ನಜಾಫ್‌ಗಢದ ನವಾಬ ಎಂದೇ ಕರೆಯಲ್ಪಡುವ ಹೊಡೆಬಡಿಯ ದಾಂಡಿಗ ವಿರೇಂದರ್ ಸೆಹ್ವಾಗ್ ಕ್ರಿಕೆಟ್ ಜೀವನಕ್ಕೆ ವಿದಾಯ ಹೇಳಿದ್ದಾರೆ.
ಸೆಹ್ವಾಗ್ ಕ್ರೀಸಿಗಿಳಿದರೆ ಸಾಕು ಅಲ್ಲೊಂದು ಪ್ರಭಾವಲಯವನ್ನೇ ಅವರು ಸೃಷ್ಟಿಸುತ್ತಿದ್ದರು. ಅವರು ಹೇಗೆ ಬ್ಯಾಟ್ ಬೀಸುತ್ತಾರೆ, ಹೇಗೆ ರನ್ ಮಾಡ್ತಾರೆ, ಎಷ್ಟು ಸ್ಕೋರ್ ಮಾಡುತ್ತಾರೆ ಎಂಬುದನ್ನು ಊಹಿಸಲೂ ಕಷ್ಟವಾಗುತ್ತಿತ್ತು. ಅವರ ಆಟದ ಬಗ್ಗೆ ಊಹೆ ಮಾಡುವುದೇ ಕಷ್ಟ ಎಂದು ಗ್ಲೆನ್ ಮ್ಯಾಗ್ರಾತ್ ಹೇಳಿದರೆ, ಬೌಲರ್‌ಗಳ ಅಹಂನ್ನು ಮುರಿವ ಬ್ಯಾಟ್ಸ್‌ಮೆನ್ ಎಂದು ಬ್ರೆಟ್ ಲೀ ಹೇಳಿದ್ದರು.
ವಿರೇಂದರ್ ಸೆಹ್ವಾಗ್ ಕ್ರೀಸಿಗಿಳಿದನಂತರ ನಾನು ಆಡಿದ್ದೇ ಆಟ ಎಂದು ಆ್ಯಟಿಟ್ಯೂಡ್‌ನಿಂದ ಆಡುವ ಛಲಗಾರ. ಅವರ ಬಗ್ಗೆ ನಿಮಗೆ ಗೊತ್ತಿಲ್ಲದ ಕೆಲವೊಂದು ಸಂಗತಿಗಳು ಇಲ್ಲಿವೆ
ಆಡುವಾಗ ಟೆನ್ಶನ್ ಸಹಜ. ಆದರೆ ಸೆಹ್ವಾಗ್ ಕ್ರೀಸ್‌ಗಿಳಿದರೆ ತುಂಬು ಆತ್ಮವಿಶ್ವಾಸದಲ್ಲಿ ಆಟವಾಡುತ್ತಾರೆ. ಆಟದ ಮಧ್ಯೆ ಟೆನ್ಶನ್ ಆದಾಗ ಸೆಹ್ವಾಗ್ ಸಾಯಿಬಾಬಾ ಭಜನೆ, ಕಿಶೋರ್ ಕುಮಾರ್ ಅವರ ಹಾಡು ಅಥವಾ ಅಮಿತಾಬ್ ಬಚ್ಚನ್ ನಟಿಸಿದ ಸಿನಿಮಾ ಹಾಡುಗಳನ್ನು ಗುನುಗುನಿಸುತ್ತಾರೆ. ಹೇಗೆ ಹಾಡುವ ಮೂಲಕ ಸೆಹ್ವಾಗ್ ಮನಸ್ಸನ್ನು ನಿಯಂತ್ರಣದಲ್ಲಿಟ್ಟುಕೊಳ್ಳುತ್ತಿದ್ದರು.
