ವಿಶೇಷ

ಮದುವೆಗೆ ಮುಂಚೆ ಹುಡುಗನಿಗೆ ಪರೀಕ್ಷೆ!

Sumana Upadhyaya

ಮೈಸೂರು: ನಮ್ಮ ರಾಜ್ಯದ ಬುಡಕಟ್ಟು ಜನಾಂಗದವರು ಕೆಲವು ಆಕರ್ಷಕ ಸಂಪ್ರದಾಯ ಮತ್ತು ಪದ್ಧತಿಗಳನ್ನು ಆಚರಿಸುತ್ತಾರೆ. ಕಾಡಿನಲ್ಲಿ ವಾಸಿಸುವ ಸೋಲಿಗರಲ್ಲಿ ಮದುವೆ ವಿಷಯದಲ್ಲಿ ಒಂದು ಸಂಪ್ರದಾಯವಿದೆ. ಅದೇನೆಂದರೆ ಹುಡುಗ ಯಾವ ಹುಡುಗಿಯನ್ನು ಮದುವೆಯಾಗುತ್ತಾನೆಯೋ ಆ ಹುಡುಗಿಯ ಮನೆಯಲ್ಲಿ ಮದುವೆಗೆ ಮುಂಚೆ ಕನಿಷ್ಠ 5 ವರ್ಷ ಹಾಗೂ ಗರಿಷ್ಠ 12 ವರ್ಷಗಳ ಕಾಲವಿದ್ದು ಅವರ ಮನೆಗೆಲಸ ಹಾಗೂ ಇತರ ಕಾಯಕಗಳಲ್ಲಿ ನೆರವು ನೀಡುತ್ತಿರಬೇಕು.

ಹುಡುಗ ಚೆನ್ನಾಗಿ ಕೆಲಸ ಮಾಡುತ್ತಾನೆ, ಆತ ನಮ್ಮ ಮಗಳನ್ನು ಮದುವೆಯಾದರೆ ಚೆನ್ನಾಗಿ ನೋಡಿಕೊಳ್ಳಬಹುದು ಎಂದು ಹುಡುಗಿಯ ಪೋಷಕರಿಗೆ ನಂಬಿಕೆ ಬಂದ ಮೇಲಷ್ಟೇ ಮದುವೆಯಾಗಲು ಒಪ್ಪಿಗೆ ನೀಡುತ್ತಾರೆ.

ಹುಡುಗಿಯ ಪೋಷಕರು ಮದುವೆಯಾಗುವ ಹುಡುಗನ ಮನೋಧರ್ಮ, ಗುಣ-ನಡತೆ, ಸಾಮರ್ಥ್ಯ, ಇತರರನ್ನು ಹೇಗೆ ಪ್ರೀತಿ, ವಾತ್ಸಲ್ಯ ಮತ್ತು ಕಾಳಜಿಯಿಂದ ನೋಡಿಕೊಳ್ಳುತ್ತಾನೆ ಎಂಬುದನ್ನೆಲ್ಲ ಗಮನಿಸುತ್ತಾರೆ. ಹುಡುಗ ಈ ಎಲ್ಲಾ ವಿಷಯಗಳಲ್ಲಿ ಅವರಿಗೆ ಒಪ್ಪಿಗೆಯಾದರೆ ಮಾತ್ರ ತಮ್ಮ ಹುಡುಗಿಯನ್ನು ಮದುವೆ ಮಾಡಿಕೊಡಲು ಒಪ್ಪುತ್ತಾರೆ. ಉದಾಹರಣೆಗೆ ಒಬ್ಬ ಯುವಕ ಯುವತಿಯೊಬ್ಬಳನ್ನು ಮದುವೆಯಾಗಲು ಇಚ್ಛಿಸುತ್ತಾನೆ ಎಂದಿಟ್ಟುಕೊಳ್ಳಿ. ಆಗ ಅವನು ಅವರ ಮನೆಯಲ್ಲಿ ಕೆಲಸ ಮಾಡಬೇಕು ಮತ್ತು ಅವರ ಅಗತ್ಯಗಳನ್ನು ಕೂಡ ಪೂರೈಸಬೇಕು. ಒಂದು ವೇಳೆ 5 ವರ್ಷಗಳಲ್ಲಿ ಹುಡುಗನ ಕೆಲಸ, ಗುಣ ನಡತೆ ಹುಡುಗಿಯ ಪೋಷಕರಿಗೆ ಸಮಾಧಾನ ತಂದಿಲ್ಲದಿದ್ದರೆ ಮದುವೆ ಮುಂದೂಡಲಾಗುತ್ತದೆ. ಹುಡುಗಿಯ ಮನೆಯ ಹಿರಿಯ ಸದಸ್ಯರ ಮನಸ್ಸನ್ನು ಗೆಲ್ಲಲು ಮತ್ತೆ 7 ವರ್ಷಗಳವರೆಗೆ ಕಾಯಬೇಕು.

