ವಾಷಿಂಗ್ಟನ್: ಫೇಸ್‌ಬುಕ್‌ನಲ್ಲಿ ನಿಮಿಷಕ್ಕೆ ಸಾವಿರದಷ್ಟು ಫೋಟೋಗಳು ಅಪ್‌ಲೋಡ್ ಆಗುತ್ತಿರುತ್ತವೆ. ಕಡಿಮೆಯೆಂದರೆ ದಿನದಲ್ಲಿ 30 ಕೋಟಿ ಫೋಟೋಗಳನ್ನು ಗ್ರಾಹಕರು ಫೇಸ್‌ಬುಕ್‌ನಲ್ಲಿ ಅಪ್‌ಲೋಡ್ ಮಾಡುತ್ತಾರೆ. ಅದೇನಿದ್ದರೂ ಅದರ ಫೋಟೋ ತೆಗೆದು ಲೈಕ್, ಕಾಮೆಂಟ್ ಗಿಟ್ಟಿಸಿ ಬೀಗುವ ಜನರ ಮಧ್ಯೆ, ಅಂಥಾ ಚಿತ್ರಗಳನ್ನು ನೋಡಲು ಸಾಧ್ಯವಾಗದೇ ಇರುವ ಜನರೂ ಇದ್ದಾರೆ ಎಂಬುದನ್ನು ನಾವು ಮರೆಯುವಂತಿಲ್ಲ. ಹೌದು, ಅಂಧರಿಗೆ ಇಂಥಾ ಚಿತ್ರಗಳನ್ನು ನೋಡಲಾಗುವುದಿಲ್ಲ. ಅದಕ್ಕಾಗಿಯೇ ಫೇಸ್‌ಬುಕ್, ಈ ಚಿತ್ರಗಳು ಮಾತನಾಡುವಂತೆ ಮಾಡುತ್ತಿದೆ!
ಅಂಧರಿಗೆ ಚಿತ್ರವನ್ನು ನೋಡಲು ಸಾಧ್ಯವಾಗುವುದಿಲ್ಲ. ಆದರೆ ಆ ಚಿತ್ರದಲ್ಲಿ ಏನಿದೆ? ಆ ಚಿತ್ರಕ್ಕೆ ಯಾವ ಶೀರ್ಷಿಕೆಯನ್ನು ನೀಡಲಾಗಿದೆ. ಚಿತ್ರವನ್ನು ಅಪ್‌ಲೋಡ್ ಮಾಡಿವರು ಯಾರು? ಅದಕ್ಕೆ ಎಷ್ಟು ಜನ ಲೈಕ್, ರಿಯಾಕ್ಷನ್ ನೀಡಿದ್ದಾರೆ ಎಂಬುದನ್ನು ಫೇಸ್‌ಬುಕ್ ಓದಿ ಹೇಳುತ್ತದೆ. ಕೃತಕ ಬುದ್ದಿಮತ್ತೆ (ಆರ್ಟಿಫಿಷಲ್ ಇಂಟೆಲಿಜೆನ್ಸ್) ಮೂಲಕ ಆ ಫೋಟೋದಲ್ಲಿರುವ ವಸ್ತುಗಳನ್ನು ಪತ್ತೆ ಹಚ್ಚುವ ತಂತ್ರವನ್ನು ಇಲ್ಲಿ ಬಳಸಲಾಗುತ್ತದೆ. ಈ ತಂತ್ರಜ್ಞಾನವನ್ನು ಆಟೋಮ್ಯಾಟಿಕ್ ಆಲ್ಟರ್‌ನೇಟಿವ್ ಟೆಕ್ಸ್ಟ್ ಎಂದು ಕರೆಯಲಾಗುತ್ತಿದೆ.