ಅದೆಷ್ಟೇ ಗಟ್ಟಿಗ, ಛಲಗಾರ ಅಂತ ಹೇಳಿದರೂ ಸೆಹ್ವಾಗ್‌ಗೆ ಕೆಲವೊಂದು ಮೂಢನಂಬಿಕೆಗಳಿರುತ್ತಿದ್ದವು. ದಕ್ಷಿಣ ಆಫ್ರಿಕಾ ವಿರುದ್ಧ ಆಟವಾಡುವ ಮುನ್ನ ಅವರ ಗೆಳೆಯರೊಬ್ಬರು ಈ ದಿನ ತುಲಾ ರಾಶಿಯವರಿಗೆ ಶುಭ ದಿನ ಅಂದಿದ್ದರಂತೆ. ಅದೇ ದಿನ ಸೆಹ್ವಾಗ್ ತ್ರಿಶಕ ಬಾರಿಸಿದ್ದರು. ಇದು ದಿನ ಭವಿಷ್ಯದ ಬಗೆಗಿನ ನಂಬಿಕೆಯಾದರೆ ತಾನು ಭಾರತ ತಂಡ ಗೆಲ್ಲಲಿ ಎಂದು ಆಶಿಸಿದರೆ ಅಂದು ಭಾರತ ಸೋಲುತ್ತದೆ. ಅದಕ್ಕಾಗಿ ನಾನು ಯಾವತ್ತೂ ವಿರುದ್ಧ ತಂಡ ಗೆಲ್ಲಲಿ ಎಂದು ಆಶಿಸುತ್ತೇನೆ. ಹಾಗಾದರೆ ಭಾರತ ಗೆಲ್ಲುತ್ತದೆ ಎಂಬ ನಂಬಿಕೆ ಅವರಲ್ಲಿತ್ತು ಅಂತಾರೆ ಸೆಹ್ವಾಗ್ ಗೆಳೆಯರು.
ಕನ್‌ಫ್ಯೂಷನ್, ಕನ್‌ಫ್ಯೂಷನ್!
ಒಂದೊಮ್ಮೆ ಸೆಹ್ವಾಗ್ ನಂಬರ್ ಇಲ್ಲದೇ ಇರುವ ಜೆರ್ಸಿ ಧರಿಸಿ ಕ್ರೀಸಿಗಿಳಿದಿದ್ದರು. ಈ ಬಗ್ಗೆ ಕೇಳಿದಾಗ ನನ್ನ ಕುಟುಂಬ ಆ ಸಂಖ್ಯೆ ಒಳ್ಳೇದು, ಈ ಸಂಖ್ಯೆ ಒಳ್ಳೇದು ಅಂತ ಹೇಳುತ್ತಿದ್ದರು. ಯಾವ ನಂಬರ್ ಒಳ್ಳೆಯದು ಎಂಬ ಗೊಂದಲ ನಿವಾರಿಸಲು ನಾನು ನಂಬರ್ ಇಲ್ಲದೇ ಇರುವ ಜೆರ್ಸಿ ಆಯ್ಕೆ ಮಾಡಿಕೊಂಡೆ ಎಂದು ಸೆಹ್ವಾಗ್ ಉತ್ತರಿಸಿದ್ದರು.
ಡ್ರೆಸ್ಸಿಂಗ್ ರೂಂನಲ್ಲಿ ಕುಳಿತರೆ ಸೆಹ್ವಾಗ್ ಸಹ ಆಟಗಾರರು ಹೇಗೆಲ್ಲಾ ಬೌಂಡರಿ, ಸಿಕ್ಸರ್ ಗಳನ್ನು ಹೇಗೆ ಮಿಸ್ ಮಾಡಿದರು ಎಂಬ ವಿವರಣೆ ಕೊಡುತ್ತಿರುತ್ತಾರಂತೆ. ಎಲ್ಲ ಬಾಲ್‌ಗಳನ್ನು ಬೌಂಡರಿ, ಸಿಕ್ಸರ್ ಗೆ ಅಟ್ಟಬೇಕು ಎಂಬ ನಿಲುವು ಈತನದ್ದು.
ಮೆಲ್ಬರ್ನ್‌ಲ್ಲಿ ನಡೆದ ಟೆಸ್ಟ್ ಪಂದ್ಯದ ಮೊದಲನೇ ದಿನ ಸೆಹ್ವಾಗ್ 233 ಬಾಲ್‌ಗಳಲ್ಲಿ 195 ರನ್ ಬಾರಿಸಿದ್ದರು. ಆ ದಿನ ಅವರ ವಿವ್ ರಿಚಾರ್ಡ್ಸ್ ಅವರ ದಾಖಲೆ ಮುರಿದಿದ್ದು ಅಲ್ಲದೆ ಆಸ್ಟ್ರೇಲಿಯಾ ವಿರುದ್ಧ 300ಕ್ಕಿಂತಲೂ ಹೆಚ್ಚು ಸ್ಕೋರ್ ಮಾಡಿ ಅಚ್ಚರಿ ಪಡುವಂತೆ ಮಾಡಿದ್ದರು. ಅಷ್ಟೇ ಅಲ್ಲ ಸೆಹ್ವಾಗ್ ಒಮ್ಮೆ ಯಾವುದೇ ತಪ್ಪು ಮಾಡಿ ಔಟಾಗಿದ್ದರೆ ಮತ್ತೆ ಆ ತಪ್ಪು ಮರುಕಳಿಸದಂತೆ ನೋಡಿಕೊಳ್ಳುತ್ತಿದ್ದರು.
