ಸ್ಯಾನ್ ಫ್ರಾನ್ಸಿಸ್ಕೋ: ಟ್ವಿಟರ್ ನ ಮಾರ್ಕೆಟಿಂಗ್ ಆಫಿಸರ್, ಇಬ್ಬರು ಆಡಳಿತ ಮಂಡಳಿ ಸದಸ್ಯರು ಸೇರಿದಂತೆ ನಾಲ್ವರು ಹಿರಿಯ ಕಾರ್ಯನಿರ್ವಹಣಾಧಿಕಾರಿಗಳು ಸಂಸ್ಥೆಯಿಂದ ಹೊರಬರಲಿದ್ದಾರೆ.
ಈ ವಿಷಯವನ್ನು ಸ್ವತಃ ಟ್ವಿಟರ್ ಸಿಇಒ ಜ್ಯಾಕ್ ಡಾರ್ಸೆ ಖಚಿತಪಡಿಸಿದ್ದು ಪ್ರಮುಖ ಅಧಿಕಾರಿಗಳು ಟ್ವಿಟರ್ ನಿಂದ ನಿರ್ಗಮಿಸಲಿದ್ದಾರೆ ಎಂದು ಹೇಳಿದ್ದಾರೆ. ಮಾಧ್ಯಮ ವಿಭಾಗದ ಮುಖ್ಯಸ್ಥ ಕೇಟ್ ಜೇಕಬ್ಸ್ ಸ್ಟಾಂಟನ್, ಪ್ರಾಡಕ್ಟ್ ಮುಖ್ಯಸ್ಥ ಕೆವಿನ್ ವೇಲ್, ಇಂಜಿನಿಯರಿಂಗ್ ವಿಭಾಗದ ಮುಖ್ಯಸ್ಥ ಅಲೆಕ್ಸ್ ರೋಯಿಟರ್ ಟ್ವಿಟರ್ ತೊರೆಯಲಿರುವುದು ಖಚಿತವಾಗಿದೆ.
ಇವರುಗಳೊಂದಿಗೆ ಉದ್ಯಮ ಅಭಿವೃದ್ಧಿ(ಬ್ಯುಸಿನೆಸ್ ಡೆವಲಪ್ ಮೆಂಟ್) ವಿಭಾಗದ ಮುಖ್ಯಸ್ಥ ಜಾನ ಮೆಸ್ಸೆರ್ಶ್ಮಿಡ್ ಕೂಡಾ ಟ್ವಿಟರ್ ತೊರೆಯಲಿದ್ದಾರೆ ಎಂದು ಹೇಳಲಾಗುತ್ತಿದೆ.
ಕೆಲವು ಅಧಿಕಾರಿಗಳು ಒತ್ತಡದ ಕಾರಣ ಟ್ವಿಟರ್ ತೊರೆಯುತ್ತಿದ್ದಾರೆ ಇನ್ನು ಕೆಲವು ಸ್ವ ಇಚ್ಛೆಯಿಂದ ಸಂಸ್ಥೆ ತೊರೆಯಲು ಮುಂದಾಗುತ್ತಿದ್ದಾರೆ ಎಂದು ಹೇಳಲಾಗಿದೆ. ಜ್ಯಾಕ್ ಡಾರ್ಸೆ ಟ್ವಿಟರ್ ಸಿಇಒ ಅಧಿಕಾರ ವಹಿಸಿಕೊಂಡ ನಂತರ ಹಲವು ಅಧಿಕಾರಿಗಳು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿದ್ದು ಟ್ವಿಟರ್ ಶೀಘ್ರದಲ್ಲೆ ಕೆಲವು ಕಾರ್ಯಕಾರಿ ಬದಲಾವಣೆಗಳನ್ನು ಘೋಷಿಸುವ ನಿರೀಕ್ಷೆ ಇದೆ.