ವಿಶೇಷ

ಮುಂದಿನ ಪೀಳಿಗೆಗೆ ಜ್ಞಾನ ಮತ್ತು ಜೀವನ ಕೌಶಲ್ಯಗಳ ಸಂಪತ್ತನ್ನು ಧಾರೆ ಎರೆಯುತ್ತಿರುವ ಅನ್ಮೋಲ್ ಯೋಗ ಕೇಂದ್ರ!

Srinivas Rao BV

ಮುಂಡರಗಿ: ಇಂದು ಮಕ್ಕಳ ದಿನಾಚರಣೆ. ಮುಂಡರಗಿಯ ಅನ್ಮೋಲ್ ಯೋಗ ಹಾಗೂ ಆಯುರ್ವೇದಿಕ್ ಚಿಕಿತ್ಸಾ ಕೇಂದ್ರ ಮಕ್ಕಳಿಗೆ ಜ್ಞಾನ ಮತ್ತು ಜೀವನ ಕೌಶಲ್ಯಗಳನ್ನು ಕಲಿಸಿಕೊಡುವ ಉತ್ಕೃಷ್ಟ ಕೆಲಸವನ್ನು ಮಾಡುತ್ತಿದೆ. 

ಈ ಕೇಂದ್ರದಲ್ಲಿ ಕಲಿಯುತ್ತಿರುವ ಮಕ್ಕಳು ವಾರದ 5 ದಿನಗಳು ಯೋಗ ಕಲಿತರೆ ವಾರಾಂತ್ಯಗಳಲ್ಲಿ ಸಂಪೂರ್ಣ ವ್ಯಕ್ತಿತ್ವ ವಿಕಸನಕ್ಕೆ ಸಹಕಾರಿಯಾಗುವ, ತ್ಯಾಜ್ಯದಿಂದ ಉಪಯುಕ್ತ ವಸ್ತುಗಳನ್ನು ತಯಾರಿಸುವ, ಹೊಸ ಚಿಂತನೆಗಳ ಸೃಜನಶೀಲ ಕೆಲಸಗಳು ಸೇರಿದಂತೆ ಹಲವು ಕೌಶಲ್ಯಗಳನ್ನು ಕಲಿಯುತ್ತಾರೆ. 

ಈ ಯೋಗ ಕೇಂದ್ರವನ್ನು ನಡೆಸುತ್ತಿರುವ, ಯೋಗದಲ್ಲಿ ಪಿಹೆಚ್ ಡಿ ಪದವಿ ಪಡೆದಿರುವ ಮಂಗಳಾ ಚಂದ್ರಕಾಂತ್ ಇಟಗಿ, ಥೆರೆಪಿಸ್ಟ್ ಕೂಡ ಹೌದು. 7 ವರ್ಷಗಳ ಹಿಂದೆ ಈ ಕೇಂದ್ರವನ್ನು ಪ್ರಾರಂಭಿಸಿದ ಅವರು ವಾರದ 5 ದಿನಗಳು ಅಂದರೆ ಸೋಮವಾರದಿಂದ ಶುಕ್ರವಾರದವರೆಗೆ ಮಕ್ಕಳಿಗೆ ಯೋಗ ಕಲಿಸುತ್ತಾರೆ. ಶನಿವಾರ ಹಾಗೂ ಭಾನುವಾರ 6-15 ವಯಸ್ಸಿನ ಮಕ್ಕಳ ಒಟ್ಟಾರೆ ವ್ಯಕ್ತಿತ್ವ ವಿಕಸನಕ್ಕೆ ಉಪಯುಕ್ತವಾದ ಕೆಲಸಗಳಿಗೆ ಮೀಸಲು!

