ಮೈಸೂರು ಸ್ಯಾಂಡಲ್ ಸೋಪ್...ದೇಶ, ವಿದೇಶಗಳಲ್ಲಿ ಕಂಪು ಸೂಸಿ ಕರ್ನಾಟಕದ ಹೆಮ್ಮೆಯೆನಿಸಿಕೊಂಡ ನಮ್ಮದೇ ಸಾಬೂನು. ಮೈಸೂರು ಸ್ಯಾಂಡಲ್ ಸೋಪಿನ ಈ ಸುಗಂಧಕ್ಕೆ ಮುಂದಿನ ವರುಷ 100 ತುಂಬಲಿದೆ. 99 ವರುಷಗಳಿಂದ ಮನೆ ಮನೆಗಳಲ್ಲಿ ಕಂಪು ತುಂಬಿರುವ ಮೈಸೂರು ಸ್ಯಾಂಡಲ್ ಎಂಬ ಈ 'ನಮ್ಮ ಸೋಪ್'ನ ಪರಿಮಳದ ಕತೆ ಇಲ್ಲಿದೆ. ಓದಿ...
ನೂರನೇ ವರ್ಷಕ್ಕೆ ಕಾಲಿಡುತ್ತಿರುವ ಮೈಸೂರು ಸ್ಯಾಂಡಲ್ ಸೋಪ್ ಭಾರತದಲ್ಲಿರುವ ಅತೀ ದೊಡ್ಡ ಸೋಪ್ ನಿರ್ಮಾಣ ಕಂಪನಿಗಳಲ್ಲೊಂದಾಗಿದೆ. ಮೈಸೂರ್ ಸ್ಯಾಂಡಲ್ ಸೋಪ್ ನಿರ್ಮಿಸುತ್ತಿರುವ ಕರ್ನಾಟಕ ಸೋಪ್ಸ್ ಆ್ಯಂಡ್ ಡಿಟರ್ಜೆಂಟ್ ಕಂಪನಿಯೆಂಬ ಕರ್ನಾಟಕ ಸರ್ಕಾರದ ಸಂಸ್ಥೆ, ಮೈಸೂರು ಮತ್ತು ದಕ್ಷಿಣ ಭಾರತದ ಚರಿತ್ರೆಯಲ್ಲಿ ಸದಾ ಉಲ್ಲೇಖನೀಯವಾಗಿದೆ.
ಶ್ರೀಗಂಧದಿಂದ ಸೋಪ್ ಗಂಧದ ವರೆಗೆ...
ಮೈಸೂರು ರಾಜರಾಗಿದ್ದ ನಾಲ್ವಡಿ ಕೃಷ್ಣರಾಜ ಒಡೆಯರ್ ಪ್ರಥಮ ವಿಶ್ವ ಮಹಾ ಯುದ್ಧ ಕಾಲದಲ್ಲಿ ಅಂದರೆ 1916ರಲ್ಲಿ ಮೈಸೂರ್ ಸ್ಯಾಂಡಲ್ಸ್ ಕಂಪನಿಯನ್ನು ಸ್ಥಾಪಿಸಿದರು. ದೇಶದಲ್ಲೇ ಅತೀ ಹೆಚ್ಚು ಶ್ರೀಗಂಧವನ್ನು ರಫ್ತು ಮಾಡುತ್ತಿದ್ದ ಮೈಸೂರು ರಾಜವಂಶದವರಿಗೆ ಯುದ್ಧ ಕಾಲದಲ್ಲಿ ಯುರೋಪ್ ಗೆ ಶ್ರೀಗಂಧ ರಫ್ತು ಮಾಡುವುದು ಸಾಧ್ಯವಾಗಲಿಲ್ಲ. ರಫ್ತು ಪ್ರಕ್ರಿಯೆಗೆ ತಡೆ ಬಂದಕಾರಣ ಆ ಶ್ರೀಗಂಧವನ್ನು ಸದ್ಬಳಕೆ ಮಾಡಲೋಸುಗ ಮೈಸೂರು ರಾಜರು ಮೈಸೂರು ಸ್ಯಾಂಡಲ್ ಸೋಪ್ ನಿರ್ಮಾಣಕ್ಕೆ ಕೈ ಹಾಕಿದರು. ಇದಾದನಂತರ 1980ರಲ್ಲಿ ಇನ್ನೆರಡು ಸಾರ್ವಜನಿಕ ಸಂಸ್ಥೆಗಳ ಜತೆ ಕೈಜೋಡಿಸಿದ ಈ ಕಂಪನಿ ಬೃಹತ್ ಕಂಪನಿಯಾಗಿ ಬೆಳೆದು ಬಿಟ್ಟಿತು.
ಸೋಪ್ ಮಾತ್ರವಲ್ಲದೆ ಇಲ್ಲಿ ಡಿಟರ್ಜೆಂಟ್ ಪೌಡರ್, ಕ್ಲೀನಿಂಗ್ ಆಯಿಲ್, ಶ್ರೀಗಂಧದ ಕಡ್ಡಿ, ಬೇಬಿ ಆಯಿಲ್, ಟಾಲ್ಕಂ ಪೌಡರ್ ಮೊದಲಾದವುಗಳನ್ನು ಕಂಪನಿ ನಿರ್ಮಿಸುತ್ತಿದೆ. ಮೈಸೂರ್ ಸ್ಯಾಂಡಲ್ಸ್ ಎಂಬುದು ಇವೆಲ್ಲದರ ಬ್ರಾಂಡ್ ನೇಮ್. ಹಲವಾರು ಉತ್ಪನ್ನಗಳನ್ನು ಕಂಪನಿ ನಿರ್ಮಿಸುತ್ತಿದ್ದರೂ ಹೆಚ್ಚಾಗಿ ಖರ್ಚಾಗುತ್ತಿರುವ ಮೈಸೂರ್ ಸ್ಯಾಂಡಲ್ ಸೋಪ್ ಆಗಿದೆ. ಒಟ್ಟು ಮಾರಾಟದ ಶೇ. 40 ರಷ್ಟು ಲಾಭ ಮೈಸೂರು ಸ್ಯಾಂಡಲ್ ಸೋಪ್‌ನಿಂದಲೇ ಬರುತ್ತಿದೆ.