ಸೆಹ್ವಾಗ್‌ನಂತೆ ತ್ರಿಶಕ ಬಾರಿಸಿ ಭಾರತೀಯ ಬ್ಯಾಟ್ಸ್ ಮೆನ್ ಬೇರೆ ಯಾರೂ ಇಲ್ಲ. ಅದೊಂದು ಪಂದ್ಯದಲ್ಲಿ ಸೆಹ್ವಾಗ್ ಸಚಿನ್ ಜತೆಯಾಟವಾಡುತ್ತಿದ್ದರು. ಸೆಹ್ವಾಗ್ 295 ರನ್ ಬಾರಿಸಿ ಕ್ರೀಸ್ ನಲ್ಲಿದ್ದರು. ಆವೇಳೆ ಹುಷಾರಾಗಿ ಆಡು ಎಂದು ಸಚಿನ್ ಸಲಹೆ ನೀಡಿದರೆ ಅದೇನೇ ಆಗಲಿ ಮುಂದಿನ ಬಾಲ್‌ನಲ್ಲಿ ಸಿಕ್ಸರ್ ಹೊಡೆಯುತ್ತೇನೆ ಎಂದು ಸೆಹ್ವಾಗ್ ಹೇಳಿದರು. ಹೇಳಿದ್ದೇ ತಡ ಮುಂದಿನ ಬಾಲ್‌ನಲ್ಲಿ ಸಿಕ್ಸರ್ ಸಿಡಿಸಿ 301 ರನ್ ದಾಖಲಿಸಿ ಸೆಹ್ವಾಗ್ ಸಂಭ್ರಮಿಸಿದರು.
ಅಮ್ಮ ಮಾಡಿದ ಖೀರ್ ತುಂಬಾ ಇಷ್ಟ. ಅಮ್ಮನ ಮುದ್ದಿನ ಮಗ ಈ ವೀರೂ. ಮುಲ್ತಾನದ ಸುಲ್ತಾನ್, ನಜಾಫ್‌ಗಢದ ರಾಜ ಮತ್ತು ಲಿಟ್ಲ್ ತೆಂಡೂಲ್ಕರ್ ಎಂಬ ಹೆಸರಿನಿಂದಲೂ ವೀರೂ ಫೇಮಸ್. ಸರ್ ಡಾನ್ ಬ್ರಾಡ್‌ಮೆನ್‌ನ ಜತೆ ಟೆಸ್ಟ್ ಪಂದ್ಯಗಳಲ್ಲಿ 3 ಬಾರಿ 290 ರನ್ ಗಳಿಗಿಂತ ಹೆಚ್ಚು ರನ್ ಗಳನ್ನು ಪಡೆದ ಏಕೈಕ ಬ್ಯಾಟ್ಸ್‌ಮೆನ್ ಈತ. ಏಕದಿನ ಮತ್ತು ಟೆಸ್ಟ್ ಪಂದ್ಯಗಳಲ್ಲಿ ಆರಂಭಿಕ ಆಟಗಾರನಾಗಿ ಆಡಿ 7,700 ಕ್ಕಿಂತಲೂ ಹೆಚ್ಚು ರನ್ ಗಳಿಸಿದ ಏಕೈಕ ದಾಂಡಿಗ. ಏಕದಿನ ಮತ್ತು ಟೆಸ್ಟ್ ಪಂದ್ಯಗಳಲ್ಲಿ 31 ಬಾರಿ ಪ್ಲೇಯರ್ ಆಫ್ ದ ಮ್ಯಾಚ್ ಪ್ರಶಸ್ತಿ ಗಳಿಸಿರುವ ಸೆಹ್ವಾಗ್ ಡೆಸ್ಸಿಂಗ್ ರೂಂನಲ್ಲಿ ತುಂಬಾನೇ ತರಲೆ, ತಮಾಷೆಗಳನ್ನು ಮಾಡಿ ನಗಿಸುತ್ತಿರುತ್ತಾರೆ.
