ಮೀರಾಬಾಯಿ ಚಾನು 
ವಿಶೇಷ

ಸೌದೆ ಹೊರುತ್ತಿದ್ದ ಕೈಯಿಂದ ವೇಟ್ ಲಿಫ್ಟಿಂಗ್ ವರೆಗೆ: 'ಬೆಳ್ಳಿ ರೇಖೆ' ಸೃಷ್ಟಿಸಿದ ಮೀರಾಬಾಯಿ ರೋಚಕ ಪಯಣ!

ಈಕೆಯ ಜೀವನದಲ್ಲಿ ಜುಲೈ 24, 2021 ಮರೆಯಲಾರದ ದಿನ. ದೇಶದ ಕ್ರೀಡಾ ಇತಿಹಾಸದಲ್ಲಿ ಒಲಿಂಪಿಕ್ ಗೇಮ್ ಇತಿಹಾಸದಲ್ಲಿ ಈಕೆಯ ಹೆಸರು ಅಚ್ಚಳಿಯದೆ ಬರೆದಾಗಿದೆ.

ಮಣಿಪುರ/ನವದೆಹಲಿ: ಈಕೆಯ ಜೀವನದಲ್ಲಿ ಜುಲೈ 24, 2021 ಮರೆಯಲಾರದ ದಿನ. ದೇಶದ ಕ್ರೀಡಾ ಇತಿಹಾಸದಲ್ಲಿ ಒಲಿಂಪಿಕ್ ಗೇಮ್ ಇತಿಹಾಸದಲ್ಲಿ ಈಕೆಯ ಹೆಸರು ಅಚ್ಚಳಿಯದೆ ಬರೆದಾಗಿದೆ.

ಒಲಿಂಪಿಕ್ ಇತಿಹಾಸದಲ್ಲಿ ವೇಟ್ ಲಿಫ್ಟಿಂಗ್ ವಿಭಾಗದಲ್ಲಿ ಭಾರತಕ್ಕೆ ಬೆಳ್ಳಿ ಪದಕ ಗೆದ್ದ ಮೊದಲ ವನಿತೆ. 2000ನೇ ಇಸವಿಯಲ್ಲಿ ಸಿಡ್ನಿ ಒಲಿಂಪಿಕ್ಸ್ ನಲ್ಲಿ ಕರ್ಣಂ ಮಲ್ಲೇಶ್ವರಿ ಕಂಚಿನ ಪದಕವನ್ನು ದೇಶಕ್ಕೆ ಗೆದ್ದು ತಂದಿದ್ದರು. ಆ ಬಳಿಕ ಒಲಿಂಪಿಕ್ಸ್ ನಲ್ಲಿ ಪದಕ ತಂದ ಎರಡನೇ ಮಹಿಳಾ ಸ್ಪರ್ಧಿ ಈ ಮೀರಾಬಾಯಿ ಚಾನು.

ಈ ಬಾರಿಯ ಕೊರೋನಾ ಕರಿನೆರಳಿನ ಹಿನ್ನೆಲೆಯಲ್ಲಿ ಸೈಕೊಮ್ ಮೀರಾಬಾಯಿ ಚಾನು ಮುಖದಲ್ಲಿ ಕಂಡ ಸಂತಸದ ನಗು, ಕೊರಳಿಗೆ ವಿಜಯ ಮಾಲೆ ಹಾಕಿಸಿಕೊಂಡು, ಪೋಡಿಯಂನಲ್ಲಿ ನಿಂತು ಬೆಳ್ಳಿ ಪದಕ ಹಾಕಿಸಿಕೊಂಡಾಗ ಮುಖದಲ್ಲಿನ ಹರ್ಷ ಮಾಸ್ಕ್ ಧರಿಸಿದ್ದ ಎದ್ದುಕಾಣಲಿಲ್ಲವಾದರೂ ಸಂತಸ, ಸಂಭ್ರಮಕ್ಕೇನೂ ಕೊರತೆಯಿಲ್ಲ, ಇಂದು ಗುರು ಪೂರ್ಣಿಮೆ ದಿನ ಇಡೀ ಭಾರತ ಆಕೆಯನ್ನು ಕೊಂಡಾಡುತ್ತಿದೆ. 