ಹೇರಳವಾದ ಪ್ಲಾಸ್ಟಿಕ್, ಪ್ಲಾಸ್ಟಿಕ್ ಬಾಟಲ್, ರಸ್ತೆಗಳಲ್ಲಿ ಎಸೆಯಲಾಗಿದ್ದ ವಸ್ತುಗಳು, ಪ್ಲಾಸ್ಟಿಕ್ ರಾಖಿಗಳನ್ನು ನೋಡಿ ಇವುಗಳಿಗೆ ಕಡಿವಾಣ ಹಾಕಬೇಕೆಂದು ನಿರ್ಧರಿಸಿದ ಮಂಗಳ ಅವರು ಮಕ್ಕಳಿಗೆ "ತ್ಯಾಜ್ಯದಿಂದ ಸಂಪತ್ತಿನೆಡೆಗೆ" (Waste to Wealth) ಎಂಬ ಯೋಜನೆಯಡಿ ಒಣ ತ್ಯಾಜ್ಯದಿಂದ ಉಪಯುಕ್ತ ವಸ್ತುಗಳನ್ನು ತಯಾರಿಸುವುದನ್ನು ಹೇಳಿಕೊಡಲು ಪ್ರಾರಂಭಿಸಿದರು, ಇದರಿಂದ ಗ್ರೀಟಿಂಗ್ ಕಾರ್ಡ್, ಗಿಡ ನೆಡುವುದಕ್ಕೆ ಅನುಕೂಲವಾಗುವ ವಸ್ತುಗಳು, ಫೋಟೋ ಫ್ರೇಮ್, ಪೆನ್ ಸ್ಟಾಂಡ್, ಹ್ಯಾಂಡ್ ಫ್ಯಾನ್, ಬ್ಯಾಡ್ಜ್, ಪರಿಸರ ಸ್ನೇಹಿ ರಾಖಿಗಳು, ಮುಖಗವುಸು (ಮಾಸ್ಕ್) ಮ್ಯಾಟ್, ಪೇಂಟಿಂಗ್, ತೂಗುವ ಹೂಕುಂಡಗಳು, ಪಕ್ಷಿಗಳಿಗೆ ನೀರುಣಿಸುವ ಕಂಟೇನರ್ ಗಳನ್ನು ತಯಾರಿಸುವುದಕ್ಕೆ ಹೇಳಿಕೊಡಲಾಗುತ್ತಿದೆ. ಇದಿಷ್ಟೇ ಅಲ್ಲದೇ ಪ್ಲಾಸ್ಟಿಕ್ ನಿಷೇಧದ ಬಗ್ಗೆಯೂ ಮಂಗಳಾ ಅವರು ಜಾಗೃತಿ ಕ್ಯಾಂಪ್ ಗಳನ್ನು ನಡೆಸುತ್ತಿದ್ದಾರೆ. 

ಮಂಗಳ ಅವರು 45 ಮಕ್ಕಳಿಗೆ ಈ ತರಬೇತಿ ನೀಡುತ್ತಿದ್ದು, ಇದನ್ನು ಪ್ರತಿಯೊಂದು ಮಗುವೂ ಮತ್ತೆ ಒಂದಷ್ಟು ಮಂದಿಗೆ ಹೇಳಿಕೊಡುವುದಕ್ಕೆ ಪ್ರೇರಣೆ ನೀಡುವ ಮೂಲಕ ಪ್ಲಾಸ್ಟಿಕ್ ನಿರ್ಮೂಲನೆಗಾಗಿ ಕಾರ್ಯನಿರ್ವಹಿಸುವ ಚೈನ್ ನ್ನು ರೂಪಿಸಲು ಯತ್ನಿಸುತ್ತಿದ್ದಾರೆ. 

ವೆಸ್ಟ್ ಟು ವೆಲ್ತ್ ತರಬೇತಿ ಕಳೆದ ಮೂರು ವರ್ಷಗಳಿಂದ ನಡೆಯುತ್ತಿದ್ದು, ತ್ಯಾಜ್ಯದಿಂದ ಉಪಯುಕ್ತ ವಸ್ತುಗಳನ್ನು ತಯಾರಿಸಲು ಇಲ್ಲಿಂದ ಕಲಿಯುವ ಮಕ್ಕಳು ಮನೆಗಳಲ್ಲಿ ಪೋಷಕರಿಗೂ ಕಲಿಸುತ್ತಿದ್ದಾರೆ. 

