ವಿಶೇಷ

ದಸರಾ ಇನ್ ದುಬೈ: ಒಂಟೆಗಳ ನಾಡಲ್ಲಿ ಮೈಸೂರಿನವಳ ಕಂತೆ ಕಂತೆ ನೆನಪು

ಎಲ್ಲಾ ಸೌಲಭ್ಯ ಇದ್ದರೂ, ನೆರೆಹೊರೆಯಲ್ಲೆಲ್ಲಾ ಭಾರತೀಯರೇ ಇದ್ದರೂ ಏನೋ ಒಂದೇ ಕೊರತೆ ನವರಾತ್ರಿ ಹಬ್ಬದ ದಿನಗಳಲ್ಲಿ ಕಾಡುತ್ತೆ. ಊರಿನಲ್ಲಿ ಇದ್ದಿದ್ದರೆ ಹಬ್ಬದ ವಾತಾವರಣ ಎಲ್ಲಾ ಕಡೆ ಇರುತ್ತಿತ್ತು.

- ಸ್ಮಿತಾ ಮಿಥುನ್, ದುಬೈ

ದುಬೈ: ಸ್ವದೇಶ ಬಿಟ್ಟು ಬಂದ ಮೇಲೆ ಅದರ ಬೆಲೆ ಅರ್ಥ ಆಗೋದು ಈ ಮಾತು ನನಗಂತೊ ಸರಿಯಾಗಿ ಅನ್ವಯ ಆಗುತೆ. ಮೈಸೂರಿನಲ್ಲಿ ಇರೋವಾಗ ದಸರಾ ಬಗ್ಗೆ ಅಷ್ಟು ಆಸಕ್ತಿ ವಹಿಸದ ನಾನು ಇಲ್ಲಿಗೆ ಬಂದ ಮೇಲೆ ನಮ್ಮ ಹಬ್ಬದ ಆಚರಣೆಯ ಮಹತ್ವ ಮತ್ತು ನಾನು ಏನನ್ನ ಮಿಸ್ ಮಾಡಿಕೊಳ್ಳುತ್ತಾ ಇದ್ದೀನಿ ಅಂತ ಅರ್ಥ ಆಯಿತು.

ದುಬೈನಲ್ಲಿ ಬೊಂಬೆ ಹುಡುಕಾಟ

ದುಬೈನಲ್ಲಿ ದಸರಾ ಅನ್ನೋದಕ್ಕಿಂತ "ನವರಾತ್ರಿ" ಅಂತಾರೆ. ಅದು ಉತ್ತರ ಭಾರತೀಯರ ಶೈಲಿ. ನವರಾತ್ರಿ ಹತ್ತಿರವಾಗುತ್ತಿದ್ದ ಹಾಗೆ ಇಲ್ಲಿನ ಅಲ್ ಅದಿಲ್ ಮಾರಾಟ ಮಳಿಗೆಯಲ್ಲಿ ನವರಾತ್ರಿ ಸೇಲ್ ಶುರುವಾಗುತ್ತದೆ. ಭಾರತೀಯ ಪೂಜಾ ವಸ್ತುಗಳು ಹೆಚ್ಚಾಗಿ ಇಲ್ಲಿಯೇ ಸಿಗುವುದು. ದಸರಾ ತಿಂಗಳಲ್ಲಿ ಇಲ್ಲಿ ವಿಶೇಷ ಆಫರ್ ಇರುತ್ತದೆ. 