ಸೋಪ್ ಒಂದರ ಬೆಲೆ ರು. 15 ರಿಂದ ಆರಂಭವಾಗುತ್ತಿದೆ. 125 ಗ್ರಾಂ ಪ್ಯಾಕೆಟ್‌ನ ಬೆಲೆ ರು. 15. ಮೈಸೂರು ಸ್ಯಾಂಡಲ್, ಸ್ಯಾಂಡಲ್ ಗೋಲ್ಡ್ ಮೊದಲಾದವುಗಳೊಂದಿಗೆ ರು. 750 ಬೆಲೆಯ ಪ್ರೀಮಿಯಂ ಮಿಲೇನಿಯಂ ಬ್ರಾಂಡ್ ಸೋಪ್‌ಗಳನ್ನೂ ಸಂಸ್ಥೆ ನಿರ್ಮಿಸುತ್ತಿದೆ. ಇಲ್ಲಿ ತಯಾರಾಗುವ ಸೋಪ್‌ಗಳು ಹೆಚ್ಚಾಗಿ ವಿದೇಶಗಳಿಗೆ ರಫ್ತಾಗುತ್ತವೆ. ಯುರೋಪ್, ಅಮೆರಿಕ, ಗಲ್ಫ್ ರಾಷ್ಟ್ರಗಳಿಗೆ ಹೆಚ್ಚು ಸೋಪ್ ಗಳು ರಫ್ತಾಗುತ್ತವೆ.
ಪ್ರತೀ ವರ್ಷ ಗ್ರಾಮೀಣ ಪ್ರದೇಶಗಳನ್ನು ಕೇಂದ್ರೀಕರಿಸಿ ಸೋಪ್ ಮೇಳಗಳೂ ನಡೆಯುತ್ತಿರುತ್ತವೆ. ಪುಟ್ಟ ಪುಟ್ಟ ಹೆಜ್ಜೆಗಳನ್ನಿಟ್ಟು ಬೆಳೆದು ಬಂದ ಈ ಕಂಪನಿಗೆ ಸರ್ಕಾರದ ಸಹಾಯ ಹಸ್ತ ಸಿಕ್ಕಿದ್ದು ಬಹು ದೊಡ್ಡ ಉದ್ಯಮವಾಗಿ ಬೆಳೆಯಲು ಕಾರಣವಾಯಿತು.
ಜನರ ಪ್ರೀತಿ ವಿಶ್ವಾಸದಿಂದಲೇ ರಾಜ್ಯ ಸರ್ಕಾರದ ಆರೋಗ್ಯ ಇಲಾಖೆಯೊಂದಿಗೆ ಕೈಜೋಡಿಸಿ ಆರಂಭಿಸಿದ ಸ್ಪೆಷಲ್ ಕಿಟ್ ಯೋಜನೆ ಯಶಸ್ವಿಯಾಗಿತ್ತು. ಸರ್ಕಾರಿ ಆಸ್ಪತ್ರೆಗಳಲ್ಲಿ ನವಜಾತ ಶಿಶುಗಳಿಗೆ ಸೋಪ್, ಶ್ರೀಗಂಧದ ತೈಲ, ಟಾಲ್ಕಂ ಪೌಡರ್ ಇರುವ ಸ್ಪೆಷಲ್ ಕಿಟ್ ಗಳನ್ನು ಪೂರೈಸುವ ಮೂಲಕ ಮೈಸೂರ್ ಸ್ಯಾಂಡಲ್ ಸೋಪ್ ಅಪಾರ ಜನಮನ್ನಣೆಯನ್ನೂ ಗಳಿಸಿತು. ಆದರೂ ಮಾರುಕಟ್ಟೆಯಲ್ಲಿನ ಪೈಪೋಟಿಯನ್ನು ಎದುರಿಸಲು ಪ್ರಸ್ತುತ ಸಂಸ್ಥೆಗೆ ಕಠಿಣ ಶ್ರಮ ಪಡಬೇಕಾಗಿ ಬಂತು. 2006ರ ನಂತರ ಬ್ರಾಂಡಿಂಗ್‌ನತ್ತ ಸಂಸ್ಥೆ ಹೆಚ್ಚು ಗಮನ ಹರಿಸಿತು. ಆ ವರ್ಷವೇ ಕ್ರಿಕೆಟಿಗ ಮಹೇಂದ್ರ ಸಿಂಗ್ ಧೋನಿಯನ್ನು ಮೈಸೂರ್ ಸ್ಯಾಂಡಲ್ಸ್‌ನ ಬ್ರಾಂಡ್ ಅಂಬಾಸಿಡರ್‌ನ್ನಾಗಿ ಮಾಡಲಾಯಿತು. ಪ್ಯಾಕೆಟ್‌ನಲ್ಲಿ ನವ ನವೀನತೆಯನ್ನು ಮಾಡುತ್ತಿದ್ದರೂ ಈಗಲೂ ಮೈಸೂರು ಸೋಪ್ ಪೊಟ್ಟಣದೊಳಗೆ ಮಾತ್ರ ಅದೇ ಸುಗಂಧ ಮತ್ತು ವಿಶ್ವಾಸ ಬೆರೆತಿರುತ್ತದೆ.