ಚೆನ್ನೈ: ತಮಿಳುನಾಡಿನ ಐಐಟಿ ಮದ್ರಾಸ್ ಶೀಘ್ರದಲ್ಲೇ ತಾನು ಸಂಶೋಧನೆ ಮಾಡುತ್ತಿದ್ದ ಹಾರುವ ಎಲೆಕ್ಟ್ರಿಕ್ ಕಾರು ಬಿಡುಗಡೆಗೆ ಸಜ್ಜಾಗಿದ್ದು, ಈ ಕಾರು ಸುಮಾರು 200 ಕಿ.ಮೀ ಹಾರುವ ಸಾಮರ್ಥ್ಯವನ್ನು ಹೊಂದರಲಿದೆ ಎಂದು ಹೇಳಲಾಗಿದೆ.
ಈ ಬಗ್ಗೆ ಖ್ಯಾತ ಉದ್ಯಮಿ ಆನಂದ ಮಹೀಂದ್ರಾ ಅವರು ತಮ್ಮ ಟ್ವಿಟರ್ ಖಾತೆಯಲ್ಲಿ ಮಾಹಿತಿ ನೀಡಿದ್ದು, ಮುಂದಿನ ವರ್ಷಾಂತ್ಯಕ್ಕೆ ಹಾರುವ ಎಲೆಕ್ಟ್ರಿಕ್ ಕಾರನ್ನು ತಯಾರಿಸುವ ಯೋಜನೆಯನ್ನು ಮದ್ರಾಸ್ ಐಐಟಿ ಹಾಕಿಕೊಂಡಿದೆ. eplane ಎಂಬ ಈ ಎಲೆಕ್ಟ್ರಿಕ್ ಕಾರಿನ ಮಾದರಿಯನ್ನು ಎಕ್ಸ್ ತಾಣದಲ್ಲಿ ಹಂಚಿಕೊಂಡು ಮದ್ರಾಸ್ ಐಐಟಿಯನ್ನು ಅಭಿನಂದಿಸಿದ್ದಾರೆ.
ಅಲ್ಲದೆ ಎಲೆಕ್ಟ್ರಿಕ್ ಫ್ಲೈಯಿಂಗ್ ಕಾರಿನ ಫೋಟೋದೊಂದಿಗೆ ಆನಂದ್ ಮಹೀಂದ್ರ ಪೋಸ್ಟ್ ಮಾಡಿದ್ದು, ಅದರಲ್ಲಿ ಭಾರತದ ಮೊದಲ ಎಲೆಕ್ಟ್ರಿಕ್ ಟ್ಯಾಕ್ಸಿ ಮಾಡಲು ಐಐಟಿ ಮದ್ರಾಸ್ ಇ-ಪ್ಲೇನ್ ಕಂಪನಿಯನ್ನು ರಚಿಸುತ್ತಿದೆ ಮತ್ತು ಮುಂದಿನ ವರ್ಷದ ವೇಳೆಗೆ ಈ ಎಲೆಕ್ಟ್ರಿಕ್ ಫ್ಲೈಯಿಂಗ್ ಕಾರ್ ಹಾರಾಟ ನಡೆಸಬಹುದು ಎಂದು ಬರೆದಿದ್ದಾರೆ.
ತಮ್ಮ ಪೋಸ್ಟ್‌ನಲ್ಲಿ, ಅವರು ಐಐಟಿ ಮದ್ರಾಸ್ ಅನ್ನು ವಿಶ್ವದ ಉತ್ತೇಜಕ ಮತ್ತು ಸಕ್ರಿಯ ಸಂಶೋಧನಾ ಸಂಸ್ಥೆಗಳಲ್ಲಿ ಒಂದಾಗಿದೆ ಎಂದು ಬಣ್ಣಿಸಿದ್ದು. ಸಂಶೋಧನಾ ಸಂಸ್ಥೆಗಳ ಸಂಖ್ಯೆ ಹೆಚ್ಚುತ್ತಿರುವುದಕ್ಕೆ ಆನಂದ್ ಮಹೀಂದ್ರಾ ದೇಶಕ್ಕೆ ಧನ್ಯವಾದ ಅರ್ಪಿಸಿದರು. ಆಲ್ಲದೆ ಈಗ ದೇಶವು ಹೊಸ ಆವಿಷ್ಕಾರಗಳನ್ನು ಮಾಡುವಲ್ಲಿ ಹಿಂದುಳಿದಿಲ್ಲ ಎಂದು ಟ್ವೀಟ್ ಮಾಡಿದ್ದಾರೆ.
ನಮಗೆ ದೊಡ್ಡದಾದ ಗುರಿಗಳೇ ಮುಖ್ಯ ಎಂದಿರುವ ಆನಂದ್ ಮಹೀಂದ್ರ, ಈ ಎಲೆಕ್ಟ್ರಿಕ್ ಕಾರಿನ ಗುಣಲಕ್ಷಣಗಳ ಮತ್ತೊಂದು ಫೋಟೊವನ್ನೂ ಹಂಚಿಕೊಂಡಿದ್ದಾರೆ.
ಅದರ ಪ್ರಕಾರ ಈ ಎಲೆಕ್ಟ್ರಿಕ್ ಕಾರು, 5.5 ಮೀಟರ್ ಸುತ್ತಳತೆ ಹೊಂದಿರುತ್ತದೆ. ಒಮ್ಮೆ ಚಾರ್ಜ್ ಮಾಡಿದರೆ ಗರಿಷ್ಠ 200 ಕಿಲೋ ಮೀಟರ್‌ವರೆಗೆ ಪ್ರಯಾಣಿಸಬಹುದು ಎಂದು ಹೇಳಲಾಗಿದೆ. ವರ್ಟಿಕಲ್ ಆಗಿಯೂ ಟೇಕ್ ಆಫ್ ಆಗುತ್ತದೆ. ಮಾನವ ಪೈಲಟ್ ಹೊಂದಿರಲಿದ್ದು, ಸಂಪೂರ್ಣ ಎಲೆಕ್ಟ್ರಿಕ್ ಕಾರು ಇದಾಗಿರುತ್ತದೆ. ಅಲ್ಲದೇ ಕಡಿಮೆ ಬೆಲೆಯಲ್ಲಿ ದೊರೆಯುತ್ತದೆ. ಗರಿಷ್ಠ ವೇಗ ಮತ್ತು ಸುಲಭವಾಗಿ ಪಾರ್ಕ್ ಮಾಡಬಹುದಾಗಿದೆ ಎಂದು ಹಾರುವ ಎಲೆಕ್ಟ್ರಿಕ್ ಕಾರಿನ ಫೀಚರ್‌ಗಳ ಬಗ್ಗೆ ವಿವರಿಸಲಾಗಿದೆ.