ಶಿವಮೊಗ್ಗ: 'ಈ ಜಗತ್ತಿನಲ್ಲಿ ಯಾವುದೂ ಅಸಾಧ್ಯವಲ್ಲ. ಯಾವುದೇ ವ್ಯಕ್ತಿಗೂ ಇಚ್ಛಾಶಕ್ತಿಯೇ ದೊಡ್ಡ ಸಂಪತ್ತು'. ಇದು ಚೊಚ್ಚಲ ಅಂಧರ ಟಿ-20 ಮಹಿಳಾ ವಿಶ್ವಕಪ್ ಗೆದ್ದ ಭಾರತದ ಅಂಧ ಮಹಿಳೆಯರ ಕ್ರಿಕೆಟ್ ತಂಡದ ಆಟಗಾರ್ತಿ ವಿ. ಕಾವ್ಯ ಅವರ ಮಾತು.
ರಿಪ್ಪನ್‌ಪೇಟೆಯ ನಿವಾಸಿ ಕಾವ್ಯ: ಇತ್ತೀಚಿಗೆ ಕೊಲಂಬೊದಲ್ಲಿ ನೇಪಾಳವನ್ನು ಏಳು ವಿಕೆಟ್‌ಗಳಿಂದ ಸೋಲಿಸುವ ಮೂಲಕ ಭಾರತ ತಂಡ ಚೊಚ್ಚಲ ಟಿ 20 ಅಂತರರಾಷ್ಟ್ರೀಯ ಏಕದಿನ ವಿಶ್ವಕಪ್ ಅನ್ನು ಗೆದ್ದುಕೊಂಡಿತು. ಸಾಗರ್ ತಾಲ್ಲೂಕಿನ ರಿಪ್ಪನ್‌ಪೇಟೆಯ ನಿವಾಸಿಯಾಗಿರುವ ಕಾವ್ಯ, ಬಿ 1 ಕ್ರಿಕೆಟ್ ಆಟಗಾರ್ತಿಯಾಗಿದ್ದಾರೆ. ತನ್ನ ಅಮೋಘ ಪ್ರದರ್ಶನ ಮೂಲಕ ತಂಡದ ಗೆಲುವಿಗೆ ಕಾರಣರಾಗಿದ್ದಾರೆ. ತಂಡದ ನಾಯಕಿ ಟಿಸಿ ದೀಪಿಕಾ ಕೂಡಾ ಕರ್ನಾಟಕದವರೇ ಆಗಿದ್ದಾರೆ.
ಹುಟ್ಟಿನಿಂದಲೇ ಸಂಪೂರ್ಣ ಅಂಧತ್ವ: ಹೊಸನಗರ ತಾಲ್ಲೂಕಿನ ಬರುವೆ ಗ್ರಾಮದ ಕಾವ್ಯ, ಹುಟ್ಟಿನಿಂದಲೇ ಸಂಪೂರ್ಣವಾಗಿ ಅಂಧತ್ವ ಹೊಂದಿದ್ದಾರೆ. ಆದರೆ ಇದು ಆಕೆಯನ್ನು 4 ನೇ ತರಗತಿಯವರೆಗೆ ಸ್ಥಳೀಯ ಶಾಲೆಯಲ್ಲಿ ವ್ಯಾಸಂಗ ಮಾಡಲು ತಡೆಯಲಿಲ್ಲ. 2009 ರಲ್ಲಿ ಅವರ ಕುಟುಂಬ ಶಿಕ್ಷಣ ಕೊಡಿಸಲು ತೊಂದರೆಗಳನ್ನು ಎದುರಿಸುತ್ತಿದೆ ಎಂಬುದು ಕಂಡುಬಂದಾಗ ಶಿಕ್ಷಕರು ಆಕೆಯನ್ನು ಶಿವಮೊಗ್ಗದಲ್ಲಿರುವ ವಿಶೇಷ ಶಾಲೆಗೆ ಹೋಗುವಂತೆ ಸೂಚಿಸಿದರು.
ಕುಟುಂಬ ಆರಂಭದಲ್ಲಿ ಒಪ್ಪದಿದ್ದರೂ, ಶಿಕ್ಷಕರು ಅವರನ್ನು ಮನವೊಲಿಸಿ ಗೋಪಾಲದಲ್ಲಿರುವ ಶಾರದಾದೇವಿ ಅಂಧರ ವಿಕಾಸ ಕೇಂದ್ರಕ್ಕೆ ಕಳುಹಿಸಿದರು. ಅಲ್ಲಿ ಎಸ್‌ಎಸ್‌ಎಲ್‌ಸಿ ವರೆಗೆ ವಿದ್ಯಾಭ್ಯಾಸ ಮಾಡಿದ್ದು, ಕ್ರೀಡಾಕೂಟಗಳಲ್ಲಿ ಭಾಗವಹಿಸಲು ಅಲ್ಲಿನ ಶಿಕ್ಷಕರು ಪ್ರೋತ್ಸಾಹ ನೀಡಿದ್ದಾರೆ.
