ಉಡುಪಿ: ಸಾಧನೆಗೆ ಅಸಾಧ್ಯವಾದುದು ಯಾವುದೂ ಇಲ್ಲ. ಆದರೆ, ಸಾಧಿಸಲು ಮನೋಬಲ ಆತ್ಮವಿಶ್ವಾಸ ದೃಢವಾದ ನಂಬಿಕೆ ಇರಬೇಕು ಎಂಬುದಕ್ಕೆ ಮಂಗಳೂರಿನ ಈ ಆಟೋ ಚಾಲಕ ಸಾಕ್ಷಿಯಾಗಿದ್ದಾರೆ, ತಮ್ಮ ಸಾಧನೆ ಮೂಲಕ ಸ್ಫೂರ್ತಿ ನೀಡುತ್ತಿದ್ದಾರೆ.
68 ವರ್ಷದ ಇಳಿ ವಯಸ್ಸಿನಲ್ಲೂ ಮಂಗಳೂರಿನ ಆಟೋರಿಕ್ಷಾ ಚಾಲಕ ಮಾಧವ್ ಸರಿಪಳ್ಳ ಅವರು ಮ್ಯಾರಥಾನ್ ಮೇಲಿನ ತಮ್ಮ ಉತ್ಸಾಹವನ್ನು ಮುಂದುವರೆಸಿದ್ದಾರೆ.
ಸವಾಲಿನ ಜೀವನವನ್ನು ಮೆಟ್ಟಿನಿಂತೂ 100ಕ್ಕೂ ಹೆಚ್ಚು ಮ್ಯಾರಥಾನ್ ಗಳಲ್ಲಿ ಭಾಗವಹಿಸಿದ್ದು, ಇತರರಿಗೆ ಸ್ಪೂರ್ತಿಯಾಗಿದ್ದಾರೆ.
1985 ರಲ್ಲಿ ಆಟೋ ಓಡಿಸಲು ಪ್ರಾರಂಭಿಸಿದ ಮಾಧವ್ ಅವರು, ಈಗಲೂ ಮಲ್ಲಿಕಟ್ಟೆ ಕದ್ರಿಯ ಆಟೋ ಸ್ಟ್ಯಾಂಡ್‌ನಲ್ಲಿ ಕಂಡು ಬರುತ್ತಾರೆ. ಇವರ ಪುತ್ರ ಧನರಾಜ್ ಸರಿಪಳ್ಳ ವಿಕಲಚೇತನರಾಗಿದ್ದಾರೆ, ಧನರಾಜ್ ಸ್ಕೇಟರ್ ಆಗಿದ್ದು, ಚೀನಾದಲ್ಲಿ ನಡೆದ ಸ್ಪರ್ಧೆಯಲ್ಲಿ ಗಂಭೀರ ಗಾಯಗೊಂಡು, ಕ್ರೀಡೆಯಲ್ಲಿ ಪಾಲ್ಗೊಳ್ಳದ ಸ್ಥಿತಿಗೆ ತಲುಪಿದ್ದಾರೆ. ಹೀಗಾಗಿ ಮಗನ ಆಸೆಗೆ ಧನರಾಜ್ ಅವರು ಆಸರೆಯಾಗಿದ್ದು, ತಾವು ಮ್ಯಾರಥಾನ್ ನಲ್ಲಿ ಪಾಲ್ಗೊಳ್ಳುವ ಮೂಲಕ ಮಗನ ಆಸೆಯನ್ನು ನನಸು ಮಾಡುತ್ತಿದ್ದಾರೆ. ನನ್ನ ಸಾಧನೆಗೆ ಮಗನೇ ಕಾರಣ ಎಂದು ಮಾಧವ್ ಅವರು ಹೇಳಿದ್ದಾರೆ.
ಕಳೆದ 14 ವರ್ಷಗಳಲ್ಲಿ ಮಾಧವ್ ಅವರು ಕರ್ನಾಟಕ ಸೇರಿದಂತೆ ಇತರೆ ರಾಜ್ಯಗಳಲ್ಲಿ ನಡೆದ ಹಲವಾರು ಮ್ಯಾರಥಾನ್ ಗಳಲ್ಲಿ ಭಾಗವಹಿಸಿದ್ದಾರೆ. 2011ರಲ್ಲಿ ಮಂಗಳೂರಿನ ಎಡಪದವಿನಲ್ಲಿ ನಡೆದ 21 ಕಿ.ಮೀ ಮ್ಯಾರಥಾನ್ ನಲ್ಲಿ ಮಾಧವ್ ಅವರು ಮೊದಲ ಬಾರಿಗೆ ಭಾಗವಹಿಸಿದ್ದರು.
