ನವದೆಹಲಿ: ಸ್ವದೇಶಿ ನಿರ್ಮಿತ 106 ತೇಜಸ್ ವಿಮಾನಗಳನ್ನು ಭಾರತೀಯ ವಾಯುಪಡೆಗೆ ಸೇರ್ಪಡೆಗೊಳಿಸಲು ರಕ್ಷಣಾ ಸಚಿವಾಲಯ ನಿರ್ಧರಿಸಿದೆ.
ಮಿಗ್ ಯುದ್ಧ ವಿಮಾನಗಳನ್ನು ಬದಲಾಯಿಸಬೇಕೆಂಬ ಕೂಗು ಬಲವಾಗುತ್ತಿರುವ ಹಿನ್ನೆಲೆಯಲ್ಲಿ ಸ್ವದೇಶಿ ನಿರ್ಮಿತ ತೇಜಸ್ ವಿಮಾನಗಳನ್ನು ವಾಯುಪಡೆಗೆ ಸೇರ್ಪಡೆಗೊಳಿಸುವ ನಿರ್ಧಾರ ಕೈಗೊಳ್ಳಲಾಗಿದೆ. ವಾಯುಪಡೆಗೆ ಸೇರ್ಪಡೆಗೊಳ್ಳಲಿರುವ ತೇಜಸ್ ವಿಮಾನ ಈಗಿರುವ ಮಿಗ್ ವಿಮಾನಕ್ಕಿಂತ ಕಡಿಮೆ ತೂಕ ಹೊಂದಿರಲಿದ್ದು 43 ಸುಧಾರಿತ ತಂತ್ರಜ್ಞಾನಗಳನ್ನು ಒಳಗೊಂಡಿರಲಿದೆ.
ಡಿಆರ್ ಡಿ ಒ ಹೆಚ್ಎಎಲ್ ನ ಸಹಯೋಗದಲ್ಲಿ ತೇಜಸ್ -1 ನಿರ್ಮಾಣವಾಗುತ್ತಿದ್ದು. 2022 -23 ಕ್ಕೆ ಉತ್ಪಾದನಾ ಕಾರ್ಯ ಪೂರ್ಣಗೊಳ್ಳಲಿದೆ. ಹೊಸ ತೇಜಸ್ ವಿಮಾನದಲ್ಲಿ ಹೆಚ್ಚಿನ ಬದಲಾವಣೆ ಇರುವುದಿಲ್ಲ ಎಂದು ಹೆಚ್ಎಎಲ್ ತಿಳಿಸಿದೆ.
ಇಸ್ರೇಲ್ ನ ಎಲ್ಟಾದಿಂದ ನಿರ್ಮಿಸಲ್ಪಟ್ಟ ಎಲೆಕ್ಟ್ರಾನಿಕ್ ಸ್ಕ್ಯಾನ್ಡ್ ಅರ್ರೇ, ಆಕಾಶದಲ್ಲೇ ಇಂಧನ ಭಾರ್ತಿ ಮಾಡುವ ವ್ಯವಸ್ಥೆ, ಜಾಮರ್, ರಾಡಾರ್ ಸಿಗ್ನಲ್ ಗಳಿಗೆ ಕಡಿವಾಣ ಸೇರಿ ಹಲವು ಸುಧಾರಿತ ನಿರ್ವಹಣಾ ವ್ಯವಸ್ಥೆಗಳೊಂದಿಗೆ ತೇಜಸ್-1 ಎ ವಿಮಾನಗಳು ವಾಯುಪಡೆಗೆ ಸೇರಲಿವೆ.