ಮಣಿಪುರ ಮೂಲದ 26 ವರ್ಷದ ಮೀರಾಬಾಯಿ ಚಾನು ಮೊದಲ ಬಾರಿಗೆ ಒಲಿಂಪಿಕ್ ಸ್ಪರ್ಧೆಯಲ್ಲಿ ಕಾಣಿಸಿಕೊಂಡಿದ್ದು 2016ರಲ್ಲಿ ರಿಯೊ ಡಿ ಜನೈರೊದಲ್ಲಿ. ಆಗ ಆಕೆಗೆ ಕೇವಲ 21 ವರ್ಷ. 5 ವರ್ಷಗಳ ಹಿಂದೆ 48 ಕೆ ಜಿ ವಿಭಾಗದ ವೇಟ್ ಲಿಫ್ಟಿಂಗ್ ನಲ್ಲಿ ಪರಾಜಯಗೊಂಡಿದ್ದರು.

ಕ್ಲೀನ್ ಮತ್ತು ಜರ್ಕ್ ಸುತ್ತಿನಲ್ಲಿ 2016ರಲ್ಲಿ ತನ್ನ ಮೊದಲ ಪ್ರಯತ್ನದಲ್ಲಿ 104 ಕೆಜಿ ಎತ್ತುವಲ್ಲಿ ವಿಫಲವಾದ ನಂತರ, 106 ಕೆಜಿ ತೆಗೆದುಕೊಳ್ಳುವ ಪ್ರಯತ್ನದಲ್ಲಿ ಸಹ ಎರಡನೇ ಬಾರಿ ವಿಫಲರಾಗಿದ್ದರು. ಹೀಗಾಗಿ 12 ಮಂದಿಯಲ್ಲಿ ಕೇವಲ ಎರಡು ಮಂದಿ ಮಾತ್ರ ವೇಟ್ ಲಿಫ್ಟ್ ಮಾಡಿದ್ದರಿಂದ ಮೀರಾಬಾಯಿ ಅಂದು ಮುಗಿಸಲಿಲ್ಲ ಎಂಬ ಹಣೆಪಟ್ಟಿ (Did Not Finish-DNF) ಹೊತ್ತು ದೇಶಕ್ಕೆ ಮರಳಿದ್ದರು.

ಅಂದು ಮೀರಾಬಾಯಿ ಕಣ್ಣಲ್ಲಿ ದುಃಖದ ಕಣ್ಣೀರು ಧಾರಾಕಾರವಾಗಿ ಇಳಿದಿತ್ತು. ಆದರೆ ಹಠ, ಛಲ, ಕನಸನ್ನು ಬೆನ್ನತ್ತಿ ಹೋಗುವ ಮನಸ್ಸು ಮಾತ್ರ ಕಮರಿರಲಿಲ್ಲ. 2017ರಲ್ಲಿ 48 ಕೆಜಿ ವಿಭಾಗದಲ್ಲಿ ಚಿನ್ನದ ಪದಕ ಗಳಿಸಿ ವಿಶ್ವ ಚಾಂಪಿಯನ್ ಆದರು. ಅದು ಯುಎಸ್ ಎಯ ಅನಹೈಮ್ ನಲ್ಲಿ ನಡೆದಿದ್ದ ವಿಶ್ವ ವೇಟ್ ಲಿಫ್ಟಿಂಗ್ ಚಾಂಪಿಯನ್ ಷಿಪ್ ನಲ್ಲಿ.

ಅಲ್ಲಿಂದ ಅವರ ಗೆಲುವಿನ ಓಟ ಮುಂದುವರಿಯಿತು. 2018ರಲ್ಲಿ ಆಸ್ಟ್ರೇಲಿಯಾದ ಗೋಲ್ಡ್ ಕೋಸ್ಟ್ ನಲ್ಲಿ ನಡೆದ ಕಾಮನ್ ವೆಲ್ತ್ ಗೇಮ್ ನಲ್ಲಿ ಚಿನ್ನದ ಪದಕ ಗಳಿಸಿದರು. ಒಟ್ಟು 196 ಕೆಜಿ ತೂಕ ಎತ್ತಿ ಅಂದು ಚಿನ್ನದ ಪದಕ ಗೆದ್ದಿದ್ದರು.

ಬಾಲ್ಯ: ಮೀರಾಬಾಯಿ ಚಾನು ಹುಟ್ಟಿದ್ದು ಮಣಿಪುರದ ರಾಜಧಾನಿ ಇಂಫಾಲ್ ನಿಂದ 200 ಕಿಲೋ ಮೀಟರ್ ದೂರದಲ್ಲಿರುವ ನಾಂಗ್ಪೋಕ್ ಕಾಚಿಂಗ್ ಎಂಬ ಒಂದು ಹಳ್ಳಿಯಲ್ಲಿ 1994ರ ಆಗಸ್ಟ್ 8ರಂದು.

