ಬಾಗಲಕೋಟೆ: ಕೃಷಿ ಅಂದ್ರೆ ಕೇವಲ ಸಾಂಪ್ರದಾಯಿಕ ಬೆಳೆಗಳಷ್ಟೇ ಅಲ್ಲ, ಹೊಸ ಆಲೋಚನೆ ಇದ್ದರೆ ಸಣ್ಣ ಜಾಗದಲ್ಲೂ ಕೋಟಿಗಟ್ಟಲೆ ಗಳಿಸಬಹುದು ಎಂಬುದನ್ನು ಮುಧೋಳ ತಾಲೂಕಿನ ಯುವ ರೈತ ಮಹೇಶ್ ಕೊಳೂರು ಸಾಬೀತುಪಡಿಸಿದ್ದಾರೆ.
ಕೇವಲ 500 ರೂಪಾಯಿಗಳ ಆರಂಭಿಕ ಬಂಡವಾಳದೊಂದಿಗೆ ಆರಂಭವಾದ ಇವರ ಅಣಬೆ ಕೃಷಿ ಪಯಣ, ಇಂದು ತಿಂಗಳಿಗೆ ಲಕ್ಷಾಂತರ ರೂಪಾಯಿ ಲಾಭ ತಂದುಕೊಡುವ ಬೃಹತ್ ಉದ್ಯಮವಾಗಿ ಬೆಳೆದು ನಿಂತಿದೆ.
2021ರಲ್ಲಿ ಕೇವಲ 30 ಅಣಬೆ ಬ್ಯಾಗ್‌ಗಳೊಂದಿಗೆ ಕೃಷಿ ಆರಂಭಿಸಿದ್ದ ಮುಧೋಳ ತಾಲೂಕಿನ ಮಹೇಶ್ ಕೊಳೂರ ಅವರ ಪಯಣ ಇಂದು ದಿನಕ್ಕೆ ಸುಮಾರು 200 ಕೆ.ಜಿ. ಅಣಬೆ ಉತ್ಪಾದಿಸುವ ಮಟ್ಟಕ್ಕೆ ತಲುಪಿದೆ.
ಕೃಷಿಯ ಜೊತೆಗೆ ಮೌಲ್ಯವರ್ಧನೆ, ತರಬೇತಿ ಮತ್ತು ಮಾರುಕಟ್ಟೆ ವ್ಯವಸ್ಥೆಯನ್ನು ಬೆಳೆಸಿಕೊಂಡಿರುವ ಮಹೇಶ್, ಗ್ರಾಮೀಣ ಭಾಗದಲ್ಲಿ ಕೃಷಿ ಆಧಾರಿತ ಉದ್ಯಮಶೀಲತೆಗೆ ಹೊಸ ಮಾದರಿಯಾಗಿದ್ದಾರೆ.
ಒಮ್ಮೆ ಅಣಬೆ ಬೆಳೆದರೂ ಅದನ್ನು ಯಾರಿಗೆ ಮಾರಬೇಕು ಎಂಬುದೇ ದೊಡ್ಡ ಪ್ರಶ್ನೆಯಾಗಿತ್ತು. ಇಂದು ಅದೇ ಮಹೇಶ್ ಅವರ ಉತ್ಪನ್ನಕ್ಕಾಗಿ ಕರ್ನಾಟಕದ ವಿವಿಧ ಭಾಗಗಳಿಂದ ಬೇಡಿಕೆ ಬರುತ್ತಿದೆ.
ಕೇವಲ ಅಣಬೆ ಮಾರಾಟಕ್ಕೆ ಸೀಮಿತವಾಗದೆ, ಅಣಬೆ ಪುಡಿ, ಕುಕ್ಕೀಸ್, ಪಾಪಡ್, ಚಿಪ್ಸ್, ಉಪ್ಪಿನಕಾಯಿ ಸೇರಿದಂತೆ ಸುಮಾರು 20ಕ್ಕೂ ಹೆಚ್ಚು ಮೌಲ್ಯವರ್ಧಿತ ಉತ್ಪನ್ನಗಳನ್ನು ತಯಾರಿಸುವ ಉದ್ಯಮವಾಗಿ ತಮ್ಮ ಕಾರ್ಯವನ್ನು ವಿಸ್ತರಿಸಿದ್ದಾರೆ.
30 ಬ್ಯಾಗ್‌ಗಳಿಂದ ಆರಂಭವಾದ ಪಯಣ
ಕೃಷಿ ಡಿಪ್ಲೊಮಾ ಪೂರ್ಣಗೊಳಿಸಿದ ಮಹೇಶ್ ಕೊಳೂರ ಅವರಿಗೆ ಕೃಷಿ ಕ್ಷೇತ್ರದ ಬಗ್ಗೆ ಮೊದಲಿನಿಂದಲೂ ಆಸಕ್ತಿ. 2021ರಲ್ಲಿ ಅಣಬೆ ಕೃಷಿಯನ್ನು ಪ್ರಾಯೋಗಿಕವಾಗಿ ಆರಂಭಿಸುವ ನಿರ್ಧಾರ ಕೈಗೊಂಡರು.