ಇದೀಗ ಮಾಧವ್ ಅವರು ಮಂಗಳೂರು ಮ್ಯಾರಥಾನ್ 2025ಕ್ಕಾಗಿ ತರಬೇತಿ ಪಡೆಯುತ್ತಿದ್ದಾರೆ. ನನ್ನ ಕುಟುಂಬದ ಜವಾಬ್ದಾರಿ ನನ್ನ ಮೇಲಿದೆ. ಹೀಗಾಗಿ ಅಭ್ಯಾಸ ಮಾಡಲು ನನಗೆ ಸಮಯ ಸಿಗುವುದಿಲ್ಲ. ವಾರದಲ್ಲಿ 3 ತರಬೇತಿ ಪಡೆಯುತ್ತಿದ್ದೇನೆ. ಸುಮಾರು 2.45 ಗಂಟೆಗಳಲ್ಲಿ 20 ಕಿಮೀಗಿಂತ ಹೆಚ್ಚು ಓಡುತ್ತೇನೆ. ಪ್ರತೀ ಬಾರಿ ತರಬೇತಿ ಬಳಿಕ ನನ್ನ ಪತ್ನಿ ನನಗೆ ಗಂಜಿ ಹಾಗೂ ಮೊಟ್ಟೆಗಳನ್ನು ನೀಡುತ್ತಾಳೆಂದು ಮಾಧವ್ ಅವರು ತಿಳಿಸಿದ್ದಾರೆ.
ಮಾಧವ್ ಅವರ ಜೀವನ ಸುಲಭವಿಲ್ಲ. ಪುತ್ರನಷ್ಟೇ ಅಲ್ಲ, ಇವರ ಪುತ್ರಿ ಕೂಡ ವಿಶೇಷಚೇತನರಾಗಿದ್ದಾರೆ. ಮೊಮ್ಮಗಳು ಕೂಡ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದಾಳೆ. 2007ರಲ್ಲಿ ಮಾಧವ್ ಅವರ ಮನೆಯ ಒಂದು ಭಾಗ ಕುಸಿದುಬಿದ್ದಿತ್ತು. ನಂತರ ದೇಣಿಗೆಯ ಮೂಲಕ 2016-17ರಲ್ಲಿ ಪುನರ್ ನಿರ್ಮಾಣ ಮಾಡಿದ್ದರು. 2018ರಲ್ಲಿ ಪುತ್ರಿಯ ವಿವಾಹಕ್ಕಾಗಿ ಆಟೋ ಮಾರಾಟ ಮಾಡಿದ್ದರು.
ಆಟೋ ಇಲ್ಲದೆ 5 ವರ್ಷಗಳ ಕಾಲ ಸಾಕಷ್ಟು ಸಂಕಷ್ಟದಲ್ಲಿ ಜೀವನ ನಡೆಸಿದೆವು. ಕ್ರೀಡಾ ಕೋಟಾದಡಿ ಮಗನಿಗೆ ಕಚೇರಿಯ ಸಹಾಯಕನಾಗಿ ಕೆಲಸ ಸಿಕ್ಕಿದೆ. ನನ್ನ ಮಗ ಬಸ್ಸಿನಲ್ಲಿ ಪ್ರಯಾಣಿಸಲು ಸಾಧ್ಯವಾಗುವುದಿಲ್ಲ. ಹೀಗಾಗಿ ಅವನನ್ನು ಪ್ರತೀನಿತ್ಯ ಕೆಲಸ ಸ್ಥಳದಿಂದ ಕರೆದುಕೊಂಡು ಹೋಗುವುದು ಬರುವುದು ಮಾಡುತ್ತಿದ್ದೆ ಎಂದು ಕಷ್ಟದ ದಿನಗಳನ್ನು ಧನರಾಜ್ ಸ್ಮರಿಸಿದ್ದಾರೆ.
ಇಂದು ಮಾಧವ್ ಅವರು ಸಂಬಂಧಿಕರೊಬ್ಬರ ಎಲೆಕ್ಟ್ರಿಕ್ ಆಟೋವನ್ನು ಓಡಿಸುತ್ತಿದ್ದು, ಪ್ರತೀದಿನ ಸುಮಾರು 800 ರೂ.ಗಳನ್ನು ಸಂಪಾದಿಸುತ್ತಿದ್ದಾರೆ.
