ಬೆಂಗಳೂರು: ಬೆಳಗ್ಗೆ ಕಾಫಿ ಜೊತೆ ದಿನಪತ್ರಿಕೆಯ ಕೊನೆಯ ಪುಟದ ಕ್ರಾಸ್‌ವರ್ಡ್ (ಪದಬಂಧ) ಬಿಡಿಸುವುದೇ ಒಂದು ರೋಮಾಂಚನ. ಅಡ್ಡ-ಉದ್ದದ ಚೌಕಗಳಲ್ಲಿ ಅಡಗಿರುವ ಸುಳಿವುಗಳನ್ನು ಹೆಕ್ಕಿ ತೆಗೆಯುವ ಓದುಗರಿಗೆ ಸಿಗುವ ಆನಂದ ಅಷ್ಟಿಷ್ಟಲ್ಲ. ಅದರಲ್ಲೂ, ಈ ಕ್ರಾಸ್‌ವರ್ಡ್ ಬಿಡಿಸದಿದ್ದರೆ ದಿನವೇ ಶುರುವಾಗುವುದಿಲ್ಲ ಎನ್ನುವ ಲಕ್ಷಾಂತರ ಕನ್ನಡಿಗರ ಬೆಳಗನ್ನು ಕಳೆದ ಐದು ದಶಕಗಳಿಂದ ಕಟ್ಟಿಕೊಡುತ್ತಿರುವುದು 74 ವರ್ಷದ ಒಬ್ಬ ಬೆಂಗಳೂರಿಗ ಎನ್ನುವುದು ನಿಮಗೆ ಗೊತ್ತಾ? ಹೌದು, ದಿನಕ್ಕೆ ಒಂದು ಪದಬಂಧ ಬಿಡಿಸುವುದೇ ಕಷ್ಟ ಅನ್ನುವವರ ನಡುವೆ ಸಿಲಿಕಾನ್ ಸಿಟಿಯಲ್ಲಿ ದಿನಕ್ಕೆ ಮೂರು ಪದಬಂಧ ಬರೆಯುವ ವ್ಯಕ್ತಿಯೊಬ್ಬರಿದ್ದಾರೆ. ಅವರೇ ಕನ್ನಡ ಪತ್ರಿಕೋದ್ಯಮ ಮತ್ತು ಸಾಹಿತ್ಯ ಲೋಕದಲ್ಲಿ ಕನ್ನಡ ಪದಬಂಧಗಳ ಮಾಂತ್ರಿಕ ಎಂದೇ ಪ್ರಸಿದ್ಧರಾಗಿರುವ ಎ. ಎನ್. ಪ್ರಹ್ಲಾದ ರಾವ್. ಕಳೆದ ಐದು ದಶಕಗಳಲ್ಲಿ 52,000ಕ್ಕೂ ಹೆಚ್ಚು ಪದಬಂಧ ರಚಿಸಿ ಲಿಮ್ಕಾ ದಾಖಲೆ ಬರೆದಿರುವ ರಾವ್ ಅವರ ಅದ್ಭುತ ಪಯಣ ಇಲ್ಲಿದೆ...
52 ಸಾವಿರದ ಗಡಿ ದಾಟಿದ ಪ್ರಾಣಪದ:
ಕೋಲಾರ ಜಿಲ್ಲೆಯ ಅಬ್ಬಾನಿಯವರಾದ ಎ.ಎನ್. ಪ್ರಹ್ಲಾದ ರಾವ್ ಅವರಿಗೆ ಅಡ್ಡಪದಗಳ ಮೇಲಿನ ಆಸಕ್ತಿ 1972 ರಿಂದ 1975ರ ನಡುವೆ ಕೋಲಾರದ ಸರ್ಕಾರಿ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದಾಗ ಆರಂಭವಾಯಿತು. ವಿದ್ಯಾರ್ಥಿ ದೆಸೆಯಲ್ಲೇ ಕನ್ನಡ ಮತ್ತು ಇಂಗ್ಲಿಷ್ ಕ್ರಾಸ್‌ವರ್ಡ್ ಬಿಡಿಸುವ ಹವ್ಯಾಸ ಇಟ್ಟುಕೊಂಡಿದ್ದ ಅವರು, ಕೋಲಾರದಲ್ಲಿ ಪತ್ರಕರ್ತರಾಗಿ ಕೆಲಸ ಮಾಡಿದ ನಂತರ 1984ರ ಸುಮಾರಿಗೆ ವಾರ್ತಾ ಇಲಾಖೆಗೆ ಸೇರಿ ಬೆಂಗಳೂರಿಗೆ ಬಂದು ಗಂಭೀರವಾಗಿ ಪದಬಂಧಗಳನ್ನ ರಚಿಸಲು ಪ್ರಾರಂಭಿಸಿದರು. ಈಗ ಅದುವೇ ಅವರ ಬದುಕಿನ ಬಹುದೊಡ್ಡ ಹವ್ಯಾಸ ಹಾಗೂ ಸಾಧನೆಯಾಗಿ ಬದಲಾಯಿತು.
