ವಿಜ್ಞಾನ-ತಂತ್ರಜ್ಞಾನ

ವಾಟ್ಸಪ್ ಗೆ ಪರ್ಯಾಯ ಈ ಗೂಗಲ್ ಅಲೋ!

Srinivasamurthy VN

ನವದೆಹಲಿ: ಸಾಮಾಜಿಕ ಮೆಸೆಜಿಂಗ್ ತಾಣ ವಾಟ್ಸಪ್ ಗೂ ಪರ್ಯಾಯ ಆ್ಯಪ್ ಶೀಘ್ರದಲ್ಲೇ ಬಿಡುಗಡೆಯಾಗಲಿದ್ದು, ಈ ವಿನೂತನ ಆ್ಯಪ್ ಅನ್ನು ಖ್ಯಾತ ಸರ್ಚ್ ಎಂಜಿನ್ ದೈತ್ಯ ಗೂಗಲ್ ಬಿಡುಗಡೆ  ಮಾಡಲಿದೆ.

ಇಷ್ಟು ದಿನ ಮೆಸೆಜಿಂಗ್ ಆ್ಯಪ್ ವಿಭಾಗದಲ್ಲಿ ಅನಭಿಷಕ್ತನಂತಿದ್ದ ವಾಟ್ಸಪ್ ಗೆ ಇದೀಗ ಪ್ರಬಲ ಎದುರಾಳಿಯಾಗ ಬಲ್ಲ ಆ್ಯಪ್ ಅನ್ನು ತಯಾರಿಸಿರುವುದಾಗಿ ಗೂಗಲ್ ಸಂಸ್ಥೆ ಹೇಳಿಕೊಂಡಿದೆ. ಈ  ನೂತನ ಮೆಸೆಜಿಂಗ್ ಆ್ಯಪ್ ಗೆ "ಗೂಗಲ್ ಅಲೋ" ಎಂದು ನಾಮಕರಣ ಮಾಡಲಾಗಿದ್ದು, ಈ ಆ್ಯಪ್ ವಿನೂತನ ಸೌಲಭ್ಯಗಳನ್ನು ಹೊಂದಿರಲಿದೆ ಎಂದು ಸಂಸ್ಥೆ ಹೇಳಿದೆ. ಸಾಮಾನ್ಯವಾಗಿ  ಅಂತರ್ಜಾಲದಲ್ಲಿ ಮಾಹಿತಿಗಾಗಿ ಗೂಗಲ್ ಮೊರೆಹೋಗುವ ಮಂದಿಯನ್ನು ದೃಷ್ಟಿಯಲ್ಲಿಟ್ಟುಕೊಂಡು ಈ ಆ್ಯಪ್ ನ್ನು ಸಿದ್ಧಪಡಿಸಲಾಗಿದ್ದು, ಈ ನೂತನ ಆ್ಯಪ್ ಮೂಲಕ ಮೆಸೆಜಿಂಗ್ ಸಂದರ್ಭದಲ್ಲೇ  ಅಂತರ್ಜಾಲ ಜಾಲಾಡುವ ಅವಕಾಶವನ್ನೂ ಇಲ್ಲಿ ನೀಡಲಾಗಿದೆ ಎಂದು ಗೂಗಲ್ ಹೇಳಿಕೊಂಡಿದೆ.

