ಭಾರತ ಅಗ್ನಿ ಪ್ರೈಮ್ ನೂತನ ತಲೆಮಾರಿನ ಬ್ಯಾಲಿಸ್ಟಿಕ್ ಕ್ಷಿಪಣಿಯನ್ನು ಯಶಸ್ವಿಯಾಗಿ ಒಡಿಶಾದ ಕಡಲ ತೀರದಿಂದ ಪರೀಕ್ಷಾ ಪ್ರಯೋಗ ನಡೆಸಿತು. 
ವಿಜ್ಞಾನ-ತಂತ್ರಜ್ಞಾನ

ಅಗ್ನಿ ಪ್ರೈಮ್ ಪರೀಕ್ಷೆ ಯಶಸ್ವಿ: ಈ ಬ್ಯಾಲಿಸ್ಟಿಕ್ ಕ್ಷಿಪಣಿಯ ವಿಶೇಷತೆಗಳೇನು?

ಅಗ್ನಿ ಪ್ರೈಮ್ ಎನ್ನುವುದು ಅಗ್ನಿ ಕ್ಲಾಸ್ ಕ್ಷಿಪಣಿಗಳ ಆಧುನಿಕ ಆವೃತ್ತಿಯಾಗಿದೆ. ಇದು ಎರಡು ಹಂತಗಳ, ಕ್ಯಾನಿಸ್ಟರೈಸ್ಡ್ ಘನ ಇಂಧನ ಆಧಾರಿತ ಬ್ಯಾಲಿಸ್ಟಿಕ್ ಕ್ಷಿಪಣಿಯಾಗಿದೆ. ಇದರಲ್ಲಿ ಎರಡು ರಿಡಂಡಂಟ್ ನ್ಯಾವಿಗೇಷನ್ ಹಾಗೂ ಗೈಡೆನ್ಸ್ ವ್ಯವಸ್ಥೆಗಳಿದ್ದು, ಈ ಕ್ಷಿಪಣಿಯನ್ನು ರೈಲಿನಿಂದಲೂ, ರಸ್ತೆಯಿಂದಲೂ ಉಡಾಯಿಸಲು ಸಾಧ್ಯವಿದೆ.

- ಗಿರೀಶ್ ಲಿಂಗಣ್ಣ
ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ

ಭಾರತದ ರಕ್ಷಣಾ ಕ್ಷೇತ್ರದ ಹಿರಿಮೆಗೆ ಈಗ ಇನ್ನೊಂದು ನೂತನ ಗರಿ ಮೂಡಿದೆ. ಅಕ್ಟೋಬರ್ 21ರಂದು ಭಾರತ ಅಗ್ನಿ ಪ್ರೈಮ್ ನೂತನ ತಲೆಮಾರಿನ ಬ್ಯಾಲಿಸ್ಟಿಕ್ ಕ್ಷಿಪಣಿಯನ್ನು ಯಶಸ್ವಿಯಾಗಿ ಒಡಿಶಾದ ಕಡಲ ತೀರದಿಂದ ಬೆಳಗಿನ 9:45ಕ್ಕೆ ಪರೀಕ್ಷಾ ಪ್ರಯೋಗ ನಡೆಸಿತು.

ಈ ಪರೀಕ್ಷಾ ಪ್ರಯೋಗದ ಸಂದರ್ಭದಲ್ಲಿ ಕ್ಷಿಪಣಿಯು ತನ್ನ ಅತ್ಯಧಿಕ ದೂರವನ್ನು ಯಶಸ್ವಿಯಾಗಿ ಕ್ರಮಿಸಿ, ತನ್ನ ಎಲ್ಲಾ ಪರೀಕ್ಷಾ ಉದ್ದೇಶಗಳನ್ನೂ ಯಶಸ್ವಿಯಾಗಿ ಸಾಧಿಸಿದೆ. ಅಗ್ನಿ ಪ್ರೈಮ್ ಮೂರನೆಯ ಬಾರಿಗೆ ಯಶಸ್ವಿಯಾಗಿ ಪರೀಕ್ಷಿಸಲ್ಪಡುವ ಮೂಲಕ, ಅದರ ಕರಾರುವಾಕ್ಕುತನ ಮತ್ತು ಸಾಮರ್ಥ್ಯಗಳು ಸಾಬೀತಾಗಿವೆ.

