ವಿಶೇಷ

1971ರ ಇಂಡೋ-ಪಾಕ್ ಯುದ್ಧ, ಬಾಂಗ್ಲಾದೇಶ ಉದಯ: ಏನಿದು ವಿಜಯ್ ದಿವಸ್ ಸಂಭ್ರಮ? ಇಲ್ಲಿದೆ ಮಾಹಿತಿ...

Manjula VN

1971ರ ಯುದ್ಧದಲ್ಲಿ ಪಾಕಿಸ್ತಾನದ ವಿರುದ್ಧ ಭಾರತದ ವಿಜಯದ ನೆನಪಿಗಾಗಿ ರಾಷ್ಟ್ರವು ಇಂದು ವಿಜಯ್ ದಿವಸ್ ಅನ್ನು ಆಚರಿಸುತ್ತದೆ. ಈ ದಿನದಂದು ಯುದ್ಧದ ಸಮಯದಲ್ಲಿ ಪ್ರಾಣ ತ್ಯಾಗ ಮಾಡಿದ ಹುತಾತ್ಮರಿಗೆ ಹಲವೆಡೆ ಗೌರವ ನಮನ ಸಲ್ಲಿಸಲಾಗುತ್ತಿದೆ. 

1971ಕ್ಕೂ ಮೊದಲು ಬಾಂಗ್ಲಾದೇಶ ಪಾಕಿಸ್ತಾನದ ಭಾಗವಾಗಿತ್ತು. ಆಗ ಅದನ್ನು ಪೂರ್ವ ಪಾಕಿಸ್ತಾನ ಎಂದು ಕರೆಯಲಾಗುತ್ತಿತ್ತು. ಆದರೆ ಪೂರ್ವ ಪಾಕಿಸ್ತಾನದಲ್ಲಿ ಸೇನಾಪಡೆ ಅಲ್ಲಿನ ಜನರ ಮೇಲೆ ಅತ್ಯಾಚಾರ, ಕೊಲೆ, ಸುಲಿಗೆ ನಡೆಸುತ್ತಿದ್ದರು. ಇದರಿಂದಾಗಿ ಒಂಬತ್ತು ಮಿಲಿಯನ್ ನಿರಾಶ್ರಿತರು ಭಾರತದೊಳಕ್ಕೆ ನುಸುಳುವಂತೆ ಆಗಿತ್ತು. ಈ ವೇಳೆ ಪೂರ್ವ ಪಾಕಿಸ್ತಾನದಲ್ಲಿ ಪಾಕ್ ಸೇನೆ ನಡೆಸುತ್ತಿದ್ದ ಕೃತ್ಯವನ್ನು ವಿರೋಧಿಸಿದ ಬಾಂಗ್ಲಾದೇಶಕ್ಕೆ ಭಾರತ ಬೆಂಬಲ ನೀಡಿತ್ತು.

ಬಾಂಗ್ಲಾದೇಶ ವಿಮೋಚನೆಗೆ ಭಾರತ ಬೆಂಬಲ ನೀಡಿದ್ದು, ಪಾಕಿಸ್ತಾನದ ಸೇನಾ ಆಡಳಿತಗಾರ ಜನರಲ್ ಅಯೂಬ್ ಖಾನ್ ಗೆ ತೀವ್ರ ಹಿನ್ನಡೆಯಾದಂತಾಗಿತ್ತು. ಅಲ್ಲದೇ 1971ರ ಡಿಸೆಂಬರ್ 3ರಂದು ಪೂರ್ವ ಪಾಕಿಸ್ತಾನದ ಜನರನ್ನು ರಕ್ಷಿಸುವ ನಿಟ್ಟನಲ್ಲಿ ಪಾಕಿಸ್ತಾನದ ವಿರುದ್ಧ ಸಮರ ನಡೆಸಲು ಸಜ್ಜಾಗಿ ಎಂದು ಭಾರತೀಯ ಸೇನೆಗೆ ಭಾರತದ ಸರ್ಕಾರ ಆದೇಶ ನೀಡಿತ್ತು.

ಬಂಗಾಳಿ ಮುಸ್ಲಿಮರು ಮತ್ತು ಹಿಂದೂಗಳನ್ನು ರಕ್ಷಿಸುವ ನಿಟ್ಟಿನಲ್ಲಿ 1971ರ ಡಿಸೆಂಬರ್ 03ರಂದು ಪಾಕಿಸ್ತಾನದ ವಿರುದ್ಧ ಯುದ್ಧ ನಡೆಸಲು ಭಾರತ ಸರ್ಕಾರ ನಿರ್ಧಾರ ತೆಗೆದುಕೊಂಡಿತ್ತು. ಕೇವಲ 13 ದಿನಗಳ ಕಾಲ ಭಾರತ ಮತ್ತು ಪಾಕ್ ಯೋಧರ ನಡುವೆ ಸಮರ ನಡೆದಿತ್ತು. ಕೊನೆಗೂ ಧೀರ ಭಾರತೀಯ ಯೋಧರ ಶಕ್ತಿಯ ಮುಂದೆ ಪಾಕ್ ಸೇನೆ ಮಂಡಿಯೂರಿತ್ತು. 