ಮ್ಯಾರಥಾನ್ ಸಮುದಾಯವು ನನ್ನ ಶಕ್ತಿ ಮತ್ತು ಬೆಂಬಲದ ಮೂಲವಾಗಿದೆ. ಸಹ ಓಟಗಾರರಿಂದ ನನಗೆ ಅಪಾರ ಪ್ರೋತ್ಸಾಹ ಮತ್ತು ಗೌರವ ಸಿಕ್ಕಿದೆ. ಡಾ. ಅನುಪಮಾ ರಾವ್ ಮತ್ತು ಡಾ. ರಾಘವೇಂದ್ರ ರಾವ್ ಅವರ ಕುಟುಂಬಕ್ಕೆ ಧನ್ಯವಾದಗಳನ್ನು ಹೇಳಲು ಇಚ್ಛಿಸುತ್ತೇನೆ. ನನ್ನ ಮ್ಯಾರಥಾನ್ ನೋಂದಣಿ ಶುಲ್ಕವನ್ನು ಅವರೇ ಪಾವತಿಸುತ್ತಿದ್ದಾರೆ. ನಾನು ಅವರಿಗೆ ಕೃತಜ್ಞನಾಗಿದ್ದೇನೆಂದು ಮಾಧವ್ ಅವರು ಹೇಳಿದ್ದಾರೆ.
ಮಂಗಳೂರು ರನ್ನರ್ಸ್ ಕ್ಲಬ್‌ನ ಮಾಜಿ ಅಧ್ಯಕ್ಷೆ ಅಮಿತಾ ಡಿ'ಸೋಜಾ ಅವರು ಮಾತನಾಡಿ, ನಾನು ಮಾಧವ್ ಅವರೊಂದಿಗೆ ಓಡಿದ್ದೇನೆ. ಅವರು ನಿಜವಾಗಿಯೂ ಸ್ಪೂರ್ತಿದಾಯಕ ವ್ಯಕ್ತಿ. ಅವರು ಈಗ ತಮ್ಮ ಸತತ ನಾಲ್ಕನೇ ಮಂಗಳೂರು ಮ್ಯಾರಥಾನ್‌ಗೆ ತಯಾರಿ ನಡೆಸುತ್ತಿದ್ದಾರೆ. ಎಲ್ಲಾ ಕಷ್ಟಗಳ ಹೊರತಾಗಿಯೂ, ದೃಢ ಹಾಗೂ ಸಮರ್ಪಿತ ವ್ಯಕ್ತಿಯಾಗಿದ್ದಾರೆ. ನಮಗೆಲ್ಲರಿಗೂ ಒಂದು ಮಾದರಿ ಎಂದು ಶ್ಲಾಘಿಸಿದ್ದಾರೆ.
ಯೆನೆಪೋಯ ದಂತ ಕಾಲೇಜಿನ ಪ್ರಾಧ್ಯಾಪಕಿ ಡಾ. ಅನುಪಮಾ ರಾವ್ ಅವರು ಮಾತನಾಡಿ, ಕೆಲ ವರ್ಷಗಳ ಹಿಂದೆ ಸ್ನಾತಕೋತ್ತರ ಅಥ್ಲೆಟಿಕ್ ಮೀಟ್‌ನಲ್ಲಿ ಮಾಧವ್ ಅವರನ್ನು ಭೇಟಿ ಮಾಡಿದ್ದೆ. ನಂತರ ನಾನು ಅವರ ಮನೆಗೆ ಭೇಟಿ ನೀಡಿದ್ದೆ. ಈ ವೇಳೆ ಅವರ ಕಷ್ಟಗಳು ತಿಳಿಯಿತು, ಅವರಿಗೆ ಸಾಧ್ಯವಿರುವ ಎಲ್ಲಾ ರೀತಿಯಲ್ಲಿ ಬೆಂಬಲ ನೀಡಲು ನಿರ್ಧರಿಸಿದೆ. ಮಾಧವ್ ವಿನಮ್ರ ಮತ್ತು ಕಠಿಣ ಪರಿಶ್ರಮಿ. ಹೆಚ್ಚಿನ ಮನ್ನಣೆಗೆ ಅರ್ಹರಾದ ವ್ಯಕ್ತಿಯಾಗಿದ್ದಾರೆಂದು ಹೇಳಿದ್ದಾರೆ.