2018ನೇ ಸಾಲು ಮುಕ್ತಾವಾಗುತ್ತಿದ್ದು, 2019ನೇ ಸಾಲಿಗೆ ಸ್ವಾಗತ ಕೋರುವ ಸಮಯ ಸನ್ನಿಹಿತವಾಗಿದೆ. ಈ ಹೊತ್ತಿನಲ್ಲಿ ಕಳೆದ ಒಂದು ವರ್ಷದಲ್ಲಿ ನಡೆದ ಪ್ರಮುಖ ಭೀಕರ ಪ್ರಕೃತಿ ವಿಕೋಪಗಳ ಪಟ್ಟಿ ಇಲ್ಲಿದೆ.
ಕ್ಯಾಲಿಪೋರ್ನಿಯಾ ಅಗ್ನಿ ದುರಂತ
ಕಳೆದ ನವೆಂಬರ್ ನಲ್ಲಿ ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿ ಸಂಭವಿಸಿದ್ದ ಭೀಕರ ಅಗ್ನಿ ದುರಂತ ಕನಿಷ್ಟ 85 ಮಂದಿಯ ಸಾವಿಗೆ ಕಾರಣವಾಗಿತ್ತು. ಅಲ್ಲದೆ ಸುಮಾರು 296 ಮಂದಿ ಕಣ್ಮರೆಯಾಗಿದ್ದರು. ಸುಂದರ ನಗರಿ ಕ್ಯಾಲಿಫೋರ್ನಿಯಾದಲ್ಲಿ ಮೋಜಿಗಾಗಿ ಹಾಕಲಾಗಿದ್ದ ಕ್ಯಾಂಪ್ ಫೈರ್ ನೋಡ ನೋಡುತ್ತಲೇ ಅಗ್ನಿ ದುರಂತವಾಗಿ ಮಾರ್ಪಟ್ಟಿತ್ತು. ಗಾಳಿಯ ರಭಸಕ್ಕೆ ಆಗಸಕ್ಕೆ ಹಾರಿದ್ದ ಬೆಂಕಿಯ ಕಿಡಿಗಳು ಅಕ್ಕಪಕ್ಕದ ಮನೆಗಳಿಗೆ ವ್ಯಾಪಿಸಿತ್ತು. ನೋಡ ನೋಡುತ್ತಲೇ ಬೆಂಕಿ ಕೆನ್ನಾಲಿಗೆ ಇಡೀ ನಗರವನ್ನು ವ್ಯಾಪಿಸಿತ್ತು. ಬೆಂಕಿಯ ರೌದ್ರ ನರ್ತನ ಯಾವಮಟ್ಟಿಗೆ ಇತ್ತು ಎಂದರೆ ಸತ್ತ 85 ಮಂದಿಯ ಪೈಕಿ ಕೇವಲ 54 ಮಂದಿಯ ಗುರುತು ಮಾತ್ರ ಪತ್ತೆಯಾಗಿತ್ತು. ಉಳಿದವರ ದೇಹಗಳು ಗುರುತು ಸಿಗಲಾರದಷ್ಚು ಸುಟ್ಟು ಕರಕಲಾಗಿದ್ದವು. ಅಲ್ಲದೆ ಬೆಂಕಿ ಕ್ಯಾಲಿಫೋರ್ನಿಯಾದ ಸುಮಾರು 153,336 ಎಕರೆಯ ಭೂ ಪ್ರದೇಶವನ್ನು ಆಪೋಷಣೆ ತೆಗೆದುಕೊಂಡಿತ್ತು. 14 ಸಾವಿರ ಮನೆಗಳು ಬೆಂಕಿಗಾಹುತಿಯಾಗಿದ್ದವು. 27 ಸಾವಿರ ಮಂದಿ ಮನೆ ಕಳೆದುಕೊಂಡು ನಿರಾಶ್ರಿತರಾದರು.
