ವಿದೇಶಿ ಹಣ್ಣು 
ವಿಶೇಷ

ಒಣ ಭೂಮಿಯಲ್ಲಿ ವಿದೇಶಿ ಹಣ್ಣು: ಕೊಪ್ಪಳದಲ್ಲಿ ಹೊಸ ಪ್ರಯೋಗ ಯಶಸ್ವಿ; ರೈತರ ಮೊಗದಲ್ಲಿ ಮಂದಹಾಸ..!

ಕೊಪ್ಪಳದ ಭೂಮಿ ಒಣಭೂಮಿಯಾಗಿದ್ದರೂ, ಇಲ್ಲಿನ ರೈತರು ಕೈಕಟ್ಟಿ ಕೂರದೆ, ಹೊಸ ಹೊಸ ಪ್ರಯೋಗಗಳನ್ನು ನಡೆಸಿ, ಯಶಸ್ವಿಯಾಗುತ್ತಿದ್ದಾರೆ.

ಕೆಲಸ ಎಷ್ಟು ಕಷ್ಟದ್ದೇ ಇರಲಿ, ಸವಾಲಿನದ್ದೇ ಆಗಿರಲಿ, ರೈತ ಒಮ್ಮೆ ಮನಸ್ಸು ಮಾಡಿದರೆ ಸಾಕು, ತಾನು ಅಂದುಕೊಂಡಿದ್ದನ್ನು ಸಾಧಿಸದೆಯೇ ಬಿಡುವುದಿಲ್ಲ. ಅಷ್ಟಿಲ್ಲದೆಯೇ ‘ಬಂಗಾರದ ಮನುಷ್ಯ’ ಡಾ.ರಾಜ್ ಕುಮಾರ್ ಅವರು ‘ಆಗದು ಎಂದು ಕೈ ಕಟ್ಟಿ ಕುಳಿತರೆ ಸಾಗದು ಕೆಲಸವು ಮುಂದೆ’ ಎಂದು ಹೇಳಿದ್ದಾರಾ..?

ಕೊಪ್ಪಳದ ಭೂಮಿ ಒಣಭೂಮಿಯಾಗಿದ್ದರೂ, ಇಲ್ಲಿನ ರೈತರು ಕೈಕಟ್ಟಿ ಕೂರದೆ, ಹೊಸ ಹೊಸ ಪ್ರಯೋಗಗಳನ್ನು ನಡೆಸಿ, ಯಶಸ್ವಿಯಾಗುತ್ತಿದ್ದಾರೆ. ಕೊಪ್ಪಳದ ಹಲವು ಭಾಗಗಳಲ್ಲಿ ತೋಟಗಾರಿಕಾ ಕ್ಷೇತ್ರದಲ್ಲಿ ಹೊಸ ಪ್ರಯೋಗಗಳನ್ನು ಮಾಡಲಾಗುತ್ತಿದ್ದು, ವಿದೇಶದಲ್ಲಿ ಕಂಗೊಳಿಸಿದ ಹಣ್ಣುಗಳು ಈಗ ಜಿಲ್ಲೆಯ ಜನರ ನಾಲಿಗೆ ಸವಿ ರುಚಿಸುತ್ತಿವೆ.

‘ಅಯ್ಯೋ ಇದನ್ನು ಇಲ್ಲಿ ಬೆಳೆಯೋಕಾಗಲ್ಲ ಅಂದುಕೊಂಡು ಬಹಳಷ್ಟು ಮಂದಿ ಮುಟ್ಟದೇ ಬಿಟ್ಟ ಬೆಳೆಗಳನ್ನೇ ಕೈಗೆತ್ತಿಕೊಂಡ ಕೆಲ ಉತ್ಸಾಹಿಗಳು, ಅದನ್ನು ಸವಾಲಾಗಿ ಸ್ವೀಕರಿಸಿ ಬೆಳೆದೇ ತೀರಬೇಕೆಂಬ ಛಲದಲ್ಲಿ ಕೃಷಿ ಮಾಡುತ್ತಿದ್ದಾರೆ.