ಅಲ್ ಅದಿಲ್ ಅಂಗಡಿಯೊಂದೇ ಅಲ್ಲ. ಇದೇ ತರ ಹಲವಾರು ಅಂಗಡಿಗಳಲ್ಲಿ ನವರಾತ್ರಿಯ ವಿಶೇಷ ವಸ್ತುಗಳನ್ನು ಮಾರಾಟಕ್ಕಿಟ್ಟಿರುತ್ತಾರೆ. ನಮ್ಮ ನವರಾತ್ರಿ ಆಚರಣೆ ಅಲ್ ಆದಿಲ್ ನಿಂದ ಶುರುವಾಗುತ್ತದೆ. ನಮ್ಮಲ್ಲಿ ಗ್ರಂಥಿಗೆ ಅಂಗಡಿಗಳಲ್ಲಿ ಪೂಜಾ ಸಾಮಗ್ರಿ, ವಿಗ್ರಹಗಳನ್ನು ಖರೀದಿಸುತ್ತೇವಲ್ಲ, ಅದೇ ರೀತಿ ದುಬೈನಲ್ಲಿ ಅಲ್ ಅದಿಲ್ ಮಳಿಗೆಯಲ್ಲಿ ನಮ್ಮ ದಸರಾ ಶುರುವಾಗುತ್ತದೆ.

ಮಿನಿ ಕೇರಳದ ಗಮ್ಮತ್ತು

ಗಲ್ಫ್ ಆದರೂ ಗುರುತು ಪರಿಚಯವಿಲ್ಲದ ಯಾವುದೋ ಪರಕೀಯ ದೇಶದಲ್ಲಿದ್ದೇನೆ ಎನ್ನುವ ಭಾವನೆ, ಫೀಲ್ ಇಲ್ಲಿ ಬಂದಿಲ್ಲ. ಇಲ್ಲಿ ಎಲ್ಲಿ ನೋಡಿದರೂ ಭಾರತೀಯರು ಕಾಣಸಿಗುವುದು ಅದಕ್ಕೆ ಕಾರಣ ಎನ್ನಬಹುದು. ಒಮ್ಮೊಮ್ಮೆ ಕೇರಳಕ್ಕೆ ಬಂದುಬಿಟ್ಟೆವೇನೋ ಎನ್ನಿಸುವಷ್ಟು ಮಲಯಾಳಿಗಳು ಇಲ್ಲಿದ್ದಾರೆ. 

ಮಲಯಾಳಂ ಗೊತ್ತಿದ್ದರೆ ಇಡೀ ಗಲ್ಫ್ ನಲ್ಲಿ ಆರಾಮಾಗಿ ಚಿಂತೆಯಿಲ್ಲದೆ ನಮ್ಮದೇ ದೇಶ ಎನ್ನುವಂತೆ ಜೀವನ ಮಾಡಬಹುದು! ದಕ್ಷಿಣ ಭಾರತೀಯರು, ಅಂದರೆ ಮಲಯಾಳಿಗಳು ಹೆಚ್ಚಿನ ಸಂಖ್ಯೆಯಲ್ಲಿದ್ದರೂ ಇಲ್ಲಿ ನವರಾತ್ರಿಯನ್ನು ಉತ್ತರಭಾರತದ ಶೈಲಿಯಲ್ಲಿ ಆಚರಣೆ ಮಾಡಲಾಗುತ್ತದೆ.

ಕಿಕ್ಕಿರಿದ ರೆಸ್ಟೋರೆಂಟುಗಳು

ಇಲ್ಲಿ ತಮಿಳರ ಅಂಗಡಿಗಳೂ ಇವೆ. ಈ ಅಂಗಡಿಗಳ ವೈಶಿಷ್ಟ್ಯವೆಂದರೆ ಅಲ್ಲಿನ ದಸರಾ ಬೊಂಬೆಗಳು. ತಮಿಳರು ಅವನ್ನು "ಗೊಲ್ಲ" ಎನ್ನುತ್ತಾರೆ. ಕೆಲ ತಮಿಳರು ಕರ್ನಾಟಕ ಮಂದಿಯಂತೆಯೇ ಮನೆಗಳಲ್ಲಿ ಬೊಂಬೆ ಕೂರಿಸುತ್ತಾರೆ.