ಕಳೆದ ಫೆಬ್ರವರಿ ತಿಂಗಳಲ್ಲಿ ಪಪುವಾ ನ್ಯೂಗಿನಿಯಾ ದ್ವೀಪದಲ್ಲಿ ಸಂಭವಿಸಿದ್ದ ಭೀಕರ ಭೂಕಂಪನದಿಂದಾಗಿ ಕನಿಷ್ಟ 160 ಮಂದಿ ಸಾವಿಗೀಡಾಗಿದ್ದರು. ಬರೊಬ್ಬರಿ 10 ಕಿ.ಮೀ ವ್ಯಾಪ್ತಿಯಲ್ಲಿ ಭೂಕಂಪನ ಸಂಭವಿಸಿ ಬೃಹತ್ ಕಟ್ಟಡಗಳು ನೆಲಕ್ಕುರುಳಿದ್ದವು. ಇಲ್ಲಿನ ಕೋಮೋ ನಗರದಲ್ಲಿ ಸಂಭವಿಸಿದ ಲಘು ಕಂಪನದಿಂದಲೇ ಹೆಚ್ಚುವರಿಯಾಗಿ 25 ಮಂದಿ ಮೃತರಾಗಿದ್ದರು. ರಿಕ್ಟರ್ ಮಾಪಕದಲ್ಲಿ ಅಂದು 6.3ರಷ್ಟು ತೀವ್ರತೆ ದಾಖಲಾಗಿತ್ತು. ಭೂಕಂಪನದಿಂದಾಗಿ ಇಲ್ಲಿನ ಸುಮಾರು 2,70,000 ಮಂದಿ ನಿರಾಶ್ರಿತರಾಗಿದ್ದರು.
ಆಗಸ್ಟ್ 28ರಂದು ಉತ್ತರ ಕೊರಿಯಾದಲ್ಲಿ ಸುರಿದಿದ್ದ ಸತತ ಮಳೆಯಿಂದಾಗಿ ಅಲ್ಲಿ ಭೀಕರ ಪ್ರವಾಹ ಪರಿಸ್ಥಿತಿ ಉಂಟಾಗಿತ್ತು. ಪ್ರವಾಹದಲ್ಲಿ ಕನಿಷ್ಟ 76 ಮಂದಿ ಸಾವನ್ನಪ್ಪಿ ಸುಮಾರು ಅಷ್ಟೇ ಸಂಖ್ಯೆಯ ಮಂದಿ ನಾಪತ್ತೆಯಾಗಿದ್ದರು. ಹ್ವಾಂಗ್ಹಾ ಪ್ರಾಂತ್ಯವೊಂದರಲ್ಲೇ ಮನೆ, ಶಾಲೆ, ಆಸ್ಪತ್ರೆ, ಕಚೇರಿಗಳೂ ಸೇರಿದಂತೆ ಸುಮಾರು 800 ಕಟ್ಟಡಗಳು ಪ್ರವಾಹದಿಂದಾಗಿ ಹಾನಿಗೀಡಾಗಿದ್ದವು. 17 ಸಾವಿರ ಹೆಕ್ಟೇರ್ ನಲ್ಲಿದ್ದ ಕೃಷಿ ಭೂಮಿ ಹಾಳಾಗಿ ಅದರಲ್ಲಿದ್ದ ಅಪಾರ ಪ್ರಮಾಣದ ಬೆಳೆ ನೀರು ಪಾಲಾಗಿತ್ತು. ಈ ಪ್ರವಾಹದ ಬಳಿಕ ಉತ್ತರ ಕೊರಿಯಾದಲ್ಲಿ ಆಹಾರ ಪದಾರ್ಥಗಳಿಗೆ ವ್ಯಾಪಕ ಹಾಹಾಕಾರ ಉಂಟಾಗಿತ್ತು.
ಮೇ ತಿಂಗಳಲ್ಲಿ ಪಾಕಿಸ್ತಾನದಲ್ಲಿ ಸಂಭವಿಸಿದ್ದ ಬಿಸಿಗಾಳಿಯಿಂದಾಗಿ ಕರಾಚಿ ಒಂದರಲ್ಲೇ ಕನಿಷ್ಠ 65 ಮಂದಿ ಸಾವನ್ನಪ್ಪಿದ್ದರು. ಬೇಸಿಗೆಯಲ್ಲಿ ಬಿಸಿಲಿನ ತಾಪಮಾನ 44 ಡಿಗ್ರಿಗೆ ಏರಿಕೆಯಾಗಿತ್ತು. ರಂಜಾನ್ ಮಾಸವಾಗಿದ್ದರಿಂದ ಮುಸ್ಲಿಮರು ಉಪವಾಸವಿದ್ದ ಸಂದರ್ಭದಲ್ಲೇ ಬಿಸಿಗಾಳಿ ಪಾಕಿಸ್ತಾನದಲ್ಲಿ ಹಲವರನ್ನು ಬಲಿ ತೆಗೆದುಕೊಂಡಿತ್ತು. ಪಾಕಿಸ್ತಾನದಲ್ಲಿ ಬೇಸಿಗೆ ಹವಾ ಹೇಗಿತ್ತು ಎಂದರೆ ರಸ್ತೆಯಲ್ಲಿ ಸಂಚರಿಸುವ ಸವಾರರಿಗೆ ಬಿಸಿಲಿನ ಬೇಗೆಯಿಂದ ತಪ್ಪಿಸಿಕೊಳ್ಳಲು ಕೆಲ ಸಮಾಜಸೇವಾ ಸಂಘಟನೆಗಳು ಪೈಪ್ ಗಳ ಮೂಲಕ ನೀರು ಸಿಂಪಡಿಸುತ್ತಿದ್ದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.
