ಯೋಗಸಾಧಕ ಯೋಗಿ ಅಶ್ವಿನಿ 
ವಿಶೇಷ

ಯೋಗದಿಂದ ಯುವಕರಾಗಿ

ನಮ್ಮೊಳಗಿನ ಸಾಮಾರ್ಥ್ಯವನ್ನು ಬಡಿದೆಬ್ಬಿಸಬಲ್ಲ ಯೋಗವಿಜ್ಞಾನದ ಸಾಮಾರ್ಥ್ಯ ನನ್ನನ್ನು ಸೆಳೆಯಿತು.

ಧ್ಯಾನ್ ಫೌಂಡೇಶನ್‌ನ ಸಂಸ್ಥಾಪಕ, ಯೋಗಸಾಧಕ ಯೋಗಿ ಅಶ್ವಿನಿಯವರು ಜ.10ರಂದು ಬೆಂಗಳೂರಿನಲ್ಲಿ ಸನಾತನಕ್ರಿಯಾ ಕಾರ್ಯಾಗಾರವನ್ನು ನಡೆಸಿಕೊಡಲಿದ್ದಾರೆ. ಈ ಭೇಟಿ ಹಿನ್ನೆಲೆಯಲ್ಲಿ ಒಂದು ಪುಟ್ಟ ಸಂದರ್ಶನ.

ನೀವು ಮ್ಯಾನೇಜ್‌ಮೆಂಟ್‌ನಲ್ಲಿ ಮಾಸ್ಟರ್ ಡಿಗ್ರಿ ಪಡೆದವರು. ಅಂಥದರಲ್ಲಿ ಯೋಗ ಸೆಳೆತ ಎಲ್ಲಿಂದ ಹೇಗೆ ಆರಂಭವಾಯ್ತು?
ಯೋಗ ಎನ್ನುವುದು ಅದ್ಬುತವಾದ ವಿಜ್ಞಾನ. ಯೋಗಾಭ್ಯಾಸವು ವ್ಯಕ್ತಿಗೆ ಸ್ವಾಭಾವಿಕವಾದ ಹೊಳಪು, ಆಕರ್ಷಣೆ ತಂದುಕೊಡುವುದಲ್ಲದೆ, ದೇಹವನ್ನು ರೋಗಮುಕ್ತವಾಗಿ, ದೃಢವಾಗಿ ಇಡುತ್ತದೆ. ಮನಸ್ಸು, ಚೇತನವನ್ನು ಜಾಗೃತಗೊಳಿಸಿ, ಜ್ಞಾನಾರ್ಜನೆಗೆ ದಾರಿ ಮಾಡಿಕೊಡುತ್ತದೆ.

ಜೊತೆಗೆ ದೇವದೇವತೆಗಳೊಂದಿಗೆ ಸಂಪರ್ಕ ಸಾಧಿಸಲು ನೆರವಾಗುತ್ತದೆ. ನಮ್ಮ ಧ್ಯಾನ್ ಆಶ್ರಮದಲ್ಲಿ ದೊಡ್ಡ ದೊಡ್ಡ ಪ್ರೊಫೆಷನಲ್ಸ್, ಓದಿದವರು, ಅವಿದ್ಯಾವಂತರು ಸೇರಿದಂತೆ ಬದುಕಿನ ವಿವಿಧ ಸ್ತರಗಳಿಂದ ಬಂದವರೂ ಈ ಉಪಯೋಗಗಳನ್ನು ಸ್ವತಃ ಅನುಭವಿಸಿದ್ದಾರೆ. ನಮ್ಮೊಳಗಿನ ಸಾಮಾರ್ಥ್ಯವನ್ನು ಬಡಿದೆಬ್ಬಿಸಬಲ್ಲ ಯೋಗವಿಜ್ಞಾನದ ಸಾಮಾರ್ಥ್ಯ ನನ್ನನ್ನು ಸೆಳೆಯಿತು.

