Captain Smith Macchar: 35,000 ಅಡಿ ಎತ್ತರದಲ್ಲಿ ನೂರಾರು ಪ್ರಯಾಣಿಕರು ನೆಮ್ಮದಿಯ ನಿದ್ದೆಯಲ್ಲಿದ್ದಾಗ, ದುಬೈನಿಂದ ಟೆಲ್ ಅವಿವ್ ನಗರಕ್ಕೆ ತೆರಳುತ್ತಿದ್ದ ವಿಮಾನದೊಳಗಡೆ ಭೀಕರ ಸಾವಿನ ಆಟವೊಂದು ಆರಂಭವಾಗಿತ್ತು. ಕಣ್ಣೆದುರೇ ಮೃತ್ಯು ನಿಂತಿದ್ದರೂ ರಕ್ತದ ಮಡುವಿನಲ್ಲೇ ಓರ್ವ ಭಾರತೀಯ ತೋರಿದ ಅಪ್ರತಿಮ ಧೈರ್ಯ ಇಂದು ನೂರಾರು ಜೀವಗಳಿಗೆ ಮರುಜನ್ಮ ನೀಡಿದೆ. ಸಾವು ಕಣ್ಣೆದುರೇ ಕಂಡರೂ ಪ್ರಾಣಪಣಕ್ಕಿಟ್ಟು, ಎಲ್ಲರ ಜೀವ ಉಳಿಸಿದ ರಿಯಲ್ ಹೀರೋ, ಹೆಮ್ಮೆಯ ಭಾರತೀಯ ಕ್ಯಾಪ್ಟನ್ ಸ್ಮಿತ್ ಮಚ್ಚಾರ್ ಅವರ ರೋಚಕ ಕಥೆ ಇಲ್ಲಿದೆ.
ಏನಿದು ಹಾರರ್ ಘಟನೆ?
ಸೆಪ್ಟೆಂಬರ್ 30, 2026 ರಂದು ದುಬೈನಿಂದ ಟೆಲ್ ಅವಿವ್‌ಗೆ ಹೊರಟಿದ್ದ ಬೋಯಿಂಗ್ 737 ವಿಮಾನದಲ್ಲಿ ಸುಮಾರು 174 ಪ್ರಯಾಣಿಕರಿದ್ದರು. ವಿಮಾನವು ಸುಮಾರು 34,000 ಅಡಿ ಎತ್ತರದಲ್ಲಿ ಹಾರುತ್ತಿದ್ದಾಗ, ಒಮಾನ್ ಮೂಲದ ಸಹ-ಪೈಲಟ್ ಇದ್ದಕ್ಕಿದ್ದಂತೆ ವಿಮಾನದ ಕಾಕ್‌ಪಿಟ್ ಒಳಗೇ ಮುಖ್ಯ ಪೈಲಟ್ ಆಗಿದ್ದ ಸ್ಮಿತ್ ಮಚ್ಚಾರ್ ಅವರ ಮೇಲೆ ಚಾಕುವಿನಿಂದ ಭೀಕರವಾಗಿ ದಾಳಿ ನಡೆಸಿದನು. ಮಚ್ಚಾರ್ ಅವರಿಗೆ ಕುತ್ತಿಗೆ ಮತ್ತು ದೇಹದ ಇತರ ಭಾಗಗಳಿಗೆ ಹಲವು ಬಾರಿ ಇರಿಯಲಾಯಿತು. ದಾಳಿಕೋರ ಸಹ-ಪೈಲಟ್ ವಿಮಾನದ ಸಿಸ್ಟಂಗಳನ್ನು ಹ್ಯಾಕ್ ಮಾಡಿ ವಿಮಾನವನ್ನು ನೇರವಾಗಿ ಭೂಮಿಗೆ ಅಪ್ಪಳಿಸುವಂತೆ ಮಾಡಲು ಪ್ರಯತ್ನಿಸಿದನು. ಇದರ ಪರಿಣಾಮವಾಗಿ ವಿಮಾನವು ಕೇವಲ ಎರಡು ನಿಮಿಷಗಳಲ್ಲಿ ಬರೋಬ್ಬರಿ 17,400 ಅಡಿಗಳಷ್ಟು ಕೆಳಗೆ ಆಕಸ್ಮಿಕವಾಗಿ ಕುಸಿಯಿತು.