ಜಪಾನ್ ಮತ್ತು ನೈಜಿರಿಯಾ ಭೀಕರ ಪ್ರವಾಹ
ಉತ್ತರ ಕೊರಿಯಾದಲ್ಲಾದಂತೆಯೇ ಜಪಾನ್ ಮತ್ತು ನೈಜಿರಿಯಾದಲ್ಲಿ ಭೀಕರ ಪ್ರವಾಹ ಉಂಟಾಗಿ ನೂರಾರು ಮಂದಿ ಸಾವನ್ನಪ್ಪಿದ್ದರು. ನೈಜಿರಿಯಾದಲ್ಲಿ ಕಳೆದ ಆಗಸ್ಟ್ ಮತ್ತು ಸೆಪ್ಟೆಂಬರ್ ತಿಂಗಳ ನಡುವೆ ಸಂಭವಿಸಿದ್ದ ಪ್ರವಾಹದಲ್ಲಿ 199 ಮಂದಿ ಸಾವಿಗೀಡಾಗಿದ್ದರು. ಸಾವಿರಕ್ಕೂ ಅಧಿಕ ಮಂದಿ ಗಾಯಗೊಂಡು, 1.92 ಮಿಲಿಯನ್ ಮಂದಿ ಪ್ರವಾಹಕ್ಕೆ ತುತ್ತಾಗಿದ್ದರು. ಐದು ಲಕ್ಷದ 60 ಸಾವಿರ ಮಂದಿಯನ್ನು ನಿರಾಶ್ರಿತ ಶಿಬಿರಕ್ಕೆ ರವಾನೆ ಮಾಡಲಾಗಿತ್ತು. ಅಂತೆಯೇ ಜುಲೈ ತಿಂಗಳ ಮಧ್ಯಭಾಗದಲ್ಲಿ ಜಪಾನ್ ನಲ್ಲಿ ಸಂಭವಿಸಿದ್ದ ಪ್ರವಾಹದಿಂದಾಗಿ ಕನಿಷ್ಠ 225 ಮಂದಿ ಸಾವನ್ನಪ್ಪಿ, ಬರೊಬ್ಬರಿ 850ಕ್ಕೂ ಹೆಚ್ಚು ಮನೆಗಳು ನೀರಿನಲ್ಲಿ ಕೊಚ್ಚಿ ಹೋಗಿದ್ದವು.
ಶತಮಾನದಲ್ಲೇ ಕಂಡು ಕೇಳರಿಯದ ಪ್ರವಾಹಕ್ಕೆ ಕೇರಳ ಸಾಕ್ಷಿಯಾಗಿತ್ತು. ದೇವರ ನಾಡು ಎಂದೇ ಖ್ಯಾತಿ ಪಡೆದಿದ್ದ ಕೇರಳದ ಶೇ.90ರಷ್ಟು ಭಾಗ ಪ್ರವಾಹದಲ್ಲಿ ಮುಳುಗಿತ್ತು. ಒಂದು ಲೆಕ್ಕದ ಪ್ರಕಾರ ಕೇರಳ ಪ್ರವಾಹದಲ್ಲಿ ಕನಿಷ್ಟ 400 ಮಂದಿ ಸಾವನ್ನಪ್ಪಿದ್ದು, ನೂರಾರು ಮಂದಿ ನಾಪತ್ತೆಯಾಗಿದ್ದರು. ಕೇರಳ ಪ್ರವಾಹವನ್ನು ಕೇಂದ್ರ ಸರ್ಕಾರ ರಾಷ್ಟ್ರೀಯ ವಿಪತ್ತು ಎಂದು ಘೋಷಣೆ ಮಾಡಿತ್ತು. 1924ರಬಳಿಕ ಕೇರಳದಲ್ಲಿ ಸಂಭವಿಸಿದ ಭೀಕರ ಪ್ರವಾಹ ಇದಾಗಿದ್ದು, ಪ್ರವಾಹದಿಂದಾಗಿ ಕೇರಳ ಸರ್ಕಾರಕ್ಕೆ 31 ಸಾವಿರ ಕೋಟಿ ರೂ.ನಷ್ಟವಾಗಿತ್ತು. 35 ಲಕ್ಷಕ್ಕೂ ಅಧಿಕ ಮಂದಿ ನಿರಾಶ್ರಿತರಾಗಿದ್ದರು. 3 ಸಾವಿರಕ್ಕೂ ಅಧಿಕ ಮನೆಗಳು ಪ್ರವಾಹಕ್ಕೆ ಕೊಚ್ಚಿ ಹೋಗಿದ್ದವು. ಕೇರಳ ಪ್ರವಾಹದಿಂದಾಗಿ ಅಲ್ಲಿನ ಕಾರ್ಖಾನೆಗಳು ಫ್ಯಾಕ್ಟರಿಗಳು ಒಂದು ತಿಂಗಳ ಸ್ಥಗಿತವಾಗಿತ್ತು. ಉದ್ಯಮವಲಯ ಸ್ಥಗಿತವಾಗಿ, ದೇಶದ ಆದಾಯಕ್ಕೆ ಶೇ.10ರಷ್ಟು ಹೊರೆ ಬಿದ್ದಿತು. ಶೇ.25ರಷ್ಟು ಉದ್ಯೋಗ ನಷ್ಟವಾಗಿತ್ತು.