ವೈಯಕ್ತಿಕವಾಗಿ ಹಾಗೂ ವ್ಯವಹಾರಿಕವಾಗಿ ನಿಮ್ಮನ್ನು ನೀವು ಯೋಗಕ್ಕಾಗಿ ತೊಡಗಿಸಿಕೊಂಡಿದ್ದು ಯಾವಾಗ?
ನನ್ನ ಅಮ್ಮ ಕ್ಯಾನ್ಸರ್‌ನ ಕೊನೆಯ ಸ್ಟೇಜ್‌ನಲ್ಲಿದ್ದಾಗ, ಅವಳಿಗೆ ಆರೋಗ್ಯವನ್ನು ತಂದುಕೊಡುವುದಕ್ಕಾಗಿ ವಿಶ್ವವನ್ನೇ ಸುತ್ತಿದೆ. ಹಲವಾರು ಸಾಧುಸಂತರನ್ನು, ಫಿಟ್ನೆಸ್ ಎಕ್ಸ್‌ಪರ್ಟ್‌ಗಳನ್ನು, ಥೆರಪಿಸ್ಟ್‌ಗಳನ್ನು, ಪರ್ಯಾಯ ಚಿಕಿತ್ಸಕರೆಲ್ಲರನ್ನೂ ಭೇಟಿ ಮಾಡಿದೆ. ಆದರೆ ನನಗೆ ಬೇಕಿದ್ದುದನ್ನು ಕೊಡಲು ಯಾರೂ ಶಕ್ತರಾಗಿರಲಿಲ್ಲ.

ನನ್ನಲ್ಲಿ ಉಳಿದದ್ದು ಚಿಕಿತ್ಸಕರ ಹೆಸರಲ್ಲಿ ಹಣ ಹೊಡೆಯುವವರ ಬಗೆಗೊಂದು ಜಿಗುಪ್ಸೆ ಹಾಗೂ ಖಾಲಿ ಜೇಬು. ಆದರೆ ಯೋಗದ ವಿಷಯದಲ್ಲಿ ನನ್ನ ನಂಬಿಕೆ ಮಾತು ಈ ಹುಸಿ ಸಾಧಕರಿಂದ ಅಲುಗಾಡಿಸಲಾಗುವಷ್ಟು ಸಡಿಲವಾಗಿರಲಿಲ್ಲ. ಅದು ಯೋಗವನ್ನು ವೈಯಕ್ತಿಕವಾಗಿ ತೊಡಗಿಸಿಕೊಳ್ಳಲು ನಿರ್ಧರಿಸಿದ ಕ್ಷಣ. ಇನ್ನು ವ್ಯವಹಾರಿಕವಾಗಿ ಎಂದರೆ, ಯೋಗ ವ್ಯವಹಾರಿಕವಾಗಲು ಸಾಧ್ಯವಿಲ್ಲ.

ಆದರೆ ಈ ಪ್ರಶ್ನೆ ಹುಟ್ಟಲು ಕಾರಣವಾಗಿರುವ ಪ್ರೋಫೆಷನಲ್ಸ್‌ಗಳನ್ನು ನಾನು ನೋಡಿದ್ದೇನೆ. ಯೋಗ ವ್ಯವಹಾರ ಅಲ್ಲ, ಅದೊಂದು ಸಾಧನೆ. ಇದನ್ನು ವ್ಯಾಪಾರ ಮಾಡಿಕೊಂಡಾಗ ಅದು ತನ್ನೆಲ್ಲ ಸಾಮಾರ್ಥ್ಯವನ್ನು ಕಳೆದುಕೊಂಡು ಬಿಡುತ್ತದೆ. ಹೀಗಾಗಿ ಇಂಥ 'ಪ್ರೊಫೆಷನಲ್ಸ್‌'ಗಳಲ್ಲಿ ಯೋಗ ಕಲಿಯಲು ಹೋದವರು ಗಳಿಸುವುದಾದರೂ ಏನನ್ನು ಎಂದು ನೀವು ಕಲ್ಪಿಸಿಕೊಳ್ಳಬಹುದು.