ಅವರೆಷ್ಟು ಜಾಲಿಯಾಗಿರುವ ಮನುಷ್ಯ ಎಂಬುದಕ್ಕೆ ಇಲ್ಲಿದೆ ಉದಾಹರಣೆಗಳು:
ಒಂದ್ಸಾರಿ ಆಟಗಾರ ಮೆಂಡೀಸ್ ಬೌಲಿಂಗ್ ಬಗ್ಗೆ ವೀರೂಗೆ ಕೇಳಿದಾಗ ಉತ್ತರ ಹೀಗಿತ್ತು...
ಸ್ಪಿನ್ನರ್ ನ್ನು ಸ್ಪಿನ್ನರ್‌ನ್ನಾಗಿಸುವುದು ಬ್ಯಾಟ್ಸ್‌ಮೆನ್‌ಗಳೇ. ಆತನಿಗೆ ಬಾಲ್‌ನ್ನು ಸ್ಪಿನ್ ಮಾಡಲು ಬಿಡಲೇ ಬಾರದು. ಮೊದಲನೇ ಓವರ್ ನಲ್ಲಿ ನಾವು ಹೀಗೇ ಮಾಡಿದರೆ ಅವನು ಜೀವನ ಪರ್ಯಂತ ಸ್ಪಿನ್ ಮಾಡುವುದನ್ನೇ ನಿಲ್ಲಿಸಿಬಿಡುತ್ತಾನೆ
ಕ್ರಿಕೆಟ್ ಬಾಲ್ ಬಗ್ಗೆ ಕೇಳಿದಾಗ
ಬಾಲ್‌ನ ಮನೆ ಎಂದರೆ ಬೌಂಡರಿ, ಅದನ್ನು ಮನೆಗೆ ಕಳುಹಿಸಿಕೊಡುತ್ತಿರಬೇಕು
ಸೆಹ್ವಾಗ್‌ಗೆ ಕಿಶೋರ್ ಕುಮಾರ್, ಮಹಮ್ಮದ್ ರಫೀ, ಲತಾ ಮಂಗೇಶ್ಕರ್, ಆಶಾ ಬೋಂಸ್ಲೆ, ಅಲ್ಕಾ ಯಾಗ್ನಿಕ್ ಮತ್ತು ಕುಮಾರ್ ಸಾನು ಹಾಡುಗಳೆಂದರೆ ಅಚ್ಚುಮೆಚ್ಚು
ಕ್ರಿಕೆಟ್ ಹೊರತಾಗಿ ಟೆನ್ನಿಸ್ , ಬ್ಯಾಡ್ಮಿಂಟನ್, ಟೇಬಲ್ ಟೆನ್ನಿಸ್ ಇಷ್ಟದ ಆಟಗಳು
ಪಾದಾರ್ಪಣೆ ಮಾಡಿದ ಆಟದಲ್ಲೇ ನಿಷೇಧಕ್ಕೊಳಗಾಗಿದ್ದ
2001ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ನಡೆದ ಪಂದ್ಯದಲ್ಲಿ ಟೆಸ್ಟ್ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ ಸೆಹ್ವಾಗ್ ಅಂಪೈರ್ ಮೈಕ್ ಡೆನ್ನೆಸ್ ವಿರುದ್ಧ ಅಪೀಲು ಮಾಡಿ ನಿಷೇಧಕ್ಕೊಳಗಾಗಿದ್ದರು. ಆ ಪಂದ್ಯದಲ್ಲಿ ಸೆಂಚುರಿ ಹೊಡೆದಿದ್ದರೂ, ನಿಷೇಧದ ಹಿನ್ನೆಲೆಯಲ್ಲಿ ಮುಂದಿನ ಪಂದ್ಯಗಳನ್ನಾಡಲಾಗಲಿಲ್ಲ. ಆದರೇನಂತೆ ಟೆಸ್ಟ್ ಕ್ರಿಕೆಟ್‌ಗಳಲ್ಲಿ 2 ತ್ರಿಶಕ ಬಾರಿಸಿದ ದಾಖಲೆ ಬರೆದು ಸೆಹ್ವಾಗ್ ಮುಂಚೂಣಿಯ ಆಟಗಾರನಾಗಿ ಮಿಂಚಿದ್ದರು.