ಬೆಂಗಳೂರಿನ ಸಮರ್ಥನಂ ಟ್ರಸ್ಟ್‌ನಲ್ಲಿ ಶಿಕ್ಷಣ: 2016-17 ರಲ್ಲಿ ಕಾವ್ಯ ಬೆಂಗಳೂರಿನಲ್ಲಿ ನಡೆದ ರಾಜ್ಯ ಮಟ್ಟದ ಪಂದ್ಯದಲ್ಲಿ ಭಾಗವಹಿಸಿದ್ದರು. ಪೋಷಕರು ಆರಂಭದಲ್ಲಿ ಆಕೆಯನ್ನು ಹಳ್ಳಿಯಿಂದ ಹೊರಗೆ ಕಳುಹಿಸಲು ಸಿದ್ಧರಿರಲಿಲ್ಲ. ಆದರೆ ಆಕೆಯ ಸ್ನೇಹಿತೆಯರು ಅವರನ್ನು ಮನವೊಲಿಸಿದರು. ನಂತರ ಬೆಂಗಳೂರಿನ ಸಮರ್ಥನಂ ಟ್ರಸ್ಟ್‌ನಲ್ಲಿ ಪಿಯುಸಿ ಮತ್ತು ಪದವಿಯನ್ನು ಪೂರ್ಣಗೊಳಿಸಿದರು. ಟ್ರಸ್ಟ್ ಆಕೆಯ ಶಿಕ್ಷಣ ಮತ್ತು ಅನೇಕ ಕ್ರಿಕೆಟ್ ಶಿಬಿರಗಳಲ್ಲಿ ಭಾಗವಹಿಸಲು ಬೆಂಬಲ ನೀಡಿತು.
ನಾಲ್ಕು ರಾಷ್ಟ್ರೀಯ ಟೂರ್ನಿಗಳಲ್ಲಿ ಆಡಿರುವ ಕಾವ್ಯ: ಪ್ರಸ್ತುತ ಅವರು ಬೆಂಗಳೂರಿನ ಜ್ಞಾನಭಾರತಿ ಶಿಕ್ಷಣ ಸೊಸೈಟಿಯಲ್ಲಿ ಎಂಎ ವ್ಯಾಸಂಗ ಮಾಡುತ್ತಿದ್ದಾರೆ. ಕಾವ್ಯಾ 2022 ರಿಂದ ನಾಲ್ಕು ರಾಷ್ಟ್ರೀಯ ಟೂರ್ನಿಗಳಲ್ಲಿ ಆಡಿದ್ದಾರೆ. ಎರಡು ಅಂತಾರಾಷ್ಟ್ರೀಯ ಪಂದ್ಯಗಳನ್ನು ಸಹ ಆಡಿದ್ದಾರೆ. ವಿಶ್ವಕಪ್‌ನಲ್ಲಿ ಆಡಲು ಆಯ್ಕೆಯಾದದ್ದು ಇದೇ ಮೊದಲು ಎಂದು ಅವರು ತಿಳಿಸಿದರು.
ಬಡತನದಲ್ಲಿ ಜೀವನ ಸಾಗಿಸುತ್ತಿರುವ ಕುಟುಂಬ: ತಂಡ ಮತ್ತು ತಂಡದ ವ್ಯವಸ್ಥಾಪಕರು ನನಗೆ ಬೆಂಬಲ ನೀಡಿದರು. ಭಾರತದ ಅಂಧರ ಕ್ರಿಕೆಟ್ ಸಂಘದಿಂದ (CABI)ಹೆಚ್ಚಿನ ಬೆಂಬಲವಿತ್ತು. ಶಾಲಾ ದಿನಗಳಲ್ಲಿದ್ದಾಗ, ನಾನು ಚೆನ್ನಾಗಿ ಕ್ರಿಕೆಟ್ ಆಡುತ್ತೇನೆ. ನನ್ನೊಳಗೆ ಕೀಳರಿಮೆ ಮತ್ತು ಭಯ ಇರಬಾರದು ಎಂದು ಶಿಕ್ಷಕರು ಹೇಳುತ್ತಿದ್ದರು. ಹಿರಿಯರು ನನಗೆ ತುಂಬಾ ಪ್ರೋತ್ಸಾಹ ನೀಡುತ್ತಿದ್ದರು. ತುಂಬಾ ಬಡತನದಿಂದ ಬಂದಿದ್ದು, ಪೋಷಕರು ಸಣ್ಣಪುಟ್ಟ ಕೆಲಸಗಳನ್ನು ಮಾಡುವ ಮೂಲಕ ಬದುಕು ಸಾಗಿಸುತ್ತಿದ್ದಾರೆ ಎಂದು ಕಾವ್ಯ ಹೇಳಿದ್ದಾರೆ.