ನವೆಂಬರ್ ನಲ್ಲಿ ಗ್ವಾಟೆಮಾಲಾದಲ್ಲಿ ಸಂಭವಿಸಿದ್ದ ಜ್ವಾಲಾಮುಖಿಯಿಂದಾಗಿ ಕನಿಷ್ಛ 200 ಮಂದಿ ಸಾವನ್ನಪ್ಪಿ, 235 ಮಂದಿ ನಾಪತ್ತೆಯಾಗಿದ್ದರು. ಸಾವಿರಾರು ಮಂದಿ ನೆಲೆ ಕಳೆದುಕೊಂಡು ಸಂತ್ರಸ್ಥರಾಗಿದ್ದರು. ಜ್ವಾಲಾಮುಖಿಯಿಂದಾಗಿ ಉಂಟಾದ ಹೊಗೆ ಇಡೀ ಆಗಸವನ್ನು ಆವರಿಸಿತ್ತು. ಆಗಸದಲ್ಲಿ ಸುಮಾರು 3200 ಅಡಿಗಳ ವರೆಗೂ ಹೊಗೆ ಅವರಿಸಿ ಸುತ್ತಮುತ್ತಲ ಪ್ರದೇಶವೇ ಕಾಣದಂತಾಗಿತ್ತು. ಜ್ವಾಲಾಮುಖಿಗೆ ಖ್ಯಾತಿ ಪಡೆದಿರುವ ಈ ಪ್ರದೇಶವನ್ನು ಯುನೆಸ್ಕೋ ವಿಶ್ವ ಪರಂಪರಿಕ ಸ್ಥಳಗಳ ಪಟ್ಟಿಗೆ ಸೇರಿಸಿದೆ.
ಕಳೆದ ಆಗಸ್ಟ್ 5 ರಂದು ಇಂಡೋನೇಷ್ಯಾದ ಲೊಂಬಾಕ್ ನಲ್ಲಿ ಸಂಭವಿಸಿದ್ದ 6.9 ತೀವ್ರತೆ ಭೂಕಂಪನದಿಂದಾಗಿ ಕನಿಷ್ಠ 500 ಮಂದಿ ಸಾವನ್ನಪ್ಪಿದ್ದರು. ಅಂತೆಯೇ 1500ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದರು. ಇದಕ್ಕೂ ಮುನ್ನ ಅಂದರೆ ಜೂನ್ ಜುಲೈ ತಿಂಗಳಿನಲ್ಲಿ ಸುಮಾತ್ರ ಮತ್ತು ಜಾವಾ ದ್ವೀಪಗಳಲ್ಲಿ ಭೂಕಂಪನ ಸಂಭವಿಸಿತ್ತಾದರೂ, ಲೊಂಬಾಕ್ ಭೂಕಂಪನದಲ್ಲಿ ಹೆಚ್ಚಿನ ಪ್ರಮಾಣದ ಹಾನಿಯಾಗಿತ್ತು. ಸುಲವೇಸಿಯಲ್ಲಿ ಸಂಭವಿಸಿದ್ದ ಭೂಕಂಪನದ ಬಳಿಕ ಈ ಪ್ರದೇಶದಲ್ಲಿ ಸುಮಾರು 100 ಅಧಿಕ ಲಘ ಕಂಪನಗಳು ಸಂಭವಿಸಿದ್ದವು. ಪರಿಣಾಮ ಇಲ್ಲಿನ ಬಾಲಿ, ಲೊಂಬಾಕ್ ನಲ್ಲೂ ಸಾಕಷ್ಟು ಸಾವು ನೋವು ಸಂಭವಿಸಿತ್ತು. ಈ ಭೂಕಂಪನದಿಂದಾಗಿ ಇಲ್ಲಿನ ಸುಮಾರು 440000 ಮಂದಿ ನಿರಾಶ್ರಿತರಾಗಿದ್ದರು.