ಯೋಗದಿಂದ 'ಇದನ್ನು' ಎದುರಿಸಲಾಯಿತು ಎಂಬ ಅನುಭವ ಯಾವುದು?
ನಾನಿನ್ನೂ ಯುವಕನಾಗಿದ್ದಾಗ ಯಾವಾಗಲೂ ಶೀತ ಮತ್ತು ಕೆಮ್ಮಿನಿಂದ ಬಳಲುತ್ತಿದ್ದೆ. ಕೂದಲು ಅದಾಗಲೇ ಬಿಳಿ ಬಣ್ಣಕ್ಕೆ ತಿರುಗತೊಡಗಿತ್ತು. ರೋಗನಿರೋಧಕ ಶಕ್ತಿ ಕುಂದಿತ್ತು. ಮುಖದಲ್ಲಿ ಕಳೆಯಿರಲಿಲ್ಲ.

ದೇಹದಲ್ಲಿ ಶಕ್ತಿ ಇರಲಿಲ್ಲ. ಯಾವಾಗಲೂ ಡಲ್ ಆಗಿರುತ್ತಿದ್ದೆ. ಆದರೆ ಇಂದು ನಾನು ಐವತ್ತರ ಗಡಿ ದಾಟಿ ಸಾಗುತ್ತಿದ್ದೇನೆ. ಇಂದಿಗೂ 20 ವರ್ಷದ ಯುವಕರು ನನ್ನಲ್ಲಿ ಕಲಿಯಲು ಬರುವವರು, ನನ್ನಂತೆ ಕಾಣಬೇಕೆಂದು, ನನ್ನಷ್ಟು ಶಕ್ತಿ ಗಳಿಸಬೇಕೆಂದು ಬಯಸುತ್ತಾರೆ.

ನನಗೆ ಕೊನೆ ಬಾರಿ ಕಾಯಿಲೆ ಬಂದಿದ್ದು ಯಾವಾಗ ಎಂದು ನನಗೆ ನೆನಪಿಲ್ಲ. ಆಯುರ್ವೇದದ ಪ್ರಕಾರ, ಯೋಗಿಯು ತನ್ನ 40ನೇ ವಯಸ್ಸಿನಲ್ಲಿ ಯೌವನಾವಸ್ಥೆಗೆ ಕಾಲಿಡುತ್ತಾನೆ ಮತ್ತು ಕೊನೆಯವರೆಗೂ ಹಾಗೆ ಇರುತ್ತಾನೆ. ಯೋಗ ವಿಜ್ಞಾನ ಕೆಲಸ ಮಾಡಿತು.

ಆರೋಗ್ಯಕ್ಕೆ ಯೋಗದ ಪ್ರಮುಖ ಲಾಭಗಳೇನು?

ಯೋಗ ಅಸ್ತಿತ್ವದ ಅಂತಿಮ ವಿಜ್ಞಾನ. ಸೌಂದರ್ಯ ಸಂಸ್ಥೆಗಳು, ಫಿಟ್ನೆಸ್ ಸೆಂಟರ್‌ಗಳು, ವೈದ್ಯ ವಿಜ್ಞಾನ, ಕಾಸ್ಮೆಟಿಕ್ ಇಂಡಸ್ಟ್ರಿ ಎಲ್ಲ ಯಾವುದರ ಹುಡುಕಾಟದಲ್ಲಿವೆಯೋ, ಅದನ್ನು ಯೋಗ ತನ್ನ ಒಲಿಕೊಂಡ ಸಾಧಕನಿಗೆ ನೀಡುತ್ತದೆ. ಅಂದರೆ ವಯಸ್ಸನ್ನು ತಡೆಗಟ್ಟಿ ಎವರ್‌ಯೂತ್ ಆಗಿಡುವುದು.

ಈ ಲಾಭ ಪ್ಯೂರ್ ಯೋಗದಿಂದ ಬರುತ್ತದೆಯೇ ಹೊರತು, ಈಗ ಎಲ್ಲ ಕಡೆ ಯೋಗವೆಂದು ಹೇಳಿಕೊಡುವ ಮಂಗನ ನೃತ್ಯದಿಂದಲ್ಲ. ವೇದದ ಕಾಲದಲ್ಲಿ ಋಷಿಗಳು ನೀಡಿದ ಸನಾತನ ಕ್ರಿಯೆ ನಿಜವಾದ ಯೋಗ. ಇದು ಆರೋಗ್ಯವನ್ನೂ, ಸೌಂದರ್ಯವನ್ನೂ, ಮಾನಸಿಕ ಶಕ್ತಿಯನ್ನೂ ಒದಗಿಸುತ್ತದೆ.