ರಕ್ಷಣಾ ವಲಯದ ಅಧಿಕಾರಿಗಳ ಪ್ರಕಾರ, "ರೇಡಾರ್, ಟೆಲಿಮೆಟ್ರಿ, ಹಾಗೂ ಇಲೆಕ್ಟ್ರೋ ಆಪ್ಟಿಕಲ್ ಟ್ರ್ಯಾಕಿಂಗ್ ಸಿಸ್ಟಮ್ ನಂತಹ ರೇಂಜ್ ಇನ್ಸ್ಟ್ರುಮೆಂಟೇಷನ್ ಉಪಕರಣಗಳ ಮೂಲಕ ಪಡೆದ ಮಾಹಿತಿಯ ಆಧಾರದಿಂದ ಈ ಕ್ಷಿಪಣಿಯ ಸಾಮರ್ಥ್ಯವನ್ನು ಅಳೆಯಲಾಯಿತು. ಈ ಉಪಕರಣಗಳನ್ನು ಬೇರೆ ಬೇರೆ ಪ್ರದೇಶಗಳಲ್ಲಿ ಅಳವಡಿಸಲಾಗಿತ್ತು. ಅದರಲ್ಲಿ ಎರಡು ನೌಕೆಗಳೂ ಸೇರಿದ್ದು, ಉಡಾವಣೆಯ ಸ್ಥಳದಿಂದ ಅಂತಿಮ ಸ್ಥಳದ ತನಕ ವ್ಯಾಪ್ತಿಯನ್ನು ಅಳೆಯಲಾಯಿತು"

ಅಗ್ನಿ ಕ್ಷಿಪಣಿ ಎಂದರೇನು?

ಅಗ್ನಿ ಒಂದು ಭೂಮಿಯಿಂದ ಭೂಮಿಗೆ ದಾಳಿ ನಡೆಸುವ, ಸರ್ಫೇಸ್ - ಟು - ಸರ್ಫೇಸ್ ಕ್ಷಿಪಣಿಯಾಗಿದ್ದು, ಇದನ್ನು ನೆಲದಿಂದ ಉಡಾವಣೆಗೊಳಿಸಿ, ಭೂಮಿಯ ಮೇಲಿನ ಅಥವಾ ಸಮುದ್ರದಲ್ಲಿನ ಗುರಿಯ ಮೇಲೆ ದಾಳಿ ನಡೆಸಲಾಗುತ್ತದೆ. ಇದನ್ನು ಕೈಯಲ್ಲಿ ಹಿಡಿಯುವ ಆಯುಧಗಳಿಂದ‌ ಅಥವಾ ಭೂಮಿಯ ಮೇಲೆ ಅಳವಡಿಸಲಾದ ವ್ಯವಸ್ಥೆಗಳ ಮೂಲಕ, ಅಥವಾ ವಾಹನಗಳ ಮತ್ತು ಹಡಗುಗಳ ಮೇಲೆ ಅಳವಡಿಸಲಾದ ವ್ಯವಸ್ಥೆಗಳ ಮೂಲಕ ಉಡಾಯಿಸಬಹುದು. ಈ ಉಡಾವಣಾ ವೇದಿಕೆಗಳು ಸಾಮಾನ್ಯವಾಗಿ ಒಂದೆಡೆ ನಿಂತಿರುತ್ತವೆ, ಅಥವಾ ನಿಧಾನವಾಗಿ ಚಲಿಸುತ್ತಿರುತ್ತವೆ. ಆದ್ದರಿಂದ ಈ ಕ್ಷಿಪಣಿಗೆ ರಾಕೆಟ್ ಇಂಜಿನ್‌ ಅಥವಾ ಸ್ಫೋಟಕ ಶಕ್ತಿಗಳು ಚಲಿಸಲು ಬಲ ನೀಡುತ್ತವೆ. ಅಗ್ನಿ ಕ್ಷಿಪಣಿಗಳಲ್ಲಿ ಫಿನ್ ಅಥವಾ ರೆಕ್ಕೆಗಳಿರುತ್ತವೆ. ಅವುಗಳು ಕ್ಷಿಪಣಿಯನ್ನು ಮೇಲೆತ್ತಲು ಮತ್ತು ಸ್ಥಿರತೆ ಕಾಯ್ದುಕೊಳ್ಳಲು ನೆರವಾಗುತ್ತವೆ. ಆದರೆ ಕನಿಷ್ಠ ವ್ಯಾಪ್ತಿಯ ಕ್ಷಿಪಣಿಗಳು ಬಾಡಿ ಲಿಫ್ಟ್ ತಂತ್ರಜ್ಞಾನವನ್ನು ಬಳಸಿಕೊಳ್ಳಬಲ್ಲವು ಅಥವಾ ಬ್ಯಾಲಿಸ್ಟಿಕ್ ಪಥದಲ್ಲಿ ಚಲಿಸಬಲ್ಲವು.

