಜಾಲತಾಣಗಳನ್ನು ಬಳಕೆ ಮಾಡುತ್ತಿದ್ದು, ಮಲ್ಟಿಟಾಸ್ಕಿಂಗ್ ವೇಳೆ ಹೆಚ್ಚಾಗಿ ಫೇಸ್‌ಬುಕ್‌ನಂತಹ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿರುತ್ತಾರೆ. ಫೇಸ್‌ಬುಕ್‌ನ ಶೇರಿಂಗ್ ಲಿಂಕ್‌ಗಳ ನೆರವಿನಿಂದ ತಮ್ಮಲಿನ ಯಾವುದೇ ಗೊಂದಲಗಳನ್ನು ಸ್ನೇಹಿತರೊಂದಿಗೆ ಹಂಚಿಕೊಳ್ಳುವ ಮೂಲಕ ಬಗೆಹರಿಸಿಕೊಳ್ಳುತ್ತಾರೆ. ಇದು ಸಕಾರಾತ್ಮಕ ಬೆಳವಣಿಗೆಯಾಗಿದ್ದು, ವಿದ್ಯಾರ್ಥಿಗಳ ಕ್ಷಮತೆಯನ್ನು ಹೆಚ್ಚಿಸುತ್ತದೆ ಎಂದು ಜಂಕೋ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಒಟ್ಟಾರೆ ವಿದ್ಯಾರ್ಥಿಗಳು ಹೆಚ್ಚಾಗಿ ಫೆಸ್‌ಬುಕ್ ಬಳಕೆ ಮಾಡುವುದರಿಂದ ಅವರ ಶೈಕ್ಷಣಿಕ ಪ್ರಗತಿ ಕುಂಠಿತವಾಗುತ್ತದೆ ಎನ್ನುವ ಅಭಿಪ್ರಾಯಕ್ಕೆ ಪ್ರಸ್ತುತ ಸಂಶೋಧನಾ ವರದಿ ವ್ಯತಿರಿಕ್ತವಾಗಿದೆ.