ಚೆನ್ನೈ: ಟೀಂ ಇಂಡಿಯಾ ನಾಯಕ ಮಹೇಂದ್ರ ಸಿಂಗ್ ಧೋನಿ ಅವರ ಮೇಲೆ ಬಿಸಿಸಿಐ ಅಧ್ಯಕ್ಷ ಎನ್. ಶ್ರೀನಿವಾಸನ್ ಅವರಿಗೆ ಎಷ್ಟು ಪ್ರೀತಿ ಇದೆ ಎಂಬುದು ಮತ್ತೊಮ್ಮೆ ಸಾಬೀತಾಗಿದೆ. ಧೋನಿ ಅವರನ್ನು ಈಗ ತಮ್ಮ ಒಡೆತನದಲ್ಲಿರುವ ಇಂಡಿಯಾ ಸಿಮೆಂಟ್ ಸಂಸ್ಥೆಯ ಉಪಾಧ್ಯಕ್ಷರನ್ನಾಗಿ ಶ್ರೀನಿವಾಸನ್ ನೇಮಕ ಮಾಡಿಕೊಂಡಿದ್ದಾರೆ.
ಈ ಹಿಂದೆ ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾ ವಿರುದ್ಧ ಟೆಸ್ಟ್ ಸರಣಿಯಲ್ಲಿ ಬಾರತ ತಂಡ ಹೀನಾಯ ಸೋಲನುಭವಿಸಿದಾಗ, ಧೋನಿ ಅವರನ್ನು ನಾಯಕತ್ವದಿಂದ ತೆಗೆದು ಹಾಕಬೇಕು ಎಂದು ಆಯ್ಕೆ ಸಮಿತಿ ತೀರ್ಮಾನಕ್ಕೆ ಬಿಸಿಸಿಐ ಅನುಮತಿ ನೀಡದಿರುವ ಹಿಂದೆ ಶ್ರೀನಿವಾಸನ್ ಪ್ರಭಾವ ಬೀರಿದ್ದರು ಎನ್ನಲಾಗಿತ್ತು.
ಇತ್ತೀಚೆಗಷ್ಟೇ ಏರ್ ಇಂಡಿಯಾ ತಂಡಕ್ಕೆ ರಾಜೀನಾಮೆ ನೀಡಿದ್ದ ಧೋನಿ ಅವರು, ಶುಕ್ರವಾರದಿಂದ ಆರಂಭವಾಗಿರುವ ಬಿಸಿಸಿಐನ ಕಾರ್ಪೋರೇಟ್ ಟ್ರೋಫಿಯಲ್ಲಿ ಇಂಡಿಯಾ ಸಿಮೆಂಟ್ ತಂಡ ಪ್ರತಿನಿಧಿಸುವ ನಿರೀಕ್ಷೆಗಳಿವೆ. ಆಸ್ಟ್ರೇಲಿಯಾ ವಿರುದ್ಧದ ಸರಣಿಯ ಹಿನ್ನೆಲೆಯಲ್ಲಿ ವಿಶ್ರಾಂತಿ ಬಯಸಿದ್ದ ಧೋನಿ ಈ ಸರಣಿಯಲ್ಲಿ ಭಾಗವಹಿಸುತ್ತಿರುವುದು ಅಚ್ಚರಿ ಮೂಡಿಸಿದೆ.
ಧೋನಿ ನಾಯಕತ್ವ ವಹಿಸಿರುವ ಐಪಿಎಲ್‌ನ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಮಾಲೀಕರಾಗಿರುವ ಶ್ರೀನಿವಾಸನ್, ಇಂಡಿಯಾ ಸಿಮೆಂಟ್ ಮಾಲೀಕರಾಗಿದ್ದಾರೆ. ಅಲ್ಲದೆ ಕಂಪನಿಯ ಕಾರ್ಯನಿರ್ವಾಹಕ ಅಧಿಕಾರಿ ಮತ್ತು ಮುಖ್ಯಸ್ತರೂ ಅವರೇ ಆಗಿದ್ದಾರೆ.