ಸಾಲಿನಾಸ್ ಗ್ರಾಮದ ಮಕ್ಕಳು ( ಕೃಪೆ: ಟ್ವಿಟರ್ )
ಈ ಗ್ರಾಮದಲ್ಲಿ ಹುಟ್ಟಿದ ಹೆಣ್ಣು ಮಕ್ಕಳು 12 ನೇ ವಯಸ್ಸಿಗೆ ಕಾಲಿಡುತ್ತಿದ್ದಂತೆ ಗಂಡು ಮಕ್ಕಳಾಗಿ ಬದಲಾಗುತ್ತಾರೆ. ಇದೊಂಥರಾ ಗ್ರೀಕ್ ಪುರಾಣ ಕಥೆಯಂತೆ ಅನಿಸಿದರೂ ಸತ್ಯ ಘಟನೆ ಇದು. ಈ ಗ್ರಾಮದಲ್ಲಿ ಹೇಗೆ ಯಾಕೆ ಆಗುತ್ತಿದೆ ಎಂಬುದರ ಬಗ್ಗೆ ವೈದ್ಯಲೋಕ ಸಂಶೋಧನೆಯಲ್ಲಿ ತೊಡಗಿದೆ.
ಡೊಮೆನಿಕ್ ರಿಪಬ್ಲಿಕ್ ರಾಷ್ಟ್ರದಲ್ಲಿರುವ ಸಾಲಿನಾಸ್ ಎಂಬ ಗ್ರಾಮದಲ್ಲಿ ಈ ರೀತಿ ವಿಚಿತ್ರಗಳು ಹಲವು ವರ್ಷಗಳಿಂದ ಸಂಭವಿಸುತ್ತಲೇ ಇವೆ. ಇಲ್ಲಿ ಹುಟ್ಟುವ 90 ಮಕ್ಕಳಲ್ಲಿ ಒಂದು ಮಗುವಿಗೆ ಈ ರೀತಿಯ ಬದಲಾವಣೆ ಉಂಟಾಗುತ್ತದೆ. ವಂಶವಾಹಿನಿಯಲ್ಲಿ ಕಂಡು ಬರುವ ವ್ಯತ್ಯಾಸವೇ ಇದಕ್ಕೆ ಕಾರಣ ಎಂಬುದು 1970ರಲ್ಲಿಯೇ ಪತ್ತೆ ಹಚ್ಚಲಾಗಿತ್ತು. ಆದರೆ ಸಾಲಿನಾಸ್ ಎಂಬ ಗ್ರಾಮದಲ್ಲಿ ಮಾತ್ರ ಯಾಕೆ ಹೀಗಾಗುತ್ತದೆ ಎಂಬ ಪ್ರಶ್ನೆಗೆ ಇನ್ನೂ ಉತ್ತರ ಸಿಕ್ಕಿಲ್ಲ. ಇತ್ತೀಚೆಗೆ ಬಿಬಿಸಿ ಕೌಂಟ್ ಡೌನ್ ಟು ಲೈಫ್ ಎಂಬ ಸಾಕ್ಷ್ಯ ಚಿತ್ರ ಸರಣಿ ನಿರ್ಮಿಸಿದ್ದು, ಈ ಮೂಲಕ ಸಾಲಿನಾಸ್ ಮತ್ತೆ ಜಗತ್ತಿನ ಗಮನ ಸೆಳೆದಿದೆ.
ಸಾಲಿನಾಸ್ ಎಂಬುದು ಕುಗ್ರಾಮ. ಹೊರ ಜಗತ್ತಿನೊಂದಿಗೆ ಹೆಚ್ಚು ಸಂಪರ್ಕವಿಲ್ಲದೇ ಇರುವ ಕಾರಣ ಈ ಬಗ್ಗೆ ಗ್ರಾಮಸ್ಥರೂ ಹೆಚ್ಚು ತಲೆಕೆಡಿಸಿಕೊಂಡಿಲ್ಲ. 1970ರಲ್ಲಿ ವಿಶ್ವವಿದ್ಯಾಲಯವೊಂದರ ಪ್ರೊಫೆಸರ್ ಡಾ. ಜೂಲಿಯಾನ್ ಇಂಪಾರೆಟ್ಟೋ ಎಂಬಾತ ಈ ವಿಷಯದ ಬಗ್ಗೆ ಗಮನ ಹರಿಸಿ ಸಂಶೋಧನೆ ನಡೆಸಿದ್ದರು.