ಸ್ಮಿತ್ ಮಚ್ಚಾರ್ ವೀರಾವೇಶದ ನಡೆ
ಮುಂದುವರೆದು, ರಕ್ತದ ಮಡುವಿನಲ್ಲಿ ಬಿದ್ದಿದ್ದರೂ ಧೈರ್ಯ ಕಳೆದುಕೊಳ್ಳದ ಕ್ಯಾಪ್ಟನ್ ಸ್ಮಿತ್ ಮಚ್ಚಾರ್, ದಾಳಿಕೋರನ ವಿರುದ್ಧ ತೀವ್ರವಾಗಿ ಪ್ರತಿರೋಧ ಒಡ್ಡಿದರು. ವಿಮಾನದ ನಿಯಂತ್ರಣವನ್ನು ಸಂಪೂರ್ಣವಾಗಿ ಆತ ವಶಪಡಿಸಿಕೊಳ್ಳದಂತೆ ತಡೆದರು. ತೀವ್ರ ಗಾಯಗಳ ನಡುವೆಯೂ ಅವರು ಕಾಕ್‌ಪಿಟ್‌ನ ಒಳಗಿನ ಲಾಕ್ ಅನ್ನು ರಿಲೀಸ್ ಮಾಡಿ ಬಾಗಿಲು ತೆರೆಯುವಲ್ಲಿ ಯಶಸ್ವಿಯಾದರು. ಬಾಗಿಲು ತೆರೆಯುತ್ತಿದ್ದಂತೆ ಅಲರ್ಟ್ ಆದ ವಿಮಾನದ ಸಿಬ್ಬಂದಿ ಹಾಗೂ ಇಸ್ರೇಲಿ ಪ್ರಯಾಣಿಕರು ಒಳ ನುಗ್ಗಿ ದಾಳಿಕೋರನನ್ನು ಹಿಡಿದು ಕಟ್ಟಿಹಾಕಿದರು. ವಿಮಾನದಲ್ಲೇ ಪ್ರಯಾಣಿಸುತ್ತಿದ್ದ ಇತರ ಇಬ್ಬರು ಆಫ್-ಡ್ಯೂಟಿ ಪೈಲಟ್‌ಗಳು ತಕ್ಷಣ ಕಾಕ್‌ಪಿಟ್ ನಿಯಂತ್ರಣಕ್ಕೆ ತೆಗೆದುಕೊಂಡು ವಿಮಾನವನ್ನು ಸುರಕ್ಷಿತವಾಗಿ ಸೌದಿ ಅರೇಬಿಯಾದ ತಬುಕ್ ನಗರದಲ್ಲಿ ತುರ್ತು ಭೂಸ್ಪರ್ಶ ಮಾಡಿಸಿದರು. ಈ ಮೂಲಕ 174 ಪ್ರಯಾಣಿಕರ ಪ್ರಾಣ ಉಳಿಯಿತು.
ಯಾರು ಈ ಕ್ಯಾಪ್ಟನ್ ಸ್ಮಿತ್ ಮಚ್ಚಾರ್?