ಯೋಗ ಇದುವರೆಗೂ ಕಲಿಯದವರಿಗೆ ಏನು ಸಲಹೆ ನೀಡುತ್ತೀರಿ?
ಸರಿಯಾದ ಗುರುವಿನೊಂದಿಗೆ ಕಲಿಯಿರಿ, ಬ್ಯುಸಿನೆಸ್‌ಮೆನ್‌ಗಳೊಂದಿಗಲ್ಲ. ಆಧುನಿಕ ಜೀವನಶೈಲಿಯು ಮಾನಸಿಕ ಅಸ್ಥಿರತೆ, ಅನಾರೋಗ್ಯವನ್ನು ಹೊತ್ತು ಬಂದಿದೆ. ಇದನ್ನೇ ಲಾಭವನ್ನಾಗಿಸಿಕೊಳ್ಳ ಹೊರಟ ಅನೇಕ 'ಬ್ಯುಸಿನೆಸ್‌ಮನ್‌'ಗಳು ಹತ್ಹತ್ತು ಹೆಜ್ಜೆಗೂ ಯೋಗ ಸ್ಕೂಲ್ ಎಂದು ಹೆಸರಿಟ್ಟುಕೊಂಡು ಹಣ ಮಾಡುತ್ತಿದ್ದಾರೆ.

ಯೋಗ ಪ್ರದರ್ಶನ ಕಲೆಯಲ್ಲ. ಅದು ಜೀವನ. ಪ್ರಜ್ಞೆಯ ವಿಜ್ಞಾನ. ನಾನು ಜ.8ರಿಂದ 11ರವರೆಗೆ ಬೆಂಗಳೂರಿನಲ್ಲಿರುವುದರಿಂದ ಈ ಬಗ್ಗೆ ಹೆಚ್ಚು ತಿಳಿಯ ಬಯಸುವವರು ನಮ್ಮ ಧ್ಯಾನ್ ಫೌಂಡೇಶನ್‌ಗೆ ಭೇಟಿ ನೀಡಬಹುದು.

- ರೇಶ್ಮಾ ರಾವ್

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಭಾರತದ ಮೇಲೆ ಶೇ.50 ರಷ್ಟು ಸುಂಕಾಸ್ತ್ರ ಜಾರಿ: ದಿನದ ಕೊನೆಗೆ ಒಟ್ಟಿಗೆ ಸೇರ್ತಿವಿ! US ಖಜಾನೆ ಮುಖ್ಯಸ್ಥರು ಹಿಂಗ್ಯಾಕಂದ್ರು?

ಸಶಸ್ತ್ರ ಪಡೆಗಳು ಮುಂದಿನ ಭದ್ರತಾ ಸವಾಲುಗಳಿಗೆ ಸಿದ್ಧರಾಗಿರಬೇಕು: ರಾಜನಾಥ್ ಸಿಂಗ್

ಹಿಂದೂ ನಂಬಿಕೆ ಒಡೆಯುತ್ತಿರುವ ಬಾನು ಮುಷ್ತಾಕ್: ಶಿವನ ಬೆಟ್ಟವನ್ನೇ 'ಯೇಸು ಬೆಟ್ಟ' ಮಾಡಲು ಹೊರಟವರಿಂದ ಧರ್ಮದ ಪಾಠ ಬೇಡ- ಪ್ರತಾಪ್ ಸಿಂಹ

2030 Commonwealth Games: ಭಾರತದ ಬಿಡ್‌ಗೆ ಕೇಂದ್ರ ಸಂಪುಟದ ಅನುಮೋದನೆ! ಅಹಮದಾಬಾದ್ ನಲ್ಲಿ ಆಯೋಜಿಸುವ ಪ್ರಸ್ತಾಪ!

ಡೆವಿಲ್‌' ಸಿನಿಮಾದ 'ಇದ್ರೆ ನೆಮ್ಮದಿಯಾಗಿ ಇರಬೇಕು' ಹಾಡಿಗೆ ಭರ್ಜರಿ ಸ್ಟೆಪ್ ಹಾಕಿದ ವಿನೋದ್ ರಾಜ್! Video

SCROLL FOR NEXT