ಕೊಪ್ಪಳ, ಕುಷ್ಟಗಿ ಮತ್ತು ಕನಕಗಿರಿ ತಾಲ್ಲೂಕುಗಳ ಒಣ ಭೂಮಿಯಲ್ಲಿ ರೈತರು ವಿದೇಶಿ ಹಣ್ಣುಗಳನ್ನು ಬೆಳೆಯುತ್ತಿದ್ದಾರೆ. ಕಳೆದ ಐದು ವರ್ಷಗಳಲ್ಲಿ ರೈತರು ಮತ್ತು ಉದ್ಯಮಿಗಳು ವಿದೇಶಿ ಹಣ್ಣುಗಳ ಹಾಗೂ ಹೊಸ ಪ್ರಭೇದಗಳ ವ್ಯಾಪಾರದ ಅವಕಾಶಗಳನ್ನು ಕಂಡುಕೊಂಡಿದ್ದು, ಸ್ಥಳೀಯ ಮತ್ತು ಅಂತಾರಾಷ್ಟ್ರೀಯ ಮಾರುಕಟ್ಟೆಗಾಗಿ ಬೆಳೆಗಳ ಬೆಳೆಯಲು ಆರಂಭಿಸಿದ್ದಾರೆ.

ಕೃಷಿ ಮತ್ತು ರೈತ ಕಲ್ಯಾಣ ಸಚಿವಾಲಯವು ವ್ಯಾಪಾರದ ದೃಷ್ಟಿಯಿಂದ 10 ವಿದೇಶಿ ಹಣ್ಣುಗಳನ್ನು ಗುರುತಿಸಿ, ರಾಜ್ಯ ತೋಟಗಾರಿಕಾ ಇಲಾಖೆಯನ್ನು ಇವುಗಳ ಬೆಳೆಯನ್ನು ವಿಸ್ತರಿಸಲು ಸೂಚಿಸಿದೆ. ಆದರೆ, ಕೊಪ್ಪಳದ ತೋಟಗಾರಿಕಾ ಇಲಾಖೆ ಹತ್ತು ವರ್ಷಗಳ ಹಿಂದಿಯೇ ವಿದೇಶಿ ಹಣ್ಣುಗಳ ತೋಟ ಬೆಳೆಸುವ ಬಗ್ಗೆ ಜನರಿಗೆ ಜಾಗೃತಿ ಮೂಡಿಸಿದ್ದು, ಇದರಿಂದ ಪ್ರತಿಫಲ ಕೂಡ ಪಡೆಯುತ್ತಿದೆ.

ಕೊಪ್ಪಳದ ಹಲವಾರು ರೈತರು ತೋಟಗಾರಿಕಾ ಇಲಾಖೆಯಿಂದ ತರಬೇತಿ ಪಡೆದಿದ್ದಾರೆ. ಹಲವು ರೈತರು ಈಗ ಜಪಾನಿನ ರುಬಿ ರೋಮನ್ ದ್ರಾಕ್ಷಿ ಮತ್ತು ಇತರ ವಿದೇಶಿ ಹಣ್ಣುಗಳನ್ನು ಬೆಳೆಸುತ್ತಿದ್ದಾರೆ. ಈ ಮೂಲಕ ಕೊಪ್ಪಳದ ರೈತರು ಈಗ ಇತರೆ ರೈತರಿಗೆ ಮಾದರಿಯಾಗಿದ್ದಾರೆ.

ಇಲ್ಲಿಗೆ ಭೇಟಿ ನೀಡುವ ಸುತ್ತಮುತ್ತಲಿನ ಜಿಲ್ಲೆಗಳ ರೈತರಿಗೆ ಈ ಹಣ್ಣುಗಳ ಹೆಸರಾಗಲೀ, ಆ ಹಣ್ಣು ಕುರಿತ ಇತರೆ ಮಾಹಿತಿಗಳೇ ಇಲ್ಲ, ಆದರೆ, ಕೊಪ್ಪಳದ ರೈತರು ಅವುಗಳನ್ನು ಬೆಳೆದು, ಲಾಭ ಗಳಿಸುತ್ತಿದ್ದಾರೆ.