ಕೆಲವು ತಿಂಗಳ ಹಿಂದೆ ಯೋಗ ಕೇಂದ್ರದಲ್ಲಿ ಆಯೋಜಿಸಲಾಗಿದ್ದ ಪರಿಸರ ಸ್ನೇಹಿ ರಾಖಿ ತರಬೇತಿ ಕ್ಯಾಂಪ್ ಸಹ ಯಶಸ್ವಿಯಾಗಿದ್ದು, ಪರಿಸರ ಸ್ನೇಹಿ ರಾಖಿಗಳನ್ನು ತಯಾರಿಸುವುದನ್ನು ಮಕ್ಕಳು ಕಲಿತಿದ್ದು ಬೇರೆ ವಿದ್ಯಾರ್ಥಿಗಳಿಗೂ ಕಲಿಸಿದ್ದಾರೆ. 

ಪ್ರತಿ ಮಗುವಿಗೂ ರಾಖಿಯ ದಾರದಲ್ಲಿ ತುಳಸಿ, ಅಶ್ವಗಂಧ, ಅಸ್ಪಾರಗಸ್ ನಂತಹ ಆಯುರ್ವೇದ ಸಸ್ಯದ ಬೀಜಗಳನ್ನು ನೀಡಲಾಗಿತ್ತು. ಹಬ್ಬದ ನಂತರ ಮಕ್ಕಳು ಈ ಔಷಧೀಯ ಸಸ್ಯಗಳನ್ನು ನೆಟ್ಟಿದ್ದಾರೆ. ಇದರಿಂದ ಪ್ಲಾಸ್ಟಿಕ್ ರಾಖಿಗಳ ಆಕರ್ಷಣೆಯಿಂದ ಹಲವು ಮಕ್ಕಳನ್ನು ಹೊರತರಲಾಗಿದೆ ಎನ್ನುತ್ತಾರೆ ಮಂಗಳ.

ಇನ್ನು ಮಕ್ಕಳನ್ನು ಮೊಬೈಲ್ ಗೀಳಿನಿಂದ ಹೊರತರುವುದಕ್ಕೆ ಮಂಗಳ ಅವರು ಗಾರ್ಡನಿಂಗ್, ಟ್ರೆಕಿಂಗ್, ಸಾಂಪ್ರದಾಯಿಕ ಕ್ರೀಡೆಗಳತ್ತ ಪ್ರೋತ್ಸಾಹಿಸುತ್ತಿದ್ದಾರೆ. 

ಈ ಕೇಂದ್ರದಲ್ಲಿ ಕಳೆದ ಮೂರು ವರ್ಷಗಳಿಂದ ಕಲಿಯುತ್ತಿರುವ ರೀತು ಮಗಜಿ ಈ ಬಗ್ಗೆ ಮಾತನಾಡಿದ್ದು, ನಾವು ಯೋಗ ಕೇಂದ್ರದಲ್ಲಿ ವಾರಾಂತ್ಯಕ್ಕಾಗಿ ಕಾಯುತ್ತಿರುತ್ತೇವೆ. ಇಲ್ಲಿ ಕಲಿತಿದ್ದರಿಂದ ಮನೆಯಲ್ಲಿ ಐಸ್ ಕ್ರೀಮ್ ಸ್ಟಿಕ್, ಪ್ಲಾಸ್ಟಿಕ್ ಬಾಟಲ್, ಬ್ಯಾಗ್, ತರಗೆಲೆಗಳವರೆಗೆ ಯಾವುದನ್ನೂ ಎಸೆಯುವುದಿಲ್ಲ ಎಲ್ಲದರಿಂದಲೂ ಉಪಯುಕ್ತ ವಸ್ತುಗಳನ್ನು ತಯಾರಿಸುವುದನ್ನು ಕಲಿತಿದ್ದೇವೆ ಎನ್ನುತ್ತಾರೆ. 

ಇವಿಷ್ಟೇ ಅಲ್ಲದೇ ಯೋಗ ಕೇಂದ್ರದಲ್ಲಿ ಭಾರತೀಯ ಹಬ್ಬಗಳು, ಅದರ ಆಚರಣೆಯ ರೀತಿ, ಹಿನ್ನೆಲೆಗಳನ್ನೂ ತಿಳಿಸಿಕೊಟ್ಟು, ಪರಿಸರಕ್ಕೆ ಹಾನಿಯಾಗದಂತೆ ಅವುಗಳನ್ನು ಆಚರಿಸುವುದನ್ನೂ ಕಲಿಸಲಾಗುತ್ತಿದೆ.

SCROLL FOR NEXT