ಪರಮಾಣು ಸಿಡಿತಲೆ ಒಯ್ಯಬಲ್ಲ ಅಗ್ನಿ ಪ್ರೈಮ್ ಕ್ಷಿಪಣಿ

ಅಗ್ನಿ ಪ್ರೈಮ್ ಎನ್ನುವುದು ಅಗ್ನಿ ಕ್ಲಾಸ್ ಕ್ಷಿಪಣಿಗಳ ಆಧುನಿಕ ಆವೃತ್ತಿಯಾಗಿದೆ. ಇದು ಎರಡು ಹಂತಗಳ, ಕ್ಯಾನಿಸ್ಟರೈಸ್ಡ್ ಘನ ಇಂಧನ ಆಧಾರಿತ ಬ್ಯಾಲಿಸ್ಟಿಕ್ ಕ್ಷಿಪಣಿಯಾಗಿದೆ. ಇದರಲ್ಲಿ ಎರಡು ರಿಡಂಡಂಟ್ ನ್ಯಾವಿಗೇಷನ್ ಹಾಗೂ ಗೈಡೆನ್ಸ್ ವ್ಯವಸ್ಥೆಗಳಿದ್ದು, ಈ ಕ್ಷಿಪಣಿಯನ್ನು ರೈಲಿನಿಂದಲೂ, ರಸ್ತೆಯಿಂದಲೂ ಉಡಾಯಿಸಲು ಸಾಧ್ಯವಿದೆ. ಈ ಕ್ಷಿಪಣಿಯನ್ನು ದೀರ್ಘಕಾಲದ ತನಕ ಸಂಗ್ರಹಿಸಿ ಇಡಬಹುದು. ಇದನ್ನು ಭಾರತದಾದ್ಯಂತ ಅಗತ್ಯಕ್ಕೆ ತಕ್ಕಂತೆ ಎಲ್ಲಿಗೆ ಬೇಕಾದರೂ ಕೊಂಡೊಯ್ಯಬಹುದು.

ಕ್ಷಿಪಣಿಗಳ ಕ್ಯಾನಿಸ್ಟರೈಸೇಷನ್ ಪ್ರಕ್ರಿಯೆಯು ಆ ಕ್ಷಿಪಣಿ ಉಡಾವಣೆಗೆ ತಗುಲುವ ಅವಧಿಯನ್ನು ಕಡಿಮೆಗೊಳಿಸುತ್ತದೆ. ಅದರೊಡನೆ ಕ್ಷಿಪಣಿಯ ಸಂಗ್ರಹಣೆ ಮತ್ತು ಸಾಗಾಟವನ್ನು ಸರಳಗೊಳಿಸುತ್ತದೆ‌ ಎಂದು ಡಿಆರ್‌ಡಿಓ ಅಧಿಕಾರಿ ಒಬ್ಬರು ಅಭಿಪ್ರಾಯ ಪಡುತ್ತಾರೆ.