ತೋಟಗಾರಿಕೆ ಇಲಾಖೆಯು ಒಂದು ದಶಕಕ್ಕೂ ಹೆಚ್ಚು ಕಾಲ ರೈತರಿಗೆ ವಿದೇಶಿ ಹಣ್ಣಿನ ಸಸಿಗಳನ್ನು ನೆಡುವ ಬಗ್ಗೆ ಮಾರ್ಗದರ್ಶನ ನೀಡುತ್ತಿದೆ. ಹಿರಿಯ ತೋಟಗಾರಿಕೆ ನಿರ್ದೇಶಕ ಕೃಷ್ಣ ಉಕ್ಕುಂದ್ ನೇತೃತ್ವದಲ್ಲಿ, ತಂಡಗಳು ರೈತರ ಸ್ಥಳಗಳಿಗೆ ಭೇಟಿ ನೀಡಿ ಅವುಗಳನ್ನು ಹೇಗೆ ಬೆಳೆಸುವುದು ಮತ್ತು ಉತ್ತಮ ಲಾಭವನ್ನು ಪಡೆಯುವುದು ಎಂಬುದರ ಕುರಿತು ಸಲಹೆಗಳನ್ನು ನೀಡುತ್ತಿದ್ದಾರೆ.

ಈ ನಡುವೆ ಕೊಪ್ಪಳದ ರೈತರು ಇತ್ತೀಚೆಗೆ ನಡೆದ ಮಾವಿನ ಮೇಳದ ಸಮಯದಲ್ಲಿ ಹಣ್ಣುಗಳ ಬಗ್ಗೆ ಮತ್ತಷ್ಟು ಮಾಹಿತಿ ತಿಳಿದುಕೊಂಡಿದ್ದಾರೆ.

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮೂರು ತಿಂಗಳ ಹಿಂದೆ ಮೇಥಗಲ್‌ನಲ್ಲಿ ರೈತರಿಗಾಗಿ ರೈತ ಉತ್ಪಾದಕರ ಸಂಘಟನೆಗಳನ್ನು ಉದ್ಘಾಟಿಸಿದ್ದರು.

ಈ ವರ್ಷ ಅನೇಕ ಮಾವು ಬೆಳೆಗಾರರು ಉತ್ತಮ ಬೆಳೆ ಪಡೆದಿದ್ದರಿಂದ ಸಂತಸದಿಂದಿದ್ದು, ಇದೀಗ ಮಾವು ಜೊತೆಗೆ ವಿದೇಶಿ ಹಣ್ಣುಗಳನ್ನು ಬೆಳೆಯಲು ಆಸಕ್ತಿ ತೋರುತ್ತಿದ್ದಾರೆ.

ವಿದೇಶಿ ಹಣ್ಣುಗಳನ್ನು ಬೆಳೆಯುವ ಬಗ್ಗೆ ನಮಗೆ ಆರಂಭದಲ್ಲಿ ಸಂದೇಹವಿತ್ತು. ಹಣ ಕಳೆದುಕೊಂಡರೆ ಎಂಬ ಆತಂಕವಿತ್ತು. ಆದರೆ, ಹಿರಿಯ ತೋಟಗಾರಿಕೆ ನಿರ್ದೇಶಕ ಕೃಷ್ಣ ಉಕ್ಕುಂದ್ ಅವರು, ಸಸಿಗಳಿಗೆ 2 ಲಕ್ಷ ರೂ.ಗಳನ್ನು ನೀಡುವುದಾಗಿ ಹೇಳಿದರು. ಅಂತಿಮವಾಗಿ ನಮಗೆ 10 ಲಕ್ಷ ರೂ.ಗಳ ಲಾಭ ಸಿಕ್ಕಿತು ಎಂದು ರೈತ ಭರತ್ ಎಂಬುವವರು ಹೇಳಿದ್ದಾರೆ.

"ಕಳೆದ ಕೆಲವು ವರ್ಷಗಳಿಂದ ನಾವು ವಿದೇಶಿ ಹಣ್ಣುಗಳ ಬಗ್ಗೆ ಜಾಗೃತಿ ಮೂಡಿಸುತ್ತಿದ್ದೇವೆ. ಈಗ ಹಲವಾರು ರೈತರು ಮಿಯಾಝಾಕಿ ಮತ್ತು ಇತರ ಹಣ್ಣುಗಳನ್ನು ಬೆಳೆದು ಲಾಭ ಗಳಿಸುತ್ತಿದ್ದಾರೆ. ಕೊಪ್ಪಳ ಶೀಘ್ರದಲ್ಲೇ ಕರ್ನಾಟಕದ ವಿದೇಶಿ ಹಣ್ಣುಗಳ ಬೆಳೆಯುವ ಕೇಂದ್ರವಾಗಿ ಬದಲಾಗಲಿದೆ ಎಂದು ಉಕ್ಕುಂದ್ ಹೇಳಿದ್ದಾರೆ.

ಅನಿವಾಸಿ ಭಾರತೀಯರಿಂದ ಟ್ರೆಂಡ್ ಶುರು

ಕೊಪ್ಪಳದಲ್ಲಿ ಸಾವಯವ ಹಣ್ಣುಗಳ ಮೇಳ ಮತ್ತು ಮಾವಿನ ಮೇಳಕ್ಕೆ ಅನಿವಾಸಿ ಭಾರತೀಯರು ಬರಲು ಆರಂಭಿಸಿದ್ದರು. ಈ ವೇಳೆ ವಿದೇಶಿಗಳ ಬಗ್ಗೆ ತಿಳಿದುಕೊಂಡ ರೈತರು ತೋಟಗಾರಿಕೆ ಇಲಾಖೆ ಬಳಿಕ ಪ್ರಶ್ನೆ ಮಾಡಲು ಆರಂಭಿಸಿತ್ತು. ಬಳಿಕ ಇಲಾಖೆಯು ಸಸಿಗಳ ವಿತರಿಸುವ ವ್ಯವಸ್ಥೆ ಮಾಡಿದ್ದು, ರೈತರಲ್ಲಿ ವಿದೇಶಿ ಹಣ್ಣುಗಳ ಬಗ್ಗೆ ಜಾಗೃತಿ ಮೂಡಿಸಿದ್ದಾರೆ.

ವಿದೇಶಿ ಹಣ್ಣುಗಳನ್ನು ಯಾರು ಖರೀದಿಸುತ್ತಾರೆ?

ಬೆಂಗಳೂರು, ಹೈದರಾಬಾದ್ ಮತ್ತು ಪುಣೆಯ ಅನಿವಾಸಿ ಭಾರತೀಯರು ಮತ್ತು ಸಾಫ್ಟ್‌ವೇರ್ ವೃತ್ತಿಪರರು ವಿದೇಶಿ ಹಣ್ಣುಗಳನ್ನು ಖರೀದಿಸಲು ಕೊಪ್ಪಳಕ್ಕೆ ಭೇಟಿ ನೀಡುತ್ತಾರೆ. ಬೆಂಗಳೂರಿನ ಸಗಟು ಖರೀದಿದಾರರು, ಏಜೆಂಟರು ಮತ್ತು ರಫ್ತುದಾರರು ಗೋವಾ, ಮಹಾರಾಷ್ಟ್ರ, ದೆಹಲಿ, ಆಂಧ್ರಪ್ರದೇಶ ಮತ್ತು ಇತರ ಹಲವಾರು ರಾಜ್ಯಗಳಿಗೆ ಹಣ್ಣುಗಳನ್ನು ಕಳುಹಿಸಲು ಆರ್ಡರ್ಗಳನ್ನು ನೀಡುತ್ತಾರೆ.

ದೊಡ್ಡ ಪರಿವರ್ತನೆ

ಕುಷ್ಟಗಿ, ಕನಕಗಿರಿ ಮತ್ತು ಕೊಪ್ಪಳ ತಾಲ್ಲೂಕುಗಳು ಬರ ಪೀಡಿತವಾಗಿದ್ದು, ತೋಟಗಾರಿಕೆ ಇಲಾಖೆಯು ಅಂತಹ ಭೂಮಿಯನ್ನು ಗುರುತಿಸಿ ರೈತರಿಗೆ ಜಾಗೃತಿ ಕಾರ್ಯಕ್ರಮಗಳನ್ನು ನಡೆಸಿತು. ಆರಂಭದಲ್ಲಿ ರೈತರು ಮಳೆಯ ಮೇಲೆ ಅವಲಂಬಿತರಾಗಿರುವುದರಿಂದ ಇದು ಸಾಧ್ಯವಿಲ್ಲ ಎಂದು ಹೇಳಿದರು. ನಂತರ ಅಧಿಕಾರಿಗಳು ತರಬೇತಿ ಕಾರ್ಯಕ್ರಮಗಳನ್ನು ಆಯೋಜಿಸಿದರು.

ಈಗ ಗ್ರಾಮಸ್ಥರು ಸರ್ಕಾರದ ಬೆಂಬಲದೊಂದಿಗೆ ನೀರಿನ-ಸಮರ್ಥ ವಿಧಾನಗಳು, ನೈಸರ್ಗಿಕ ಕೃಷಿ ಮತ್ತು ಬರ-ನಿರೋಧಕ ಬೆಳೆಗಳನ್ನು ಅಳವಡಿಸಿಕೊಳ್ಳುವ ಮೂಲಕ ಒಣ ಭೂಮಿಯನ್ನೂ ಹಣ್ಣಿನ ತೋಟಗಳಾಗಿ ಪರಿವರ್ತಿಸುತ್ತಿದ್ದಾರೆ,

ಬಂಜರು ಪ್ರದೇಶಗಳಲ್ಲಿ ಡ್ರ್ಯಾಗನ್ ಫ್ರೂಟ್, ಸ್ಟಾರ್ ಫ್ರೂಟ್, ಜಪಾನಿನ ಮಿಯಾಜಾಕಿ ಚೀನಾದ ಕಿತ್ತಳೆ, ರಾಮ್ಬೂಟಾನ್, ಮಲೇಷಿಯಾ ಗುವಾವಾ, ಲಿಚ್ಚಿ, ಪ್ಲಮ್, ಸ್ಟಾರ್ ಫ್ರೂಟ್ ಸೇರಿದಂತೆ ಹಲವು ವಿದೇಶಿ ಹಣ್ಣುಗಳನ್ನು ಬೆಳೆಯುತ್ತಿದ್ದಾರೆ. ಈ ಮೂಲಕ ನೀರಿನ ಕೊರತೆಯ ಹೊರತಾಗಿಯೂ ಸುಸ್ಥಿರ ಜೀವನೋಪಾಯವನ್ನು ಸೃಷ್ಟಿಸುತ್ತಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

India–US trade row: 'ಎಲ್ಲವೂ ಬದಲಾಗಿದೆ.. ಪ್ರಧಾನಿ ಮೋದಿ ಕೋಪಗೊಂಡಿದ್ದಾರೆ..': ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್! Video

'ವಿಶ್ವವಿದ್ಯಾಲಯ ದ್ವೇಷದ ಪ್ರಯೋಗಾಲಯವಾಗಲು ಸಾಧ್ಯವಿಲ್ಲ': ಮೋದಿ ವಿರೋಧಿ ಘೋಷಣೆ ಕೂಗುವ ವಿದ್ಯಾರ್ಥಿಗಳಿಗೆ JNU ಎಚ್ಚರಿಕೆ!

ಬಾಂಗ್ಲಾದೇಶದಲ್ಲಿ ಮತ್ತೋರ್ವ ಹಿಂದೂ ವ್ಯಕ್ತಿ ಸಾವು; ಕಳ್ಳ ಎಂದು ಅಟ್ಟಾಡಿಸಿದ ಜನ, ನಾಲೆಗೆ ಬಿದ್ದು ಪ್ರಾಣಬಿಟ್ಟ ಅಮಾಯಕ!

ಪ್ರೀತ್ಸೆ.. ಪ್ರೀತ್ಸೆ..: ಭಗ್ನಪ್ರೇಮಿ ಕಾಟಕ್ಕೆ ಬೇಸತ್ತು ಅಪ್ರಾಪ್ತ ಬಾಲಕಿ ಆತ್ಮಹತ್ಯೆ!

ಉತ್ತರ ಪ್ರದೇಶ SIR: ಕರಡು ಪಟ್ಟಿಯಿಂದ 2.89 ಕೋಟಿ ಮತದಾರರು ಡಿಲೀಟ್; ಇದು ದೇಶದಲ್ಲಿಯೇ ಅತಿ ಹೆಚ್ಚು!

SCROLL FOR NEXT