ಕಾರಾಗೃಹ ಗೋಡೆಗಳ ಮೇಲೆ ಚಿತ್ರ ಬಿಡಿಸುತ್ತಿರುವ ಕೈದಿಗಳು. 
ವಿಶೇಷ

ಜೈಲಿನ ಗೋಡೆಗಳ ಮೇಲೆ ಅರಳಿದ ಕಲೆ: ಮಂಗಳೂರು ಕೇಂದ್ರ ಕಾರಾಗೃಹಕ್ಕೆ ಹೊಸ ರೂಪ ನೀಡಿದ ಕೈದಿಗಳು..!

ಜೈಲು ಎಂದರೆ ಶಿಕ್ಷೆ, ಏಕಾಂತ ಮತ್ತು ನೋವಿನ ಪ್ರತೀಕ ಎಂಬ ಸಾಮಾನ್ಯ ಕಲ್ಪನೆಗೆ ಮಂಗಳೂರು ಕೇಂದ್ರ ಕಾರಾಗೃಹ ಹೊಸ ಅರ್ಥ ನೀಡಿದೆ. ಕೈದಿಗಳಲ್ಲಿರುವ ಪ್ರತಿಭೆಯನ್ನು ಗುರುತಿಸಿ, ಅದಕ್ಕೆ ಸೂಕ್ತ ಅವಕಾಶ ಕಲ್ಪಿಸಿದರೆ ಅವರ ಜೀವನದಲ್ಲಿ ಎಂತಹ ಬದಲಾವಣೆ ತರಬಹುದು ಎಂಬುದಕ್ಕೆ ಈ ಪ್ರಯತ್ನ ಜೀವಂತ ಉದಾಹರಣೆಯಾಗಿದೆ.

ಮಂಗಳೂರು: ಮಂಗಳೂರು ಕೇಂದ್ರ ಕಾರಾಗೃಹದ ಗೋಡೆಗಳು ಇಂದು ಕೇವಲ ಇಟ್ಟಿಗೆ ಮತ್ತು ಸಿಮೆಂಟ್‌ನ ಕಟ್ಟಡಗಳಲ್ಲದೆ, ಅವು ಬಣ್ಣಗಳಿಂದ ಜೀವ ಪಡೆದ ಕ್ಯಾನ್ವಾಸ್‌ಗಳಾಗಿ ರೂಪಾಂತರಗೊಂಡಿವೆ.

ಮಹಾತ್ಮ ಗಾಂಧಿ, ನೇತಾಜಿ ಸುಭಾಷ್ ಚಂದ್ರ ಬೋಸ್, ಭಗತ್ ಸಿಂಗ್ ಅವರಂತಹ ರಾಷ್ಟ್ರ ನಾಯಕರ ಚಿತ್ರಗಳು, ತುಳುನಾಡಿನ ಸಾಂಸ್ಕೃತಿಕ ವೈಭವ, ಜನಪದ ಪರಂಪರೆ ಮತ್ತು ಕಲೆಯ ಸೊಬಗು ಈಗ ಕಾರಾಗೃಹದ ಗೋಡೆಗಳ ಮೇಲೆ ಮೂಡಿಬಂದಿವೆ. ಈ ಕಲಾಕೃತಿಗಳ ಹಿಂದಿರುವವರು ಯಾವುದೇ ಖ್ಯಾತ ಕಲಾವಿದರಲ್ಲ; ಶಿಕ್ಷೆ ಅನುಭವಿಸುತ್ತಿರುವ ಕೈದಿಗಳು ಎಂಬುದೇ ವಿಶೇಷ.

ಜೈಲು ಎಂದರೆ ಶಿಕ್ಷೆ, ಏಕಾಂತ ಮತ್ತು ನೋವಿನ ಪ್ರತೀಕ ಎಂಬ ಸಾಮಾನ್ಯ ಕಲ್ಪನೆಗೆ ಮಂಗಳೂರು ಕೇಂದ್ರ ಕಾರಾಗೃಹ ಹೊಸ ಅರ್ಥ ನೀಡಿದೆ.

ಕೈದಿಗಳಲ್ಲಿರುವ ಪ್ರತಿಭೆಯನ್ನು ಗುರುತಿಸಿ, ಅದಕ್ಕೆ ಸೂಕ್ತ ಅವಕಾಶ ಕಲ್ಪಿಸಿದರೆ ಅವರ ಜೀವನದಲ್ಲಿ ಎಂತಹ ಬದಲಾವಣೆ ತರಬಹುದು ಎಂಬುದಕ್ಕೆ ಈ ಪ್ರಯತ್ನ ಜೀವಂತ ಉದಾಹರಣೆಯಾಗಿದೆ.