ಈ ನೂತನ ಬ್ಯಾಲಿಸ್ಟಿಕ್ ಕ್ಷಿಪಣಿ 1,000 ಕಿಲೋಮೀಟರ್‌ನಿಂದ 2,000 ಕಿಲೋಮೀಟರ್‌ಗಳ ವ್ಯಾಪ್ತಿ ಹೊಂದಿದೆ. ಇದು ಅಗ್ನಿ 3 ಕ್ಷಿಪಣಿಯ ಅರ್ಧ ತೂಕವಷ್ಟೇ ಇದೆ. ಇದರಲ್ಲಿ ನೂತನ ಮಾದರಿಯ ಪ್ರೊಪಲ್ಷನ್ ಹಾಗೂ ಗೈಡೆನ್ಸ್ ವ್ಯವಸ್ಥೆಗಳಿವೆ.

ಇದರಲ್ಲಿ 4,000 ಕಿಲೋಮೀಟರ್ ವ್ಯಾಪ್ತಿ ಹೊಂದಿರುವ ಅಗ್ನಿ 4 ಮತ್ತು 5,000 ಕಿಲೋಮೀಟರ್ ವ್ಯಾಪ್ತಿ ಹೊಂದಿರುವ ಅಗ್ನಿ 5 ಕ್ಷಿಪಣಿಗಳಲ್ಲಿರುವ ತಂತ್ರಜ್ಞಾನಗಳನ್ನೂ ಅಳವಡಿಸಲಾಗಿದೆ. ಈ ನೂತನ ಅಗ್ನಿ ಪ್ರೈಮ್ ಕ್ಷಿಪಣಿಯನ್ನು ಇಂಡೋ - ಪೆಸಿಫಿಕ್ ಪ್ರಾಂತ್ಯದಲ್ಲಿರುವ ಶತ್ರು ಯುದ್ಧ ನೌಕೆಗಳ ಮೇಲೆ ದಾಳಿ ನಡೆಸಲೂ ಬಳಸಬಹುದಾಗಿದೆ. ಅಗ್ನಿ 6 ಕ್ಷಿಪಣಿಯನ್ನು ಇನ್ನೂ ಪರೀಕ್ಷಾ ಪ್ರಯೋಗಗಳಿಗೆ ಒಳಪಡಿಸಬೇಕಾಗಿದೆ. ಅಗ್ನಿ ಸರಣಿಯ ಅತ್ಯಾಧುನಿಕ ಕ್ಷಿಪಣಿಯಾಗಿರುವ ಅಗ್ನಿ 6 ಹೆಚ್ಚಿನ ಸಾಮರ್ಥ್ಯ ಹೊಂದಿದ್ದು, 10,000 ಕಿಲೋಮೀಟರ್‌ಗಿಂತ ಹೆಚ್ಚು ದೂರ ಕ್ರಮಿಸಬಲ್ಲದು. ಇದನ್ನು ಸಬ್‌ಮರೀನ್ ಮೂಲಕವೂ ಉಡಾಯಿಸಲು ಸಾಧ್ಯವಾಗಲಿದೆ.

