ವಿಶೇಷ

ಭಾರತಕ್ಕೆ ಮೊದಲ ಪ್ರಶಸ್ತಿ! ಹರಿಯಾಣದ ನಿಶ್ತಾ ದುಡೆಜಾಗೆ ಮಿಸ್ ಡೆಫ್ ಏಷ್ಯಾ ಕಿರೀಟ

Raghavendra Adiga
ನವದೆಹಲಿ: ಹರಿಯಾಣ ಮೂಲದ ನಿಶ್ತಾ ದುಡೆಜಾ  ಪ್ರೇಗ್ ನಲ್ಲಿ ನಡೆದ ಅಂತರಾಷ್ಟ್ರೀಯ  ಮಿಸ್ ಡೆಫ್(ಕಿವುಡ) ಏಷ್ಯಾ 2018 ಕಿರೀಟ ಮುಡಿಗೇರಿಸಿಕೊಂಡಿದ್ದಾರೆ. ಈ ಮೂಲಕ ಸಾಧನೆ ಮಾಡಬೇಕೆನ್ನುವ ಛಲವಿದ್ದರೆ ಅಂಗವೈಕಲ್ಯ ಅಡ್ಡಿಯಾಗದು ಎನ್ನುವುದನ್ನು ಸಾಬೀತು ಮಾಡಿದ್ದಾರೆ.
ಥೈವಾನ್, ಇಸ್ರೇಲ್, ಝೆಕ್ ರಿಪಬ್ಲಿಕ್, ಬೆಲಾರಸ್, ಮೆಕ್ಸಿಕೊ, ದಕ್ಷಿಣ ಆಫ್ರಿಕಾ, ಚೀನಾ ಸೇರಿ ಜಗತ್ತಿನ ನಾನಾ ದೇಶಗಳ ಅಭ್ಯರ್ಥಿಗಳು ಭಾಗವಹಿಸಿದ್ದ ಈ ಸ್ಪರ್ಧೆಯಲ್ಲಿ ಕಠಿಣ ಹೋರಾಟ ಎದುರಿಸಿ ನಿಶ್ತಾ ಈ ಪ್ರಶಸ್ತಿ ಜಯಿಸಿದ್ದು ಮಿಸ್ ಡೆಫ್ ವರ್ಲ್ಡ್ ಸ್ಪರ್ಧೆ ಬಹುಮಾನ ಪಡೆದ ಪ್ರಥಮ ಭಾರತೀಯಳು ಎನಿಸಿದ್ದಾರೆ.
ಜೆಕ್ ಗಣರಾಜ್ಯದ ಪ್ರೇಗ್ ನಲ್ಲಿ ಹದಿನೆಂಟನೇ ಆವೃತ್ತಿಯ ಮಿಸ್ ಮತ್ತು ಮಿಸ್ಟರ್ ಡೆಫ್ ವರ್ಲ್ಡ್-ಯುರೋಪ್-ಏಷ್ಯಾ ಬ್ಯೂಟಿಪೇಜೆಂಟ್ 2018 ಇತ್ತೀಚೆಗೆ ಜರುಗಿದೆ.
ಹರಿಯಾಣದ ಪ್ರಸಿದ್ದ ಕೈಗಾರಿಕಾ ಕೇಂದ್ರ ಪಾಣಿಪತ್ ನವರಾದ ನಿಸ್ಥಾ ತಮ್ಮ ಕಿವುಡುತನದಿಂದ ಎದೆಗುಂದದೆ ಸಾಧನೆಯ ಹಾದಿಯಲ್ಲಿ ನಡೆಯಲು ನಿರ್ಧರಿಸಿದ್ದರು."ನನ್ನ ಪೋಷಕರು ಎಂದೆಂದಿಗೂ ನನ್ನ ಸಹಾಯಕ್ಕಾಗಿ ಇದ್ದರು. ಅವರಿಗೆ ನಾನು ಮೊದಲು ಧನ್ಯವಾದ ಹೇಳುತ್ತೇನೆ. ಇದೀಗ ನಾನು ನನ್ನ ಸಾಮರ್ಥ್ಯಕ್ಕೆ ತಕ್ಕಂತೆ ಕಷ್ಟದಲ್ಲಿದ್ದವರಿಗೆ ಸಹಾಯ ಮಾಡಲು ಬಯಸುವೆ. ಅಂಗವೈಕಲ್ಯವಿದ್ದ ಮಾತ್ರಕ್ಕೆ ನಮ್ಮಗಳಿಗೆ ಕರುಣೆ ತೋರುವ ಅಗತ್ಯವಿಲ್ಲ. ನಾವುಗಳು ಏನು ಎನ್ನುವುದನ್ನು ತೋರಿಸಲು ನಮಗೆ ಸಮಾನ ಅವಕಾಶಗಳು ದೊರೆಯಬೇಕು" 23 ವರ್ಷದ ನಿಸ್ಥಾ ಹೇಳಿದ್ದಾರೆ.
ನಿಸ್ಥಾ ದೆಹಲಿ ವಿಶ್ವವಿದ್ಯಾನಿಲಯದ ವೆಂಕಟೇಶ್ವರ ಕಾಲೇಜಿನ ವಾಣಿಜ್ಯ ಪದವೀಧರರಾಗಿದ್ದು, ಮುಂಬೈ ವಿಶ್ವವಿದ್ಯಾಲಯದ ಮಿಥಿಬಾಯಿ ಕಾಲೇಜಿನಲ್ಲಿ ಅರ್ಥಶಾಸ್ತ್ರ ಎಂಎ ವ್ಯಾಸಂಗ ಮಾಡುತ್ತಿದ್ದಾರೆ.
ಇದಕ್ಕೆ ಮುನ್ನ  ಈ ವರ್ಷ ಫೆಬ್ರವರಿ 26 ನಡೆದ ಸ್ಪರ್ಧೆಯಲ್ಲಿ ನಿಸ್ಥಾ ಮಿಸ್ ಡೆಫ್ ಇಂಡಿಯಾ ಪ್ರಶಸ್ತಿ ಜಯಿಸಿ ಸಾಧನೆ ಮಾಡಿದ್ದರು.
SCROLL FOR NEXT