ಬೆಂಗಳೂರು: ನಗರದ ಬ್ಯಾಡ್ಮಿಂಟನ್ ಅಸೋಸಿಯೇಷನ್‌ನಲ್ಲಿ ನಡೆಯುತ್ತಿರುವ ಅಖಿಲ ಭಾರತ ಸೀನಿಯರ್ ರ್ಯಾಂಕಿಂಗ್ ಬ್ಯಾಡ್ಮಿಂಟನ್ ಪಂದ್ಯಾವಳಿಯ ಕ್ವಾರ್ಟರ್‌ಫೈನಲ್ ಪಂದ್ಯದಲ್ಲಿ ಕರ್ನಾಟಕದ ಅರವಿಂದ್ ಭಟ್ ಮತ್ತು ಅನೂಪ್ ಶ್ರೀಧರ್ ಅವರು ಸೋಲನುಭವಿಸಿದ್ದಾರೆ.
ಅರವಿಂದ್ ಭಟ್ ಅವರು ಎಚ್.ಎಸ್ ಪ್ರಣಯ್ ವಿರುದ್ಧ ತೀವ್ರ ಪೈಪೋಟಿಯಿಂದ ಕೂಡಿದ್ದ ಕ್ವಾರ್ಟರ್‌ಫೈನಲ್ ಪಂದ್ಯದಲ್ಲಿ 21-12, 19-21, 21-14 ಸೆಟ್‌ಗಳ ಅಂತರದಿಂದ ಸೋಲನುಭವಿಸಿದರು. ಮೊದಲ ಸೆಟ್‌ನಲ್ಲಿ ಜಯ ಸಾಧಿಸಿದ್ದ ಅರವಿಂದ್ 2 ಮತ್ತು 3ನೇ ಸೆಟ್‌ನಲ್ಲಿ ಕೈಚೆಲ್ಲಿದರು. ಹೀಗಾಗಿ ಬಲಿಷ್ಠ ಎದುರಾಳಿ ಪ್ರಣಯ್ ಮೇಲುಗೈ ಸಾಧಿಸಿದ್ದರು.
ಇನ್ನೊಂದು ಕ್ವಾರ್ಟರ್‌ಫೈನಲ್ ಪಂದ್ಯದಲ್ಲಿ ಅನೂಪ್ ಶ್ರೀಧರ್ ಅವರು ರಾಷ್ಟ್ರೀಯ ಉದಯೋನ್ಮುಖ ಬ್ಯಾಡ್ಮಿಂಟನ್ ತಾರೆ ಸೌರಭ್ ವರ್ಮಾ ವಿರುದ್ಧ 21-15, 23-21 ನೇರ ಸೆಟ್‌ಗಳ ಅಂತರದಿಂದ ಕೈಚೆಲ್ಲಿದರು. ಮೊದಲ ಸೆಟ್‌ನಲ್ಲಿ ಸುಲಭವಾಗಿ ಕೈಚೆಲ್ಲಿದ ಅನೂಪ್ ಎರಡನೇ ಸೆಟ್‌ನಲ್ಲಿ ತಿರುಗೇಟು ನೀಡಿದರು. ಆದರೆ, ಜಯ ಕಂಡುಕೊಳ್ಳಲು ಸಾಧ್ಯವಾಗಲಿಲ್ಲ.
ಬೆಲವಾಡಿ, ಪೂವೀಶಾ ಸೆಮಿಫೈನಲ್‌ಗೆ: ಮಹಿಳೆಯರ ಡಬಲ್ಸ್ ವಿಭಾಗದಲ್ಲಿ ಕರ್ನಾಟಕದ ವಿ. ಬೆಳವಾಡಿ ಮತ್ತು ಪೂರ್ವೀಶಾ ಎಸ್. ರಾಮ್ ಅವರು ಸೆಮಿಫೈಲ್ ಪ್ರವೇಶಿಸಿದ್ದಾರೆ.
ಬೆಳವಾಡಿ ಅವರು ಎಎಐನ ಎಂ. ಸಹದೇವ್ ಜೋಡಿ, ಕ್ವಾರ್ಟರ್‌ಫೈನಲ್ ಪಂದ್ಯದಲ್ಲಿ ಆಂಧ್ರಪ್ರದೇಶದ ಜೋಶ್ನಾ ಪಿ. ಶಾರದಾ ಗೋವರ್ಧಿ ವಿರುದ್ಧ 21-14, 15-21, 24-22 ಜಯ ಸಾಧಿಸಿದ ಸೆಮಿಫೈನಲ್ ಪ್ರವೇಶಿಸಿತು. ಇನ್ನೊಂದು ಕ್ವಾರ್ಟರ್‌ಫೈನಲ್ ಪಂದ್ಯದಲ್ಲಿ ಪೂರ್ವೀಶಾ ಮತ್ತು ಆಂಧ್ರಪ್ರದೇಶದ ಮೇಘನಾ ಜೆ ಜೋಡಿ, ಕರ್ನಾಟಕದ ನಿಶ್ಚಿತಾ ಜಿ ಮತ್ತು ಕೇರಳದ ಸ್ನೇಹಾ ಶಾಂತಿಲಾಲ್ ಜೋಡಿಯನ್ನು 18-21, 21-12, 21-18 ಸೆಟ್‌ಗಳಿಂದ ಸೋಲಿಸಿ ಸೆಮಿಫೈನಲ್ ಪ್ರವೇಶಿಸಿತು.