ವಿಜ್ಞಾನ-ತಂತ್ರಜ್ಞಾನ

'ತೋಳ ಗ್ರಹಣ': ಇಂದು ವರ್ಷದ ಮೊದಲ ಚಂದ್ರಗ್ರಹಣ

Srinivasamurthy VN

ನವದೆಹಲಿ: 2020 ರ ಮೊದಲ ಚಂದ್ರ ಗ್ರಹಣ ಇಂದು ಸಂಭವಿಸಲಿದ್ದು, ಇಂದು ರಾತ್ರಿ 2.42 ರವರೆಗೂ ಚಂದ್ರಗ್ರಹಣ ಗೋಚರವಾಗಲಿದೆ.

2019 ರ ಅಂತ್ಯದ ವೇಳೆಗೆ, ಇಡೀ ಜಗತ್ತು ಅದ್ಭುತ ಸೂರ್ಯಗ್ರಹಣಕ್ಕೆ ಸಾಕ್ಷಿಯಾಗಿತ್ತು. ಇದೀಗ ವರ್ಷಾರಂಭದಲ್ಲೇ ಚಂದ್ರ ಗ್ರಹಣ ಸಂಭವಿಸುತ್ತಿದೆ. ಇಂದು ರಾತ್ರಿ 10.38 ರಿಂದ ಪ್ರಾರಂಭವಾಗಲಿರುವ ಚಂದ್ರ ಗ್ರಹಣ, ತಡರಾತ್ರಿ 2.42 ರವರೆಗೆ ಮುಂದುವರಿಯಲಿದೆ. 2020 ರ ಆರಂಭದ ಎರಡನೇ ವಾರದಲ್ಲಿ ಚಂದ್ರ ಗ್ರಹಣ ಸಂಭವಿಸುತ್ತಿದ್ದು, ಇದನ್ನು ಯುರೋಪ್ ಮತ್ತು ಅಮೆರಿಕ ದೇಶಗಳಲ್ಲಿ "ವೋಲ್ಫ್ ಎಕ್ಲಿಪ್ಸ್" (ತೋಳ ಚಂದ್ರ ಗ್ರಹಣ)ಎಂದು ಕರೆಯಲಾಗುತ್ತಿದೆ.

ಜನವರಿ ಮಾಸವು ತೋಳಗಳ ಸಂತಾನಾಭಿವೃದ್ಧಿಯ ಸಮಯವಾಗಿದೆ. ಈ ಹಿನ್ನಲೆಯಲ್ಲಿ ಪಾಶ್ಚಾತ್ಯ ಸಂಸ್ಕೃತಿಗಳಲ್ಲಿ ಜನವರಿ ತಿಂಗಳಿನಲ್ಲಿ ಘಟಿಸುವ ಚಂದ್ರಗ್ರಹಣವನ್ನು “ತೋಳಗ್ರಹಣ’ ಎಂದು ಕರೆಯುವ ವಾಡಿಕೆಯಿದೆ. ಇದೇ ಕಾರಣಕ್ಕೆ ಇದನ್ನು ತೋಳ ಗ್ರಹಣ ಎಂದು ಕರೆಯಲಾಗುತ್ತಿದೆ. ಈ ವರ್ಷದ ಮೊದಲ ಚಂದ್ರಗ್ರಹಣವು ಭಾರತದಾದ್ಯಂತ ಗೋಚರಿಸಲಿದ್ದು, ಭಾರತ ಮಾತ್ರವಲ್ಲದೇ ಅಮೆರಿಕ, ಕೆನಡಾ, ಬ್ರೆಜಿಲ್, ಅರ್ಜೆಂಟೀನಾ ಮುಂತಾದ ದೇಶಗಳಲ್ಲಿ ಈ ಚಂದ್ರ ಗ್ರಹಣ ಗೋಚರಿಸಲಿದೆ. 

ವೈಜ್ಞಾನಿಕವಾಗಿ ಹೇಳುವುದಾದರೆ, ಈ ಗ್ರಹಣವನ್ನು ಸಂಪೂರ್ಣ ಚಂದ್ರ ಗ್ರಹಣ ಎಂದು ಕರೆಯಲಾಗುವುದಿಲ್ಲ, ಏಕೆಂದರೆ ಇದು ನೆರಳಿನ ಗ್ರಹಣವಾಗಿದ್ದು ಅಂತಹ ಪರಿಸ್ಥಿತಿಯಲ್ಲಿ ಚಂದ್ರನ ಸ್ಥಾನದಲ್ಲಿ ಯಾವುದೇ ವಿಶೇಷ ಬದಲಾವಣೆಗಳಾಗುವುದಿಲ್ಲ, ಆದರೆ ಚಂದ್ರನ ಸುಂದರವಾದ ಚಿತ್ರ ಖಂಡಿತವಾಗಿಯೂ ಹೊರಹೊಮ್ಮುತ್ತದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ. 

ಇನ್ನು 2020 ರಲ್ಲಿ ಒಟ್ಟು 4 ಚಂದ್ರ ಗ್ರಹಣಗಳು ಮತ್ತು ಎರಡು ಸೂರ್ಯಗ್ರಹಣಗಳು ಸಂಭವಿಸಲಿದ್ದು, ಜನವರಿ 10, ಜೂನ್ 05, ಜುಲೈ 05 ಮತ್ತು ನವೆಂಬರ್ 30 ರಂದು ಚಂದ್ರಗಹಣ ಗೋಚರವಾಗಲಿದ್ದು,  ಜೂನ್ 21 ಮತ್ತು ಡಿಸೆಂಬರ್ 14 ರಂದು ಸೂರ್ಯಗ್ರಹಣಗಳು ಸಂಭವಿಸಲಿವೆ ಎಂದು ವಿಜ್ಞಾನಿಗಳು ಮಾಹಿತಿ ನೀಡಿದ್ದಾರೆ.

SCROLL FOR NEXT