ವಾಷಿಂಗ್ಟನ್: ಜಗತ್ತಿನ ಜನಪ್ರಿಯ ಇನ್‌ಸ್ಟೆಂಟ್ ಮೆಸೇಜ್ ಆ್ಯಪ್ ವಾಟ್ಸಪ್ ಈಗ ಬಳಕೆದಾರರಿಗೆ ತಮ್ಮ ಸಂದೇಶಗಳನ್ನು ರಹಸ್ಯವಾಗಿಡಲು ಎನ್‌ಕ್ರಿಪ್ಶನ್ (ಗೂಢಲಿಪೀಕರಣ) ಸೌಲಭ್ಯವನ್ನು ಒದಗಿಸಿದೆ.
ಏನಿದು ಎನ್‌ಕ್ರಿಪ್ಶನ್ (ಗೂಢಲಿಪೀಕರಣ)?: ವ್ಯಕ್ತಿಯೊಬ್ಬರು ಸಂದೇಶದ ಮೂಲಕ ಕಳುಹಿಸಿದ ಸಾಧಾರಣ ಪಠ್ಯ (Plain text) ವನ್ನು ಸೈಫರ್ ಟೆಕ್ಸ್ಟ್ (ಸಂಕೇತ) ಆಗಿ ಪರಿವರ್ತಿಸಿ, ಸಂದೇಶ ಸ್ವೀಕರಿಸುವ ವ್ಯಕ್ತಿಗೆ ಮಾತ್ರ ಗ್ರಹಿಸಲು ಸಾಧ್ಯವಾಗುವಂತೆ ಮಾಡುವ ರಹಸ್ಯ ತಂತ್ರವಾಗಿದೆ .
ಇದೀಗ ಆ್ಯಂಡ್ರಾಯ್ಡ್, ಐಫೋನ್ ಮತ್ತು ಬ್ಲಾಕ್‌ಬೆರ್ರಿ ಸೇರಿದಂತೆ ಎಲ್ಲ ಪ್ಲಾಟ್‌ಫಾರಂಗಳಲ್ಲಿಯೂ ವಾಟ್ಸಪ್ ಎನ್‌ಕ್ರಿಪ್ಶನ್ ಲಭ್ಯವಾಗಿದೆ.
ಮಾಹಿತಿಗಳನ್ನು ಗುಪ್ತವಾಗಿ ಮತ್ತು ಸುರಕ್ಷಿತವಾಗಿ ಕಳುಹಿಸಲು ಮತ್ತು ಸ್ವೀಕರಿಸಲು ಬಯಸುವ ಗ್ರಾಹಕರಿಗೆ ಈ ಸೌಲಭ್ಯ ವರದಾನವಾಗಿದೆ. ಆದರೆ ಹೀಗೆ ಗುಪ್ತ ಸಂದೇಶ ಕಳುಹಿಸುವುದು ಕಾನೂನಿಗೆ ಸವಾಲಾಗಿ ಪರಿಣಮಿಸಿದೆ.
ಹೇಗೆ ಕಾರ್ಯನಿರ್ವಹಿಸುತ್ತಿದೆ? ನೀವೊಂದು ಸಂದೇಶವನ್ನು ಯಾರಿಗಾದರೂ ಕಳಿಸುತ್ತಿದ್ದರೆ, ಆ ಸಂದೇಶವನ್ನು ಆ ವ್ಯಕ್ತಿಗೆ ಮಾತ್ರ ಓದಲು ಸಾಧ್ಯವಾಗುತ್ತದೆ. ಅಂದರೆ ಬೇರ್ಯಾವ ವ್ಯಕ್ತಿಗೂ ಆ ಸಂದೇಶದಲ್ಲಿ ಏನಿದೆ ಎಂಬುದನ್ನು ನೋಡಲು ಸಾಧ್ಯವಿಲ್ಲ. ಸೈಬರ್ ಕ್ರಿಮಿನಲ್‌ಗಳಿಗೂ, ಹ್ಯಾಕರ್‌ಗಳಿಗೆ ಅಷ್ಟೇ ಅಲ್ಲ, ನಮಗೂ ಅದನ್ನು ನೋಡಲು ಸಾಧ್ಯವಾಗುವುದಿಲ್ಲ ಎಂದು ವಾಟ್ಸಪ್ ಸಹ ಸಂಸ್ಥಾಪಕ ಜಾನ್ ಕೌಮ್ ಮತ್ತು ಬ್ರಿಯಾನ್ ಆಕ್ಟಾನ್ ತಮ್ಮ ಬ್ಲಾಗ್‌ನಲ್ಲಿ ಬರೆದಿದ್ದಾರೆ.