ಮೂಲತಃ ಮುಂಬೈನ ಘಾಟ್‌ಕೋಪರ್ ಈಸ್ಟ್ ಪ್ರದೇಶದವರಾದ ಸ್ಮಿತ್ ಮಚ್ಚಾರ್, ಪ್ರಸ್ತುತ ಉದ್ಯೋಗದ ನಿಮಿತ್ತ ದುಬೈನಲ್ಲಿ ನೆಲೆಸಿದ್ದಾರೆ. ಆರಂಭದಲ್ಲಿ ಇವರು ತಮ್ಮ ಕೌಟುಂಬಿಕ ಟೆಕ್ಸ್‌ಟೈಲ್ ವ್ಯವಹಾರ ನೋಡಿಕೊಳ್ಳಲು ಇಂಜಿನಿಯರಿಂಗ್ ಮಾಡುತ್ತಿದ್ದರು. ಆದರೆ 19ನೇ ವಯಸ್ಸಿನಲ್ಲಿ ಇವರಿಗೆ ಏವಿಯೇಷನ್ ಫೀಲ್ಡ್‌ನತ್ತ ಆಸಕ್ತಿ ಮೂಡಿತು. ನ್ಯೂಜಿಲೆಂಡ್‌ನಲ್ಲಿ ಪೈಲಟ್ ತರಬೇತಿ ಪಡೆದರು. ವಿಮಾನಯಾನ ಕ್ಷೇತ್ರದಲ್ಲಿ ಅಪಾರ ಅನುಭವ ಹೊಂದಿರುವ ಇವರು, 2022 ರಲ್ಲಿ ಫ್ಲೈದುಬೈ ಸೇರುವ ಮುನ್ನ, ಭಾರತದ ಸ್ಪೈಸ್‌ಜೆಟ್ ವಿಮಾನಯಾನ ಸಂಸ್ಥೆಯಲ್ಲಿ 11 ವರ್ಷಗಳ ಕಾಲ ಸೀನಿಯರ್ ಕಮಾಂಡರ್ ಮತ್ತು ಲೈನ್ ಟ್ರೈನಿಂಗ್ ಕ್ಯಾಪ್ಟನ್ ಆಗಿ ಸೇವೆ ಸಲ್ಲಿಸಿದ್ದರು. ಇವರಿಗೆ ಬೋಯಿಂಗ್ 737 ವಿಮಾನಗಳನ್ನು ಹಾರಿಸುವಲ್ಲಿ ಸುಮಾರು 9,750 ಗಂಟೆಗಳಿಗಿಂತಲೂ ಅಧಿಕ ಹಾರಾಟದ ಅಪಾರ ಅನುಭವವಿದೆ.
ನಿಜವಾದ ಹೀರೋ
ಪ್ರಧಾನಿ ಮೋದಿಯವರು ಸಾಮಾಜಿಕ ಜಾಲತಾಣದ ಖಾತೆಯಲ್ಲಿ ಪೋಸ್ಟ್ ಮಾಡಿ, "ಅತ್ಯಂತ ಕಠಿಣ ಪರಿಸ್ಥಿತಿಯಲ್ಲೂ ಸ್ಮಿತ್ ಮಚ್ಚಾರ್ ತೋರಿಸಿದ ಧೈರ್ಯ ಮತ್ತು ಸಮಯಪ್ರಜ್ಞೆ ನೂರಾರು ಜೀವಗಳನ್ನು ಉಳಿಸಿದೆ. ಅವರ ಶೌರ್ಯದ ಬಗ್ಗೆ ಭಾರತಕ್ಕೆ ಹೆಮ್ಮೆಯಿದೆ" ಎಂದು ಶ್ಲಾಘಿಸಿದ್ದಾರೆ ಮತ್ತು ಅವರ ಶೀಘ್ರ ಚೇತರಿಕೆಗೆ ಪ್ರಾರ್ಥಿಸಿದ್ದಾರೆ. ಜೊತೆಗೆ ಮಚ್ಚಾರ್ ಅವರ ಕುಟುಂಬಸ್ಥರೊಂದಿಗೆ ಫೋನ್‌ನಲ್ಲಿ ಮಾತನಾಡಿದ್ದಾರೆ. ಮತ್ತೊಂದೆಡೆ, ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು ಕ್ಯಾಪ್ಟನ್ ಸ್ಮಿತ್ ಮಚ್ಚಾರ್ ಅವರನ್ನು, "ಗಾಯಗೊಂಡಿದ್ದರೂ ಹೋರಾಡಿ ಎರಡನೇ 9/11 ಮಾದರಿಯ ಭೀಕರ ವಿಮಾನ ದುರಂತವನ್ನು ತಪ್ಪಿಸಿದ ಭಾರತೀಯ ಪೈಲಟ್ ನಿಜವಾದ ಹೀರೋ" ಎಂದು ಬಣ್ಣಿಸಿದ್ದಾರೆ.