ಸೋಲಿಗ ಸಮುದಾಯದವರ ಕುರಿತು ಸಂಶೋಧನೆ ನಡೆಸಿದ ಮತ್ತು ಆ ಸಮುದಾಯದ ಕಾರ್ಯಕ್ರಮ ಸಹಾಯಕರಾಗಿ ದುಡಿದಿರುವ ಸಿ. ಮಾದೇಗೌಡ ಅವರು ಹೇಳುವ ಪ್ರಕಾರ, ತಮ್ಮ ಮಗಳನ್ನು ಈ ಹುಡುಗ ಮದುವೆಯಾದ ನಂತರ ಚೆನ್ನಾಗಿ ನೋಡಿಕೊಳ್ಳಬಹುದು ಎಂದು ಮನವರಿಕೆಯಾದ ಮೇಲಷ್ಟೇ ಮದುವೆಗೆ ಒಪ್ಪಿಗೆ ಕೊಡುತ್ತಾರೆ.

ಇನ್ನು ಕೆಲವೊಮ್ಮೆ ಇಬ್ಬರ ಮನೆಯ ಹಿರಿಯರ ಒಪ್ಪಿಗೆ ಮೇರೆಗೆ ಹುಡುಗ-ಹುಡುಗಿಯಿಬ್ಬರೂ ಮದುವೆಯಾಗದೆ ಒಟ್ಟಿಗೆ ವಾಸಿಸುತ್ತಾರೆ. ಈ ಸಂಪ್ರದಾಯ ಸೋಲಿಗರಲ್ಲಿ ಈಗಲೂ ಇದೆ.ಸೋಲಿಗರ ಮದುವೆ ಸಂಪ್ರದಾಯ ತುಂಬಾ ಸರಳ. ಮದುವೆ ಸಂದರ್ಭದಲ್ಲಿ ಎಲೆ-ಅಡಿಕೆ ಪರಸ್ಪರ ವಿನಿಮಯ ಮಾಡಿಕೊಳ್ಳುತ್ತಾರೆ. 

ಕರ್ನಾಟಕ ರಾಜ್ಯದಲ್ಲಿ ಒಂದು ಲಕ್ಷಕ್ಕೂ ಅಧಿಕ ಮಂದಿ ಸೋಲಿಗರಿದ್ದಾರೆ. ಮೈಸೂರು, ಚಾಮರಾಜನಗರ, ವಿರಾಜಪೇಟೆ, ಸೋಮವಾರಪೇಟೆ, ಮಂಡ್ಯದ ಮುತ್ತತ್ತಿ, ಕನಕಪುರ, ತುಮಕೂರಿನ ಕುಣಿಗಲ್ ಮತ್ತು ರಾಮನಗರದಲ್ಲಿ ಸೋಲಿಗರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ.

SCROLL FOR NEXT