ಕಾಸರಗೋಡು ಮೂಲದ ಸುರೇಂದ್ರನ್ ಸೆಟ್ಲ್‌ಮೆಂಟ್‌ಗೆ ಸಂಬಂಧಿಸಿದ ಪ್ರಕರಣದಲ್ಲಿ ಮೂರು ತಿಂಗಳ ಹಿಂದೆ ಜೈಲು ಸೇರಿದ್ದರು. ಬಾಲ್ಯದಿಂದಲೇ ಚಿತ್ರಕಲೆಯ ಮೇಲಿದ್ದ ಆಸಕ್ತಿಯನ್ನು ಅವರು ಎಂದಿಗೂ ಕೈಬಿಟ್ಟಿರಲಿಲ್ಲ. ಚಿತ್ರಕಲೆ ಮತ್ತು ಲಲಿತಕಲೆಯಲ್ಲಿ ಮೂರು ವರ್ಷಗಳ ತರಬೇತಿ ಪಡೆದಿದ್ದ ಅವರು, ಜೈಲಿಗೆ ಬರುವ ಮೊದಲು ವಾರಾಂತ್ಯಗಳಲ್ಲಿ ಮಕ್ಕಳಿಗೆ ಚಿತ್ರಕಲೆ ಕಲಿಸುತ್ತಿದ್ದರು.

ಜೈಲು ಸೇರಿದ ಬಳಿಕ ಅವರ ಬದುಕು ಸಂಪೂರ್ಣ ಬದಲಾಗಬಹುದಿತ್ತು. ಆದರೆ , ಅವರಲ್ಲಿದ್ದ ಕಲಾವಿದನನ್ನು ಗುರುತಿಸಿದವರು ಮಂಗಳೂರು ಕೇಂದ್ರ ಕಾರಾಗೃಹದ ಅಧೀಕ್ಷಕ ಶರಣಬಸಪ್ಪ.

ಶರಣಬಸಪ್ಪ ಅವರು, ಅದನ್ನು ಸಮಾಜಮುಖಿ ಕಾರ್ಯಕ್ಕೆ ಬಳಸಿಕೊಳ್ಳುವ ಅವಕಾಶ ನೀಡಿದರು. ಜೈಲು ಆಡಳಿತವೇ ಬಣ್ಣ, ಕುಂಚ ಹಾಗೂ ಅಗತ್ಯ ಸಾಮಗ್ರಿಗಳನ್ನು ಒದಗಿಸಿತು. ಇದೀಗ ಸುರೇಂದ್ರನ್ ಅವರು ಪ್ರತಿದಿನ ಬೆಳಿಗ್ಗೆ ಮತ್ತು ಸಂಜೆ ನಿಗದಿತ ಸಮಯದಲ್ಲಿ ಅವರು ಗೋಡೆಗಳ ಮೇಲೆ ಚಿತ್ರಗಳನ್ನು ಬಿಡಿಸುತ್ತಿದ್ದಾರೆ. ಅವರೊಂದಿಗೆ ವೃತ್ತಿಪರ ಕಲಾ ನಿರ್ದೇಶಕರಾಗಿದ್ದ ಇಬ್ಬರು ಸಹ ಕೈದಿಗಳು ಸಹಕರಿಸುತ್ತಿದ್ದು, ರೇಖಾಚಿತ್ರ ಮತ್ತು ವಿನ್ಯಾಸದಲ್ಲಿ ನೆರವಾಗುತ್ತಿದ್ದಾರೆ.

ಕೇವಲ ಗೋಡೆಗಳ ಸೌಂದರ್ಯ ಹೆಚ್ಚಿಸುವ ಉದ್ದೇಶದಿಂದ ಆರಂಭವಾದ ಈ ಕಾರ್ಯ ಈಗ ಕಾರಾಗೃಹದ ವಾತಾವರಣವನ್ನೇ ಬದಲಿಸಿದೆ. ಹಿಂದೆ ನಿರ್ಜೀವವಾಗಿದ್ದ ಗೋಡೆಗಳು ಈಗ ದೇಶಭಕ್ತಿ, ಸಂಸ್ಕೃತಿ ಮತ್ತು ಸೃಜನಶೀಲತೆಯ ಸಂದೇಶ ಸಾರುತ್ತಿವೆ. ಕೈದಿಗಳ ಮನಸ್ಸಿನಲ್ಲೂ ಈ ಬಣ್ಣಗಳು ಹೊಸ ಭರವಸೆ ಮೂಡಿಸಿವೆ.

ದಿನವಿಡೀ ಖಾಲಿ ಮನಸ್ಸಿನಲ್ಲಿ ಕಾಡುತ್ತಿದ್ದ ನಕಾರಾತ್ಮಕ ಆಲೋಚನೆಗಳ ಬದಲು, ಈಗ ಕಲೆಯ ಮೂಲಕ ಆತ್ಮವಿಶ್ವಾಸ ಮತ್ತು ನೆಮ್ಮದಿ ದೊರೆಯುತ್ತಿದೆ ಎಂದು ಕೈದಿಗಳೇ ಹೇಳಿಕೊಳ್ಳುತ್ತಿದ್ದಾರೆ.

ಇಲ್ಲಿಯವರೆಗೆ ರಾಷ್ಟ್ರ ನಾಯಕರ ಚಿತ್ರಗಳು ಹಾಗೂ ತುಳುನಾಡಿನ ಸಾಂಸ್ಕೃತಿಕ ವೈಭವವನ್ನು ಬಿಂಬಿಸುವ ಕಲಾಕೃತಿಗಳು ಮೂಡಿಬಂದಿವೆ. ಮುಂದಿನ ದಿನಗಳಲ್ಲಿ ಯಕ್ಷಗಾನ, ಕಂಬಳ, ಹುಲಿವೇಷ ಹಾಗೂ ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ಅವರ ಚಿತ್ರಗಳನ್ನೂ ಗೋಡೆಗಳ ಮೇಲೆ ಮೂಡಿಸಲು ಯೋಜಿಸಲಾಗಿದೆ. ಇದರೊಂದಿಗೆ ಕಾರಾಗೃಹದ ಪ್ರತಿಯೊಂದು ಗೋಡೆಯೂ ಒಂದು ಕಥೆ ಹೇಳುವ ಕಲಾ ಗ್ಯಾಲರಿಯಾಗಿ ರೂಪುಗೊಳ್ಳುತ್ತಿದೆ.

ಇದಕ್ಕೆ ಪೂರಕವಾಗಿ ಕೈದಿಗಳ ಪುನರ್ವಸತಿಗೆ ಹೆಚ್ಚಿನ ಒತ್ತು ನೀಡಲು ಜೈಲು ಆಡಳಿತ ಮುಂದಾಗಿದೆ. ರಾಜ್ಯ ಕೌಶಲ್ಯಾಭಿವೃದ್ಧಿ ಮಂಡಳಿ ಹಾಗೂ ಧರ್ಮಸ್ಥಳದ ರುಡ್‌ಸೆಟ್ ಸಂಸ್ಥೆಯ ಸಹಯೋಗದಲ್ಲಿ ಸಿಸಿಟಿವಿ ದುರಸ್ತಿ, ಫಾಸ್ಟ್‌ಫುಡ್ ತಯಾರಿಕೆ ಸೇರಿದಂತೆ ವಿವಿಧ ಉದ್ಯೋಗಾಧಾರಿತ ತರಬೇತಿಗಳನ್ನು ಆರಂಭಿಸುವ ಯೋಜನೆಯೂ ರೂಪುಗೊಂಡಿದೆ. ಶಿಕ್ಷೆ ಮುಗಿದ ಬಳಿಕ ಕೈದಿಗಳು ಸಮಾಜದಲ್ಲಿ ಸ್ವಾವಲಂಬಿ ಜೀವನ ನಡೆಸಲು ನೆರವಾಗುವುದು ಇದರ ಉದ್ದೇಶ.

ಒಬ್ಬ ವ್ಯಕ್ತಿ ಮಾಡಿದ ತಪ್ಪಿಗೆ ಶಿಕ್ಷೆ ವಿಧಿಸುವುದು ನ್ಯಾಯದ ಭಾಗ. ಆದರೆ, ಆ ವ್ಯಕ್ತಿಗೆ ತನ್ನ ಬದುಕನ್ನು ತಿದ್ದಿಕೊಳ್ಳಲು ಅವಕಾಶ ನೀಡುವುದು ಮಾನವೀಯತೆಯ ಭಾಗ. ಮಂಗಳೂರು ಕೇಂದ್ರ ಕಾರಾಗೃಹದಲ್ಲಿ ನಡೆಯುತ್ತಿರುವ ಈ ಪ್ರಯತ್ನ, ಜೈಲು ಎಂಬುದು ಕೇವಲ ಶಿಕ್ಷೆಯ ಸ್ಥಳವಲ್ಲ; ವ್ಯಕ್ತಿಯ ಪ್ರತಿಭೆ ಅರಳುವ ಮತ್ತು ಹೊಸ ಬದುಕಿಗೆ ದಾರಿ ತೋರಿಸುವ ಪುನರ್‌ನಿರ್ಮಾಣದ ಕೇಂದ್ರವಾಗಿಯೂ ರೂಪುಗೊಳ್ಳಬಹುದು ಎಂಬುದನ್ನು ಸಾಬೀತುಪಡಿಸಿದೆ.

