ಗಗನಯಾನ ಆಯ್ತು, ಮಂಗಳಯಾನ ಆಯ್ತು, ಹೀಗೆ ಭೂಮಂಡಲದ ಹೊರಗೂ ಮಾನವ ಸೌರಮಂಡಲವನ್ನ ಅನ್ವೇಷಣೆ ಮಾಡಲು ಮುಂದಾಗಿದ್ದಾನೆ. ಆದ್ರೆ, ಇನ್ನೂ ಕೂಡ ಭೂಮಿಯನ್ನ ಪೂರ್ಣವಾಗಿ ಅನ್ವೇಷಣೆ ಮಾಡಲು ಸಾಧ್ಯವಾಗಿಲ್ಲ; ಹೌದು, ಭೂಮಿ ಮೇಲಿರುವ ಸಮುದ್ರದಲ್ಲಿ ಮಾನವರು ಸಮುದ್ರದಾಳದ ಕೇವಲ ಶೇಕಡಾ 0.001 ಕ್ಕಿಂತ ಕಡಿಮೆ ಭಾಗವನ್ನು ಮಾತ್ರ! ಅಂದರೆ ಶೇಕಡಾ 99.99% ರಷ್ಟು ಆಳವಾದ ಸಾಗರ ತಳವು ಇಂದಿಗೂ ಮಾನವನ ಕಣ್ಣಿಗೆ ಬಿದ್ದಿಲ್ಲ. ಮತ್ತೊಂದೆಡೆ, ಭೂಭಾಗದ ಶೇಕಡಾ 100 ರಷ್ಟು ನಕ್ಷೆಯನ್ನು ಸಿದ್ಧಪಡಿಸಿದ್ದಾನೆ. ಇಷ್ಟಾದರೂ ಸಹ ಭೂಭಾಗದ ಅದೆಷ್ಟೋ ಸ್ಥಳಗಳು ಇಂದಿಗೂ ನಿಗೂಢವಾಗಿಯೇ ಉಳಿದಿವೆ. ಆ ಕುರಿತ ವರದಿ ಇಲ್ಲಿದೆ:
ಚಿಲಿ ದೇಶದ ಹತ್ತಿರ ಪೆಸಿಫಿಕ್ ಸಾಗರದ ಮಧ್ಯದಲ್ಲಿರುವ ಚಿಕ್ಕ ದ್ವೀಪದಲ್ಲಿ 900ಕ್ಕೂ ಹೆಚ್ಚು 20 ಅಡಿ ಎತ್ತರದ ಕಲ್ಲಿನ ಪ್ರತಿಮೆಗಳು. ಪ್ರತಿಯೊಂದೂ 80 ಟನ್ ತೂಗುತ್ತದೆ. ಇಷ್ಟೊಂದು ಭಾರವಾದ ಕಲ್ಲನ್ನು 500 ವರ್ಷದ ಹಿಂದೆ ಯಾವ ಟೆಕ್ನಾಲಜಿ ಇಲ್ಲದೆ ಹೇಗೆ ನಿಲ್ಲಿಸಿದರು ಅನ್ನೋದು ಇಂದಿಗೂ ನಿಗೂಢವಾಗಿಯೇ ಇದೆ. ಅದರಲ್ಲೂ, ಈ ಪ್ರತಿಮೆಗಳನ್ನು ರಚಿಸಿದರು ಎನ್ನಲಾಗುವ ರಪನುಯಿ ಜನಾಂಗವು ಹಸಿವು, ಯುದ್ಧ, ರೋಗದ ಕಾರಣದಿಂದ ಸಂಪೂರ್ಣವಾಗಿ ನಾಶವಾಯಿತು ಎನ್ನಲಾಗಿದೆ.
ಸಹಾರಾ ಮರುಭೂಮಿಯ ಮಧ್ಯದಲ್ಲಿ ಬಾಹ್ಯಾಕಾಶದಿಂದ ನೋಡಿದರೆ ಮನುಷ್ಯನ ಕಣ್ಣಿನಂತೆ ಕಾಣುವ ಒಂದು ಬೃಹತ್ ಆಕೃತಿಯಿದೆ. 40 ಕಿಲೋಮೀಟರ್ ವ್ಯಾಸ ಹೊಂದಿರುವ ಈ ವೃತ್ತಾಕಾರದ ಜಾಗ ಹೇಗೆ ಸೃಷ್ಟಿಯಾಯಿತು ಎಂಬುದು ಇಂದಿಗೂ ದೊಡ್ಡ ಪ್ರಶ್ನೆ. ಕೆಲವರು ಇದನ್ನು ಉಲ್ಕಾಪಾತದಿಂದಾಗಿದೆ ಎಂದರೆ, ಇನ್ನು ಕೆಲವರು ಇದು ಕಣ್ಮರೆಯಾದ ಅಟ್ಲಾಂಟಿಸ್ ನಗರದ ಅವಶೇಷ ಇರಬಹುದು ಎನ್ನುತ್ತಾರೆ.
ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿರುವ 'ಡೆತ್ ವ್ಯಾಲಿ' (ಮರಣ ಕಣಿವೆ) ತನ್ನ ಭೀಕರ ತಾಪಮಾನ ಮತ್ತು ವಾತಾವರಣಕ್ಕೆ ಹೆಸರಾಗಿದೆ. ಈ ಒಣ ಪ್ರದೇಶದಲ್ಲಿ ಯಾರೂ ತಳ್ಳದಿದ್ದರೂ ಭಾರವಾದ ಕಲ್ಲುಗಳು ತಾವಾಗಿಯೇ ಮಣ್ಣಿನ ಮೇಲೆ ಚಲಿಸುತ್ತವೆ ಮತ್ತು ತಮ್ಮ ಹಿಂದೆ ಉದ್ದನೆಯ ಗೆರೆಗಳನ್ನು ಬಿಟ್ಟುಹೋಗುತ್ತವೆ! ಈ 'ಸೇಲಿಂಗ್ ಸ್ಟೋನ್ಸ್' ಪ್ರಕ್ರಿಯೆ ಹೇಗೆ ನಡೆಯುತ್ತದೆ ಎಂಬುದಕ್ಕೆ ಹಲವು ಸಿದ್ಧಾಂತಗಳಿದ್ದರೂ, ಸಂಪೂರ್ಣ ಸ್ಪಷ್ಟ ವಿವರಣೆ ನೀಡುವುದು ವಿಜ್ಞಾನಕ್ಕೂ ಸಾಧ್ಯವಾಗಿಲ್ಲ.
ಪೆರು ದೇಶದ ಅಮೆಜಾನ್ ಕಾಡಿನಲ್ಲಿ 'ಶನಾಯ್-ಟಿಂಪಿಶ್ಕಾ' ಎಂಬ ನದಿಯಿದೆ. ಈ ನದಿಯ ನೀರು ಸುಮಾರು 90 ಡಿಗ್ರಿ ಸೆಲ್ಸಿಯಸ್ ನಷ್ಟು ಯಾವಾಗಲೂ ಕುದಿಯುತ್ತಿರುತ್ತದೆ. ಅದರಲ್ಲೂ, ಇದರ ಸುತ್ತಮುತ್ತ ಯಾವುದೇ ಜ್ವಾಲಾಮುಖಿ ಇಲ್ಲದಿದ್ದರೂ ನೀರು ಏಕೆ ಕುದಿಯುತ್ತದೆ ಎಂಬುದು ಇಂದಿಗೂ ನಿಗೂಢವಾಗಿದೆ.
ಅಟ್ಲಾಂಟಿಕ್ ಸಾಗರದಲ್ಲಿರುವ ಬರ್ಮುಡಾ ಟ್ರಯಂಗಲ್ ಜಗತ್ತಿನ ಅತ್ಯಂತ ಪ್ರಸಿದ್ಧ ಹಾಗೂ ಭಯಾನಕ ನಿಗೂಢ ಸ್ಥಳಗಳಲ್ಲಿ ಒಂದಾಗಿದೆ. ಇಲ್ಲಿ ನೂರಾರು ಹಡಗುಗಳು ಮತ್ತು ವಿಮಾನಗಳು ಯಾವುದೇ ಕುರುಹೂ ಇಲ್ಲದೆ ದಿಢೀರನೆ ಮಾಯವಾಗಿವೆ. ಅದರಲ್ಲೂ, ಕಂಪಾಸುಗಳು ಕೂಡ ಕೆಲಸ ಮಾಡದಿರುವುದು ಮತ್ತು ರೇಡಾರ್ ಸಂಪರ್ಕ ಕಡಿತಗೊಳ್ಳುವುದು ಇಲ್ಲಿ ಸಾಮಾನ್ಯವಾಗಿದೆ.