ಸಂದೇಶ ಕಳುಹಿಸುವ ವ್ಯಕ್ತಿ ಮತ್ತು ಸಂದೇಶ ಸ್ವೀಕರಿಸುವ ವ್ಯಕ್ತಿ- ಈ ಇಬ್ಬರು ವ್ಯಕ್ತಿಗಳಿಗೆ ಮಾತ್ರ ಆ ಸಂದೇಶವನ್ನು ಡಿಕ್ರಿಪ್ಟ್ ಮಾಡಲು ಸಾಧ್ಯವಾಗಿರುವಾಗ ಯಾವುದೇ ಸರ್ಕಾರಕ್ಕಾಗಲೀ, ಸಂಸ್ಥೆಗಾಗಲೀ ಇಂಥಾ ಸಂದೇಶಗಳನ್ನು ಕದ್ದು ನೋಡವುದು ಅಸಾಧ್ಯವಾಗಿದೆ.
ಗ್ರಾಹಕರ ರಹಸ್ಯಗಳನ್ನು ಕಾಪಾಡಿಕೊಂಡು ಅವರ ಸಂವಹನಗಳಿಗೆ ಯಾವುದೇ ಚ್ಯುತಿ ಬರದಂತೆ ಕಾಪಾಡಿಕೊಳ್ಳುವುದಕ್ಕಾಗಿಯೇ ವಾಟ್ಸಪ್ ಈ ಹೊಸ ಅಪ್‌ಡೇಟ್ ಮಾಡಿದೆ. ಹೀಗೆ ಅಪ್‌ಡೇಟೆಡ್ ಆಗಿರುವ ವಾಟ್ಸಪ್ ಬಳಕೆದಾರರು ಕಳುಹಿಸುವ ಸಂದೇಶ, ಚಿತ್ರ, ವೀಡಿಯೋ, ಫೈಲ್‌ಗಳನ್ನು, ವಾಯ್ಸ್ ಮೆಸೇಜ್ ಎಂಡ್ ಟು ಎಂಡ್ ಎನ್‌ಕ್ರಿಪ್ಟೆಡ್ ಆಗಿರುತ್ತದೆ. ಗ್ರೂಪ್ ಸಂದೇಶಗಳಿಗೂ ಇದು ಅನ್ವಯಿಸುತ್ತದೆ.
ಅಪ್‌ಡೇಟೆಡ್ ವಾಟ್ಸಪ್ ಬಳಸುತ್ತಿರುವ ಗ್ರಾಹಕರಿಂದ ನಿಮಗೆ ಈ ರೀತಿ ಸಂದೇಶ ಬಂದಿದ್ದರೆ ಅಲ್ಲಿ ಈ ಕೆಳಗಿನ ಚಿತ್ರದಲ್ಲಿ ತೋರಿಸಿರುವಂಥಾ ಸಂದೇಶವೊಂದು ಕಾಣಸಿಗುತ್ತದೆ.
ಆ ಸಂದೇಶದ ಮೇಲೆ ಕ್ಲಿಕ್ ಮಾಡಿದರೆ, ಅದರ ಬಗ್ಗೆಯಿರುವ ಮಾಹಿತಿ ಸಿಗುತ್ತದೆ.
ಅಲ್ಲಿ ವೆರಿಫೈ ಎಂಬ ಆಪ್ಶನ್ ಕ್ಲಿಕ್ ಮಾಡಿದರೆ ಇನ್ನೊಬ್ಬ ಗ್ರಾಹಕರ (ನೀವು ಯಾರೊಂದಿಗೆ ಎನ್‌ಕ್ರಿಪ್ಟೆಡ್ ಸಂದೇಶ ವಿನಿಮಯ ಮಾಡಲು ಬಯಸುತ್ತಿರೋ ಅವರದ್ದು) ಕಾಂಟಾಕ್ಟ್ ಕೋಡ್‌ನ್ನು ಸ್ಕ್ಯಾನ್ ಮಾಡಿ ವೆರಿಫೈ ಮಾಡುವಂತೆ ಕೇಳಲಾಗುತ್ತದೆ. ಹೀಗೆ ಎರಡೂ ಕಾಂಟಾಕ್ಟ್ ಕೋಡ್ ಗಳನ್ನು ಪರಸ್ಪರ ಸ್ಕ್ಯಾನ್ ಮಾಡಿಕೊಂಡರೆ ಮಾತ್ರ ಎನ್‌ಕ್ರಿಪ್ಟೆಡ್ ಸಂವಹನ ನಡೆಸಬಹುದಾಗಿದೆ.