ಒಂದು ಕಾಲದಲ್ಲಿ ಕನ್ನಡ ಪತ್ರಿಕೆಗಳಲ್ಲಿ ಪದಬಂಧಗಳು ಕೇವಲ ವಾರಪತ್ರಿಕೆಗಳಿಗಷ್ಟೇ ಸೀಮಿತವಾಗಿದ್ದವು, ಅದೇ ವೇಳೆ, 1989–90ರ ಸುಮಾರಿಗೆ ಪ್ರಮುಖ ದಿನಪತ್ರಿಕೆಯೊಂದಕ್ಕೆ ನಿತ್ಯವೂ ಪದಬಂಧ ರಚಿಸುವ ಅವಕಾಶ ಇವರಿಗೆ ದೊರೆಯಿತು. ಅಂದಿನಿಂದ ಇವರ ಪದಬಂಧಗಳು ನಾಡಿನ ಪ್ರಮುಖ ದಿನಪತ್ರಿಕೆಗಳು ಹಾಗೂ ನಿಯತಕಾಲಿಕೆಗಳಲ್ಲಿ ನಿರಂತರವಾಗಿ ಪ್ರಕಟವಾಗುತ್ತಿವೆ. ಅದರಂತೆ, ಕನ್ನಡಿಗರ ಮೆದುಳಿಗೆ ನಿರಂತರ ಕಸರತ್ತು ನೀಡುತ್ತಿರುವ ಪ್ರಹ್ಲಾದ ರಾವ್ ಅವರು ದಿನಕ್ಕೆ ಸರಾಸರಿ 3 ಪದಬಂಧಗಳನ್ನು ಹೊಸದಾಗಿ ಸೃಷ್ಟಿಸುತ್ತಾರೆ. ಹೀಗೆ, ಅವರು ಬರೆದ ಒಟ್ಟು ಪದಬಂಧಗಳ ಸಂಖ್ಯೆ 52,000 ದಾಟಿದೆ. ಜೊತೆಗೆ, ಕೇವಲ ಸಾಮಾನ್ಯ ಜ್ಞಾನಕ್ಕೆ ಸೀಮಿತವಾಗದೆ ಕನ್ನಡ ಸಿನಿಮಾ, ಇತಿಹಾಸ, ವಿಜ್ಞಾನ, ಪುರಾಣ, ಅಪರಾಧ ಜಗತ್ತು, ಮತ್ತು ಮಕ್ಕಳಿಗಾಗಿಯೇ ವಿಶೇಷವಾದ ಥೀಮ್ ಆಧಾರಿತ ಪದಬಂಧಗಳನ್ನು ರೂಪಿಸಿದ್ದಾರೆ.
ಈ ಬಗ್ಗೆ ಮಾತಾನಾಡಿದ ರಾವ್, “ನಾನು ವಿದ್ಯಾರ್ಥಿದೆಸೆಯಿಂದಲೂ ಇಂಗ್ಲಿಷ್ ಪದಬಂಧಗಳೆಂದರೆ ಬಹಳ ಆಸಕ್ತಿ ಇತ್ತು. ಹೀಗೆ, ಕನ್ನಡ ದಿನಪತ್ರಿಕೆಯೊಂದಕ್ಕೆ ನಿತ್ಯವೂ ಪದಬಂಧ ರಚಿಸುವ ಅವಕಾಶ ದೊರೆತಾಗ ಅದನ್ನು ಗಂಭೀರವಾಗಿ ತೆಗೆದುಕೊಂಡು ಬರೆಯಲು ಶುರುಮಾಡಿದೆ. ಅದರಲ್ಲೂ, ದಿನಪತ್ರಿಕೆಗಳು ಸಿನಿಮಾ ಆಧಾರಿತ ಪದಬಂಧಗಳನ್ನು ಕೇಳಲು ಶುರುಮಾಡಿದಾಗ ದೊಡ್ಡ ಮಟ್ಟದಲ್ಲಿ ಚಿತ್ರರಂಗದ ಮಾಹಿತಿ ಸಂಗ್ರಹಿಸಿದೆ. ಅದೇ ನನಗೆ ಪುಸ್ತಕಗಳು ಮತ್ತು ಕ್ರಾಸ್‌ವರ್ಡ್‌ಗಳನ್ನು ರಚಿಸಲು ನೆರವಾಯಿತು. ಸಾವಿರಾರು ಒಗಟುಗಳನ್ನು ಹೆಣೆಯುವಾಗ ಒಂದೇ ಪದ ಮರಳಿ ಬಂದರೂ ಪ್ರತಿ ಬಾರಿಯೂ ಹೊಸ ಸುಳಿವು ಹಾಗೂ ಸಂದರ್ಭ ನೀಡುವುದು ದೊಡ್ಡ ಸವಾಲು. ಈ ಕ್ರಾಸ್‌ವರ್ಡ್ ಬರವಣಿಗೆಯ ಬಗ್ಗೆ ನನಗೆ ತುಂಬ ಹೆಮ್ಮೆ ಇದೆ; ವಿದ್ಯಾರ್ಥಿಗಳು, ಹಿರಿಯರು, ಗೃಹಿಣಿಯರು ಸೇರಿದಂತೆ ಎಷ್ಟೋ ಜನರು ಇದನ್ನು ಇಷ್ಟಪಟ್ಟು ಎಲ್ಲಾ ಸುಳಿವುಗಳನ್ನು ಬಿಡಿಸಿದಾಗ ತೃಪ್ತಿಪಡುತ್ತಾರೆ, ಅದೇ ನನ್ನ ದೊಡ್ಡ ಪ್ರೇರಣೆ. ಕನ್ನಡದಲ್ಲಿ ಬಿಡಿಸುವವರ ದೊಡ್ಡ ಸಮುದಾಯವಿದ್ದರೂ ರಚಿಸುವವರು ಕಡಿಮೆ ಇರುವುದರಿಂದ ಹೊಸಬರಿಗೆ ಇಲ್ಲಿ ಉತ್ತಮ ಅವಕಾಶವಿದೆ" ಎಂದರು.
