ವಿಶೇಷ

ಇಂಧನ ಬೆಲೆಯೇರಿಕೆ ಬಿಸಿಯಿಂದ ತಪ್ಪಿಸಿಕೊಳ್ಳಲು ಅಸಲಿ 'ಹಾರ್ಸ್ ಪವರ್' ಮೊರೆ ಹೋದ ಫಾರೆಸ್ಟ್ ವಾಚರ್

Harshavardhan M

ಚಿತ್ರದುರ್ಗ: ತೈಲ ಬೆಲೆ ನೂರರ ಗಡಿ ದಾಟಿರುವ ಬೆನ್ನಲ್ಲೇ ಜನರು ಹಣ ಉಳಿಸಲು ನಾನಾ ಥರದ ಮಾರ್ಗಗಳಿಗೆ ಮೊರೆ ಹೋಗುತ್ತಿದ್ದಾರೆ. ಅದಕ್ಕೊಂದು ಉತ್ತಮ ನಿದರ್ಶನ ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ವಿಭಾಗದಲ್ಲಿ ಫಾರೆಸ್ಟ್ ವಾಚರ್ ಆಗಿ ಸೇವೆ ಸಲ್ಲಿಸುತ್ತಿರುವ ಗುಳ್ಳಪ್ಪ.

ಗುಳ್ಳಪ್ಪ ಅವರು ತಮ್ಮ ಸುಪರ್ದಿಯಲ್ಲಿರುವ ಅರಣ್ಯ ಪ್ರದೇಶವನ್ನು ಪಹರೆ ಕಾಯಲು ಕುದುರೆಯನ್ನು ಬಳಸುತ್ತಿದ್ದಾರೆ. ಕುದುರೆಯನ್ನು ನಿರ್ವಹಣೆ ಮಾಡುವುದು ವಾಹನವನ್ನು ನಿರ್ವಹಿಸುವುದಕ್ಕಿಂತಲೂ ಸುಲಭ ಎನ್ನುವುದು ಅವರ ಅನುಭವದ ಮಾತು. 

ಅವರು ಕರ್ತವ್ಯದಲ್ಲಿದ್ದಾಗ ಕುದುರೆ ಹುಲ್ಲು ಮೇಯುತ್ತಿರುತ್ತದೆ. ಕರ್ತವ್ಯ ಮುಗಿಸಿ ಹೊರಡಲನುವಾದಾಗ ಕುದುರೆಯೂ ಸಿದ್ಧವಾಗುತ್ತದೆ ಎನ್ನುತ್ತಾರೆ ಅವರು. ಗುಳ್ಳಪ್ಪ ಅವರ ಈ ಪರಿಸರಸ್ನೇಹಿ ಮಾರ್ಗ ಮೇಲಧಿಕಾರಿಗಳ ಮೆಚ್ಚುಗೆಗೆ ಪಾತ್ರವಾಗಿದೆ. 

ಗುಳ್ಳಪ್ಪ ಅವರು ಒಂದು ವರ್ಷದ ಹಿಂದೆ ಕುರಿಗಾಯಿಯೊಬ್ಬನಿಂದ ಈ ಕುದುರೆಯನ್ನು 3,000 ರೂ.ಗಳಿಗೆ ಕೊಂಡುಕೊಂಡಿದ್ದ. ದೈನಂದಿನ ಖರ್ಚುವೆಚ್ಚಗಳನ್ನು ಸರಿದೂಗಿಸುವ ಉದ್ದೇಶದಿಂದ ಕುದುರೆಯನ್ನು ಅವರು ಕೊಂಡಿದ್ದರು. 

ದ್ವಿಚಕ್ರ ವಾಹನಕ್ಕೆ ಇಂಧನ ತುಂಬಿಸಲು ಗುಳ್ಳಪ್ಪ ಅವರಿಗೆ ಹಣದ ಕೊರತೆ ಎದುರಾಗಿತ್ತು. ಕುದುರೆಯನ್ನು ಬಳಸಬಾರದು ಎನ್ನುವ ನಿಯಮವೇನು ಇಲ್ಲ ಎಂದು ಹಿರಿಯ ಅರಣ್ಯಾಧಿಕಾರಿಗಳು ಹೇಳಿದ್ದಾರೆ. ಆದರೆ ಈ ಹಿಂದೆ ಬಂಡೀಪುರದ ರೇಂಜ್ ಆಫೀಸರ್ ಪುಟ್ಟರಾಜು ಅವರು ಕುದುರೆಯನ್ನು ಸಾಕಿರುವುದಕ್ಕೆ ಇಲಾಖೆಯಲ್ಲಿಯೇ ಆಕ್ಷೇಪ ವ್ಯಕ್ತವಾಗಿತ್ತು ಎನ್ನುವುದು ಗಮನಾರ್ಹ. 

ಪುಟ್ಟರಾಜು ಅವರು ಈ ಬಗ್ಗೆ ಅನುಮತಿ ಪಡೆದಿಲ್ಲದಿರುವುದೇ ವಿವಾದಕ್ಕೆ ಕಾರಣ ಎನ್ನುವ ಮಾತುಗಳೂ ಇವೆ. ಇರಲಿ, ಸೆಂಚುರಿ ಬಾರಿಸಿರುವ ತೈಲ ದರದ ಹೊಡೆತದಿಂದ ತಪ್ಪಿಸಿಕೊಳ್ಳಲು ಗುಳ್ಳಪ್ಪ ಅವರಿಗೆ ಕುದುರೆ ಸಹಾಯ ಮಾಡುತ್ತಿರುವುದು ಅಚ್ಚರಿಯೇ ಸರಿ. ಮುಂಬರುವ ದಿನಗಳಲ್ಲಿ ಜನಸಾಮಾನ್ಯರು ಕೂಡಾ ತಂತಮ್ಮ ವಾಹನಗಳನ್ನು ಮನೆಯಲ್ಲೇ ಬಿಟ್ಟು, ಕುದುರೆ, ಟಾಂಗಾ ಗಾಡಿಗಳ ಬಳಕೆ ಮಾಡಿದರೆ ಅಚ್ಚರಿಯಿಲ್ಲ. 

SCROLL FOR NEXT