2021ರಲ್ಲಿ ಪ್ರಯೋಗದ ರೀತಿಯಲ್ಲಿ ಕೇವಲ 30 ಬ್ಯಾಗ್‌ಗಳೊಂದಿಗೆ ಅಣಬೆ ಬೆಳೆಯಲು ಆರಂಭಿಸಿದೆ. ಆಗ ದಿನಕ್ಕೆ ಕೇವಲ 3 ಕೆ.ಜಿ.ಯಷ್ಟು ಅಣಬೆ ಸಿಗುತ್ತಿತ್ತು. ಇಂದು ದಿನಕ್ಕೆ ಸುಮಾರು 200 ಕೆ.ಜಿ. ಉತ್ಪಾದಿಸುತ್ತಿದ್ದೇನೆ ಎಂದು ಮಹೇಶ್ ತಮ್ಮ ಪಯಣವನ್ನು ಸ್ಮರಿಸಿದ್ದಾರೆ.
ಆದರೆ, ಆರಂಭದ ದಿನಗಳು ಅಷ್ಟು ಸುಲಭವಾಗಿರಲಿಲ್ಲ. ಅಣಬೆ ಬೆಳೆಸುವುದು ಒಂದು ಸವಾಲಾಗಿದ್ದರೆ, ಅದನ್ನು ಮಾರುಕಟ್ಟೆಯಲ್ಲಿ ಮಾರಾಟ ಮಾಡುವುದು ಮತ್ತೊಂದು ದೊಡ್ಡ ಸವಾಲಾಗಿತ್ತು.
ಮಹೇಶ್ ಅವರ ಸಂಬಂಧಿಯೊಬ್ಬರು ಈ ಹಿಂದೆ ಅಣಬೆ ಕೃಷಿ ಆರಂಭಿಸಿ, ಉತ್ಪನ್ನಕ್ಕೆ ಸೂಕ್ತ ಮಾರುಕಟ್ಟೆ ಸಿಗದೆ ನಷ್ಟ ಅನುಭವಿಸಿ ಕೃಷಿಯನ್ನೇ ಕೈಬಿಟ್ಟಿದ್ದರು. ಇದನ್ನೇ ಮಹೇಶ್ ಅವರು ಸವಾಲಾಗಿ ತೆಗೆದುಕೊಂಡರು.
ನನ್ನ ಸಂಬಂಧಿ ಅಣಬೆ ಬೆಳೆದಿದ್ದರು. ಆದರೆ, ಮಾರುಕಟ್ಟೆ ಸಿಗದೆ ನಷ್ಟ ಅನುಭವಿಸಿ ಅದನ್ನು ನಿಲ್ಲಿಸಿದರು. ನಾನು ಅದನ್ನು ಸವಾಲಾಗಿ ತೆಗೆದುಕೊಂಡು, ಅಣಬೆ ಬೆಳೆಯುವುದರ ಜೊತೆಗೆ ಸ್ವಂತ ಮಾರುಕಟ್ಟೆ ವ್ಯವಸ್ಥೆಯನ್ನು ನಿರ್ಮಿಸಿಕೊಳ್ಳಬೇಕು ಎಂದು ನಿರ್ಧರಿಸಿದೆ.
ಮಾರುಕಟ್ಟೆಗಾಗಿ 80 ಕಿ.ಮೀ. ಬೈಕ್ ಪ್ರಯಾಣ!
ಅಣಬೆ ಕೃಷಿಯ ಬಗ್ಗೆ ಪುಸ್ತಕಗಳಲ್ಲಿ ಓದುವುದಕ್ಕಿಂತ ಪ್ರಾಯೋಗಿಕವಾಗಿ ಕಲಿಯುವುದು ಮುಖ್ಯ ಎಂದು ಅರಿತ ಮಹೇಶ್, ಕರ್ನಾಟಕದ ವಿವಿಧ ಭಾಗಗಳಲ್ಲಿದ್ದ ಅಣಬೆ ಕೃಷಿ ಘಟಕಗಳಿಗೆ ಭೇಟಿ ನೀಡಿದರು.
ಅಲ್ಲಿನ ಕೃಷಿಕರನ್ನು ಭೇಟಿಯಾಗಿ ಉತ್ಪಾದನೆಯ ವಿಧಾನ, ನಿರ್ವಹಣೆ, ಕೊಯ್ಲು ಮತ್ತು ಮಾರುಕಟ್ಟೆ ಬಗ್ಗೆ ಮಾಹಿತಿ ಪಡೆದುಕೊಂಡರು. ಆದರೆ, ಕಲಿತ ಜ್ಞಾನವನ್ನು ತಮ್ಮ ಜಮೀನಿನಲ್ಲಿ ಬಳಸಿದ ನಂತರ ಎದುರಾದ ದೊಡ್ಡ ಸಮಸ್ಯೆ ಮಾರುಕಟ್ಟೆಯದ್ದೇ.
ಆ ದಿನಗಳಲ್ಲಿ ಮಹೇಶ್ ತಾವು ಬೆಳೆದ ತಾಜಾ ಅಣಬೆಗಳನ್ನು ಬೈಕ್‌ನಲ್ಲಿ ತೆಗೆದುಕೊಂಡು ಹೋಗಿ ಮಾರಾಟ ಮಾಡುತ್ತಿದ್ದರು. ಪ್ರತಿದಿನ ಸುಮಾರು 80 ಕಿ.ಮೀ.ವರೆಗೆ ಬೈಕ್‌ನಲ್ಲಿ ಸಂಚರಿಸಿ ಗ್ರಾಹಕರನ್ನು ಹುಡುಕುತ್ತಿದ್ದ ದಿನಗಳೂ ಇದ್ದವು.
ಅಣಬೆ ಬಗ್ಗೆ ಜನರಿಗೆ ಹೆಚ್ಚಿನ ಮಾಹಿತಿ ಇರಲಿಲ್ಲ. ಕೆಲವರು ಖರೀದಿಸಲು ಹಿಂದೇಟು ಹಾಕುತ್ತಿದ್ದರು. ಅಣಬೆಯ ಪೌಷ್ಟಿಕಾಂಶ ಮತ್ತು ಆರೋಗ್ಯದ ಪ್ರಯೋಜನಗಳ ಬಗ್ಗೆ ಜನರಿಗೆ ವಿವರಿಸಿ ಹೇಳಬೇಕಾಗಿತ್ತು. ಹಲವು ಗಂಟೆಗಳ ಕಾಲ ಬೈಕ್‌ನಲ್ಲಿ ಅಣಬೆ ಹೊತ್ತುಕೊಂಡು ಖರೀದಿದಾರರನ್ನು ಹುಡುಕಿದ ದಿನಗಳಿವೆ ಎಂದು ಮಹೇಶ್ ತಿಳಿಸಿದ್ದಾರೆ.
ಬಳಿಕ ಜನರಿಗೆ ನೇರವಾಗಿ ಅಣಬೆಯನ್ನು ಪರಿಚಯಿಸುವುದು ಅಗತ್ಯ ಎಂದು ಅರಿತ ಮಹೇಶ್, ವಿವಿಧ ಸರ್ಕಾರಿ ಇಲಾಖೆಗಳ ಸಂಪರ್ಕಕ್ಕೆ ಬಂದರು. ಇಲಾಖೆಗಳು ಆಯೋಜಿಸುವ ವಸ್ತುಪ್ರದರ್ಶನಗಳು, ಕೃಷಿ ಮೇಳಗಳು ಮತ್ತು ವಿವಿಧ ಕಾರ್ಯಕ್ರಮಗಳಲ್ಲಿ ಅಣಬೆ ಮಾರಾಟ ಮಾಡಲು ಅನುಮತಿ ಕೋರಿದರು.
ಅಲ್ಲಿ ಜನರಿಗೆ ಅಣಬೆಯ ಉತ್ಪನ್ನಗಳನ್ನು ಪರಿಚಯಿಸುವುದರ ಜೊತೆಗೆ, ಅದರ ಪೌಷ್ಟಿಕಾಂಶದ ಬಗ್ಗೆ ಮಾಹಿತಿ ನೀಡಿದರು.
ಹೀಗೆ ನಿಧಾನವಾಗಿ ಜನರಲ್ಲಿ ಅಣಬೆಯ ಬಗ್ಗೆ ಅರಿವು ಹೆಚ್ಚಾಯಿತು. ಮೊದಲಿಗೆ ಅನುಮಾನದಿಂದ ನೋಡುತ್ತಿದ್ದ ಗ್ರಾಹಕರು ನಂತರ ಅಣಬೆ ಖರೀದಿಸಲು ಆರಂಭಿಸಿದರು. ಒಂದು ಕಡೆ ಉತ್ಪಾದನೆ ಹೆಚ್ಚುತ್ತಿದ್ದರೆ, ಮತ್ತೊಂದೆಡೆ ಮಾರುಕಟ್ಟೆಯೂ ವಿಸ್ತರಿಸತೊಡಗಿತು.
2024ರಲ್ಲಿ ಹೊಸ ತಿರುವು: ಅಣಬೆಯಿಂದ 20ಕ್ಕೂ ಹೆಚ್ಚು ಉತ್ಪನ್ನ
ತಾಜಾ ಅಣಬೆಗೆ ಸೀಮಿತ ಮಾರುಕಟ್ಟೆ ಇರುವುದನ್ನು ಗಮನಿಸಿದ ಮಹೇಶ್, ಉತ್ಪನ್ನಕ್ಕೆ ಮೌಲ್ಯವರ್ಧನೆ ಮಾಡುವತ್ತ ಗಮನ ಹರಿಸಿದರು.
2024ರಲ್ಲಿ ಅಣಬೆ ಸಂಸ್ಕರಣೆ ಆರಂಭಿಸಿದ ಅವರು, ಇಂದು ಅಣಬೆಯಿಂದ ಸುಮಾರು 20 ಬಗೆಯ ಉತ್ಪನ್ನಗಳನ್ನು ತಯಾರಿಸುತ್ತಿದ್ದಾರೆ. ಅಣಬೆ ಪುಡಿ, ಕುಕ್ಕೀಸ್, ಪಾಪಡ್, ಚಿಪ್ಸ್, ಉಪ್ಪಿನಕಾಯಿ ಸೇರಿದಂತೆ ಹಲವು ಉತ್ಪನ್ನಗಳು ಅವರ ಘಟಕದಲ್ಲಿ ತಯಾರಾಗುತ್ತಿವೆ.
ಇದರಿಂದ ಎರಡು ಲಾಭವಾಯಿತು. ಅಣಬೆ ಮಾರಾಟಕ್ಕೆ ಹೊಸ ಮಾರುಕಟ್ಟೆ ಸಿಕ್ಕಿತು. ಮತ್ತೊಂದೆಡೆ ತಾಜಾ ಅಣಬೆ ಮಾರಾಟವಾಗದೆ ಉಳಿದಾಗ ಉಂಟಾಗುತ್ತಿದ್ದ ನಷ್ಟವೂ ಕಡಿಮೆಯಾಯಿತು.
ತಾಯಿಯ ಆರೋಗ್ಯದಿಂದ ಹುಟ್ಟಿದ ಅಣಬೆ ಪುಡಿ
ಮಹೇಶ್ ಅವರ ಮೌಲ್ಯವರ್ಧಿತ ಉತ್ಪನ್ನಗಳ ಪಯಣದಲ್ಲಿ ಅಣಬೆ ಪುಡಿಗೆ ವಿಶೇಷ ಸ್ಥಾನವಿದೆ. ಅದರ ಹಿಂದೆ ಅವರ ತಾಯಿಯ ಆರೋಗ್ಯಕ್ಕೆ ಸಂಬಂಧಿಸಿದ ಅನುಭವವಿದೆ.
ವಿದ್ಯಾರ್ಥಿಯಾಗಿದ್ದಾಗ ಧಾರವಾಡದಲ್ಲಿ ಬೇಕರಿಯಲ್ಲಿ ಕೆಲಸ ಮಾಡುತ್ತಿದ್ದ ಮಹೇಶ್, ಅಣಬೆಯ ಪೌಷ್ಟಿಕ ಮತ್ತು ಔಷಧೀಯ ಗುಣಗಳ ಬಗ್ಗೆ ತಿಳಿದುಕೊಂಡಿದ್ದರು. ಅವರ ತಾಯಿ ಮಧುಮೇಹದಿಂದ ಬಳಲುತ್ತಿದ್ದ ಹಿನ್ನೆಲೆಯಲ್ಲಿ ಅಣಬೆ ಪುಡಿ ತಯಾರಿಸಿ ಅವರಿಗೆ ನೀಡಲು ಆರಂಭಿಸಿದರು.
“ನನ್ನ ತಾಯಿಗೆ ಮಧುಮೇಹವಿದೆ. ಕಾಲೇಜಿನ ದಿನಗಳಲ್ಲಿ ಅಣಬೆಯಲ್ಲಿ ಹಲವು ಔಷಧೀಯ ಗುಣಗಳಿವೆ ಎಂಬುದನ್ನು ತಿಳಿದುಕೊಂಡಿದ್ದೆ. ನಂತರ ಅಣಬೆ ಪುಡಿ ತಯಾರಿಸಿ ತಾಯಿಗೆ ನೀಡಲು ಆರಂಭಿಸಿದೆ. ಅವರ ಆರೋಗ್ಯದಲ್ಲಿ ಸುಧಾರಣೆ ಕಂಡುಬಂದಿದ್ದು, ಈ ಉತ್ಪನ್ನದ ಬಗ್ಗೆ ಮತ್ತಷ್ಟು ಯೋಚಿಸಲು ಪ್ರೇರಣೆ ನೀಡಿತು,” ಎಂದು ಮಹೇಶ್ ಹೇಳುತ್ತಾರೆ.
ಅವರ ಈ ಅನುಭವವೇ ಮುಂದೆ ಅಣಬೆ ಆಧಾರಿತ ಹಲವು ಉತ್ಪನ್ನಗಳನ್ನು ಅಭಿವೃದ್ಧಿಪಡಿಸುವ ಆಸಕ್ತಿಗೆ ಕಾರಣವಾಯಿತು.
ತಾಯಿಯೇ ಉದ್ಯಮದ ಬೆನ್ನೆಲುಬು
ಮಹೇಶ್ ಅವರ ಉದ್ಯಮದ ಯಶಸ್ಸಿನ ಹಿಂದೆ ಕುಟುಂಬದ ಬೆಂಬಲವೂ ಪ್ರಮುಖ ಪಾತ್ರ ವಹಿಸಿದೆ. ಅದರಲ್ಲೂ ತಾಯಿಯ ಸಹಕಾರವನ್ನು ಅವರು ವಿಶೇಷವಾಗಿ ಸ್ಮರಿಸುತ್ತಾರೆ.
ನನ್ನ ತಾಯಿ ಪ್ರತಿಯೊಂದು ಹಂತದಲ್ಲೂ ನನ್ನ ಜೊತೆ ನಿಂತರು. ಅವರ ಬೆಂಬಲವಿಲ್ಲದೆ ಈ ಉದ್ಯಮ ಇಷ್ಟರ ಮಟ್ಟಿಗೆ ಬೆಳೆಯುತ್ತಿರಲಿಲ್ಲ,” ಎನ್ನುತ್ತಾರೆ ಮಹೇಶ್.
ಕೃಷಿ, ಉತ್ಪಾದನೆ, ಮಾರುಕಟ್ಟೆ, ಸಂಸ್ಕರಣೆ ಮತ್ತು ತರಬೇತಿ—ಎಲ್ಲ ಕ್ಷೇತ್ರಗಳಲ್ಲೂ ಹಂತ ಹಂತವಾಗಿ ಮುಂದುವರಿದ ಮಹೇಶ್ ಅವರ ಉದ್ಯಮ, ಇಂದು ಒಂದು ಸಣ್ಣ ಕೃಷಿ ಘಟಕದಿಂದ ಸಂಪೂರ್ಣ ಮೌಲ್ಯ ಸರಪಳಿಯನ್ನು ಹೊಂದಿರುವ ಉದ್ಯಮವಾಗಿ ಬೆಳೆದಿದೆ.
ರೈತನಿಂದ ತರಬೇತುದಾರನಾದ ಮಹೇಶ್
ತಾವು ಕಲಿತ ಜ್ಞಾನವನ್ನು ತಮ್ಮಲ್ಲೇ ಇಟ್ಟುಕೊಳ್ಳದೆ ಇತರರಿಗೂ ಹಂಚಬೇಕು ಎಂಬ ಉದ್ದೇಶದಿಂದ ಮಹೇಶ್ 2023ರಲ್ಲಿ ಅಣಬೆ ಕೃಷಿ ತರಬೇತಿ ಕಾರ್ಯಕ್ರಮಗಳನ್ನು ಆರಂಭಿಸಿದರು.
ಇದುವರೆಗೆ ಸುಮಾರು 3,000 ಮಂದಿ ಅವರ ತರಬೇತಿ ಕೇಂದ್ರದಲ್ಲಿ ಅಣಬೆ ಕೃಷಿಯ ಕುರಿತು ತರಬೇತಿ ಪಡೆದಿದ್ದಾರೆ. ಇವರಲ್ಲಿ ಸುಮಾರು 30 ಪ್ರತಿಶತ ಮಂದಿ ಸ್ವಂತ ಅಣಬೆ ಕೃಷಿ ಘಟಕಗಳನ್ನು ಸ್ಥಾಪಿಸಿದ್ದಾರೆ. ಇದು ಮಹೇಶ್ ಅವರ ಉದ್ಯಮಕ್ಕೆ ಮತ್ತೊಂದು ಆಯಾಮ ನೀಡಿದೆ.
ತರಬೇತಿ ಪಡೆದ ಕೆಲವರು ತಾವು ಬೆಳೆದ ಅಣಬೆಯನ್ನು ಮಹೇಶ್ ಅವರ ಸಂಸ್ಕರಣಾ ಘಟಕಕ್ಕೆ ಪೂರೈಸುತ್ತಿದ್ದಾರೆ. ಇನ್ನೂ ಕೆಲವರು ಸ್ಥಳೀಯ ಮಾರುಕಟ್ಟೆಯಲ್ಲಿ ಮಾರಾಟ ಮಾಡುತ್ತಿದ್ದಾರೆ.
ನಮ್ಮಲ್ಲಿ ತರಬೇತಿ ಪಡೆದ ಅನೇಕರು ಈಗ ಅಣಬೆ ಬೆಳೆಸಿ ನಮ್ಮ ಸಂಸ್ಕರಣಾ ಘಟಕಕ್ಕೆ ಪೂರೈಸುತ್ತಿದ್ದಾರೆ. ಕೆಲವರು ಸ್ಥಳೀಯ ಮಾರುಕಟ್ಟೆಯಲ್ಲಿ ಮಾರಾಟ ಮಾಡುತ್ತಿದ್ದಾರೆ. ಈ ಮೂಲಕ ನೇರವಾಗಿ ಮತ್ತು ಪರೋಕ್ಷವಾಗಿ ನೂರಾರು ಮಂದಿಗೆ ಉದ್ಯೋಗ ಸೃಷ್ಟಿಯಾಗಿದೆ,” ಎಂದು ಮಹೇಶ್ ಹೇಳುತ್ತಾರೆ.
ಸಾಮಾಜಿಕ ಜಾಲತಾಣವೂ ಮಾರುಕಟ್ಟೆಯ ಸೇತುವೆ
ಅಣಬೆ ಉತ್ಪನ್ನಗಳಿಗೆ ಮಾರುಕಟ್ಟೆ ವಿಸ್ತರಿಸುವಲ್ಲಿ ಸಾಮಾಜಿಕ ಜಾಲತಾಣಗಳೂ ಮಹೇಶ್ ಅವರಿಗೆ ನೆರವಾಗಿವೆ.
ಸ್ಥಳೀಯ ಗ್ರಾಹಕರನ್ನು ಮೀರಿ ಕರ್ನಾಟಕದ ವಿವಿಧ ಜಿಲ್ಲೆಗಳ ಗ್ರಾಹಕರನ್ನು ತಲುಪಲು ಸಾಮಾಜಿಕ ಜಾಲತಾಣಗಳನ್ನು ಬಳಸಿಕೊಂಡರು. ಉತ್ಪನ್ನಗಳ ಮಾಹಿತಿ, ಅಣಬೆ ಕೃಷಿಯ ವಿಧಾನ ಮತ್ತು ಅದರ ಬಳಕೆಯ ಬಗ್ಗೆ ನಿರಂತರವಾಗಿ ಮಾಹಿತಿ ಹಂಚಿಕೊಳ್ಳುವುದರಿಂದ ಗ್ರಾಹಕರ ಸಂಖ್ಯೆ ಹೆಚ್ಚಾಯಿತು.
“ಸಾಮಾಜಿಕ ಜಾಲತಾಣಗಳು ಕರ್ನಾಟಕದಾದ್ಯಂತ ಗ್ರಾಹಕರನ್ನು ತಲುಪಲು ಸಹಾಯ ಮಾಡಿವೆ. ನಮ್ಮ ಉತ್ಪನ್ನಗಳ ಬಗ್ಗೆ ಜನರಿಗೆ ತಿಳಿಯುವಂತಾಯಿತು. ಹೊಸ ಗ್ರಾಹಕರನ್ನು ಸೆಳೆಯಲು ಇದು ಪ್ರಮುಖ ಕಾರಣವಾಯಿತು,” ಎನ್ನುತ್ತಾರೆ ಮಹೇಶ್.
ಸರ್ಕಾರದ ಮಾನ್ಯತೆ
ಮಹೇಶ್ ಅವರ ನವೀನ ಪ್ರಯತ್ನಕ್ಕೆ ಸರ್ಕಾರದ ಮಾನ್ಯತೆಯೂ ದೊರೆತಿದೆ. ಅಣಬೆ ಆಧಾರಿತ ಉತ್ಪನ್ನಗಳ ತಯಾರಿಕೆಗೆ ಕೃಷಿ ಇಲಾಖೆಯ ‘ನವ ಉದ್ಯಮ’ ಯೋಜನೆಯಡಿ ಆರ್ಥಿಕ ನೆರವು ಪಡೆದ ಕರ್ನಾಟಕದ ಮೊದಲ ಉದ್ಯಮಿಯಾಗಿ ಅವರು ಗುರುತಿಸಿಕೊಂಡಿದ್ದಾರೆ.
ಕೃಷಿ ಕೇವಲ ಬೆಳೆ ಬೆಳೆಯುವುದಕ್ಕೆ ಸೀಮಿತವಲ್ಲ; ಉತ್ಪನ್ನವನ್ನು ಸಂಸ್ಕರಿಸಿ, ಪ್ಯಾಕೇಜ್ ಮಾಡಿ, ಮಾರುಕಟ್ಟೆ ಮಾಡಿ ಹೆಚ್ಚಿನ ಆದಾಯ ಗಳಿಸಬಹುದು ಎಂಬುದನ್ನು ಮಹೇಶ್ ತಮ್ಮ ಪ್ರಯೋಗದ ಮೂಲಕ ತೋರಿಸಿದ್ದಾರೆ.
ರೂ.30 ಸಾವಿರದಲ್ಲೇ ಉದ್ಯಮ ಆರಂಭಿಸಬಹುದೇ?
ಅಣಬೆ ಕೃಷಿ ಆರಂಭಿಸಲು ದೊಡ್ಡ ಮೊತ್ತದ ಬಂಡವಾಳ ಅಗತ್ಯವಿಲ್ಲ ಎಂಬುದು ಮಹೇಶ್ ಅವರ ಅಭಿಪ್ರಾಯ.
ನಿಮ್ಮ ಬಳಿ ಒಂದು ಶೆಡ್ ಇದ್ದರೆ ಸುಮಾರು ರೂ..30 ಸಾವಿರದಲ್ಲಿ ಅಣಬೆ ಕೃಷಿಯನ್ನು ಆರಂಭಿಸಬಹುದು. ಆಯ್ಸ್ಟರ್, ಮಿಲ್ಕಿ ಮತ್ತು ಬಟನ್ ಅಣಬೆಗಳು ವಾಣಿಜ್ಯ ಕೃಷಿಗೆ ಸೂಕ್ತವಾದ ತಳಿಗಳಾಗಿವೆ,” ಎಂದು ಹೇಳುತ್ತಾರೆ.
ಆದರೆ, ಕೇವಲ ಉತ್ಪಾದನೆ ಆರಂಭಿಸುವುದರಿಂದ ಯಶಸ್ಸು ಸಿಗುವುದಿಲ್ಲ ಎಂಬುದನ್ನೂ ಅವರು ಎಚ್ಚರಿಸಿದ್ದಾರೆ. ಮೊದಲು ಮಾರುಕಟ್ಟೆಯನ್ನು ಅಧ್ಯಯನ ಮಾಡಬೇಕು. ಎಷ್ಟು ಉತ್ಪಾದಿಸಬೇಕು, ಯಾರಿಗೆ ಮಾರಾಟ ಮಾಡಬೇಕು ಮತ್ತು ಯಾವ ದರದಲ್ಲಿ ಮಾರಾಟ ಮಾಡಬಹುದು ಎಂಬುದನ್ನು ತಿಳಿದುಕೊಂಡ ಬಳಿಕವೇ ಉತ್ಪಾದನೆ ಹೆಚ್ಚಿಸಬೇಕು ಎನ್ನುವುದು ಅವರ ಸಲಹೆ.
‘ಅಣಬೆ ಶ್ರೀಮಂತರ ಆಹಾರ’ ಎಂಬ ತಪ್ಪು ಕಲ್ಪನೆ
ಅಣಬೆ ಕುರಿತ ಕೆಲವು ತಪ್ಪು ಕಲ್ಪನೆಗಳು ಇನ್ನೂ ಜನರಲ್ಲಿವೆ ಎಂದು ಮಹೇಶ್ ಹೇಳುತ್ತಾರೆ. “ಅಣಬೆ ದುಬಾರಿ, ಶ್ರೀಮಂತರು ಮಾತ್ರ ತಿನ್ನುವ ಆಹಾರ ಎಂಬ ಭಾವನೆ ಕೆಲವರಲ್ಲಿದೆ. ಇನ್ನೂ ಕೆಲವರು ಅಣಬೆ ಮಾಂಸಾಹಾರ ಎಂದು ಭಾವಿಸುತ್ತಾರೆ. ಎರಡೂ ತಪ್ಪು ಕಲ್ಪನೆಗಳು. ಅಣಬೆ ಸಸ್ಯಾಹಾರವಾಗಿದ್ದು, ಎಲ್ಲರೂ ಸೇವಿಸಬಹುದು,” ಎಂದು ಸ್ಪಷ್ಟಪಡಿಸುತ್ತಾರೆ. ಜನರಲ್ಲಿ ಅಣಬೆಯ ಬಗ್ಗೆ ಅರಿವು ಹೆಚ್ಚಿಸುವುದೂ ತಮ್ಮ ಉದ್ಯಮದ ಪ್ರಮುಖ ಉದ್ದೇಶಗಳಲ್ಲಿ ಒಂದಾಗಿದೆ ಎನ್ನುತ್ತಾರೆ.