ಸಾವಿರ ಜನರು ನಿಂತಿರುವ ಫೋಟೋ ಇದ್ದರೆ ಅದರಲ್ಲಿರುವ ಎಲ್ಲರನ್ನು ಗುರುತಿಸಲು ಇಲ್ಲಿ ಸಾಧ್ಯವಿಲ್ಲ. ಆದರೆ ಒಬ್ಬ ವ್ಯಕ್ತಿ ಮೈಸೂರು ಅರಮನೆಯ ಮುಂದೆ ನಿಂತಿರುವ ಫೋಟೋ ಅಪ್‌ಲೋಡ್ ಮಾಡಿ ಎಂಜಾಯಿಂಗ್ ಸಮ್ಮರ್ ಹಾಲಿಡೇಸ್ ಎಂದು ಬರೆದಿದ್ದರೆ, ಆ ಚಿತ್ರವನ್ನು ಅಪ್‌ಲೋಡ್ ಮಾಡಿದ್ದು ಯಾರು? ಎಂಬುದನ್ನು ಫೇಸ್‌ಬುಕ್ ಹೇಳುತ್ತದೆ. ನಂತರ ಅಲ್ಲಿರುವ ಪೋಸ್ಟ್ ನ ಶೀರ್ಷಿಕೆ ಏನು? ಎಂಬುದನ್ನು ಓದುತ್ತದೆ. ಚಿತ್ರದಲ್ಲಿ ಮೈಸೂರು ಅರಮನೆ ಇದೆ ಎಂಬುದನ್ನು ಹೇಳಿ, ಆ ಚಿತ್ರಕ್ಕೆ ಎಷ್ಟು ಲೈಕ್‌ಗಳು ಬಂದಿದೆ ಎಂಬುದನ್ನೆಲ್ಲಾ ಫೇಸ್‌ಬುಕ್ ವಿವರಿಸುತ್ತದೆ.
ಒಂದು ವೇಳೆ ಆ ಚಿತ್ರ ಏನೆಂಬುದನ್ನು ಈ ತಂತ್ರಜ್ಞಾನಕ್ಕೆ ಪತ್ತೆ ಹಚ್ಚಲು ಅಸಾಧ್ಯವಾದರೆ ಫೇಸ್‌ಬುಕ್ ಈ ಬಗ್ಗೆ ಮೌನವಹಿಸುತ್ತದೆ. ಅದ್ಯಾವ ಚಿತ್ರ ಎಂಬುದನ್ನು ಅರಿತು ಶೇ. 70 ಅದು ಅದೇ ಚಿತ್ರ ಎಂದು ಮನಗಂಡರೆ ಮಾತ್ರ ಫೇಸ್‌ಬುಕ್ ಅದನ್ನು ಓದುತ್ತದೆ.
ಸ್ಕ್ರೀನ್ ರೀಡರ್ ಬಳಸುವವರಿಗೆ ಚಿತ್ರಗಳನ್ನು ವಿವರಿಸಿ ಹೇಳುವ ಸೌಲಭ್ಯ ಟ್ವಿಟರ್‌ನಲ್ಲೂ ಇದೆ. ಆದರೆ ಸ್ಕ್ರೀನ್ ರೀಡರ್ ಸಹಾಯವಿಲ್ಲದೆಯೇ ಚಿತ್ರಗಳನ್ನು ಓದುವಂತ ತಂತ್ರಜ್ಞಾನವನ್ನು ಫೇಸ್‌ಬುಕ್ ಬಳಸುತ್ತಿದೆ.
ಪ್ರಸ್ತುತ ಆ್ಯಪಲ್ ಐಒಎಸ್‌ನಲ್ಲಿ ಮಾತ್ರ ಈ ಸೌಲಭ್ಯವಿದ್ದು, ಶೀಘ್ರದಲ್ಲೇ ಆಂಡ್ರಾಯ್ಡ್ ಮತ್ತು ವೆಬ್‌ನಲ್ಲಿಯೂ ಆ ಸೌಲಭ್ಯ ಸಿಗಲಿದೆ ಎಂದು ಫೇಸ್‌ಬುಕ್ ಹೇಳಿದೆ.