ಅಗ್ನಿ ವರ್ಗದ ಕ್ಷಿಪಣಿಗಳು ಭಾರತದ ಅಣ್ವಸ್ತ್ರ ಸಿಡಿತಲೆ ಒಯ್ಯಬಲ್ಲ ಉಡಾವಣಾ ಸಾಮರ್ಥ್ಯ ಹೊಂದಿರುವ ಪ್ರಮುಖ ಆಯುಧಗಳಾಗಿವೆ. ಇದರಲ್ಲಿ ಕನಿಷ್ಟ ವ್ಯಾಪ್ತಿಯ ಬ್ಯಾಲಿಸ್ಟಿಕ್ ಕ್ಷಿಪಣಿಯಾದ ಪೃಥ್ವಿ, ಸಬ್‌ಮರೀನ್ ಮೂಲಕ ಉಡಾಯಿಸಬಹುದಾದ ಮತ್ತು ಯುದ್ಧ ವಿಮಾನಗಳಿಂದ ಉಡಾಯಿಸಬಲ್ಲ ಬ್ಯಾಲಿಸ್ಟಿಕ್ ಕ್ಷಿಪಣಿಗಳೂ ಸೇರಿವೆ. ಅಗ್ನಿ ವರ್ಗದ ಕ್ಷಿಪಣಿಗಳಲ್ಲಿ ಅಗ್ನಿ 5 ಅತ್ಯಂತ ದೂರ ಚಲಿಸಬಲ್ಲುದಾಗಿದ್ದು, ಒಂದು ಇಂಟರ್ ಕಾಂಟಿನೆಂಟಲ್ ಬ್ಯಾಲಿಸ್ಟಿಕ್ ಮಿಸೈಲ್ (ಐಸಿಬಿಎಂ) ಎನಿಸಿಕೊಂಡಿದೆ. ಇದು 5,000 ಕಿಲೋಮೀಟರ್‌ಗಿಂತ ಹೆಚ್ಚು ದೂರ ಕ್ರಮಿಸಬಲ್ಲದು. ಇದನ್ನು ಈಗಾಗಲೇ ಹಲವು ಬಾರಿ ಯಶಸ್ವಿಯಾಗಿ ಪರೀಕ್ಷೆಗೊಳಪಡಿಸಿ, ಸೇನಾ ಸೇವೆಗೆ ಸೇರ್ಪಡೆಗೊಳಿಸಲು ಅನುಮೋದಿಸಲಾಗಿದೆ.

ಗಿರೀಶ್ ಲಿಂಗಣ್ಣ

ಈ ಬರಹದ ಲೇಖಕರು ರಕ್ಷಣಾ ವಿಶ್ಲೇಷಕ ಮತ್ತು ಜರ್ಮನಿಯ ADD Engineering GmbH ನ ಅಂಗಸಂಸ್ಥೆಯಾದ ಆಡ್ ಎಂಜಿನಿಯರಿಂಗ್ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕ. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

CM ಬದಲಾವಣೆ ನಾಲ್ಕರಿಂದ ಐದು ಜನರ ನಡುವೆ ನಡೆದ "ರಹಸ್ಯ ಒಪ್ಪಂದ": ಡಿಕೆಶಿ​ ಸ್ಫೋಟಕ ಹೇಳಿಕೆ

ವಿಶ್ವಕಪ್ ವಿಜೇತ ಅಂಧ ಕರ್ನಾಟಕದ ಆಟಗಾರ್ತಿಯರಿಗೆ ತಲಾ 10 ಲಕ್ಷ ನಗದು, ಸರ್ಕಾರಿ ಉದ್ಯೋಗ: ಸಿಎಂ ಸಿದ್ದರಾಮಯ್ಯ ಘೋಷಣೆ

ಸ್ಮೃತಿ ಮಂಧಾನ ಮದುವೆ ಮುಂದೂಡಿಕೆಗೆ ಅಸಲಿ ಕಾರಣ? ಮತ್ತೊಂದು ಹೆಣ್ಣಿನೊಂದಿಗೆ ಮೋಹ, ನಂಬಿಕೆ ದ್ರೋಹ; ಬಯಲಾಯ್ತು ಪಲಾಶ್'ನ ಅಸಲಿ ರಂಗಿನಾಟ!

ಬರವಣಿಗೆಯಲ್ಲಿ ಖುಷಿ ಕಂಡ ಪೊಲೀಸ್ ಅಧಿಕಾರಿ: 'ಬಸವಣ್ಣನ ವಚನ' ಗಳನ್ನು ಇಂಗ್ಲೀಷ್ ಗೆ ಅನುವಾದ ಮಾಡ್ತಿರೋ DYSP ಬಸವರಾಜ್ ಯಲಿಗಾರ್!

ರಾಜ್ಯದಲ್ಲಿ ಸಿಎಂ ಗದ್ದುಗೆ ಗುದ್ದಾಟ: ಎಲ್ಲ ಗೊಂದಲಗಳಿಗೆ ಹೈಕಮಾಂಡ್ ತೆರೆ ಎಳೆಯಬೇಕು- ಸಿಎಂ ಸಿದ್ದರಾಮಯ್ಯ

SCROLL FOR NEXT