ವಿಜ್ಞಾನ-ತಂತ್ರಜ್ಞಾನ

ಸ್ತ್ರೀ ಮುಂದೆ ಬರಲಿ ಎಂಬ ಆಶಯದೊಂದಿಗೆ ಐಕಾನ್ ಬದಲಿಸಿದ ಫೇಸ್‌ಬುಕ್

Rashmi Kasaragodu

ಖ್ಯಾತ ಸಾಮಾಜಿಕ ತಾಣವಾದ ಫೇಸ್‌ಬುಕ್ ಇತ್ತೀಚೆಗಷ್ಟೇ ತಮ್ಮ ಲೋಗೋದಲ್ಲಿ ಫಾಂಟ್ ಬದಲಿಸಿತ್ತು. ಅದರ ಬೆನ್ನಲ್ಲೇ ಇದೀಗ ಮತ್ತೊಂದು ಬದಲಾಣೆಯನ್ನು ಫೇಸ್‌ಬುಕ್ ಮಾಡಿಕೊಂಡಿದೆ. ಇದು ಪುಟ್ಟದೊಂದು ಬದಲಾವಣೆ ಆಗಿರುವುದರಿಂದ ಹೆಚ್ಚಿನವರು ಇದನ್ನು ಗಮನಿಸಿರಲ್ಲ.

ಈ ಬಾರಿ ಫೇಸ್‌ಬುಕ್ ತಮ್ಮ ಐಕಾನ್ ಒಂದರಲ್ಲಿ ಬದಲಾವಣೆಯನ್ನು ತಂದಿದೆ. ಮಾತ್ರವಲ್ಲ ಈ ಬದಲಾವಣೆ ಮೂಲಕ ಫೇಸ್‌ಬುಕ್ ಮಹಿಳೆಯರಿಗೆ ಪ್ರಾಧಾನ್ಯತೆ ನೀಡಿದೆ!. ಅದೇನಪ್ಪಾ ಅಂದರೆ ಫೇಸ್‌ಬುಕ್‌ಗೆ ಲಾಗಿನ್ ಆದ ಕೂಡಲೇ ಫ್ರೆಂಡ್ಸ್ ನೋಟಿಫಿಕೇಷನ್ (ಫ್ರೆಂಡ್ ರಿಕ್ವೆಸ್ ನೋಟಿಫಿಕೇಷನ್ / ರಿಕ್ವೆಸ್ಟ್  ಸ್ವೀಕರಿಸಿದಾಗ ಬರುವ ನೋಟಿಫಿಕೇಶನ್ ) ತೋರಿಸುವ ಪುಟ್ಟ ಐಕಾನ್‌ನಲ್ಲಿ ಹೆಣ್ಣು ಮತ್ತು ಗಂಡಿನ ಸಾಂಕೇತಿಕ ಚಿತ್ರವೊಂದು ಇದೆಯಲ್ಲವೆ? ನಿನ್ನೆಯವರೆಗೂ ಆ ಚಿತ್ರದಲ್ಲಿ ಹೆಣ್ಣಿನ ಚಿತ್ರ ಗಂಡಿನ ಚಿತ್ರದ ಹಿಂದೆ ಇತ್ತು. ಆದರೆ ಈಗ ಹೆಣ್ಣಿನ ಚಿತ್ರವನ್ನು ಗಂಡಿನ ಚಿತ್ರದಿಂದ ಮುಂದೆ ತರಲಾಗಿದೆ. ಮಾತ್ರವಲ್ಲ ಹೆಣ್ಣಿನ ಹೇರ್ ಸ್ಟೈಲ್ ಕೂಡಾ ಚೇಂಜ್ ಆಗಿದ್ದು ಅದಕ್ಕೂ ಮಾಡರ್ನ್ ಲುಕ್ ನೀಡಲಾಗಿದೆ. ಗಂಡಿನ ಹೇರ್ ಸ್ಟೈಲ್‌ನಲ್ಲೂ ಬದಲಾವಣೆ ಮಾಡಲಾಗಿದೆ. ಇಷ್ಟು ಮಾತ್ರವಲ್ಲ  ಫೇಸ್‌ಬುಕ್ ಗ್ರೂಪ್ ಐಕಾನ್ ನಲ್ಲಿ ಇಬ್ಬರು ಪುರುಷರ ಜತೆಗೆ ಒಬ್ಬ ಮಹಿಳೆ ನಿಂತಿರುವಂತಿದ್ದ ಚಿತ್ರವನ್ನೂ ಬದಲಿಸಲಾಗಿದೆ. ಗ್ರೂಪ್ ಐಕಾನ್‌ನಲ್ಲಿ  ಮಹಿಳೆಯ ಚಿತ್ರವನ್ನು ಮುಂದೆ ತಂದಿದ್ದು, ಇಬ್ಬರು ಗಂಡಸರ ಚಿತ್ರವನ್ನು ಹಿಂದೆ ನಿಲ್ಲಿಸಲಾಗಿದೆ. ಇಲ್ಲಿಯೂ ಮಹಿಳೆ ಮತ್ತು ಪುರುಷರ ಹೇರ್ ಸ್ಟೈಲ್ ನಲ್ಲಿ ಬದಲಾವಣೆ ಮಾಡಲಾಗಿದೆ.




ಮಹಿಳೆಯನ್ನು ಪುರುಷನ ಹಿಂದೆ ನಿಲ್ಲುವಂತೆ ಮಾಡುವುದು ಬೇಡ, ಆಕೆಯನ್ನು ಮುಂದೆ ತರಬೇಕು ಎಂದು ಈ ಐಕಾನ್‌ನ ಡಿಸೈನ್ ಮಾಡಿದ್ದು ಫೇಸ್‌ಬುಕ್ ಡಿಸೈನ್ ಮ್ಯಾನೇಜರ್ ಕೈಟ್ಲೀನ್ ವಿನ್ನರ್. ನಾನೊಬ್ಬಳು ಸ್ತ್ರೀ ಹಾಗೂ ನಾನು ಮಹಿಳಾ ಕಾಲೇಜಿನಲ್ಲಿ ಕಲಿತ ಕಾರಣ ಐಕಾನ್‌ನಲ್ಲಿ ಸ್ತ್ರೀಯನ್ನು ಪುರುಷನ ಹಿಂದೆ ನಿಂತಿರುವಂತೆ ಚಿತ್ರಿಸಿದನ್ನು ನನಗೆ ಕಡೆಗಣಿಸಲು ಸಾಧ್ಯವಾಗಿಲ್ಲ. ಆದ್ದರಿಂದಲೇ ಐಕಾನ್‌ನ್ನು ಬದಲಿಸಿದೆ ಎಂದಿದ್ದಾರೆ ಕೈಟ್ಲೀನ್. ಕೈಟ್ಲೀನ್‌ನ ಈ ನಿರ್ಧಾರ ಹಾಗೂ ಫೇಸ್‌ಬುಕ್ ಐಕಾನ್‌ನ ಆ ಬದಲಾವಣೆ ಮಹಿಳೆಯರಿಗೆ ಖುಷಿಕೊಡುವ ವಿಚಾರವೇ ಆಗಿದೆ.

SCROLL FOR NEXT