ಶಿರೂರು: ಭಾರತದ ಕ್ರಿಕೆಟ್ ತಂಡಕ್ಕೆ ಮಾಜಿ ನಾಯಕ ಸೌರವ್ ಗಂಗೂಲಿ ಅತ್ಯುತ್ತಮ ತರಬೇತುದಾರ (ಕೋಚ್)ಆಗಬಲ್ಲರು ಎಂದು ಭಾರತ ತಂಡದ ಸ್ಪಿನ್ ಬೌಲರ್ ಹರ್ಭಜನ್ ಸಿಂಗ್ ಅಭಿಪ್ರಾಯಪಟ್ಟಿದ್ದಾರೆ.
ಶುಕ್ರವಾರ ಶಿರೂರಿನ ಗ್ರೀನ್ ವ್ಯಾಲಿ ಕಾಲೇಜಿನ ವಾರ್ಷಿಕೋತ್ಸವ ಸಮಾರಂಭಕ್ಕೆ ಆಗಮಿಸಿ ಸಂದರ್ಭದಲ್ಲಿ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.ಸ್ವತಃ ಉತ್ತಮ ಆಟಗಾರರಾಗಿರುವ ಗಂಗೂಲಿ, ಅತ್ಯುತ್ತಮ ನಾಯಕನಾಗಿಯೂ ಗುರುತಿಸಿಕೊಂಡವರು. ಅವರ ನಾಯಕತ್ವದಲ್ಲಿ ಟೀಂ ವರ್ಕ್ ಬಹಳ ಚೆನ್ನಾಗಿತ್ತು. ಕೋಚ್ ಆಗಿ ಅವರು ಒಳ್ಳೆಯ ತಂಡವನ್ನು ಕಟ್ಟಬಲ್ಲರು ಎಂದು ಹರ್ಭಜನ್ ಸಿಂಗ್ ತಿಳಿಸಿದರು. ಮುಂಬರುವ ಕ್ರಿಕೆಟ್ ಸರಣಿಗೆ ತಾವು ಆಯ್ಕೆಯಾಗುವ ಬಗ್ಗೆ ಭರವಸೆ ವ್ಯಕ್ತಪಡಿಸಿದ ಅವರು, 'ತಂಡದಿಂದ ಕೆಲ ಕಾಲ ಹೊರಗಿದ್ದು, ರಣಜಿ ಪಂದ್ಯಗಳ ಮೂಲಕ ಸಾಕಷ್ಟು ಒಳ್ಳೆಯ ಆಟ ಆಡಿದ್ದೇನೆ' ಎಂದರು.
ಪಂಜಾಬಿ ಹಾಡಿನ ಆಲ್ಬಮ್‌ಗಳಲ್ಲಿ ನಟಿಸುತ್ತಿರುವ ಬಗ್ಗೆ ಮಾತನಾಡಿದ ಅವರು, 'ಇಂದಿನ ಕಾಲದಲ್ಲಿ ಯುವಜನತೆ ಹಾಡುಗಳ ಸಾಹಿತ್ಯವನ್ನು ಅರ್ಥ ಮಾಡಿಕೊಳ್ಳುತ್ತಿಲ್ಲ. ಈ ಹಿನ್ನೆಲೆಯಲ್ಲಿ ತಾವು ಅಭಿನಯಿಸಿದ ಆಲ್ಬಮ್ ಸಾಕಷ್ಟು ಪರಿಣಾಮವನ್ನು ಬೀರಿದೆ. ಈ ಆಲ್ಬಂ ಬಿಡುಗಡೆಯಾದ ಕೆಲವೇ ದಿನಗಳಲ್ಲಿ 3 ಲಕ್ಷಕ್ಕೂ ಅಧಿಕ ಮಂದಿ ಇಂಟರ್‌ನೆಟ್‌ನಲ್ಲಿ ವೀಕ್ಷಿಸಿದ್ದಾರೆ' ಎಂದು ಸಂತಸ ವ್ಯಕ್ತಪಡಿಸಿದರು. ನಂತರ, ಕಾಲೇಜಿನ ಈಜು ಕೊಳವನ್ನು ಉದ್ಘಾಟಿಸಿದ ಹರ್ಭಜನ್ ಸಿಂಗ್, ಸಂಸ್ಥೆಯ ದೀನಾ ವಿಶೇಷ ಮಕ್ಕಳ ಶಾಲೆಗೆ ತೆರಳಿ ಅಲ್ಲಿನ ಬುದ್ಧಿಮಾಂದ್ಯ ಮಕ್ಕಳೊಂದಿಗೆ ಕೆಲಕಾಲ ಕಳೆದರು. ಸಂಜೆ ನಡೆದ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿದರು.