ಜೈವಿಕ ಅನಿಲ ಬಳಕೆ ಮಾಡುತ್ತಿರುವ ರೈತರು. 
ವಿಶೇಷ

LPG ಕೊರತೆ ನಡುವೆ ಜೈವಿಕ ಅನಿಲದತ್ತ ಮುಖ ಮಾಡಿದ ರೈತರು: ಹಸುವಿನ ಸಗಣಿಯಿಂದ ತಯಾರಿಸಿದ ಪರ್ಯಾಯ ಇಂಧನ ಬಳಕೆ ಸಕ್ಸಸ್..!

ಇಲ್ಲಿನ ರೈತರು ಹಸುವಿನ ಸಗಣಿಯಿಂದ ಉತ್ಪಾದಿಸುವ ಜೈವಿಕ ಇಂಧನದ ಮೂಲಕ ಅಡುಗೆ ಅನಿಲದ ಅವಲಂಬನೆಯನ್ನು ಕಡಿಮೆ ಮಾಡಿಕೊಂಡು, ಸ್ವಾವಲಂಬನೆಯತ್ತ ಹೆಜ್ಜೆ ಹಾಕುತ್ತಿದ್ದಾರೆ.

ಮಂಗಳೂರು: ಅಡುಗೆ ಅನಿಲದ ಕೊರತೆಯಿಂದ ರಾಜ್ಯದ ಜನತೆ ಕಂಗಾಲಾಗಿದ್ದಾರೆ. ಈ ನಡುವೆ ದಕ್ಷಿಣ ಕನ್ನಡ ಜಿಲ್ಲೆಯ ಕೆಲವು ರೈತರು ಜೈವಿಕ ಇಂಧನದ ಮೂಲಕ ಪರ್ಯಾಯ ದಾರಿಯನ್ನು ಕಂಡುಕೊಂಡಿದ್ದು, ಈ ಮೂಲಕ ಇತರರಿಗೆ ಪ್ರೇರಣೆ ನೀಡುತ್ತಿದ್ದಾರೆ.

ಇಲ್ಲಿನ ರೈತರು ಹಸುವಿನ ಸಗಣಿಯಿಂದ ಉತ್ಪಾದಿಸುವ ಜೈವಿಕ ಇಂಧನದ ಮೂಲಕ ಅಡುಗೆ ಅನಿಲದ ಅವಲಂಬನೆಯನ್ನು ಕಡಿಮೆ ಮಾಡಿಕೊಂಡು, ಸ್ವಾವಲಂಬನೆಯತ್ತ ಹೆಜ್ಜೆ ಹಾಕುತ್ತಿದ್ದಾರೆ.

ಹಾಲು ಉತ್ಪಾದನೆ ಹಾಗೂ ಕೃಷಿಯನ್ನು ಅವಲಂಬಿಸಿಕೊಂಡಿರುವ ಇಲ್ಲಿನ ರೈತರಿಗೆ ಗೋವಿನ ಸಗಣಿ ಸುಲಭವಾಗಿ ಸಿಗುತ್ತದೆ. ಅದನ್ನೇ ಇಂಧನವಾಗಿ ಪರಿವರ್ತಿಸುವ ಜೈವಿಕ ಇಂಧನ ಘಟಕಗಳು ಇದೀಗ ಹಲವು ರೈತರ ಮನೆಗಳಲ್ಲಿ ಬಳಕೆಯಲ್ಲಿವೆ. ಇದರಿಂದ ಅಡುಗೆ ಅನಿಲದ ಕೊರತೆ ಎದುರಾದರೂ ಅವರ ದಿನನಿತ್ಯದ ಬದುಕು ಅಷ್ಟಾಗಿ ತೊಂದರೆಗೊಳಗಾಗುವುದಿಲ್ಲ.

ಉಳ್ಳಾಲ ತಾಲ್ಲೂಕಿನ ಇನೋಲಿಯಲ್ಲಿ ಹೋಂಸ್ಟೇ ಮತ್ತು ಫಾರ್ಮ್‌ಹೌಸ್ ನಡೆಸುತ್ತಿರುವ ರೈತ ಗ್ಲೆನ್ ರೋಚೆ ಇತರರಿಗೆ ಉದಾಹರಣೆಯಾಗಿದ್ದಾರೆ.