12 ವರ್ಷದವಳಾಗಿದ್ದಾಗಲೇ ಮೀರಾಬಾಯಿಯ ಶಕ್ತಿ, ಸಾಮರ್ಥ್ಯವನ್ನು ಆಕೆಯ ಮನೆಯವರು ಗುರುತಿಸಿದ್ದರಂತೆ. ಮನೆಯ ಹತ್ತಿರ ಗುಡ್ಡ, ಬೆಟ್ಟಕ್ಕೆ ಸೌದೆ ತರಲು ಹೋದರೆ ಉರುವಲಿನ ದೊಡ್ಡ ಕಟ್ಟವನ್ನು ಆಕೆಯ ಹಿರಿಯ ಸೋದರರು ಹೊತ್ತುಕೊಂಡು ಬರಲು ಹೆಣಗಾಡುತ್ತಿದ್ದರೆ ಈ ಬಾಲಕಿ ಸುಲಭವಾಗಿ ತನ್ನ ತಲೆಯಲ್ಲಿ ಹೊತ್ತು ತರುತ್ತಿದ್ದಳಂತೆ.ಅಂದರೆ ಬೆಳೆಯುವ ಸಿರಿ ಮೊಳಕೆಯಲ್ಲಿ ಎಂಬಂತೆ ಆಗಲೇ ಭಾರ ಎತ್ತುವ ಶಕ್ತಿ, ಸಾಮರ್ಥ್ಯ ಆಕೆಗಿತ್ತು.

ಈಕೆಯಲ್ಲಿನ ಪ್ರತಿಭೆ ಗುರುತಿಸಿ ವೇಟ್ ಲಿಫ್ಟಿಂಗ್ ಗೆ ಸೇರಲು ಹೇಳಿದ್ದೇ ಸೋದರನಂತೆ. ಮನೆಯಿಂದ ಆಗಾಗ ಬೆಟ್ಟ ಹತ್ತಿ ಕಟ್ಟಿಗೆ ಕಡಿದು ಸಂಗ್ರಹಿಸಿ ದೊಡ್ಡ ಹೊರೆ ಹೊತ್ತುಕೊಂಡು ಬರುತ್ತಿದ್ದ ತಂಗಿ ಮೀರಾಳ ಪ್ರತಿಭೆಯನ್ನು ಸೋದರ ಗುರುತಿಸಿದ್ದನಂತೆ. ಮೀರಾರ ಮನೆಯಲ್ಲಿ ತಂದೆ, ಅಣ್ಣ ಎಲ್ಲರೂ ಕ್ರೀಡಾಪಟುಗಳು. ಫುಟ್ಬಾಲ್, ಸೆಪೆಕ್ ಟಕ್ರಾಗಳಲ್ಲಿ ಆಡುತ್ತಿದ್ದರು. ಹೀಗಾಗಿ ಮನೆಯವರೆಲ್ಲರ ಪ್ರೋತ್ಸಾಹ ಮೀರಾಗೆ ನೆರವಾಯಿತು. 

2004ರಲ್ಲಿ ಅಥೆನ್ಸ್ ನಲ್ಲಿ ನಡೆದ ಒಲಿಂಪಿಕ್ಸ್ ನಲ್ಲಿ ಕುಂಜರಾಣಿ ದೇವಿಯವರನ್ನು ನೋಡಿ ವೇಟ್ ಲಿಫ್ಟರ್ ಆಗುವ ಕನಸು ಈ ಪುಟ್ಟ ಬಾಲಕಿ ಮೀರಾಬಾಯಿಯಲ್ಲಿ ಮೂಡಿತಂತೆ.

ಕುಂಜರಾಣಿಯವರನ್ನೇ ಆದರ್ಶವಾಗಿಟ್ಟುಕೊಂಡು ತನ್ನ ಕ್ರೀಡಾಪಯಣವನ್ನು ಮುಂದುವರಿಸಿದ ಮೀರಾಬಾಯಿ 2016ರಲ್ಲಿ ಕುಂಜರಾಣಿಯ ರಾಷ್ಟ್ರೀಯ ದಾಖಲೆಯನ್ನು ಮುರಿದರು. ಇದೀಗ ಒಲಿಂಪಿಕ್ಸ್ ನಲ್ಲಿ ಬೆಳ್ಳಿ ಪದಕವನ್ನು ಮುಡಿಗೇರಿಸಿಕೊಂಡಿದ್ದಾರೆ. ದೇಶ ಅವರಿಂದ ಇನ್ನಷ್ಟು ಪದಕ, ಯಶಸ್ಸುಗಳನ್ನು ನಿರೀಕ್ಷಿಸುತ್ತದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT