ವಿಜ್ಞಾನ-ತಂತ್ರಜ್ಞಾನ

ಇನ್ನು ಮುಂದೆ WhatsApp ಸಂದೇಶ ಕಳುಹಿಸಿದ ನಂತರ 15 ನಿಮಿಷಗಳವರೆಗೆ ಎಡಿಟ್ ಮಾಡಬಹುದು

Lingaraj Badiger

ಬೆಂಗಳೂರು: ಮೆಟಾ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮಾರ್ಕ್ ಜುಕರ್‌ಬರ್ಗ್ ಸೋಮವಾರ WhatsApp ನಲ್ಲಿ ಹೊಸ ವೈಶಿಷ್ಟ್ಯವನ್ನು ಘೋಷಿಸಿದ್ದು, ಇನ್ನು ಮುಂದೆ ವಾಟ್ಸ್ ಆ್ಯಪ್ ಬಳಕೆದಾರರು ಸಂದೇಶಗಳನ್ನು ಕಳುಹಿಸಿದ ನಂತರ 15 ನಿಮಿಷಗಳವರೆಗೆ ಎಡಿಟ್ ಮಾಡಬಹುದು.

"ನೀವು ತಪ್ಪು ಮಾಡಿದಾಗ ಅದನ್ನು ಸರಿಪಡಿಸಲು ಅಥವಾ ಸಂದೇಶಕ್ಕೆ ಹೆಚ್ಚುವರಿಯಾಗಿ ಸೇರಿಸಲು ಬಯಸಿದರೆ 15 ನಿಮಿಷಗಳವರೆಗೆ ಆ ಸಂದೇಶವನ್ನು ಎಡಿಟ್ ಮಾಡಲು  ಅನುಮತಿ ನೀಡಲಾಗಿದೆ. ನಿಮ್ಮ ಚಾಟ್‌ಗಳ ಮೇಲೆ ಹೆಚ್ಚಿನ ನಿಯಂತ್ರಣ ನೀಡಲು ನಾವು ಉತ್ಸುಕರಾಗಿದ್ದೇವೆ" ಎಂದು WhatsApp ಹೇಳಿದೆ.

"ಸರಳ ಕಾಗುಣಿತವನ್ನು ಸರಿಪಡಿಸುವುದರಿಂದ ಹಿಡಿದು ಸಂದೇಶಕ್ಕೆ ಹೆಚ್ಚುವರಿ ಸಂದೇಶ ಸೇರಿಸುವವರೆಗೆ, ನಿಮ್ಮ ಚಾಟ್‌ಗಳ ಮೇಲೆ ನಿಮಗೆ ಹೆಚ್ಚಿನ ನಿಯಂತ್ರಣವನ್ನು ನೀಡಲು ನಾವು ಉತ್ಸುಕರಾಗಿದ್ದೇವೆ. ನೀವು ಮಾಡಬೇಕಾಗಿರುವುದು ಇಷ್ಟೇ. ಸಂದೇಶವನ್ನು ಲಾಂಗ್ ಪ್ರೆಸ್ ಮಾಡಿದರೆ ಅಲ್ಲಿ ಮೆನುವಿನಿಂದ 'ಎಡಿಟ್' ಆಯ್ಕೆ ಕಾಣುತ್ತದೆ. 15 ನಿಮಿಷಗಳವರೆಗೆ ಮಾತ್ರ ನಿಮಗೆ ಈ ಅವಕಾಶ ಇರಲಿದೆ" ಎಂದು ವಾಟ್ಸ್ ಆ್ಯಪ್ ತಿಳಿಸಿದೆ.

ಎಡಿಟ್ ಮಾಡಿದ ಸಂದೇಶಗಳ ಪಕ್ಕದಲ್ಲಿಯೇ 'ಎಡಿಟೆಡ್' ಎಂದು ತೋರಿಸುತ್ತದೆ. ಹೀಗಾಗಿ ಸಂದೇಶ ಸ್ವೀಕರಿಸಿದವರಿಗೆ ಇದು ತಿದ್ದುಪಡಿ ಮಾಡಿದ ಸಂದೇಶ ಎಂಬುದು ತಿಳಿಯುತ್ತದೆ ಎಂದು ವಾಟ್ಸ್ ಆ್ಯಪ್ ಹೇಳಿದೆ.

SCROLL FOR NEXT