ಹೈನುಗಾರಿಗೆ ಮತ್ತು ಕೃಷಿ ಚಟುವಟಿಕೆಗಳ ಜೊತೆಗೆ ಜೈವಿಕ ಇಂಧನ ಘಟಕವನ್ನು ಯಶಸ್ವಿಯಾಗಿ ಬಳಸುತ್ತಿದ್ದಾರೆ. ಅವರ ಬಳಿ ಇರುವ ಹಸುಗಳಿಂದ ದೊರೆಯುವ ಸಗಣಿಯನ್ನು ಬಳಸಿ ಪ್ರತಿದಿನ ಜೈವಿಕ ಇಂಧನ ಉತ್ಪಾದಿಸಿ ಅಡುಗೆ ಕಾರ್ಯಗಳನ್ನು ನಿರ್ವಹಿಸುತ್ತಿದ್ದಾರೆ.

ನಮ್ಮ ಬಳಿ ಇರುವ ಹಸುಗಳಿಂದ ದೊರೆಯುವ ಸಗಣಿಯನ್ನು ಜೈವಿಕ ಇಂಧನ ಘಟಕಕ್ಕೆ ಬಳಸುತ್ತೇವೆ. ಇದರಿಂದ ಅಡುಗೆ ಅನಿಲ ಸಿಲಿಂಡರ್ ಅವಲಂಬನೆ ಕಡಿಮೆಯಾಗಿದೆ. ಕಾರ್ಮಿಕರು ಹಾಗೂ ಮನೆಯವರು ಎಲ್ಲರೂ ಅದನ್ನೇ ಅಡುಗೆಗಾಗಿ ಬಳಸುತ್ತಾರೆ. ವಿದ್ಯುತ್ ಅಗತ್ಯಗಳಿಗೆ ಸೌರಶಕ್ತಿಯನ್ನು ಬಳಸುತ್ತಿದ್ದೇವೆ ಮತ್ತು ಹೊಲಗಳಿಗೆ ಸಹಜ ಸಾವಯವ ಗೊಬ್ಬರವನ್ನು ಉಪಯೋಗಿಸುತ್ತೇವೆಂದು ಗ್ಲೆನ್ ರೋಚೆ ಅವರು ಹೇಳಿದ್ದಾರೆ.

ಇದೇ ರೀತಿಯಲ್ಲಿ ಪುತ್ತೂರು ತಾಲೂಕಿನ ಮುರುಳ್ಯ ಗ್ರಾಮದ ರೈತ ಜಗನ್ನಾಥ ಪೂಜಾರಿ ಸುಮಾರು ಇಪ್ಪತ್ತು ವರ್ಷಗಳ ಹಿಂದೆ ಸ್ಥಾಪಿಸಿದ್ದ ಜೈವಿಕ ಇಂಧನ ಘಟಕವನ್ನು ಇನ್ನೂ ಬಳಸುತ್ತಿದ್ದಾರೆ. ಹಿಂದೆ ಹೆಚ್ಚಿನ ಸಂಖ್ಯೆಯಲ್ಲಿ ಹಸುಗಳನ್ನು ಸಾಕುತ್ತಿದ್ದ ಅವರು ಈಗ ಕಡಿಮೆ ಸಂಖ್ಯೆಯ ಹಸುಗಳನ್ನು ಹೊಂದಿದ್ದರೂ ಜೈವಿಕ ಇಂಧನದ ಬಳಕೆ ಮುಂದುವರಿಸಿದ್ದಾರೆ.

ಪ್ರತಿದಿನ ಸಗಣಿಯಿಂದ ಜೈವಿಕ ಇಂಧನ ಉತ್ಪಾದಿಸುತ್ತೇವೆ. ಇದರಿಂದ ಅಡುಗೆ ಅನಿಲ ಸಿಲಿಂಡರ್ ಅಗತ್ಯ ಬಹುತೇಕ ಕಡಿಮೆಯಾಗಿದೆ. ಇದು ಸ್ವಚ್ಛ, ಹೊಗೆರಹಿತ ಹಾಗೂ ಪರಿಸರ ಸ್ನೇಹಿ ಇಂಧನವಾಗಿದೆ ಎಂದು ಜಗನ್ನಾಥ ಅವರು ಹೇಳಿದ್ದಾರೆ.

