ವಿಜ್ಞಾನ-ತಂತ್ರಜ್ಞಾನ

ತನ್ನ ರಾಕೆಟ್ ಗಳಿಗೆ ಪರಿಸರ ಸ್ನೇಹಿ ಇಂಧನ ಅಭಿವೃದ್ಧಿಪಡಿಸಲು 'ಇಸ್ರೋ' ಮುಂದು!

Srinivasamurthy VN
ನವದೆಹಲಿ: ಭಾರತದ ಹೆಮ್ಮೆಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಇಸ್ರೋ ಇದೀಗ ಮತ್ತೊಂದು ಮಹತ್ವದ ಯೋಜನೆಯನ್ನು ಕೈಗೆತ್ತಿಕೊಂಡಿದ್ದು, ಓಜೋನ್ ಪದರಕ್ಕೆ ಧಕ್ಕೆಯಾಗದಂತಹ ಪರಿಸರ ಸ್ನೇಹಿ ರಾಕೆಟ್ ಇಂಧನಗಳ ಸಂಶೋಧನೆಯಲ್ಲಿ ತೊಡಗಿದೆ.
ಹೌದು. ಪ್ರಸ್ತುತ ರಷ್ಯಾ, ಅಮೆರಿಕ ಸೇರಿದಂತೆ ಬಾಹ್ಯಾಕಾಶ ವಿಭಾಗದಲ್ಲಿ ಸಂಶೋಧನೆ ನಡೆಸುತ್ತಿರುವ ದೇಶಗಳು ಮತ್ತು ಅವರು ರಾಕೆಟ್ ಉಡಾವಣೆಗೆ ಬಳಕೆ ಮಾಡುತ್ತಿರುವ ಇಂಧನಗಳಿಂದಾಗಿ ಪರಿಸರಕ್ಕೆ ಧಕ್ಕೆಯಾಗುತ್ತಿದ್ದು, ಇವುಗಳಿಂದ ಹೊರಬರುವ ಕ್ಲೊರಿನೇಟೆಡ್ ಹೊಗೆಯಿಂದಾಗಿ ಓಜೋನ್ ನ ಸೂಕ್ಷ್ಮ ಪದರಗಳ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ. ಈ ಬಗ್ಗೆ ಸಾಕಷ್ಟು ವಿಜ್ಞಾನಿಗಳು ಈ ಹಿಂದೆಯೇ ಸಾಕಷ್ಟು ಬಾರಿ ಎಚ್ಚರಿಕೆ ನೀಡಿದ್ದಾರೆ.
ಇದೇ ಕಾರಣಕ್ಕೆ ಇಸ್ರೋ ವಿಜ್ಞಾನಿಗಳು ಪರಿಸರ ಸ್ನೇಹಿ ರಾಕೆಟ್ ಇಂಧನದ ಅಭಿವೃದ್ಧಿಗೆ ಮುಂದಾಗಿದ್ದಾರೆ ಎನ್ನಲಾಗಿದೆ. ಈ ಸಂಬಂಧ ಈಗಾಗಲೇ ಇಸ್ರೋ ಲ್ಯಾಂಬ್ ಗಳಲ್ಲಿ ಘನ ಇಂಧನದ ಮೇಲೆ ಸಂಶೃೋಧನೆ ನಡೆಸಲಾಗುತ್ತಿದ್ದು, ಆಮ್ಲಜನಕವನ್ನು ಹೆಚ್ಚಾಗಿ ಬಳಕೆ ಮಾಡಿಕೊಂಡು ಈ ಇಂಧನ ಸಂಶೋಧನೆ ಮಾಡಲಾಗುತ್ತಿದೆ ಎಂದು ಹೇಳಲಾಗಿದೆ.
ಈ ಬಗ್ಗೆ ರಾಜ್ಯಸಭೆಗೆ ಮಾಹಿತಿ ನೀಡಿರುವ ಅಣು ಇಂಧನ ಮತ್ತು ಬಾಹ್ಯಾಕಾಶ ಇಲಾಖೆಯ ರಾಜ್ಯಸಚಿವ ಜಿತೇಂದ್ರ ಸಿಂಗ್ ಅವರು, ಕ್ಲೊರಿನೇಟೆಡ್ ಹೊಗೆಯ ಬಿಡುವ ಇಂಧನಗಳ ಬದಲಿಗೆ, ಗ್ಲೈಸಿಡೈಲ್ ಅಝೈಡ್ ಪಾಲಿಮರ್ ಮತ್ತು ಅಮೋನಿಯಮ್ ಡಿ-ನಿಟಮೈಡ್ ಅನ್ನು ಆಕ್ಸಿಡೈಸರ್ ಆಗಿ ಬಳಕೆ ಮಾಡುವ ಕುರಿತ ಸಂಶೋಧನೆ ಚಾಲ್ತಿಯಲ್ಲಿದೆ ಎಂದು ಹೇಳಿದ್ದಾರೆ.
ಅಂತೆಯೇ ಈಗಾಗಲೇ ಇಸ್ರೋ ವಿಜ್ಞಾನಿಗಳು ಹೈಡ್ರೋಜನ್ ಪೆರಾಕ್ಸೈಡ್, ಲಿಕ್ವಿಡ್ ಆಮ್ಲಜನಕ (ಲೋಕ್ಸ್) ಮತ್ತು ಲಿಕ್ವಿಡ್ ಮೀಥೇನ್ ನಂತಹ ರಾಸಾಯನಿಕಗಳನ್ನು ಪರ್ಯಾಯ ಇಂಧನವನ್ನಾಗಿ ಬಳಕೆ ಮಾಡುವ ಕುರಿತು ಸಂಶೋಧನೆ ನಡೆಸುತ್ತಿದ್ದಾರೆ. ಈ ಹೈಡ್ರೋಜನ್ ಪೆರಾಕ್ಸೈಡ್, ಲಿಕ್ವಿಡ್ ಆಮ್ಲಜನಕ (ಲೋಕ್ಸ್) ಮತ್ತು ಲಿಕ್ವಿಡ್ ಮೀಥೇನ್ ನಲ್ಲಿ ಕ್ಲೊರಿನೇಟೆಡ್ ಹೊಗೆಯ ಪ್ರಮಾಣ ಕಡಿಮೆ ಇರುವುದರಿಂದ ಇದು ಓಜೋನ್ ನ ಅತ್ಯಂತ ಸೂಕ್ಷ್ಮ ಪದರಗಳ ಮೇಲೆ ಯಾವುದೇ ರೀತಿಯ ಗಂಭೀರ ಹಾನಿ ಮಾಡುವುದಿಲ್ಲ ಎಂಬುದು ವಿಜ್ಞಾನಿಗಳ ಅಭಿಮತವಾಗಿದೆ. 
ಇದೇ ಇಂಧನವನ್ನು ಇಸ್ರೋದ ಬಲಿಷ್ಟ ಉಪಗ್ರಹ ಉಡಾವಣಾ ನೌಕೆ ಜಿಎಸ್ ಎಲ್ ಮಾರ್ಕ್ 3 ಮತ್ತು ಪಿಎಸ್ ಎಲ್ ವಿಯ ವಿವಿಧ ಸ್ತರದ ರಾಕೆಟ್ ಗಳಲ್ಲಿ ಬಳಕೆ ಮಾಡುವ ಕುರಿತೂ ಚಿಂತನೆ ನಡೆಸಲಾಗುತ್ತಿದೆ.
SCROLL FOR NEXT