ವಿಶೇಷ

ಸೌರ ವಿದ್ಯುತ್ ನಿಂದ ಬದುಕು: ದಾವಣಗೆರೆ, ಚಿತ್ರದುರ್ಗ ಜಿಲ್ಲೆಯ ಬಡ ಕುಟುಂಬಗಳಿಗೆ ಆಸರೆಯಾದ ಸೆಲ್ಕೊ ಫೌಂಡೇಶನ್

Sumana Upadhyaya

ಚಿತ್ರದುರ್ಗ: ಕೋವಿಡ್-19 ಸಾಂಕ್ರಾಮಿಕ ಜಗತ್ತಿನಾದ್ಯಂತ ಪರಿಣಾಮ ಬೀರಿದೆ. ವಿವಿಧ ವರ್ಗಗಳ ಜನರಿಗೆ ವಿವಿಧ ರೀತಿಯಲ್ಲಿ ತೊಂದರೆಯನ್ನುಂಟುಮಾಡಿದೆ. ಸಾವಿರಾರು ಮಂದಿ ಬೀದಿಗೆ ಬಂದಿದ್ದಾರೆ. ಆರ್ಥಿಕವಾಗಿ ಸಂಕಷ್ಟಕ್ಕೀಡಾಗಿದ್ದಾರೆ.

ಜನರಿಗೆ ಈ ಕೋವಿಡ್-19 ಸಾಂಕ್ರಾಮಿಕ ಭಾವನಾತ್ಮಕವಾಗಿ, ಮಾನಸಿಕವಾಗಿ ಮತ್ತು ಶಾರೀರಿಕವಾಗಿ ಕೂಡ ಒತ್ತಡ, ಆತಂಕವನ್ನುಂಟುಮಾಡಿದೆ. ಹಿಂದಿನ ಜೀವನಕ್ರಮಕ್ಕೆ ಮರಳಲು ಹಲವರಿಗೆ ಇನ್ನೂ ಸಾಧ್ಯವಾಗಿಲ್ಲ.

ಇಂತಹ ಪರಿಸ್ಥಿತಿಯ ನಡುವೆ ಬೆಂಗಳೂರು ಮೂಲದ ಸೆಲ್ಕೊ ಫೌಂಡೇಶನ್ ಎಂಬ ಸರ್ಕಾರೇತರ ಸಂಸ್ಥೆ ದಾವಣಗೆರೆ ಮತ್ತು ಚಿತ್ರದುರ್ಗ ಜಿಲ್ಲೆಯ ಜನತೆಯ ಬದುಕಿನಲ್ಲಿ ಭರವಸೆಯ ಆಶಾಕಿರಣ ಮೂಡಿಸಿದೆ. 'ಸೌರ ಕುಟೀರ'ವನ್ನು ಸ್ಥಾಪಿಸಿ ಸೌರ ವಿದ್ಯುತ್ ಆಧಾರಿತ ಜೀವನೋಪಾಯವನ್ನು ತಂದಿದೆ.

ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲ್ಲೂಕಿನ ನಂಜಯ್ಯನಕೊಟ್ಟಿಗೆ ನಿವಾಸಿ ಮಂಗಳ, ಸೌರ ವಿದ್ಯುತ್ ಆಧಾರಿತ  ಛಾಯಾಪ್ರತಿ ಮೆಷಿನ್ನ್ನು ಹೊಂದಿದ್ದು ಪ್ರತಿದಿನ ಸುಮಾರು ಸಾವಿರ ರೂಪಾಯಿ ಗಳಿಸುತ್ತಿದ್ದಾರೆ. ಅಲ್ಲದೆ ಕ್ಯಾಂಟೀನ್ ಮತ್ತು ದಿನಸಿ ಅಂಗಡಿಯನ್ನು ಕೂಡ ನಡೆಸುತ್ತಿದ್ದಾರೆ. ಒಟ್ಟಾರೆಯಾಗಿ ಮಂಗಳಾರ ದಿನನಿತ್ಯದ ಆದಾಯ 5ರಿಂದ ಐದೂವರೆ ಸಾವಿರದವರೆಗೆ ಇದೆ.

2002ರಲ್ಲಿ ಪತಿ ಶ್ರೀನಿವಾಸ್ ರನ್ನು ಕಳೆದುಕೊಂಡ ಮಂಗಳಾ ತನ್ನಿಬ್ಬರು ಮಕ್ಕಳಾದ ರವಿಕಿರಣ್ ಮತ್ತು ದೀಪಕ್ ರಿಗೆ ಉತ್ತಮ ಶಿಕ್ಷಣ ಕೊಡಿಸುವಲ್ಲಿ ಹಿಂದೇಟು ಹಾಕಲಿಲ್ಲ. ಶ್ರೀನಿವಾಸ್ ಆಗ ರಸ್ತೆಬದಿಯಲ್ಲಿ ತಿನಿಸು ಅಂಗಡಿ ನಡೆಸುತ್ತಿದ್ದರು. ಪತಿಯ ನಿಧನ ಬಳಿಕ ಮಕ್ಕಳಾದ ರವಿಕಿರಣ್ ಗೆ ಬಿ.ಕಾಂ ಓದಿಸಿದರೆ ದೀಪಕ್ ಕಾಮರ್ಸ್ ಪದವಿ ಮಾಡುತ್ತಿದ್ದಾರೆ.

ಲಾಕ್ ಡೌನ್ ಸಮಯದಲ್ಲಿ ನನಗೆ ಬಹಳ ಕಷ್ಟವಾಗಿತ್ತು. ತೀವ್ರ ಆರ್ಥಿಕ ಸಂಕಷ್ಟ ಉಂಟಾಗಿತ್ತು. ಆಗ ಸೆಲ್ಕೊ ಫೌಂಡೇಶನ್ ನವರು ಸೌರ ಕುಟೀರ ಯೋಜನೆಯಡಿ ನನಗೆ ಧನ ಸಹಾಯ ಮಾಡಿದರು. ಇದರಿಂದ ಪ್ರತಿನಿತ್ಯ ಈಗ ಸಾವಿರ ರೂಪಾಯಿಯಷ್ಟು ಆದಾಯ ಗಳಿಸುತ್ತೇನೆ ಎನ್ನುತ್ತಾರೆ.

ನಂಜಯ್ಯನಕೊಟ್ಟಿಗೆಯಲ್ಲಿ ಯೋಜನೆಗೆ ಒಟ್ಟು 2.63 ಲಕ್ಷ ವೆಚ್ಚವಾಗಿದೆ. ಅದರಲ್ಲಿ ಫೌಂಡೇಶನ್ 1.90 ಲಕ್ಷ ರೂಪಾಯಿ ನೀಡಿದರೆ ಉಳಿದ ಮೊತ್ತವನ್ನು ಭರಿಸಿದ್ದು ಮಂಗಳಾರೇ. ಇದರಿಂದ ಮಂಗಳಾಗೆ ಆರ್ಥಿಕವಾಗಿ ಬಹಳ ಉಪಕಾರವಾಗಿದೆ.

ಮಂಗಳಾ ಅವರಂತೆ, ನಿಟ್ಟುವಳ್ಳಿ ಮೂಲದ ನಾಗಭೂಷಣ್ ಡಿ ಅವರ ಜೀವನವೂ ಬದಲಾಗಿದೆ, ಸೌರ ಕುಟೀರ್ ಯೋಜನೆಗೆ ಧನ್ಯವಾದಗಳು. “ನಾನು ದೃಷ್ಟಿ ಇಲ್ಲದೆ ಬದುಕುತ್ತಿದ್ದೆ; ಆದಾಯ ಗಳಿಸಲು ನನಗೆ ಸಹಾಯ ಮಾಡಲು ಯಾರೂ ಇರಲಿಲ್ಲ. ಅದೃಷ್ಟವಶಾತ್, ಸೆಲ್ಕೊ ಫೌಂಡೇಶನ್ ನನ್ನ ರಕ್ಷಣೆಗೆ ಬಂದು ಸಾಮಾನ್ಯ ಸೇವಾ ಕೇಂದ್ರವನ್ನು ಸ್ಥಾಪಿಸಲು ನನಗೆ ಸಹಾಯ ಮಾಡಿತು'' ಎನ್ನುತ್ತಾರೆ.

ನನ್ನ ಕೆಲಸ ನೋಡಿಕೊಂಡು ಉದ್ಯೋಗದ ಅರ್ಜಿಗಳು ಮತ್ತು ಮುದ್ರಣ ದಾಖಲೆಗಳಿಗಾಗಿ ನಾನು ನಿಟ್ಟುವಳ್ಳಿಯಿಂದ ಬರುವವರೆಗೆ ಅನೇಕ ಯುವಕರು ಕಾಯುತ್ತಾರೆ, ಈ ಮೊದಲು, 100ರಿಂದ 150 ರೂಪಾಯಿ ಗಳಿಸುತ್ತಿದ್ದೆ. ಸೆಲ್ಕೊ ಫೌಂಡೇಶನ್ ನ ಸಹಾಯದಿಂದ ಬೆಳಕು, ಫ್ಯಾನ್ ನ್ನು ಸೌರ ಕುಟೀರ್ ಒದಗಿಸಿತು ಎಂದು ನಾಗಭೂಷಣ್ ಕೃತಜ್ಞತೆಯಿಂದ ಹೇಳುತ್ತಾರೆ.

ದಾವಣಗೆರೆ ಜಿಲ್ಲೆಯ ಹಿರುದಾ ಗ್ರಾಮದ ದರ್ಜಿ, ತನ್ನ ಟೈಲರಿಂಗ್ ವ್ಯವಹಾರವನ್ನು ನಡೆಸಲು ಕಷ್ಟಪಡುತ್ತಿದ್ದರು. ಹೊಲಿಗೆ ಯಂತ್ರವನ್ನು ನಿರ್ವಹಿಸಲು ಫೌಂಡೇಶನ್ ಸೌರಶಕ್ತಿ ಚಾಲಿತ ಮೋಟರ್ ನೀಡಿದ ನಂತರ, ವಿಕಲಾಂಗರಾಗಿರುವ ಯೋಗೇಶ್ವರಚಾರಿ ಇಂದು ದಿನಕ್ಕೆ ಸುಮಾರು 400 ರೂಪಾಯಿಯಷ್ಟು ದುಡಿಯುತ್ತಿದ್ದಾರೆ. “ಈ ಮೊದಲು, ನನ್ನ ಜೀವನೋಪಾಯಕ್ಕಾಗಿ ನಾನು ಯಂತ್ರವನ್ನು ಪೆಡಲ್ ಮಾಡುತ್ತಿದ್ದೆ, ಆದರೆ ಅದು ಸುಲಭವಲ್ಲ, ಮತ್ತು ಸಮಯಕ್ಕೆ ಸರಿಯಾಗಿ ಕೆಲಸ ಪೂರ್ಣಗೊಳಿಸಲು ನನಗೆ ಸಾಧ್ಯವಾಗುತ್ತಿರಲಿಲ್ಲ. ನಾನು ಯಾಂತ್ರಿಕ ಸಾಧನವನ್ನು ಬಳಸಲು ಪ್ರಾರಂಭಿಸಿದಾಗಿನಿಂದ, ನನ್ನ ಆದಾಯವು ದ್ವಿಗುಣಗೊಂಡಿದೆ ಎಂದು ಸಂತೋಷದಿಂದ ಹೇಳುತ್ತಾರೆ. ಲಾಕ್ ಡೌನ್ ಸಮಯದಲ್ಲಿ ಯೋಗೇಶ್ವರಾಚಾರಿ ಮಾಸ್ಕ್ ಹೊಲಿದು ಕೊಟ್ಟಿದ್ದಾರೆ.