ಪರಿಸರ ತಜ್ಞ ಜೀತ್ ಮಿಲನ್ ರೋಚೆ ಅವರು ಮಾತನಾಡಿ, ಜೈವಿಕ ಇಂಧನವು ಕೇವಲ ಪರ್ಯಾಯ ಇಂಧನವಲ್ಲ, ಪರಿಸರ ಸಂರಕ್ಷಣೆಗೆ ಸಹ ಸಹಕಾರಿ. ಜೈವಿಕ ಇಂಧನದಿಂದ ತ್ಯಾಜ್ಯವನ್ನು ಇಂಧನವಾಗಿ ಪರಿವರ್ತಿಸಬಹುದು. ಇದರಿಂದ ಕಟ್ಟಿಗೆಗಳ ಬಳಕೆ ಕಡಿಮೆಯಾಗುತ್ತದೆ ಹಾಗೂ ಕಾಡುಗಳ ಸಂರಕ್ಷಣೆಗೂ ನೆರವಾಗುತ್ತದೆ. ಇದು ಸ್ಥಳೀಯವಾಗಿ ಲಭ್ಯವಿರುವ ನವೀಕರಿಸಬಹುದಾದ ಶಕ್ತಿಯ ಮೂಲವೂ ಆಗಿದೆ ಎಂದು ಹೇಳಿದ್ದಾರೆ.

ಎಲ್‌ಪಿಜಿ ಕೊರತೆ ಉಂಟಾದ ಈ ಸಂದರ್ಭದಲ್ಲಿ ದಕ್ಷಿಣ ಕನ್ನಡದ ರೈತರು ಜೈವಿಕ ಇಂಧನದ ಬಳಕೆಯ ಮೂಲಕ ಪರ್ಯಾಯ ದಾರಿಯನ್ನು ಹುಡುಕಿಕೊಂಡಿದ್ದು, ಕೃಷಿ, ಪಶುಸಂಗೋಪನೆ ಮತ್ತು ನವೀಕರಿಸಬಹುದಾದ ಶಕ್ತಿಯನ್ನು ಒಟ್ಟಿಗೆ ಬಳಸುವ ಈ ವಿಧಾನವು ಗ್ರಾಮೀಣ ಜೀವನದಲ್ಲಿ ಸ್ವಾವಲಂಬನೆ ಬದುಕು ಸಾಧಿಸಲು ಸಹಾಯಕವಾಗುತ್ತಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಒಡಿಶಾದ SCB ವೈದ್ಯಕೀಯ ಕಾಲೇಜಿನಲ್ಲಿ ಭಾರೀ ಅಗ್ನಿ ಅವಘಡ: ಕನಿಷ್ಠ 10 ಮಂದಿ ಸಾವು, ಮೃತರ ಕುಟುಂಬಕ್ಕೆ ತಲಾ 25 ಲಕ್ಷ ರೂ. ಪರಿಹಾರ ಘೋಷಣೆ

West Asia conflict: ದುಬೈ ಏರ್‌ಪೋರ್ಟ್‌ ಬಳಿ ಡ್ರೋನ್‌ ದಾಳಿ; ಭಾರೀ ಬೆಂಕಿ, ವಿಮಾನ ಸಂಚಾರ ತಾತ್ಕಾಲಿಕ ಸ್ಥಗಿತ

ಗಡುವು ಮೀರಿ 5 ತಿಂಗಳಾದರೂ ಮುಕ್ತಾಯಗೊಳ್ಳದ ಯಶವಂತಪುರ, ಬೆಂಗಳೂರು ಕಂಟೋನ್ಮೆಂಟ್ ನಿಲ್ದಾಣಗಳ ನವೀಕರಣ ಕಾಮಗಾರಿ!

ರಾಜ್ಯಸಭೆಗೆ 26 ಮಂದಿ ಅವಿರೋಧ ಆಯ್ಕೆ: 3ರಾಜ್ಯಗಳಲ್ಲಿ ಬಿಗ್ ಫೈಟ್; ಮೇಲ್ಮನೆಯಲ್ಲಿ ಬಿಜೆಪಿಗೆ ಮತ್ತಷ್ಟು ಬಲ!

ಒಡಿಶಾ ರಾಜ್ಯಸಭೆ ಚುನಾವಣೆ: ಮಲ್ಲಿಕಾರ್ಜುನ ಖರ್ಗೆ ಭೇಟಿಯಾದ 'ಕೈ'ಶಾಸಕರು, ಬಿಡದಿ ರೆಸಾರ್ಟ್‌ನಿಂದ ಬೆಂಗಳೂರಿಗೆ ಶಿಫ್ಟ್..!

SCROLL FOR NEXT