ವಿಶೇಷ

ಮರಗಿಡಗಳನ್ನು ಪ್ರೀತಿಸಿ, ಪೋಷಿಸಿದ ತುಳಸಿ ಗೌಡ ‘ಪದ್ಮಶ್ರೀ’ ಪ್ರಶಸ್ತಿಗೆ ಆಯ್ಕೆ

Srinivasamurthy VN

ಶಿವಮೊಗ್ಗ: ಮರಗಿಡಗಳು ಮತ್ತು ಗಿಡಮೂಲಿಕೆಗಳನ್ನು ಪ್ರೀತಿಸಿ, ಪೋಷಿಸಿದ ಜಿಲ್ಲೆಯ ತುಳಸಿ ಗೌಡ ಅವರು ದೇಶದ ಅತ್ಯುನ್ನತ ನಾಗರಿಕ ಪುರಸ್ಕಾರಗಳಲ್ಲಿ ಒಂದಾದ ಪದ್ಮಶ್ರೀ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. 
  
ಉತ್ತರ ಕನ್ನಡ ಜಿಲ್ಲೆಯ ಅಂಕೋಲ ತಾಲ್ಲೂಕಿನ ಹೊನ್ನಲ್ಲಿ ಗ್ರಾಮದ  ತುಳಸಿ ಗೌಡ ಅವರು ಇದುವರೆಗೆ 40,000 ಕ್ಕೂ ಹೆಚ್ಚು ಮರಗಳನ್ನು ಪೋಷಿಸಿದ್ದಾರೆ. 72 ವರ್ಷದ ಇಳಿ ವಯಸ್ಸಿನಲ್ಲಿಯೂ ಸಹ, ಸಸಿಗಳನ್ನು ನೆಟ್ಟು, ಅವು ಮರಗಳಾಗಿ ಬೆಳೆಯುವವರೆಗೂ ತನ್ನದೇ ಮಕ್ಕಳಂತೆ ಅವುಗಳನ್ನು ಪೋಷಿಸುತ್ತಾ ಬಂದಿದ್ದಾರೆ.

ತುಳಸಿ ಕಳೆದ ಆರು ದಶಕಗಳಿಂದ ಈ ಕೆಲಸವನ್ನು ಯಾವುದೇ ಪ್ರತಿಫಲ ನಿರೀಕ್ಷೆ ಇಲ್ಲದೆ ಮಾಡುತ್ತಿದ್ದಾರೆ. ಸ್ಥಳೀಯರು ಹೇಳುವಂತೆ ತುಳಸಿ ಅವರು, ಅರಣ್ಯ ಇಲಾಖೆ ನಡೆಸಿದ ಅರಣ್ಯೀಕರಣ ಕಾರ್ಯಕ್ರಮದಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದರು. ಅವರ ಸೇವೆಯನ್ನು ಗುರುತಿಸಿ, ಇಲಾಖೆ ಅವರ ಸೇವೆಯನ್ನು ಕ್ರಮಬದ್ಧಗೊಳಿಸಿತ್ತು.  14 ವರ್ಷಗಳ ನಂತರ, ಅವರು ಸೇವೆಯಿಂದ ನಿವೃತ್ತರಾದರು. ಪಿಂಚಣಿ ಅವರ ಜೀವನೋಪಾಯದ ಏಕೈಕ ಮೂಲವಾಗಿದೆ.

ತುಳಸಿ ಅವರಿಗೆ  ತಾನು ನೆಟ್ಟ ಪ್ರತಿಯೊಂದು ಸಸಿಗಳ ಜಾತಿ, ಪ್ರತಿ ಸಸ್ಯದ ಪ್ರಯೋಜನಗಳು ಮತ್ತು ಅವುಗಳನ್ನು ಬೆಳೆಯಲು ಬೇಕಾದ ನೀರಿನ ಪ್ರಮಾಣಗಳ ಬಗ್ಗೆ ಆಳವಾದ ಜ್ಞಾನವಿದೆ. ಸಸ್ಯಗಳ ಬಗ್ಗೆ ಅವರಿಗಿರುವ ಜ್ಞಾನವು ಯಾವುದೇ ಸಸ್ಯವಿಜ್ಞಾನಿಗಿಂತ ಕಡಿಮೆಯಿಲ್ಲ. ಕಾಡುಗಳ ಸಂರಕ್ಷಣೆಯ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ತುಳಸಿ ಗೌಡ ಅವರು ಯಾವುದೇ ಪ್ರಯತ್ನಕ್ಕೆ ಕೈ ಹಾಕಿದ್ದಾರೆ. ಅಂಕೋಲ, ಯಲ್ಲಾಪುರ ಮತ್ತು ಸಿರಸಿ ತಾಲ್ಲೂಕುಗಳಲ್ಲಿ ಇಲಾಖೆಯಲ್ಲಿ ಕೆಲಸ ಮಾಡುವಾಗ ಅವರು ನೆಟ್ಟ ಸಸಿಗಳು ಈಗ ದೊಡ್ಡ ಮರಗಳಾಗಿ ಬೆಳೆದಿವೆ.
  
ತುಳಸಿ ಅವರು ಜನಿಸಿದ್ದು ಬಡತನದಿಂದ ಬಳಲುತ್ತಿದ್ದ ಹಾಲಕ್ಕಿ ಬುಡಕಟ್ಟು ಕುಟುಂಬದಲ್ಲಿ. ಅವರು  ಕೇವಲ ಎರಡು ವರ್ಷದಲ್ಲಿದ್ದಾಗ ಅವರ ತಂದೆಯ ಸಾವು ಅವರನ್ನು ತೀವ್ರವಾಗಿ ಬಾಧಿಸಿದೆ. ಬಳಿಕ ಅವರಿಗೆ ಯಾವುದೇ ಔಪಚಾರಿಕ ಶಿಕ್ಷಣ ಸಿಗಲಿಲ್ಲ. ಬಡತನವು ಬಾಲ್ಯದಿಂದಲೂ ದೈನಂದಿನ ಕೂಲಿ ಕಾರ್ಮಿಕರಾದ ತನ್ನ ತಾಯಿಯೊಂದಿಗೆ ಕೆಲಸ ಮಾಡಲು ಪ್ರೇರೇಪಿಸಿತು. ತುಳಸಿ ಚಿಕ್ಕ ವಯಸ್ಸಿನಲ್ಲಿಯೇ ಗೋವಿಂದ ಗೌಡ ಅವರನ್ನು ವಿವಾಹವಾದರು. ಆದರೆ ಅವರು ಕೆಲವೇ ವರ್ಷಗಳಲ್ಲಿ ನಿಧನರಾದರು. ಎಲ್ಲ ದುರ್ಘಟನೆಗಳನ್ನು ಧೈರ್ಯದಿಂದ ಎದುರಿಸಿ ಇಡೀ ರಾಷ್ಟ್ರಕ್ಕೆ ಮಾದರಿಯಾಗಿರುವ ಜೀವನವನ್ನು ನಡೆಸಿದ್ದಾರೆ.

SCROLL FOR NEXT