ವಿಜ್ಞಾನ-ತಂತ್ರಜ್ಞಾನ

ಕಾಲಿಂಗ್ ಆಪ್ ಗಳನ್ನು ನಿಷೇಧಿಸಲು ಏರ್ ಟೆಲ್, ವೊಡೋಫೋನ್ ಸಂಸ್ಥೆಗಳಿಂದ ಒತ್ತಡ

Srinivas Rao BV

ನವದೆಹಲಿ: ಸರ್ಕಾರಿ ಸ್ವಾಮ್ಯದ ಬಿಎಸ್ ಎನ್ಎಲ್ ಪ್ರಾರಂಭಿಸಲು ಉದ್ದೇಶಿಸಿರುವ ಆಪ್ ಮೂಲಕ ಕರೆ ಮಾಡುವ ಸೌಲಭ್ಯವನ್ನು ಸೆಲ್ಯುಲಾರ್ ಆಪರೇಟರ್ಸ್‌ ಅಸೋಸಿಯೇಶನ್ ಆಫ್ ಇಂಡಿಯಾ (ಸಿಒಎಐ) ವಿರೋಧಿಸಿದ್ದು ಕಾಲಿಂಗ್ ಆಪ್ ಗಳಿಗೆ ನಿಷೇಧ ವಿಧಿಸಬೇಕೆಂದು ಒತ್ತಡ ಹೇರಿದೆ.
ಈ ಬಗ್ಗೆ ಟೆಲಿಕಾಂ ಇಲಾಖೆ ಕಾರ್ಯದರ್ಶಿ ಜೆಎಸ್ ದೀಪಕ್ ಗೆ ಪತ್ರ ಬರೆದಿರುವ ಸಿಒಎಐ, ಮೊಬೈಲ್ ಹಾಗೂ ಲ್ಯಾಂಡ್ ಲೈನ್ ನಂಬರ್ ಗಳ ಮೂಲಕ ಇಂಟರ್ ನೆಟ್ ಕರೆ ಮಾಡಲು ಅವಕಾಶ ನೀಡುವುದು ಈಗಿನ ಅಂತರ್ಸಂಪರ್ಕ ನಿಯಮಗಳಿಗೆ ವಿರುದ್ಧವಾಗಿದ್ದು ಮೊಬೈಲ್ ಆಪರೇಟರ್ ಹಾಗೂ ಸರ್ಕಾರದ ಬೊಕ್ಕಸಕ್ಕೆ ನಷ್ಟವಾಗಲಿದೆ ಎಂದು ವಾದಿಸಿದೆ.
ಈ ಕಾರಣಗಳಿಂದ ಕಾಲಿಂಗ್ ಆಪ್ ನ್ನು ನಿಷೇಧಿಸಬೇಕೆಂದು ಏರ್ ಟೆಲ್, ವೊಡೋಫೋನ್ ಐಡಿಯಾ ಸಂಸ್ಥೆಗಳನ್ನೊಳಗೊಂಡ  ಸಿಒಎಐ ಪ್ರಧಾನ ನಿರ್ದೇಶಕ ರಾಜನ್ ಎಸ್ ಮ್ಯಾಥ್ಯೂಸ್ ಒತ್ತಾಯಿಸಿದ್ದಾರೆ. ಆದರೆ ಸಿಒಎಐ ನ ಭಾಗವಾಗಿರುವ ರಿಲಯನ್ಸ್ ಜಿಯೋ ಮಾತ್ರ ಈ ಬಗ್ಗೆ ವ್ಯತಿರಿಕ್ತ ನಿಲುವು ತಳೆದಿದ್ದು, ಬೇರೆಯದ್ದೇ ಅಭಿಪ್ರಾಯ ವ್ಯಕ್ತಪಡಿಸಿದೆ. ಬಿಎಸ್ ಎನ್ ಎಲ್ ಬಳಕೆದಾರರು ಮೊಬೈಲ್ ನಲ್ಲಿ ವೈ ಫೈ ಅಥವಾ ಇನ್ನಿತರ ಡೆಟಾ ಸಂಪರ್ಕವನ್ನು ಪಡೆದು ಎಫ್ಎಂಸಿ ಆಪ್ ನ್ನು ಸಕ್ರಿಯಗೊಳಿಸಿ ನಂತರ ವಿದೇಶಗಳಲ್ಲಿದ್ದರೂ ಕರೆ ಮಾಡಲು ಲ್ಯಾಂಡ್ ಲೈನ್ ನ ಸೌಲಭ್ಯ ಪಡೆಯಬಹುದಾಗಿದೆ ಎಂದು ರಿಲಯನ್ಸ್ ಹೇಳಿದೆ.
ಮೊಬೈಲ್ ಹಾಗೂ ಲ್ಯಾಂಡ್ ಲೈನ್ ಮೂಲಕ ಇಂಟರ್ ನೆಟ್ ಟೆಲಿಫೋನಿಯ ಅಂತರ್ಸಂಪರ್ಕವನ್ನು ಪಡೆಯುವುದು ಏಕೀಕೃತ ಪರವಾನಗಿಯಲ್ಲಿ ಪರಿಚಯಿಸಲಾಗಿರುವ ಹೊಸ ಅವಕಾಶವಾಗಿದೆ. ಆದರೆ ಇದಕ್ಕಾಗಿ ನೀಡಲಾಗುವ ಹೊಸ ನಂಬರ್ ಸರಣಿ ಇನ್ನೂ ಅಂತಿಮಗೊಂಡಿಲ್ಲ ಎಂದು ಸಿಒಎಐ ತಿಳಿಸಿದೆ.

SCROLL FOR NEXT