ಅಪರಾಧ ಮಾಡಿದ ವ್ಯಕ್ತಿಗೆ ಶಿಕ್ಷೆ ಅಗತ್ಯ. ಆದರೆ ಶಿಕ್ಷೆಯ ಜೊತೆಗೆ ಪುನರ್ವಸತಿಯೂ ಅಷ್ಟೇ ಮುಖ್ಯ. ವ್ಯಕ್ತಿಯಲ್ಲಿರುವ ಪ್ರತಿಭೆಗೆ ಅವಕಾಶ ನೀಡಿದರೆ, ಅಪರಾಧಿಯೂ ಸಮಾಜಕ್ಕೆ ಮಾದರಿಯಾಗಬಲ್ಲ.

ಮಂಗಳೂರು ಕೇಂದ್ರ ಕಾರಾಗೃಹದ ಈ ಪ್ರಯತ್ನ ದೇಶದ ಇತರ ಜೈಲುಗಳಿಗೂ ಮಾದರಿಯಾಗುವ ಸಾಧ್ಯತೆ ಇದ್ದು, "ಶಿಕ್ಷೆ"ಯನ್ನು "ಪುನರ್‌ನಿರ್ಮಾಣ"ದ ಅವಕಾಶವನ್ನಾಗಿ ಪರಿವರ್ತಿಸುವ ಇಂತಹ ಉಪಕ್ರಮಗಳು ಹೆಚ್ಚಾದರೆ, ಸಮಾಜಕ್ಕೆ ಮರಳುವ ಅನೇಕ ಕೈದಿಗಳ ಬದುಕು ಹೊಸ ದಿಕ್ಕು ಪಡೆಯಬಹುದು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಟ್ರಂಪ್ ಆದೇಶ ಬೆನ್ನಲ್ಲೇ ಇರಾನ್ ಮೇಲೆ ಅಮೆರಿಕಾ ಭಾರೀ ವೈಮಾನಿಕ ದಾಳಿ: 10 ಪ್ರಮುಖ ಸೇನಾ ನೆಲೆಗಳು ಧ್ವಂಸ, ಕದನ ವಿರಾಮ ಮತ್ತೆ ಪ್ರಶ್ನಾರ್ಥಕ..!

ಇರಾನ್‌ನಿಂದ ಅಮೆರಿಕ ಮಿತ್ರ ರಾಷ್ಟ್ರಗಳ ಮೇಲೆ ಕ್ಷಿಪಣಿ, ಡ್ರೋನ್ ದಾಳಿ; ಮಧ್ಯಪ್ರಾಚ್ಯದಲ್ಲಿ ಮತ್ತೆ ಯುದ್ಧದ ಕಾರ್ಮೋಡ..!

'ಪರಿಸ್ಥಿತಿ ಎದುರಾದರೆ ಇರಾನ್ ಸರ್ವನಾಶ'; ಟ್ರಂಪ್ ಕಠಿಣ ಎಚ್ಚರಿಕೆ, ಶುರುವಾಗುತ್ತಾ ಮಹಾಯುದ್ಧ...?

ಉಗ್ರರ ದಾಳಿ ಭೀತಿ; ದೆಹಲಿ-ಉತ್ತರಾಖಂಡದಲ್ಲಿ ಹೈ ಅಲರ್ಟ್, ದೇವಾಲಯ-ರೈಲು ನಿಲ್ದಾಣಗಳಿಗೆ ಬಿಗಿ ಭದ್ರತೆ..!

ಮಹಾಭೂಕಂಪಕ್ಕೆ ವೆನೆಜುವೆಲಾ ತತ್ತರ: ಸಾವಿನ ಸಂಖ್ಯೆ 1,430ಕ್ಕೆ ಏರಿಕೆ, 68 ಸಾವಿರಕ್ಕೂ ಹೆಚ್ಚು ಮಂದಿ ನಾಪತ್ತೆ