ಉತ್ತರ ಭಾರತೀಯರು ಒಂಭತ್ತು ದಿನಗಳ ಕಾಲ ಉಪವಾಸ ಮಾಡುತ್ತಾರೆ ಕೆಲವು ಹೋಟೆಲ್ ಗಳಲ್ಲಿ ನವರಾತ್ರಿಯ ವಿಶೇಷ ಅಡುಗೆ ಇರುತ್ತೆ ಮತ್ತು ನವರಾತ್ರಿಯ ವಿಶೇಷ ಸಿಹಿ ತಿಂಡಿಗಳು ಕೊಡ ಸಿಗುತ್ತದೆ. ಹೆಚ್ಚಿನ ಉತ್ತರಭಾರತೀಯರು ಹಬ್ಬದ ದಿನದಂದು ರಾತ್ರಿ ಇಲ್ಲಿನ ರೆಸ್ಟೋರೆಂಟುಗಳಲ್ಲಿ ಕಿಕ್ಕಿರಿದು ನೆರೆದಿರುತ್ತಾರೆ.

ನಾವು ರೆಸ್ಟೋರೆಂಟುಗಳಿಗೆ ಹೋಗೋದಿಲ್ಲ ಎಂದಿಲ್ಲ. ಆದರೆ ರಾತ್ರಿ ಹೋಗುವುದಿಲ್ಲ. ದಿನದ ಯಾವುದೇ ಹೊತ್ತಿನಲ್ಲಿ ಹೋಗಿ ಬರುತ್ತೇವೆ. ರಾತ್ರಿ ಹಬ್ಬದ ಸಾಂಪ್ರದಾಯಿಕ ಭೋಜನ ಮನೆಯಲ್ಲೇ ಆಗುತ್ತದೆ. 

ಕನ್ಯಾ ಪೂಜೆಯ ಆಕರ್ಷಣೆ

ಇಲ್ಲಿನ ನವರಾತ್ರಿ ವಿಶೇಷ ಅಂದರೆ ಕನ್ಯಾ ಪೂಜಾ ಆಚರಣೆಯದು. ಉತ್ತರಭಾರತೀಯರ ಮನೆಗಳಲ್ಲಿ ಹೆಚ್ಚಾಗಿ ಕನ್ಯಾ ಪೂಜೆ ಮಾಡುತ್ತಾರೆ. ಅಂದು ಕನ್ಯೆಯರನ್ನು ತಮ್ಮ ಮನೆಗೆ ಆಹ್ವಾನಿಸಿ ಪೂಜೆ ಕಾರ್ಯ ಮಾಡುತ್ತಾರೆ. ನನ್ನ ಮಗಳನ್ನೂ ಸೇರಿಸಿ ಅಕ್ಕಪಕ್ಕದ ಮನೆಗಳ ಹೆಣ್ಣುಮಕ್ಕಳಿಗೆ ಹಲವು ಮನೆಗಳಿಂದ ಅದಕ್ಕೆಂದೇ ಆಹ್ವಾನ ಬರುತ್ತದೆ. 

ಪರದೇಶದಲ್ಲಿ ಕಾಡುವ ದಸರಾ

ಎಲ್ಲಾ ಸೌಲಭ್ಯ ಇದ್ದರೂ, ನೆರೆಹೊರೆಯಲ್ಲೆಲ್ಲಾ ಭಾರತೀಯರೇ ಇದ್ದರೂ ಏನೋ ಒಂದೇ ಕೊರತೆ ನವರಾತ್ರಿ ಹಬ್ಬದ ದಿನಗಳಲ್ಲಿ ಕಾಡುತ್ತೆ. ಊರಿನಲ್ಲಿ ಇದ್ದಿದ್ದರೆ ಹಬ್ಬದ ವಾತಾವರಣ ಎಲ್ಲಾ ಕಡೆ ಇರುತ್ತಿತ್ತು. ಹೊರಗೆ ರಸ್ತೆಗಳಲ್ಲಿ ಹೂ, ಹಣ್ಣು ಮಾರೋರು, ಎಲ್ಲಾ ಅಂಗಡಿ ಮಳಿಗೆಗಳಲ್ಲಿ ದಸರಾ ಸೇಲ್. ಮನೆಗೆ ನೆಂಟರಿಷ್ಟರ ಆಗಮನ. ದೇವಸ್ಥಾನ ಭೇಟಿ. ಹೀಗೆ ದಸರಾ ಎಂದರೆ ಇವೆಲ್ಲವೂ ಇದ್ದರೆ ಮಾತ್ರ ಎನ್ನುವ ಭಾವನೆ ಇರುತ್ತದೆ. 

