ನ್ಯೂಯಾರ್ಕ್: 25 ವರ್ಷದ ಆ ಯುವಕ ಆಕೆಯ ಪಾಲಿಕೆ ಯಾವತ್ತಿಗೂ ಹೀರೋ, ತನ್ನ ಪ್ರಾಣವನ್ನು ಬಲಿತೆಗೆದುಕೊಂಡು ಮಹಿಳೆಯೊಬ್ಬಳ ಪ್ರಾಣ ಉಳಿಸಿದ ಆತ ಆಕೆಗೆ ದೇವರ ಸಮಾನ.
ಆಗಿದ್ದಿಷ್ಟು. ನ್ಯೂಯಾರ್ಕ್ ನ ಮ್ಯಾನ್ ಹಟ್ಟನ್ ನ ಲೋವರ್ ಈಸ್ಟ್ ಸೈಡ್ ನಲ್ಲಿರುವ 26 ಅಂತಸ್ತಿನ ಮಹಡಿ ಕಟ್ಟಡವದು. ಮೊನ್ನೆ ಹೊಸ ವರ್ಷದ ಸಂಜೆ ದಿನ ಲಿಫ್ಟ್ ನಲ್ಲಿ 43 ವರ್ಷದ ಮಹಿಳೆ ಎರುದೆ ಸಂಚೆಜ್ ಹಾಗೂ 25 ವರ್ಷದ ಯುವಕ ಸ್ಟಿಫನ್ ಹೆವೆಟ್ಟ್ ಬ್ರೌನ್ ಇದ್ದರು. ಲಿಫ್ಟ್ ನಲ್ಲಿ ಮೇಲೆ ಹೋಗುತ್ತಿರುವಾಗ ಹಠಾತ್ತನೆ ಲಿಫ್ಟ್ ಕೆಟ್ಟು ನಿಂತಿತು.
ಸ್ಟಿಫನ್ ಹಿಂದೆ ಮುಂದೆ ಯೋಚಿಸದೆ ಮಹಿಳೆಯನ್ನು ತಕ್ಷಣ ಲಿಫ್ಟ್ ಒಳಗಿನಿಂದ ಹೊರಗೆ ತಳ್ಳಿ ಪ್ರಾಣ ಕಾಪಾಡಿದ. ಮಹಿಳೆಯನ್ನು ರಕ್ಷಿಸುವಾಗ ಆಕಸ್ಮಿಕವಾಗಿ ಲಿಫ್ಟ್ ನ ಬಾಗಿಲಿನಲ್ಲಿ ಸಿಕ್ಕಿ ಹಾಕಿಕೊಂಡ. ಬಾಗಿಲು ಒಂದೇ ಸಮನೆ ಹೊಡೆಯುತ್ತಿದ್ದುದರಿಂದ, ಆಗಾಗ ತೆರೆಯುವುದು ಮತ್ತು ಮುಚ್ಚುವುದು ಆಗುತ್ತಿದ್ದುದರಿಂದ ಮಧ್ಯೆ ಸಿಕ್ಕಿ ಸ್ಟೀಫನ್ ಪ್ರಾಣ ಬಿಡಬೇಕಾಯಿತು.
ಈ ಘಟನೆಯನ್ನು ಅಲ್ಲೇ ನಿಂತು ಹತ್ತಾರು ಮಂದಿ ನೋಡುತ್ತಿದ್ದರು. ಆದರೆ ಅವರೆಲ್ಲ ಅಸಹಾಯಕರಾಗಿದ್ದರು. ಬ್ರೌನ್ ನನ್ನು ಕಾಪಾಡಲು ಆಗಲಿಲ್ಲ. ಈ ಕಟ್ಟಡವನ್ನು ಸರಿಯಾಗಿ ನಿಭಾಯಿಸುತ್ತಿಲ್ಲ, ಇಲ್ಲಿ ವ್ಯವಸ್ಥೆ ಸರಿಯಾಗಿಲ್ಲ, ಕಾನೂನನ್ನು ಉಲ್ಲಂಘಿಸಲಾಗಿದೆ ಎಂದು ದೂರಿ ಪರಿಸರ ಸಂರಕ್ಷಣೆ ಮಂಡಳಿಯು ಕಳೆದ ಆಗಸ್ಟ್ ನಲ್ಲಿ ಕಟ್ಟಡ ಮಾಲೀಕರ ವಿರುದ್ಧ ಕೇಸು ಹಾಕಿತ್ತು.
ಅಪಾಯದಿಂದ ಪಾರಾದ ಮಹಿಳೆಗೆ ಬ್ರೌನ್ ಹೊಸ ವರ್ಷಕ್ಕೆ ಶುಭ ಕೋರಿದ್ದ. ಆದರೆ ಅವನಿಗೆ ಮಾತ್ರ ಹೊಸ ವರ್ಷ ದುರಂತವನ್ನು ತಂದೊಡ್ಡಿತ್ತು. ತನ್ನ ಪ್ರಾಣವನ್ನು ಒತ್ತೆ ಇಟ್ಟು ಬೇರೊಬ್ಬರನ್ನು ಕಾಪಾಡಿದ ಸ್ಟಿಫನ್ ಹೆವೆಟ್ಟ ಬ್ರೌನ್ ನಿಜಕ್ಕೂ ಹೀರೋ.