ಮಹೇಶ್ ನೋಡಿ ಕೃಷಿಗೆ ಬಂದ ಎಂಜಿನಿಯರಿಂಗ್ ಪದವೀಧರ
ಮಹೇಶ್ ಅವರ ಯಶಸ್ಸು ಮತ್ತೊಬ್ಬ ಯುವಕನಿಗೂ ಪ್ರೇರಣೆಯಾಗಿದೆ. ಮುಧೋಳದ ಎಂಜಿನಿಯರಿಂಗ್ ಪದವೀಧರ ಸಾಗರ್ ಸಾಲುಂಕೆ, ಮಹೇಶ್ ಅವರ ಬಳಿ ತರಬೇತಿ ಪಡೆದು ಸ್ವಂತ ಅಣಬೆ ಕೃಷಿ ಘಟಕ ಆರಂಭಿಸಿದ್ದಾರೆ.
ಸ್ಪರ್ಧಾತ್ಮಕ ಪರೀಕ್ಷೆಗಳ ತಯಾರಿಯಲ್ಲಿದ್ದರೂ, ಹೆಚ್ಚುವರಿ ಆದಾಯದ ಮೂಲವಾಗಿ ಅಣಬೆ ಕೃಷಿಯನ್ನು ಮುಂದುವರಿಸುತ್ತಿದ್ದಾರೆ.
ಒಂದು ವರ್ಷದ ಹಿಂದೆ ಅಣಬೆ ಕೃಷಿ ಆರಂಭಿಸಿದೆ. ಮುಂದಿನ ದಿನಗಳಲ್ಲಿ ಘಟಕವನ್ನು ವಿಸ್ತರಿಸುವ ಯೋಜನೆ ಇದೆ. ಒಬ್ಬರು ಅಥವಾ ಇಬ್ಬರು ಕುಟುಂಬ ಸದಸ್ಯರೇ ಘಟಕವನ್ನು ನಿರ್ವಹಿಸಬಹುದು. ಪ್ರತಿದಿನ ಎರಡು-ಮೂರು ಗಂಟೆ ಸಮಯ ನೀಡಿದರೆ ತಿಂಗಳಿಗೆ ಸುಮಾರು ₹30 ಸಾವಿರ ಆದಾಯ ಗಳಿಸುವ ಸಾಧ್ಯತೆಯಿದೆ,” ಎಂದು ಸಾಗರ್ ಹೇಳುತ್ತಾರೆ.
ಇದು ಅಣಬೆ ಕೃಷಿ ಕೇವಲ ಪೂರ್ಣಾವಧಿ ಕೃಷಿಕರಿಗೆ ಮಾತ್ರವಲ್ಲ, ಉದ್ಯೋಗ ಅಥವಾ ಇತರ ವೃತ್ತಿಯ ಜೊತೆಗೆ ಹೆಚ್ಚುವರಿ ಆದಾಯ ಗಳಿಸಲು ಬಯಸುವವರಿಗೂ ಅವಕಾಶ ಕಲ್ಪಿಸಬಹುದು ಎಂಬುದಕ್ಕೆ ಉದಾಹರಣೆಯಾಗಿದೆ.
ಕರ್ನಾಟಕದಲ್ಲಿ ಇನ್ನೂ ದೊಡ್ಡ ಅವಕಾಶ
ಬಾಗಲಕೋಟೆಯ ವಿಶ್ವವಿದ್ಯಾಲಯದ ತೋಟಗಾರಿಕಾ ವಿಜ್ಞಾನಗಳ ವಿಸ್ತರಣಾ ವಿಭಾಗದ ಮುಖ್ಯಸ್ಥ ಡಾ. ರುದ್ರೇಶ್ ಡಿ.ಎಲ್. ಅವರು ಮಾತನಾಡಿ, ಅಣಬೆ ಕೃಷಿ ಕಡಿಮೆ ವೆಚ್ಚದಲ್ಲಿ ಆರಂಭಿಸಿ ಉತ್ತಮ ಆದಾಯ ಗಳಿಸಬಹುದಾದ ಕೃಷಿ ಆಧಾರಿತ ಉದ್ಯಮವಾಗಿದೆ ಎಂದು ಹೇಳಿದ್ದಾರೆ.