ಪ್ರಸ್ತುತ ಮಾರುಕಟ್ಟೆಯಲ್ಲಿ ನಂಬರ್ 1 ಸ್ಥಾನದಲ್ಲಿರುವ ವಾಟ್ಸಪ್ ಗೆ ಪರ್ಯಾಯವಾಗಿ ಈ ಆ್ಯಪ್ ಅನ್ನು ಬಿಡುಗಡೆ ಮಾಡಲಾಗುತ್ತಿದೆ ಎಂದು ಹೇಳಲಾಗುತ್ತಿದ್ದು, ವಾಟ್ಸಪ್ ನಲ್ಲಿ ಇರುವ  ಸೌಲಭ್ಯಗಳಿಗಿಂತಲೂ ಹೆಚ್ಚಿನ ಸೌಲಭ್ಯಗಳನ್ನು ಗೂಗಲ್ ಅಲೋ ಹೊಂದಿರಲಿದೆಯಂತೆ. ಬಳಕೆದಾರರಿಗೆ ಇಷ್ಟವಾಗುವಂತಹ ಸ್ಮಾರ್ಟ್ ರಿಪ್ಲೈ, ಫೋಟೋ ಶೇರಿಂಗ್, ಇಮೋಜಿಗಳು, ಸ್ಟಿಕ್ಕರ್  ಗಳನ್ನು ಈ ಆಲೋ ಹೊಂದಿರಲಿದೆ. ಇದಲ್ಲದೇ ಗ್ರೂಪ್ ಚಾಟಿಂಗ್ ಗೂ ಈ ಅಲೋ ಅವಕಾಶ ಕಲ್ಪಿಸಿಕೊಡಲಿದೆಯಂತೆ.

ಯೂಟ್ಯೂಬ್ ವಿಡಿಯೋಗಳನ್ನು ನೇರವಾಗಿ ಶೇರ್ ಮಾಡಬಲ್ಲ ಅನುಕೂಲ ಕೂಡ ಈ ನೂತನ ಆ್ಯಪ್ ಒಳಗೊಂಡಿರಲಿದ್ದು, ಇನ್ನು ಚಾಟಿಂಗ್ ವೇಳೆ ನೇರವಾಗಿ ಗೂಗಲ್ ಅನ್ನೇ ಪ್ರಶ್ನೆ ಮಾಡುವ  ಅವಕಾಶ ಕೂಡ ಈ ಅಲೋ ಆ್ಯಪ್ ನಲ್ಲಿ ಇದ್ದು, @google ಎಂದು ಟೈಪಿಸಿ ಯಾವುದೇ ಪ್ರಶ್ನೆಗೆ ಉತ್ತರ ಪಡೆಯಬಹುದು ಎಂದು ಸಂಸ್ಥೆ ಮಾಹಿತಿ ನೀಡಿದೆ. ಇದಲ್ಲದೇ ತಾಜಾ ಸುದ್ದಿಗಳು,  ಪ್ರಾದೇಶಿಕ ಸಾಮಾಚಾರಗಳು, ಹವಾಮಾನ ಮಾಹಿತಿ, ಟ್ರಾಫಿಕ್ ಅಪ್ ಡೇಟ್ಸ್, ಕ್ರೀಡೆ ಕುರಿತು ಮಾಹಿತಿಗಳನ್ನು ಕೂಡ ಪಡೆಯಬಹುದಾಗಿದೆ. ಒಂದು ವೇಳೆ ನೀವು ವಿಮಾನ ನಿಲ್ದಾಣದಲ್ಲಿ ಆ್ಯಪ್  ಬಳಕೆ ಮಾಡಿದರೆ ಮುಂದಿನ ವಿಮಾನಗಳ ಕುರಿತು ಈ ಆ್ಯಪ್ ಮಾಹಿತಿ ನೀಡುತ್ತದೆಯಂತೆ.

ಇನ್ನೂ ನೂತನ ಆ್ಯಪ್ ಆ್ಯಂಡ್ರಾಯ್ಡ್ ಮತ್ತು ಐಒಎಸ್ ಫೋನ್ ಗಳಲ್ಲಿ ಲಭ್ಯವಿರಲಿದೆ. ಪ್ರಮುಖವಾಗಿ ಭಾರತೀಯ ಗ್ರಾಹಕರನ್ನು ಗಮನದಲ್ಲಿಟ್ಟುಕೊಂಡು ಹಿಂಗ್ಲಿಷ್ ಎಂಬ ಪಾರಿಕಲ್ಪನೆಯಲ್ಲಿ ಹಿಂದಿ  ಮತ್ತು ಇಂಗ್ಲಿಷ್ ಮಿಶ್ರಿತ ಸುಮಾರು 200 ಸ್ಚಿಕ್ಕರ್ ಗಳನ್ನು ತಯಾರಿಸಿ ಈ ಆ್ಯಪ್ ನಲ್ಲಿ ಅಳವಡಿಸಲಾಗಿದೆ.

SCROLL FOR NEXT