ವಿಜ್ಞಾನ-ತಂತ್ರಜ್ಞಾನ

ಆದಿತ್ಯ ಎಲ್ 1 ಅಂತಿಮ ಹಂತಕ್ಕೆ ಸಮೀಪದಲ್ಲಿದೆ: ಇಸ್ರೊ ಮುಖ್ಯಸ್ಥ ಎಸ್ ಸೋಮನಾಥ್

Sumana Upadhyaya

ಬೆಂಗಳೂರು: ಸೂರ್ಯನ ಕುರಿತು ಅಧ್ಯಯನ ಮಾಡುವ ಭಾರತದ ಮೊದಲ ಬಾಹ್ಯಾಕಾಶ-ಆಧಾರಿತ ಕಾರ್ಯಾಚರಣೆ ಆದಿತ್ಯ ಎಲ್1 (Aditya L1) ಬಾಹ್ಯಾಕಾಶ ನೌಕೆಯು ಅಂತಿಮ ಹಂತಕ್ಕೆ ಸಮೀಪದಲ್ಲಿದೆ. ಎಲ್ 1 ಬಿಂದುವಿಗೆ ಪ್ರವೇಶಿಸಿ ಜನವರಿ 7, 2024 ರ ವೇಳೆಗೆ ಪಯಣ ಪೂರ್ಣಗೊಳ್ಳುವ ನಿರೀಕ್ಷೆಯಿದೆ ಎಂದು ಇಸ್ರೋ ಅಧ್ಯಕ್ಷ ಎಸ್ ಸೋಮನಾಥ್ ತಿಳಿಸಿದ್ದಾರೆ.  

ಫಸ್ಟ್ ಸೌಂಡಿಂಗ್ ರಾಕೆಟ್ ಲಾಂಚ್ ನ 60 ನೇ ವರ್ಷದ ಸ್ಮರಣಾರ್ಥ ವಿಎಸ್‌ಎಸ್‌ಸಿಯಲ್ಲಿ ಆಯೋಜಿಸಲಾದ ಕಾರ್ಯಕ್ರಮದ ಹೊರಗೆ ಸುದ್ದಿಗಾರರ ಜೊತೆ ಮಾತನಾಡಿದ ಇಸ್ರೋ ಅಧ್ಯಕ್ಷ ಸೋಮನಾಥ್ ಅವರು, ಪಿಟಿಐ ಸುದ್ದಿಸಂಸ್ಥೆ ಪ್ರತಿನಿಧಿಯೊಂದಿಗೆ ಮಾತನಾಡಿ, ಆದಿತ್ಯ ಎಲ್ 1 ಪಯಣ ಹಾದಿ ಸುಗಮವಾಗಿದೆ. ಬಹುತೇಕ ಅಂತಿಮ ಹಂತವನ್ನು ತಲುಪಿದೆ ಎಂದು ಭಾವಿಸುತ್ತೇವೆ ಎಂದರು. 

ಎಲ್ 1 ಪಾಯಿಂಟ್‌ಗೆ ಬಾಹ್ಯಾಕಾಶ ನೌಕೆಯ ಪ್ರವೇಶದ ಕೊನೆಯ ಸಿದ್ಧತೆಗಳು ಪ್ರಸ್ತುತ ಹಂತಹಂತವಾಗಿ ಸಾಗುತ್ತಿದೆ. ಬಹುಶಃ ಜನವರಿ 7 ರ ವೇಳೆಗೆ, ಎಲ್ 1 ಪಾಯಿಂಟ್‌ಗೆ ಪ್ರವೇಶಿಸಲು ಅಂತಿಮ ಕಾರ್ಯಾಚರಣೆ ನಡೆಯುತ್ತದೆ ಎಂದು ಅಂದುಕೊಂಡಿದ್ದೇವೆ ಎಂದರು. 

ಆದಿತ್ಯ ಎಲ್ 1ನ್ನು ಕಳೆದ ಸೆಪ್ಟೆಂಬರ್ 2 ರಂದು ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ (SDSC) ಯಶಸ್ವಿಯಾಗಿ ಉಡಾವಣೆ ಮಾಡಲಾಯಿತು. ಬಾಹ್ಯಾಕಾಶ ನೌಕೆಯು ಭೂಮಿಯಿಂದ 125 ದಿನಗಳಲ್ಲಿ ಸುಮಾರು 1.5 ಮಿಲಿಯನ್ ಕಿಮೀ ಪ್ರಯಾಣಿಸಿದ ನಂತರ, ಸೂರ್ಯನಿಗೆ ಹತ್ತಿರವಿರುವ ಲಗ್ರಾಂಜಿಯನ್ ಪಾಯಿಂಟ್ ಎಲ್1 ಸುತ್ತ ಹಾಲೋ ಕಕ್ಷೆಯಲ್ಲಿ ಇರಿಸಲಾಗುವುದು ಎಂದು ಅಂದಾಜಿಸಲಾಗಿದೆ. 

ಆದಿತ್ಯ ಎಲ್ 1 ವೈಜ್ಞಾನಿಕ ಪ್ರಯೋಗಗಳಿಗೆ ಸೂರ್ಯನ ಚಿತ್ರಗಳನ್ನು ಸೆರೆಹಿಡಿದು ರವಾನಿಸುತ್ತದೆ. 

SCROLL FOR NEXT