ವಿಶೇಷ

ಒಡಿಶಾ: ಪತ್ನಿಯ ಆಸೆ ಈಡೇರಿಸಲು ಬರೋಬ್ಬರಿ 7 ಕೋಟಿ ರೂ. ದೇಗುಲ ಕಟ್ಟಿಸಿದ ಪತಿ!

Lingaraj Badiger

ಜೈಪುರ: ಒಡಿಶಾದ ಉದ್ಯಮಿಯೊಬ್ಬರು ಪತ್ನಿಯ ಬಯಕೆ ಈಡೇರಿಸುವ ಸಲುವಾಗಿ ಬರೋಬ್ಬರಿ 7 ಕೋಟಿ ರೂ. ವೆಚ್ಚದಲ್ಲಿ ದೇವಸ್ಥಾನ ಕಟ್ಟಿಸಿದ ಅಪರೂಪದ ಘಟನೆ ವರದಿಯಾಗಿದೆ.

ಪ್ರಸ್ತುತ ಹೈದರಾಬಾದ್​ನಲ್ಲಿ ನೆಲೆಸಿರುವ ಖೇತ್ರಬಾಸಿ ಲೆಂಕಾ ಎಂಬ ಉದ್ಯಮಿ ತಮ್ಮ ಪತ್ನಿ ವೈಜಯಂತಿ ಅವರಿಗಾಗಿ ಒಡಿಶಾದ ಜೈಪುರ ಜಿಲ್ಲೆಯ ಬಿಂಝಾರ್​ಪುರದ ಚಿಕಾನ ಗ್ರಾಮದಲ್ಲಿ ದೇವಿ ‘ಮಾ ಸಂತೋಷಿ’ ಭವ್ಯ ದೇಗುಲ ನಿರ್ಮಾಣವಾಗಿದ್ದು, ಎಲ್ಲರ ಗಮನ ಸೆಳೆಯುತ್ತಿದೆ.

ವೈಜಯಂತಿ ಅವರು ದೇವಿ ‘ಮಾ ಸಂತೋಶಿ’ಯ ಪರಮ ಭಕ್ತೆಯಾಗಿದ್ದಾರೆ. ಅವರು ತಮ್ಮ ತವರು ಗ್ರಾಮದಲ್ಲಿ ‘ಮಾ ಸಂತೋಷಿ’ ದೇಗುಲ ನಿರ್ಮಿಸಬೇಕೆಂಬ ಇಚ್ಛೆ ಹೊಂದಿದ್ದರು. ಹೀಗಾಗಿ ಲೆಂಕಾ ಅವರು ದೇಗುಲ ನಿರ್ಮಿಸಿದ್ದಾರೆ ಎಂದು ಒಡಿಶಾ ಮಾಧ್ಯಮಗಳು ವರದಿ ಮಾಡಿವೆ.

ದಕ್ಷಿಣ ಭಾರತದ ವಾಸ್ತುಶಿಲ್ಪದ ಪ್ರಕಾರ ಈ ದೇವಸ್ಥಾನ ನಿರ್ಮಾಣ ಮಾಡಲಾಗಿದ್ದು, ಮಾ ಸಂತೋಷಿ ದೇವಸ್ಥಾನದಲ್ಲಿ ಶಿವ, ಗಣಪತಿ, ಹನುಮಂತ ಹಾಗೂ ನವಗ್ರಹಗಳನ್ನೂ ಪೂಜಿಸಲು ಅವಕಾಶ ಮಾಡಿಕೊಡಲಾಗಿದೆ.

2008ರಲ್ಲಿ ಆರಂಭವಾಗಿದ್ದ ದೇವಸ್ಥಾನ ನಿರ್ಮಾಣ ಕಾರ್ಯ ಇತ್ತೀಚೆಗೆ ಪೂರ್ಣಗೊಂಡಿದ್ದು, ದಂಪತಿಯ ಆಶಯದಂತೆ ಉದ್ಘಾಟನೆಯೂ ಆಗಿದೆ. ಸುಂದರವಾದ ಕೆತ್ತನೆ ಮತ್ತು ವಿನ್ಯಾಸ ಹೊಂದಿರುವ ದೇಗುಲವು 86 ಅಡಿಗಳಷ್ಟು ವಿಸ್ತಾರವಾದ ಪ್ರವೇಶದ್ವಾರವನ್ನು ಹೊಂದಿದೆ ಎಂದು ವರದಿ ಉಲ್ಲೇಖಿಸಿದೆ.

SCROLL FOR NEXT