ನಮ್ಮ ನೆಲದ ಮೆಲುಕು

ಮೈಸೂರಿನವರಾದ ನಮಗೆ ಜಂಬೊ ಸವಾರಿಯ ಖುಷಿ ಇಲ್ಲೂ ನೆನಪಾಗುತ್ತದೆ. ಮನೆಗಳಿಗೆ ಬೊಂಬೆ ನೋಡೋಕೆ ಹೋಗೋದು. ಮೈಸೂರಿನ ದೀಪಾಲಂಕಾರ, ಚಾಮುಂಡಿ ಬೆಟ್ಟದಲ್ಲಿ 'ಸುಸ್ವಾಗತ' ಅಂತ ಬರೆದಿರೋದು ಇವನ್ನೆಲ್ಲಾ ಮಿಸ್ ಮಾಡಿಕೊಳ್ಳುತ್ತಿದ್ದೇನೆ. ಆದರೆ ಸೋಷಿಯಲ್‌ ಮೀಡಿಯಾ ಇರೋದರಿಂದ ಅದರಲ್ಲಿ ಸ್ನೇಹಿತರು ಹಂಚಿಕೊಂಡ ದಸರಾ ಫೋಟೋಗಳನ್ನು ನೋಡಿ, ಮನೆಮಂದಿಗೆ ತೋರಿಸಿ ಖುಷಿ ಪಡುತ್ತೇನೆ. 

ಜನನಿ ಮತ್ತು ಜನ್ಮ ಭೂಮಿ ಸ್ವರ್ಗಕ್ಕಿಂತ ಮಿಗಿಲು ಅನ್ನೋದು ದುಬೈನಲ್ಲಿ ಅರ್ಥವಾಗುತ್ತಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ನನ್ನ-ಕಾಂಗ್ರೆಸ್ ಮಧ್ಯೆ ಭಕ್ತ-ಭಗವಂತನ ಸಂಬಂಧ ಇದೆ; RSS ಗೀತೆ ಹಾಡಿದ್ದಕ್ಕೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ: ಡಿ.ಕೆ ಶಿವಕುಮಾರ್; Video

ಭಾರತದ ಮೇಲೆ ಶೇ. 50 ರಷ್ಟು ಸುಂಕ ನಾಳೆ ಜಾರಿ, ಅಮೆರಿಕ ಕರಡು ಸೂಚನೆ; ಔಷಧ, ಎಲೆಕ್ಟ್ರಾನಿಕ್ಸ್‌ ವಸ್ತುಗಳಿಗೆ ವಿನಾಯಿತಿ

Ragigudda Metro ಮೆಟ್ರೋ ನಿಲ್ದಾಣದಲ್ಲಿ ತಪ್ಪಿದ ದುರಂತ, ಆಯತಪ್ಪಿ ಹಳಿ ಮೇಲೆ ಬಿದ್ದ ಸಿಬ್ಬಂದಿ!... ಮುಂದೇನಾಯ್ತು? Video

ಪದಕ ಹಾಕಿಸಿಕೊಳ್ಳಲು ನಿರಾಕರಿಸಿದ DMK ಸಚಿವನ ಪುತ್ರ, BJP ನಾಯಕ Annamalai ಹೇಳಿದ್ದೇನು? Video

'ಶಾಂತಿ ಬೇಕಾದರೆ ಯುದ್ಧಕ್ಕೆ ಸಿದ್ಧರಾಗಿ.. Sudarshan Chakra ವಾಯುರಕ್ಷಣಾ ವ್ಯವಸ್ಥೆಗೆ ಮೂರೂ ಸೇನೆಗಳ ಬೃಹತ್ ಪ್ರಯತ್ನ ಬೇಕು': CDS Chauhan

SCROLL FOR NEXT