ಒಂದು ವಿಶೇಷ ಎನ್‌ಜೈಮ್ (ಕಿಣ್ವ) ಗಳ ಅಭಾವದಿಂದ ಈ ರೀತಿಯ ಬೆಳವಣಿಗೆ ಮಕ್ಕಳಲ್ಲಿ ಕಂಡುಬಂದಿದೆ ಎಂದು ಹೇಳಲಾಗುತ್ತಿದೆ. ಗರ್ಭದಲ್ಲಿ ಶಿಶು ರೂಪಗೊಳ್ಳುವ ಮೊದಲ ಕೆಲ ವಾರಗಳಲ್ಲಿ ಭ್ರೂಣವು ಗಂಡೋ ಹೆಣ್ಣೋ ಎಂದು ಹೇಳಲು ಸಾಧ್ಯವಿಲ್ಲ. X Y ಕ್ರೋಮೋಸೋಮ್ (ವರ್ಣತಂತು)ಗಳ ಲೆಕ್ಕದ ಮೇಲೆ ಗಂಡು ಅಥವಾ ಹೆಣ್ಣು ಎಂಬುದನ್ನು ಪತ್ತೆ ಹಚ್ಚಲಾಗುತ್ತದೆ. Y ಕ್ರೋಮೋಸೋಮ್ ಆಗಿದ್ದರೆ ಭ್ರೂಣಕ್ಕೆ ಎಂಟು ವಾರಗಳಾಗುವಾಗ ಟೆಸ್ಟಿಸ್ಟಿರೋನ್ ಎಂಬ ಪುರುಷ ಲೈಂಗಿಕ ಹಾರ್ಮೋನ್ ನ್ನು ಸ್ರವಿಸ ತೊಡಗುತ್ತದೆ. ಟೆಸ್ಟಿಸ್ಟಿರೋನ್‌ನ್ನು 5 ಆಲ್ಫಾ ಡೈ ಹೈಡ್ರೋ ಟೆಸ್ಟಿಸ್ಟಿರೋನ್ ಆಗಿ ಬದಲಾಯಿಸಲು ಸಹಾಯ ಮಾಡುವುದು 5 ಆಲ್ಫಾ ರೆಡ್ಯುಕ್ಟೇಸ್ ಎನ್‌ಜೈಮ್ ಆಗಿದೆ. ಇದರ ಫಲವಾಗಿ ಪುರುಷರ ಲೈಂಗಿಕ ಅವಯವಗಳು ವಿಕಸನಗೊಳ್ಳುತ್ತವೆ. 5 ಆಲ್ಫಾ ಎನ್‌ಜೈಮ್ ಭ್ರೂಣಾವಸ್ಥೆಯಲ್ಲಿ ಇಲ್ಲದೇ ಹೋಗಿದ್ದರೆ ಪುರುಷರ ಲೈಂಗಿಕ ಅವಯವಗಳು ಇರುವುದಿಲ್ಲ. ಅಪ್ಪ ಅಥವಾ ಅಮ್ಮ ನಲ್ಲಿನ ವಂಶವಾಹಿನಿಯಲ್ಲಿ ಕಂಡು ಬರುವ ಸಮಸ್ಯೆಯೇ ಇದಕ್ಕೆ ಕಾರಣ.
ಇಲ್ಲಿನ ಮಕ್ಕಳು ಹುಟ್ಟುವಾಗ ಹೆಣ್ಣಾಗಿರುತ್ತಾರೆ. ಆದರೆ 10-13 ವಯಸ್ಸಿಗೆ ಬರುವಾಗ ದೇಹದಲ್ಲಿ ಬದಲಾವಣೆಗಳು ಕಂಡು ಬರುತ್ತವೆ. ಅಂದರೆ ಅವರ ದೇಹದಲ್ಲಿ ಟೆಸ್ಟಿಸ್ಟಿರೋನ್‌ನ ಸ್ರವಿಕೆ ಜಾಸ್ತಿಯಾಗುತ್ತಾ ಪುರುಷ ಲೈಂಗಿಕ ಅಂಗಗಳು ಬೆಳವಣಿಗೆ ಹೊಂದುತ್ತವೆ. ಹೆಣ್ಣಿನಂತಿದ್ದ ದನಿ ಬದಲಾಗುತ್ತದೆ, ಮೀಸೆ ಚಿಗುರುತ್ತದೆ ಹೀಗೆ ಹುಡುಗರಲ್ಲಿ ಪ್ರೌಢಾವಸ್ಥೆಯಲ್ಲಿ ಕಂಡು ಬರುವ ಎಲ್ಲ ಬದಲಾವಣೆಗಳು ಇಲ್ಲಿ ನಡೆಯುತ್ತವೆ. ಕೆಲವು ಮಕ್ಕಳು ಏಳು, ಎಂಟರ ಹರೆಯದಲ್ಲೇ ಗಂಡಾಗಿ ಪರಿವರ್ತನೆಯಾಗುತ್ತಾರೆ.
ಆದರೆ ಇಲ್ಲಿನ ಜನರಿಗೆ ಇದೆಲ್ಲಾ ಅಚ್ಚರಿಯನ್ನುಂಟು ಮಾಡುವುದೇ ಇಲ್ಲ. ಇಲ್ಲಿ ಹೀಗೆ ಬದಲಾದ ಮಕ್ಕಳನ್ನು ಅಂದರೆ ಅವಳು ಅವನಾಗಿ ಮಾರ್ಪಾಡಾದವರನ್ನು machihembras , Guevedoce ಎಂದು ಕರೆಯುತ್ತಾರೆ. ಇಲ್ಲಿ ಹೆಣ್ಣಾಗಿದ್ದು, ನಂತರ ಗಂಡಾಗಿ ಮಾರ್ಪಾಡಾಗಿರುವ ಮಕ್ಕಳ ಹೆಸರನ್ನೂ ಕೆಲವರು ಬದಲಿಸಿಲ್ಲ. ಹೆಣ್ಣಿನ ಹೆಸರಲ್ಲೇ ಇರುವ ಗಂಡು ಮಕ್ಕಳೂ ಇಲ್ಲಿದ್ದಾರೆ.