ಇತ್ತೀಚೆಗಷ್ಟೇ ಅಂದರೆ ಡಿಸೆಂಬರ್ 23 ರಂದು ಇದೇ ಇಂಡೋನೇಷ್ಯಾದ ಜಾವಾ ಐಲೆಂಡ್ ನ ಸಮುದ್ರದಾಳದಲ್ಲಿ ಸಂಭವಿಸಿದ್ದ ಜ್ಲಾಲಾಮುಖಿ ಸ್ಫೋಟದಿಂದಾಗಿ ಸಂಭವಿಸಿದ್ದ ಸುನಾಮಿಯಿಂದಾಗಿ ಸುಮಾರು 400ಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದರು. ಜ್ವಾಲಾಮುಖಿ ಸ್ಫೋಟದ ಪರಿಣಾಮ ಉಂಟಾದ ಸಮುದ್ರದಲ್ಲಿ ಎದ್ದ ರಕ್ಕಸ ಅಲೆಗಳ ಪರಿಣಾಮ ದ್ವೀಪರಾಷ್ಟ್ರಕ್ಕೆ ಭೀಕರ ಸುನಾಮಿ ಅಪ್ಪಳಿಸಿದೆ. ಶನಿವಾರ ರಾತ್ರಿ 9.30ರ ಸುಮಾರು (ಸ್ಥಳೀಯ ಕಾಲಮಾನ) ತೀರ ಪ್ರದೇಶಕ್ಕೆ ಅಪ್ಪಳಿಸಿದೆ. ದಕ್ಷಿಣ ಸುಮಾತ್ರಾ ಮತ್ತು ಜಾವಾದ ಪಶ್ಚಿಮ ಭಾಗಕ್ಕೆ ಅಲೆಗಳು ಅಪ್ಪಳಿಸಿವೆ. ಅಲೆಗಳ ಹೊಡೆತಕ್ಕೆ ಸಿಲುಕಿ ನೂರಾರು ಕಟ್ಟಡಗಳು ಜಖಂಗೊಂಡಿದ್ದು, ಸ್ಫೋಟದ ತೀವ್ರತೆಗೆ ಸಮುದ್ರದೊಳಗೆ ಭೂಕುಸಿತ ಉಂಟಾಗಿದೆ ಮತ್ತು ಜಾವಾ ಮತ್ತು ಸುಮಾತ್ರ ನಡುವೆ ಸುಂದ ಸ್ತ್ರೈತ್ ಎಂಬಲ್ಲಿ ಸಣ್ಣ ದ್ವೀಪ ಉಂಟಾಗಿದೆ.
1883 ಸಮುದ್ರದಲ್ಲಿ ಜ್ವಾಲಾಮುಖಿ ಸ್ಫೋಟಿಸಿ ಅನಾಕ್ ಕ್ರಾಕಟೋ ದ್ವೀಪದಲ್ಲಿ ಜ್ವಾಲಾಮುಖಿ ಸೃಷ್ಟಿಯಾಗಿತ್ತು. ಆ ಸಂದರ್ಭದಲ್ಲಿ ದೊಡ್ಡ ಪ್ರಮಾಣದ ಸುನಾಮಿ ಉಂಟಾಗಿ ಸುಮಾರು 36 ಸಾವಿರ ಜನರು ಪ್ರಾಣ ಕಳೆದುಕೊಂಡಿದ್ದರು. ಆ ಬಳಿಕ 2004ರಲ್ಲಿ ಸುಮಾತ್ರಾ ಬಳಿ ಸಮುದ್ರದಲ್ಲಿ 9.3 ತೀವ್ರತೆಯ ಭೂಕಂಪನ ಉಂಟಾಗಿ ಸಮುದ್ರದಲ್ಲಿ ಎದ್ದ ಭೀಕರ ಸುನಾಮಿಯಿಂದ ಹಲವು ದೇಶಗಳಲ್ಲಿ 2,20,000 ಜನರು ಮೃತಪಟ್ಟಿದ್ದರು. ಇಂಡೋನೇಷ್ಯಾದಲ್ಲೇ 1,68,000 ಜನರು ಮೃತಪಟ್ಟಿದ್ದರು.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos