ವಿಶೇಷ

ಉತ್ತರ ಕನ್ನಡ ಜಿಲ್ಲೆಯಲ್ಲಿ 30,000 ಸಸಿ ನೆಟ್ಟಿರುವ ತುಳಸಿ ಗೌಡಗೆ ಪದ್ಮ ಪ್ರಶಸ್ತಿಯ ಗೌರವ

Srinivas Rao BV

ಹುಬ್ಬಳ್ಳಿ: ತುಳಸಿ ಗೌಡ ಅವರು ಹಾಲಕ್ಕಿ ಸಮುದಾಯದ ಸಾಂಪ್ರದಾಯಿಕ ಉಡುಪಿನಲ್ಲಿ, ಬರಿಗಾಲಲ್ಲಿ ರಾಷ್ಟ್ರಪತಿ ಭವನದಲ್ಲಿ ಪದ್ಮ ಪ್ರಶಸ್ತಿ ಸ್ವೀಕರಿಸುತ್ತಿದ್ದರೆ,  ಆಕೆಯ ಊರು ಅಂಕೋಲದ ಹೊನ್ನಳ್ಳಿಯಲ್ಲಿ ಸಂಭ್ರಮದ ವಾತಾವರಣ ಮನೆ ಮಾಡಿತ್ತು. 

"ಪ್ರಶಸ್ತಿ ಪಡೆದಿರುವುದು ಸಂತಸ ತಂದಿದೆ. ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಮಾತನಾಡಿದೆ. ಮರ ಕಡಿಯುವುದನ್ನು ನಿಷೇಧಿಸುವಂತೆ ಮನವಿ ಮಾಡಿದೆ ಎಂದಿದ್ದಾರೆ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ನೊಂದಿಗೆ ಮಾತನಾಡಿರುವ ತುಳಸಿ ಗೌಡ. 

ಗಿಡಗಳನ್ನು ನೆಡುವುದು ಶ್ರೇಷ್ಠ ಕೆಲಸ ಹಾಗೂ ನಾವು ಅದನ್ನು ಮುಂದುವರೆಸಬೇಕು, ನನ್ನ ಆರೋಗ್ಯ ಬೆಂಬಲಿಸದೇ ಇದ್ದರೂ ನಾನು ಇನ್ನೂ ಹೆಚ್ಚು ಮರಗಳನ್ನು ನೆಡಲು ಇಚ್ಛಿಸುತ್ತೇನೆ ಎನ್ನುತ್ತಾರೆ ತುಳಸಿ ಗೌಡ.

ಉತ್ತರ ಕನ್ನಡ ಜಿಲ್ಲೆಯಾದ್ಯಂತ 30,000 ಮರಗಳನ್ನು ತುಳಸಿ ಗೌಡ ನೆಟ್ಟಿರುವ ಸಾಧನೆ ಮಾಡಿದ್ದಾರೆ. ಅರಣ್ಯದ ನರ್ಸರಿಯಲ್ಲಿ ದೈನದಿಂದ ವೇತನಕ್ಕಾಗಿ ಉದ್ಯೋಗಕ್ಕೆ ಸೇರಿದ ತುಳಸಿ ಗೌಡ ಗಿಡಗಳನ್ನು ಬೆಳೆಸುವುದರೆಡೆಗೆ ತಮಗಿದ್ದ ಆಸಕ್ತಿ, ಪ್ರೀತಿಯ ಪರಿಣಾಮ ಖಾಯಂ ಉದ್ಯೋಗಿಯಾದರು.  

ಪಶ್ಚಿಮ ಘಟ್ಟಗಳ ಸ್ಥಳೀಯ ಸಸ್ಯ ಪ್ರಭೇದಗಳನ್ನು ಪತ್ತೆ ಮಾಡುವುದಕ್ಕೆ ಅರಣ್ಯ ಇಲಾಖೆಗೆ ತುಳಸಿ ಗೌಡ ಸಹಾಯ ಮಾಡಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಗಿಡಗಳನ್ನು ಬೆಳೆಯುವುದಕ್ಕೆ ರೈತರು ಹಾಗೂ ಜನತೆಗೆ ತುಳಸಿ ಗೌಡ ಹೆಚ್ಚು ಪ್ರೋತ್ಸಾಹ ನೀಡುತ್ತಿದ್ದಾರೆ. 

ಅರಣ್ಯ ಇಲಾಖೆ ವರ್ಷದ ನಿರ್ದಿಷ್ಟ ಕಾಲದಲ್ಲಿ ನರ್ಸರಿಗಳನ್ನು ಮುಚ್ಚಿ ನೌಕರರಿಗೆ ಕೆಲಸ ಇಲ್ಲದೇ ಇದ್ದಾಗಲೂ ನರ್ಸರಿಯಲ್ಲಿ ತುಳಸಿ ಗೌಡ ಮಾತ್ರ ಸಕ್ರಿಯರಾಗಿರುತ್ತಿದ್ದರು. ಅವರ ಈ ಬದ್ಧತೆಯನ್ನು ಗಮನಿಸಿದ ಅರಣ್ಯ ಇಲಾಖೆ ಆಕೆಯನ್ನು ಖಾಯಂ ಉದ್ಯೋಗಿಯನ್ನಾಗಿ ನೇಮಕ ಮಾಡಿತು. ನಿವೃತ್ತಿಯವರೆಗೂ ಕಾರ್ಯನಿರ್ವಹಣೆ ಮಾಡಿದ ತುಳಸಿ ಗೌಡ, ಇಂದಿಗೂ ತಮ್ಮ ಕಾಯಕವನ್ನು ಮುಂದುವರೆಸಿದ್ದು, ಸ್ಥಳೀಯ ಸಸ್ಯ ಜಾತಿಗಳ ಬಗ್ಗೆ ಜ್ಞಾನವನ್ನು ಹಂಚಿಕೊಳ್ಳುತ್ತಿದ್ದಾರೆ ಎಂದು ತುಳಸಿ ಗೌಡ ಅವರ ಮೊಮ್ಮಗ ಶೇಖರ್ ಗೌಡ ತಿಳಿಸಿದ್ದಾರೆ. 

ಅರಣ್ಯ ಇಲಾಖೆ ವಜ್ಯಜೀವಿಗಳಿಗೆ ಹಣ್ಣುಗಳನ್ನು ನೀಡುವಷ್ಟು ಸ್ಥಳೀಯ ಗಿಡಗಳು ಇರುವುದನ್ನು ಖಾತ್ರಿಪಡಿಸಿಕೊಳ್ಳಬೇಕು ಎಂದು ತುಳಸಿ ಗೌಡ ಮನವಿ ಮಾಡಿದ್ದು, ಅಕೇಷಿಯಾ ಸೇರಿದಂತೆ ವಿಲಕ್ಷಣ ಮರಗಳನ್ನು ಬೆಳೆಯುವುದನ್ನು ನಿಷೇಧಿಸಬೇಕು ಎಂದು ಆಗ್ರಹಿಸಿದ್ದಾರೆ. 

ಹಾಲಕ್ಕಿ ಸಮುದಾಯಕ್ಕೆ ಇದು ಎರಡನೇ ಪದ್ಮ ಪ್ರಶಸ್ತಿಯಾಗಿದ್ದು, ಹಾಡುಗಾರ್ತಿ, ಸಾಮಾಜಿಕ ಕಾರ್ಯಕರ್ತೆ ಸುಕ್ರಿ ಬೊಮ್ಮಗೌಡ ಅವರನ್ನು ಈ ಹಿಂದೆ ಪದ್ಮ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು. 

SCROLL FOR NEXT