ಕರ್ನಾಟಕದಲ್ಲಿ ಅಣಬೆ ಕೃಷಿಗೆ ಅನುಕೂಲಕರ ಹವಾಮಾನ ಪರಿಸ್ಥಿತಿಗಳಿದ್ದರೂ, ದೇಶದ ಒಟ್ಟು ಅಣಬೆ ಉತ್ಪಾದನೆಯಲ್ಲಿ ರಾಜ್ಯದ ಪಾಲು ಶೇ.4ಕ್ಕಿಂತಲೂ ಕಡಿಮೆ ಇದೆ. ಹೀಗಾಗಿ ರಾಜ್ಯದಲ್ಲಿ ಈ ಕ್ಷೇತ್ರವನ್ನು ಮತ್ತಷ್ಟು ವಿಸ್ತರಿಸಲು ಸಾಕಷ್ಟು ಅವಕಾಶಗಳಿವೆ.
ಅಣಬೆ ಕೃಷಿಯ ವಿಶೇಷತೆ ಎಂದರೆ ಸಣ್ಣ ಪ್ರಮಾಣದಲ್ಲಿ ಆರಂಭಿಸಿ ಹಂತ ಹಂತವಾಗಿ ವಿಸ್ತರಿಸಬಹುದಾಗಿದೆ. ಜೊತೆಗೆ ಸಂಸ್ಕರಣೆ ಮತ್ತು ಮೌಲ್ಯವರ್ಧನೆಯ ಮೂಲಕ ರೈತರು ಹೆಚ್ಚುವರಿ ಆದಾಯ ಗಳಿಸಬಹುದು ಎಂದು ತಿಳಿಸಿದ್ದಾರೆ.
ಮಹೇಶ್ ಕೊಳೂರ ಅವರ ಕಥೆ ಕೇವಲ ಅಣಬೆ ಕೃಷಿಯ ಯಶೋಗಾಥೆಯಲ್ಲ. ಅದು ಮಾರುಕಟ್ಟೆಯ ಸವಾಲನ್ನು ಅವಕಾಶವಾಗಿ ಪರಿವರ್ತಿಸಿಕೊಂಡ ಕಥೆ.
30 ಬ್ಯಾಗ್‌ಗಳಿಂದ ಆರಂಭಿಸಿ ದಿನಕ್ಕೆ 3 ಕೆ.ಜಿ. ಉತ್ಪಾದನೆಯಿಂದ 200 ಕೆ.ಜಿ.ವರೆಗೆ ಬೆಳೆದದ್ದು ಒಂದು ಹಂತವಾದರೆ, ಬೆಳೆದ ಅಣಬೆಯನ್ನು ಹೇಗೆ ಮಾರಾಟ ಮಾಡಬೇಕು ಎಂಬುದನ್ನು ಕಲಿತು ಸ್ವಂತ ಮಾರುಕಟ್ಟೆ ನಿರ್ಮಿಸಿಕೊಂಡದ್ದು ಮತ್ತೊಂದು ಹಂತ.
ಅದಾದ ಬಳಿಕ ಅಣಬೆಯನ್ನು ಕೇವಲ ತಾಜಾ ಉತ್ಪನ್ನವಾಗಿ ಮಾರಾಟ ಮಾಡುವ ಬದಲು ಸುಮಾರು 20 ಬಗೆಯ ಮೌಲ್ಯವರ್ಧಿತ ಉತ್ಪನ್ನಗಳಾಗಿ ಪರಿವರ್ತಿಸಿರುವುದು ಅವರ ಉದ್ಯಮಶೀಲತೆಯ ಮತ್ತೊಂದು ಮುಖ.
ತಮ್ಮ ಅನುಭವವನ್ನು ಸಾವಿರಾರು ಮಂದಿಗೆ ಹಂಚಿಕೊಂಡು, ಅವರಲ್ಲಿ ನೂರಾರು ಮಂದಿ ಸ್ವಂತ ಘಟಕಗಳನ್ನು ಆರಂಭಿಸಲು ಪ್ರೇರೇಪಿಸಿರುವುದು ಈ ಯಶಸ್ಸಿನ ಸಾಮಾಜಿಕ ಪರಿಣಾಮ.
ಒಂದು ಕಾಲದಲ್ಲಿ ಬೈಕ್‌ನಲ್ಲಿ ಅಣಬೆ ಹೊತ್ತು 80 ಕಿ.ಮೀ. ಸುತ್ತಿ ಗ್ರಾಹಕರನ್ನು ಹುಡುಕುತ್ತಿದ್ದ ರೈತ ಇಂದು ದಿನಕ್ಕೆ 200 ಕೆ.ಜಿ. ಅಣಬೆ ಉತ್ಪಾದಿಸುವ ಉದ್ಯಮಿಯಾಗಿದ್ದಾರೆ. ಅವರ ಕಥೆ, ಕೃಷಿಯಲ್ಲಿ ಯಶಸ್ಸು ಕೇವಲ ಹೊಲದಲ್ಲಿ ಬೆಳೆ ಬೆಳೆಯುವುದರಿಂದ ಬರುವುದಿಲ್ಲ; ಸರಿಯಾದ ಜ್ಞಾನ, ಮಾರುಕಟ್ಟೆ ಅರಿವು, ಮೌಲ್ಯವರ್ಧನೆ ಮತ್ತು ನಿರಂತರ ಪ್ರಯತ್ನ ಇದ್ದರೆ ಕೃಷಿಯನ್ನೇ ದೊಡ್ಡ ಉದ್ಯಮವನ್ನಾಗಿ ರೂಪಿಸಬಹುದು ಎಂಬುದನ್ನು ಸಾಬೀತುಪಡಿಸುತ್ತದೆ.