1971ರ ಡಿಸೆಂಬರ್ 16ರಂದು (ಈ ದಿನದಂದು), ಪಾಕಿಸ್ತಾನ ಸೇನಾ ಮುಖ್ಯಸ್ಥ ಜನರಲ್ ಎಎ ಖಾನ್ ನಿಯಾಜಿ ಮತ್ತು 93 ಸಾವಿರ ಸೈನಿಕರು ಭಾರತೀಯ ಸೇನೆ ಮತ್ತು ಮುಕ್ತಿ ಬಹಿನಿ ಒಳಗೊಂಡ ಮಿತ್ರ ಪಡೆಗಳಿಗೆ ಬೇಷರತ್ತಾಗಿ ಶರಣಾಗಿದ್ದರು. ಯುದ್ಧದಲ್ಲಿ ಗೆಲುವು ಸಾಧಿಸುವ ಮೂಲಕ ಬಾಂಗ್ಲಾದೇಶ ಜನ್ಮತಳೆದಿತ್ತು. ಈ ಯುದ್ಧದ ಅಂತ್ಯದ ಬಳಿಕ ಪೂರ್ವ ಪಾಕಿಸ್ತಾನವನ್ನು ಬಾಂಗ್ಲಾದೇಶ ಎಂಬ ಪ್ರತ್ಯೇಕ ರಾಷ್ಟ್ರವನ್ನಾಗಿ ಮಾಡಲಾಯಿತು. 

ಕೋಲ್ಕತ್ತಾದಲ್ಲಿ ವಿಜಯ್‌ ದಿವಸ್‌ ದಿನವನ್ನು ಗುರುತಿಸಲು ಈಸ್ಟರ್ನ್ ಕಮಾಂಡ್‌ನ ಹೆಡ್ ಕ್ವಾರ್ಟರ್ಸ್ ಫೋರ್ಟ್ ವಿಲಿಯಂನಲ್ಲಿರುವ ‘ವಿಜಯ್ ಸ್ಮಾರಕ್’ ನಲ್ಲಿ ಮಾಲಾರ್ಪಣೆ ಸಮಾರಂಭ ನಡೆಯಲಿದೆ. ಇದು ಭಾರತದ ಇತಿಹಾಸದಲ್ಲಿ ಒಂದು ಹೆಗ್ಗುರುತು ಘಟನೆಯಾಗಿದೆ. 

ಏಕೆಂದರೆ ಇದು ಮಿಲಿಟರಿ ಕಾರ್ಯಾಚರಣೆಯಿಂದ ಬೆಂಬಲಿತವಾದ ಜನರ ಆಕಾಂಕ್ಷೆಗಳಿಗೆ ಅತ್ಯುತ್ತಮ ಉದಾಹರಣೆಯಾಗಿದೆ. ಇದರ ಪರಿಣಾಮವಾಗಿ ಬಾಂಗ್ಲಾದೇಶವೆಂಬ ಹೊಸ ರಾಷ್ಟ್ರದ ಜನನವಾಯಿತು. ಯುದ್ಧದಲ್ಲಿ ಮುಂಚೂಣಿಯಲ್ಲಿದ್ದ ಈಸ್ಟರ್ನ್ ಕಮಾಂಡ್ ಡಿಸೆಂಬರ್ 14 ರಿಂದ ಕೋಲ್ಕತ್ತಾದಲ್ಲಿ 3 ದಿನಗಳ ಕಾರ್ಯಕ್ರಮಗಳನ್ನು ಆಯೋಜಿಸಿದೆ. 

ಈ ಅವಧಿಯಲ್ಲಿ ಈ ಅದ್ಭುತ ವಿಜಯದ ನೆನಪಿಗಾಗಿ ಹಲವಾರು ಕಾರ್ಯಕ್ರಮಗಳು ನಡೆಯುತ್ತಿವೆ. ಸಂಭ್ರಮಾಚರಣೆಯಲ್ಲಿ ಬಾಂಗ್ಲಾದೇಶದ ‘ಮುಕ್ತಿ ಜೋದ್ಧಾಸ್’ಮತ್ತು ಭಾರತೀಯ ಯುದ್ಧ ಪರಿಣತರನ್ನು ಒಳಗೊಂಡ ಗಣ್ಯರ ನಿಯೋಗ ಭಾಗವಹಿಸುತ್ತಿದೆ. 

ವಿಜಯ್ ದಿವಸ್’ ನಮ್ಮ ಕೆಚ್ಚೆದೆಯ ಸೈನಿಕರನ್ನು ಸ್ಮರಣೆ ಮಾಡುವ ದಿನವಾಗಿದ್ದು, ಉದಾತ್ತ ಉದ್ದೇಶಕ್ಕಾಗಿ ತಮ್ಮ ಪ್ರಾಣವನ್ನು ತ್ಯಾಗ ಮಾಡಿದ ‘ಮುಕ್ತಿ ಜೋದ್ಧಾಸ್’ಮತ್ತು ಬಾಹ್ಯ ಶತ್ರುಗಳ ಯಾವುದೇ ದಾಳಿಯಿಂದ ನಮ್ಮ ಮನೆಯ ಭೂಮಿಯನ್ನು ಉಳಿಸಲು ವಾಗ್ದಾನ ಮಾಡಿದ ದಿನವೂ ಆಗಿದೆ.

SCROLL FOR NEXT