ಮುಂದುವರೆದು, ಆರಂಭದಲ್ಲಿ ಕೈಯಿಂದಲೇ ಚೌಕಗಳನ್ನು ಬಿಡಿಸಿ ಬರೆಯಲು ಒಂದೂವರೆ ಇಂದ ಎರಡೂವರೆ ಗಂಟೆ ಬೇಕಾಗುತ್ತಿತ್ತು. ಆದರೆ ಕಂಪ್ಯೂಟರ್‌ಗಳ ಬಳಕೆಯಿಂದಾಗಿ ಈಗ 9x9 ಅಥವಾ 11x11 ಅಳತೆಯ ಪದಬಂಧವನ್ನು 15 ರಿಂದ 20 ನಿಮಿಷಗಳಲ್ಲಿ ಸಿದ್ಧಪಡಿಸುತ್ತಾರೆ. ಜೊತೆಗೆ, ಕೃತಕ ಬುದ್ಧಿಮತ್ತೆ ಬಗ್ಗೆಯೂ ಪ್ರಯೋಗ ನಡೆಸಿದ್ದು, ಸದ್ಯಕ್ಕೆ ಪದಗಳ ಹೊಂದಾಣಿಕೆ ಮತ್ತು ಸುಳಿವುಗಳ ಗುಣಮಟ್ಟದಲ್ಲಿ ಮಿತಿಗಳಿವೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ದಾಖಲೆಗಳ ಸರದಾರ
ಪದಬಂಧ ರಚನೆಯಲ್ಲಿ ಭಾರತದಲ್ಲೇ ಅಗ್ರಗಣ್ಯ ಸಾಧನೆ ಮಾಡಿರುವ ಇವರಿಗೆ 2024ನೇ ಸಾಲಿನ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಅಲ್ಲದೆ, ಅತಿ ಹೆಚ್ಚು ಪ್ರಾದೇಶಿಕ ಪದಬಂಧ ಸೃಷ್ಟಿಸಿದ್ದಕ್ಕಾಗಿ 2016ರಲ್ಲಿ ಇವರ ಹೆಸರು ಈ ಹಿಂದೆಯೇ ಪ್ರಸಿದ್ಧ ಲಿಮ್ಕಾ ಬುಕ್ ಆಫ್ ರೆಕಾರ್ಡ್ಸ್ ಸೇರಿದ್ದು, ಈ ಬೃಹತ್ ಪ್ರಮಾಣದ ಕ್ರಾಸ್‌ವರ್ಡ್‌ಗಳಿಗಾಗಿ ಅವರು ಕನ್ನಡ ಭಾಷೆಯಲ್ಲಿ ಬರೋಬ್ಬರಿ 12 ಲಕ್ಷಕ್ಕೂ ಅಧಿಕ ವಿಶಿಷ್ಟವಾದ ಸುಳುಹುಗಳನ್ನು ನೀಡಿದ್ದಾರೆ.
ಏತನ್ಮಧ್ಯೆ, ಹಲವು ಪ್ರಮುಖ ಪ್ರಕಾಶನಗಳ ಮೂಲಕ ಇವರ ಹಲವು ಪ್ರಸಿದ್ಧ ಪದಬಂಧ ಪುಸ್ತಕಗಳ ಸಂಕಲನಗಳು (ಪದರಂಗ, ಪದಸಂಪದ, ಪದವ್ಯೂಹ ಇತ್ಯಾದಿ) ಮಾರುಕಟ್ಟೆಗೆ ಬಂದಿವೆ. ಇದರೊಂದಿಗೆ ಕಲಾಕ್ಷೇತ್ರದಲ್ಲೂ ಆಸಕ್ತಿ ಹೊಂದಿರುವ ಇವರು ಡಾ. ರಾಜ್‌ಕುಮಾರ್ ಅವರ ಜೀವನ ಚರಿತ್ರೆ ಆಧಾರಿತ ಬಂಗಾರದ ಮನುಷ್ಯ ಎಂಬ ಹೆಸರಾಂತ ಕೃತಿಯನ್ನೂ ಕೂಡ ಬರೆದಿದ್ದಾರೆ.