ಸೌರ ವಿದ್ಯುತ್ ಮೋಟಾರು ಮೂಲಕ ಹೊಲಿಗೆ ಯಂತ್ರ ಬಳಸಿ ಜಯಪದ್ಮ ಕೂಡ ದಿನಕ್ಕೆ 200ರಿಂದ 400 ರೂಪಾಯಿ ಗಳಿಸುತ್ತಿದ್ದಾರೆ. ಸೆಲ್ಕೊ ಫೌಂಡೇಶನ್ ನಿಂದ ಹೊಲಿಗೆ ಯಂತ್ರ ಸಿಕ್ಕಿದೆ. ಸೌರ ವಿದ್ಯುತ್ ಮೂಲಕ ಚಾಲನೆ ಮಾಡುತ್ತಿದ್ದಾರೆ. ಬೆನ್ನು ಹುರಿ ಸಮಸ್ಯೆಯಿಂದ ಇಷ್ಟು ಸಮಯ ಅವರು ಕೆಲಸ ಮಾಡಲು ಸಾಧ್ಯವಾಗದೆ ಕುಳಿತಿದ್ದರು.

ಲಾಕ್‌ಡೌನ್ ಸಮಯದಲ್ಲಿ ಸೌರ ಕುಟೀರ್ ಯೋಜನೆಯನ್ನು ಪ್ರಾರಂಭಿಸುವುದರ ಹೊರತಾಗಿ, ಸೆಲ್ಕೊ ಅವರು ಪಟ್ರೆಹಳ್ಳಿ ಗ್ರಾಮದ 24 ಹಗ್ಗ ತಯಾರಕರಿಗೆ ಸೌರ ಹಗ್ಗ ತಯಾರಿಸುವ ಯಂತ್ರವನ್ನು ಸಹ ಒದಗಿಸಿದ್ದಾರೆ. ಯಂತ್ರದ ಜೊತೆಗೆ, ಸಂಸ್ಥೆಯ ತಲಾ 4 ಸಾವಿರ ರೂಪಾಯಿಗಳನ್ನು ಫಲಾನುಭವಿಗಳಿಗೆ ನೀಡಿದೆ. ಈ ಯೋಜನೆಯು ಅವರಿಗೆ ತಿಂಗಳಿಗೆ 10 ಸಾವಿರದಿಂದ 15 ಸಾವಿರ ರೂಪಾಯಿ ಗಳಿಸಲು ಸಹಾಯ ಮಾಡಿದೆ ಎಂದು ಫಲಾನುಭವಿಗಳಲ್ಲಿ ಒಬ್ಬರಾದ ಕುಮಾರ್ ತಿಳಿಸಿದ್ದಾರೆ.

ಚಿತ್ರದುರ್ಗ ಮತ್ತು ದಾವಣಗೆರೆ ಸೆಲ್ಕೊ ಫೌಂಡೇಶನ್ ಮುಖ್ಯಸ್ಥ ಮಂಜುನಾಥ್ ಭಾಗವತ್, ನಿರ್ಗತಿಕ ವರ್ಗದವರ ಅಭಿವೃದ್ಧಿಗೆ ಸೆಲ್ಕೊ ಹಣ ಹೂಡಿಕೆ ಮಾಡುತ್ತದೆ. ಫಲಾನುಭವಿಗಳಿಂದ ಅಲ್ಪಪ್ರಮಾಣದ ಮೊತ್ತ ಪಡೆಯುವ ಮೂಲಕ ಸೆಲ್ಕೊ ಸಂಸ್ಥೆ ಉಳಿದ ಹಣವನ್ನು ಭರಿಸಿ ನಿರ್ಗತಿಕರಿಗೆ ಕೆಲಸಕ್ಕೆ ಪೂರಕವಾದ ಯಂತ್ರಗಳನ್ನು ಒದಗಿಸುತ್ತದೆ. ಮಹಿಳೆಯರು ಮತ್ತು ವಿಶೇಷ ಚೇತನ ನಾಗರಿಕರ ಅಭಿವೃದ್ಧಿಗೆ ಶ್ರಮಿಸುತ್ತಿರುವ ಸಂಘಟನೆಗಳ ಜೊತೆ ಸಹಯೋಗದಲ್ಲಿ ಯೋಜನೆ ಕೈಗೆತ್ತಿಕೊಳ್ಳಲಾಗುತ್ತಿದೆ ಎಂದರು.

SCROLL FOR NEXT